ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗಿನಲ್ಲಿ ಹೆಚ್ಚಿದ ಬಸವನ ಹುಳುಗಳ ಕಾಟ

Last Updated 28 ಜುಲೈ 2022, 20:44 IST
ಅಕ್ಷರ ಗಾತ್ರ

ಶನಿವಾರಸಂತೆ (ಕೊಡಗು ಜಿಲ್ಲೆ): ಎಡೆಬಿಡದೇ ಸುರಿದ ಮಳೆಯಿಂದಾಗಿ ಕೊಡಗು ಜಿಲ್ಲೆಯ ಹಲವೆಡೆ ಬಸವನ ಹುಳುಗಳ ಕಾಟ ಹೆಚ್ಚಾಗಿದೆ. ದಿನ ಬೆಳಗಾಗುವಷ್ಟರಲ್ಲಿ ಕಾಫಿ ತೋಟದಲ್ಲಿರುವ ಗಿಡಗಳ ಎಲೆಗಳನ್ನು, ಕಾಫಿಯ ಹೀಚುಕಾಯಿಯನ್ನು ತಿಂದು ತೇಗುತ್ತಿದ್ದು, ಅವುಗಳನ್ನು ನಾಶಪಡಿಸಲು ಬೆಳೆಗಾರರು ಕಸರತ್ತು ನಡೆಸಿದ್ದಾರೆ.

ಹಂಡ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳ್ಳಾರಳ್ಳಿ, ಹಂಡ್ಲಿ, ಶಿರಂಗಾಲ, ಹುಲುಸೆ, ಕೆರೆಹಳ್ಳಿ ಸುತ್ತಮುತ್ತಲ ಹಳ್ಳಿಗಳ ತೋಟಗಳಲ್ಲಿ ಮಳೆಗಾಲದ ಅತಿಥಿಗಳು ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲೇ ಕಾಣಿಸಿಕೊಂಡಿದ್ದು, ಬೆಳೆಗಾರರನ್ನು ಹೈರಣಾಗಿಸಿವೆ.

ಹುಳುಗಳ ಹತೋಟಿಗಾಗಿ ಕಾಫಿ ಮಂಡಳಿಯ ಅಧಿಕಾರಿಗಳು, ಕೀಟ ತಜ್ಞರು ಭೇಟಿ ನೀಡಿ ಪರಿಶೀಲಿಸಿ, ಸಲಹೆಗಳನ್ನು ನೀಡಿದ್ದಾರೆ. ಲಾರ್ವಿನ್ ಮಿಶ್ರಿತ ಆಕರ್ಷಕ ಬಲೆಯ ಮೂಲಕ ಹುಳುಗಳನ್ನು ಹಿಡಿದು ಗುಂಡಿಯಲ್ಲಿ ಉಪ್ಪು ಹಾಕಿ ಮುಚ್ಚುವಂತೆ ಸೂಚಿಸಿದ್ದಾರೆ.

ಹೀಗಾಗಿ, ಬೆಳೆಗಾರರಿಗೆ ಮಳೆಗಾಲದಲ್ಲಿ ಅತಿಯಾದ ಹುಳುಗಳನ್ನು ಹಿಡಿಸುವ ಕೆಲಸದ ಹೊರೆ ಬಿದ್ದಿದೆ. ಹುಳು ಹಿಡಿಯುವ ಮಹಿಳಾ ಕಾರ್ಮಿಕರಿಗೆ ₹ 300, ಪುರುಷ ಕಾರ್ಮಿಕರಿಗೆ ₹ 500 ಕೂಲಿ ನೀಡಬೇಕಿದೆ. ತೌಡಿನ ಜತೆಗೆ ಬೆಲ್ಲ, ಹುಳು ಕೊಲ್ಲುವ ಲಾರ್ವಿನ್ ದ್ರಾವಣ ಮಿಶ್ರ ಮಾಡಿ ಉಂಡೆ ಕಟ್ಟಿ ಅಲ್ಲಲ್ಲಿ ಇರಿಸಿ ಹುಳುಗಳನ್ನು ಆಕರ್ಷಿಸಲಾಗುತ್ತದೆ. ಕೈಗೆ ಗ್ಲೌಸ್ ಧರಿಸಿ ಕಾರ್ಮಿಕರು ಹುಳುಗಳನ್ನು ಸಂಗ್ರಹಿಸಿ ನಂತರ ಗುಂಡಿಯಲ್ಲಿ ಮುಚ್ಚುತ್ತಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಬೆಳ್ಳಾರಳ್ಳಿಯ ಬೆಳೆಗಾರ ಬಿ.ಎಸ್.ಪ್ರತಾಪ್, ‘ಮಳೆಗಾಲದಲ್ಲಿ ಬೆಳೆಗಾರರು ಅನುಭವಿಸುವ ತೊಂದರೆ ಬಸವನ ಹುಳುಗಳ ಕಾಟ. ಆದರೆ, ಈ ಬಾರಿ ಅವುಗಳ ಕಾಟ ಹೆಚ್ಚಾಗಿದೆ. ಅನಿವಾರ್ಯವಾಗಿ ಹೆಚ್ಚಿನ ಖರ್ಚು ಮಾಡಬೇಕಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT