ಶುಕ್ರವಾರ, 12 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿಸ್ತು ಬೆಳೆಸಲು ಸ್ಕೌಟ್ಸ್, ಗೈಡ್ಸ್ ಸಹಕಾರಿ: ರಾಣಿ ಮಾಚಯ್ಯ

ಕೂಡಿಗೆ ಮೊರಾರ್ಜಿ ಶಾಲೆಯಲ್ಲಿ ಸ್ಕೌಟ್ಸ್, ಗೈಡ್ಸ್ ಮಾಹಿತಿ ಕಾರ್ಯಕ್ರಮ
Published 14 ಜೂನ್ 2024, 6:38 IST
Last Updated 14 ಜೂನ್ 2024, 6:38 IST
ಅಕ್ಷರ ಗಾತ್ರ

ಕುಶಾಲನಗರ: ಸ್ಕೌಟ್ಸ್ ಮತ್ತು ಗೈಡ್ಸ್‌ ಸನ್ನಡತೆ, ಸದ್ಭಾವನೆ, ಶಿಸ್ತು ಮತ್ತು ಸೇವಾ ಮನೋಭಾವದಂತಹ ಶಿಕ್ಷಣವನ್ನು ನೀಡುವುದರೊಂದಿಗೆ ಭಾರತದ ಸಂಪನ್ಮೂಲ ವ್ಯಕ್ತಿಯಾಗಿ ರೂಪಿಸುವಲ್ಲಿ ಮಹತ್ತರ ಪಾತ್ರ ನಿರ್ವಹಿಸುತ್ತದೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಕೊಡಗು ಜಿಲ್ಲಾ ಸಂಸ್ಥೆಯ ಜಿಲ್ಲಾ ಗೈಡ್ಸ್ ಆಯುಕ್ತರಾದ ರಾಣಿ ಮಾಚಯ್ಯ ಹೇಳಿದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಕೊಡಗು ಜಿಲ್ಲಾ ಸಂಸ್ಥೆ ಹಾಗೂ ಶಾಲಾ ಶಿಕ್ಷಣ ಇಲಾಖೆಯಿಂದ ಕೂಡಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಬುಧವಾರ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಸಂಘಟನೆ ಹಾಗೂ ಕಾರ್ಯಚಟುವಟಿಕೆಗಳ ಪರಿಚಯ ಕುರಿತು ಹಾಗೂ ವಿಶ್ವ ಬಾಲ ಕಾರ್ಮಿಕರ ದಿನಾಚರಣೆಯ ಮಹತ್ವ ಕುರಿತು ಏರ್ಪಡಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನಲ್ಲಿ ಭಾಗಿಗಳಾಗುವುದರಿಂದ ಶಿಸ್ತು, ದಕ್ಷತೆ, ನಾಯಕತ್ವ ಗುಣಗಳು ಬೆಳೆಯುತ್ತವೆ ಎಂದರು.

ಜೂನ್ 18ರಿಂದ 24 ರವರೆಗೆ ಮಡಿಕೇರಿ ತಾಲ್ಲೂಕಿನ ಗಾಳಿಬೀಡು ನವೋದಯ ಶಾಲೆಯಲ್ಲಿ ಶಾಲಾ ಶಿಕ್ಷಕರಿಗೆ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಚಟುವಟಿಕೆಗಳ ಕುರಿತು ಏರ್ಪಡಿಸಿರುವ ಮೂಲ ತರಬೇತಿ ಹಾಗೂ ಅಡ್ವಾನ್ಸ್ ತರಬೇತಿಯ ಕುರಿತು ಮಾಹಿತಿ ನೀಡಿ, ಈ ತರಬೇತಿಯಲ್ಲಿ ಶಿಕ್ಷಕರು ಭಾಗವಹಿಸುವ ಮೂಲಕ ಉತ್ತಮ ತರಬೇತಿ ಹೊಂದಬೇಕು ಎಂದರು.

ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್ ಮಾತನಾಡಿ, ‘ವಿದ್ಯಾರ್ಥಿಗಳು ಸ್ಕೌಟ್ಸ್, ಗೈಡ್ಸ್ ನ ಧ್ಯೇಯೋದ್ದೇಶಗಳನ್ನು ಅರಿತುಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ವಿದ್ಯಾರ್ಥಿಗಳು ತಮ್ಮನ್ನು ನೆಲ- ಜಲ, ಅರಣ್ಯ, ವನ್ಯಜೀವಿಗಳು, ಪರಿಸರ ಹಾಗೂ ಜೀವ ವೈವಿಧ್ಯ ಸಂರಕ್ಷಣೆಗೆ ತೊಡಗಿಸಿಕೊಂಡು ಪರಿಸರ ಸಮತೋಲನ ಮತ್ತು ಮಾಲಿನ್ಯ ನಿಯಂತ್ರಣದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಕೈಗೊಳ್ಳಬೇಕು’ ಎಂದು ಹೇಳಿದರು.

ಶಾಲೆಯ ಪ್ರಾಂಶುಪಾಲ ಕೆ.ಪ್ರಕಾಶ್ ಮಾತನಾಡಿ, ‘ಯಾವುದೇ ವಿದ್ಯಾರ್ಥಿಯು ಶಿಕ್ಷಣದಿಂದ ವಂಚಿತವಾಗದೆ ಉತ್ತಮ ಶಿಕ್ಷಣ ಪಡೆದು ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕಿದೆ’ ಎಂದರು.

ಈ ಸಂದರ್ಭ ಜಿಲ್ಲಾ ಗೈಡ್ಸ್ ನ ಸಹಾಯಕ ಆಯುಕ್ತೆ ಸಿ.ಎಂ.ಸುಲೋಚನಾ, ನಿಲಯ ಪಾಲಕ ಜಗದೀಶ್,
ಶಾಲೆಯ ಶಿಕ್ಷಕರಾದ ಎಸ್.ಕೆ.ಚದಂಬರ, ನಾಗೇಂದ್ರ, ಎಚ್.ಬಿ.ದಿನೇಶಾಚಾರಿ, ಗಾನವಿ, ಹರಿಣಾಕ್ಷಿ ಇದ್ದರು.

ಇದೇ ವೇಳೆಯಲ್ಲಿ ಭಾರತ್ ಸ್ಕೌಟ್ಸ್, ಗೈಡ್ಸ್ ಸಂಸ್ಥೆ ಹಾಗೂ ರಾಷ್ಟ್ರೀಯ ಹಸಿರು ಪಡೆಯ ಇಕೊ ಕ್ಲಬ್ ವತಿಯಿಂದ ಶಾಲಾವರಣದಲ್ಲಿ ಪರಿಸರ ಸಂಭ್ರಮದ ಅಂಗವಾಗಿ ಪರಾಣಿ ಮಾಚಯ್ಯ ಗಿಡ ನೆಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT