ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ ಪರೀಕ್ಷೆ: ಮೊದಲ ದಿನ ಸುಗಮ

46 ವಿದ್ಯಾರ್ಥಿಗಳು ಗೈರು, ಕೋವಿಡ್‌ ಆರೈಕೆ ಕೇಂದ್ರದಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿ, ಸಿಹಿ ಹಂಚಿ ಸಂಭ್ರಮ
Last Updated 20 ಜುಲೈ 2021, 6:27 IST
ಅಕ್ಷರ ಗಾತ್ರ

ಗದಗ: ಜಿಲ್ಲೆಯಲ್ಲಿ ಸೋಮವಾರದಂದು ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಗಮವಾಗಿ ನಡೆಯಿತು. ಮೊದಲ ದಿನ 46 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು ಹಾಜರಾಗಿದ್ದರು.

ಗದಗ ಜಿಲ್ಲೆಯಲ್ಲಿ ಈ ವರ್ಷ 16,216 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. 103 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು.

‘ಎಸ್ಸೆಸ್ಸೆಲ್ಸಿ ಪರೀಕ್ಷೆ ಸೋಮವಾರ ಸುಗಮವಾಗಿ ನಡೆಯಿತು. ಎಲ್ಲೂ ಪರೀಕ್ಷಾ ಆಕ್ರಮಗಳು ನಡೆದಿಲ್ಲ. ಮುಂಡರಗಿ ತಾಲ್ಲೂಕಿನ ಕೊರ್ಲಹಳ್ಳಿ ಆದರ್ಶ ವಿದ್ಯಾಲಯದ ಕೋವಿಡ್‌ ಸೋಂಕಿತ ವಿದ್ಯಾರ್ಥಿಯೊಬ್ಬನಿಗೆ ಕೋವಿಡ್‌ ಆರೈಕೆ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗಿತ್ತು. ಕೋವಿಡ್‌ ಮಾರ್ಗಸೂಚಿಗಳ ಅನುಸಾರ ಪರೀಕ್ಷೆಯನ್ನು ಯಶಸ್ವಿಯಾಗಿ ನಿಭಾಯಿಸಲಾಗಿದೆ’ ಎಂದು ಗದಗ ಜಿಲ್ಲಾ ಡಿಡಿಪಿಐ ಬಸವಲಿಂಗಪ್ಪ ಜಿ.ಎಂ. ತಿಳಿಸಿದ್ದಾರೆ.

‘ಹೊಸ ಪರೀಕ್ಷಾ ಪದ್ಧತಿಯಿಂದ ವಿದ್ಯಾರ್ಥಿಗಳು ಯಾವುದೇ ರೀತಿಯ ಗೊಂದಲಕ್ಕೆ ಬೀಳದಂತೆ ಕ್ರಮವಹಿಸಲಾಗಿತ್ತು. ಪರೀಕ್ಷಾ ಕೇಂದ್ರದ ಒಳಗೆ ಯಾವ ವಿಷಯಕ್ಕೆ ಯಾವ ಬಣ್ಣದ ಒಎಂಆರ್‌ ಶೀಟ್‌ ನೀಡಲಾಗುತ್ತದೆ ಎಂಬುದನ್ನು ಬರೆಯಿಸಲಾಗಿತ್ತು. ಜತೆಗೆ ಕೊಠಡಿ ಮೇಲ್ವಿಚಾರಕರು ಈ ನಿಟ್ಟಿನಲ್ಲಿ ನಿಗಾ ವಹಿಸುವಂತೆ ಸೂಚಿಸಲಾಗಿತ್ತು’ ಎಂದು ಅವರು ತಿಳಿಸಿದ್ದಾರೆ.

ಪ್ರತಿ ಕೊಠಡಿಗೆ 12 ವಿದ್ಯಾರ್ಥಿಗಳು

ಮುಳಗುಂದ: ಪಟ್ಟಣದಎರಡು ಪರೀಕ್ಷಾ ಕೇಂದ್ರದಲ್ಲಿ ಒಟ್ಟು 287ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.

ಎಸ್‍.ಜೆ.ಜೆ.ಎಂ. ಮಹಾವಿದ್ಯಾಲಯ ಹಾಗೂ ಕೆ.ಎಸ್‍.ಎಸ್. ಪ್ರೌಢ ಶಾಲೆಯಲ್ಲಿ ತೆರೆಯಲಾದ ಎಸ್ಸೆಸ್ಸೆಲ್ಸಿ ಪರೀಕ್ಷೆ ಕೇಂದ್ರಗಳಲ್ಲಿ ಕೋವಿಡ್ ಆತಂಕದ ಮಧ್ಯೆಯೂ ಸೋಮವಾರ ವಿದ್ಯಾರ್ಥಿಗಳು ಸುಗವಾಗಿ ಪರೀಕ್ಷೆ ಬರೆದರು ಪ್ರತಿ ಕೊಠಡಿಯಲ್ಲಿ 12 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗಿತ್ತು. ಸ್ಥಳೀಯ ಪೊಲೀಸರು ಪರೀಕ್ಷಾ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಬಸ್ ನಿಲ್ದಾಣದಿಂದ ಪರೀಕ್ಷಾ ಕೇಂದ್ರದ ವರೆಗೆ ಆಟೋ ವ್ಯವಸ್ಥೆ ಮಾಡಿದ್ದರು. ಸೊರಟೂರ, ಯಲಿಶಿರೂರ, ಕಣವಿ ಗ್ರಾಮಗಳ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದರು. ಜನ ಗುಂಪು ಸೇರದಂತೆ ಪೊಲೀಸರು ಎಚ್ಚರ ವಹಿಸಿದರು.

ಪರೀಕ್ಷೆ ಬರೆದ ಅಂಧ ವಿದ್ಯಾರ್ಥಿಗಳು

ಹೊಳೆಆಲೂರ(ರೋಣ): ಸ್ಥಳೀಯ ಕಲ್ಮೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಸೋಮವಾರ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಆರಂಭದ ಮೊದಲು ಪರೀಕ್ಷೆಗೆ ಬಂದ ಅಂಧ ಮಕ್ಕಳಿಗೆ ಹೊಳೆಆಲೂರ ಮಂಡಲ ಬಿಜೆಪಿ ಪಕ್ಷದ ಕಾರ್ಯಕರ್ತರು ಹೂ ನೀಡಿ ಶುಭ ಹಾರೈಸುವ ಮೂಲಕ ಆತ್ಮಸ್ಥೈರ್ಯ ತುಂಬಿದರು.

ಜಿಲ್ಲಾ ಉಸ್ತುವಾರಿ ಸಚಿವ ಸಿ. ಸಿ. ಪಾಟೀಲ ಅವರ ಮಗ, ತಾಲ್ಲೂಕಿನ ವೈದ್ಯರು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಕ್ಕಳಿಗೆ ಆತ್ಮಸ್ಥೈರ್ಯ ತುಂಬಿದರು.ಅಂಧ ಮಕ್ಕಳು ಛಲದಿಂದ ಪರೀಕ್ಷೆ ಎದುರಿಸುತ್ತಿರುವ ಕುರಿತು ಸೋಮವಾರ ಪ್ರಜಾವಾಣಿಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು.
ಈ ವೇಳೆ ವೀರಸಂಗಯ್ಯ ಮೂಕಾಸಿ, ಶರಣು ಚಲವಾದಿ, ಉಮೇಶ ಬೆಳವಣಕಿ, ಬಸವರಾಜ ಹಳ್ಳಿಕೇರಿ, ಕುಬೇರಗೌಡ ಪಾಟೀಲ ಇದ್ದರು.

ನರೇಗಲ್:‌ ಕೊವೀಡ್‌ ನಡುವೆ ಹೊಸ ಮಾದರಿಯ ಪರೀಕ್ಷೆಯು ಪಟ್ಟಣದಲ್ಲಿ ಸೋಮವಾರ ಯಶಸ್ವಿಯಾಗಿ ನಡೆಯಿತು. ಪಟ್ಟಣದ ನಾಲ್ಕು ಪರೀಕ್ಷಾ ಕೇಂದ್ರಗಳಲ್ಲಿ ಸುರಕ್ಷತಾ ಕ್ರಮ ಅನುಸರಿಸಲಾಯಿತು.

ದಟ್ಟಣೆ ತಪ್ಪಿಸಲು ವಿಶೇಷ ಕ್ರಮ

ರೋಣ: ಮೊದಲ ದಿನದ ಎಸ್ಸೆಸ್ಸೆಲ್ಸಿ ಪರೀಕ್ಷೆ ತಾಲ್ಲೂಕಿನಲ್ಲಿ ಸೋಮವಾರ ಯಶಸ್ವಿಯಾಗಿ ನಡೆಯಿತು. ಪರೀಕ್ಷೆಗೆ ನೋಂದಣಿಯಾಗಿದ್ದ 3602 ವಿದ್ಯಾರ್ಥಿಗಳಲ್ಲಿ 3594 ವಿದ್ಯಾರ್ಥಿಗಳು ಹಾಜರಾಗಿದ್ದರು. 8 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು.

ಪರೀಕ್ಷಾ ಕೇಂದ್ರದ ವಿವಿಧೆಡೆ ಧ್ವನಿವರ್ಧಕದ ಮೂಲಕ ಕೋವಿಡ್ ಜಾಗೃತಿ ಮೂಡಿಸಲಾಯಿತು. ನೋಂದಣಿ ಸಂಖ್ಯೆ ಹುಡುಕುವ ವೇಳೆ ದಟ್ಟಣೆ ಉಂಟಾಗುವುದನ್ನು ತಪ್ಪಿಸಲು ಕೇಂದ್ರಗಳ ಕಡೆ ಸೂಚನಾ ಫಲಕಗಳನ್ನು ಅಳವಡಿಸಲಾಗಿತ್ತು.

ಕೇಂದ್ರಗಳಲ್ಲಿ ಪರೀಕ್ಷೆ ಬರೆಯುವ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಕೊಠಡಿಗೆ ಸಾಲಾಗಿ ತೆರಳಲು ಚೌಕಕಾರದ ಬಾಕ್ಸ್‌ಗಳನ್ನು ಮತ್ತುಕೊಠಡಿಗಳ ಮಾಹಿತಿ ನೀಡಲು ಪ್ರತ್ಯೇಕ ಶಿಕ್ಷಕರ ನಿಯೋಜಿಸಲಾಗಿತ್ತು. ವಿದ್ಯಾರ್ಥಿಗಳಿಗೆ ಒಎಂಆರ್ ಶೀಟ್ ಭರ್ತಿ ಮಾಡುವ ವೇಳೆ ಗೊಂದಲ ಆಗಬಾರದು ಎನ್ನುವ ಉದ್ದೇಶದಿಂದ ಪರೀಕ್ಷಾ ಕೊಠಡಿಗಳಲ್ಲಿ ಆರಂಭದ ವೇಳೆ ಒಎಂಆರ್ ಭರ್ತಿ ಮಾಡುವ ವಿಧಾನದ ಮಾಹಿತಿ ನೀಡಲಾಯಿತು.

ಪರೀಕ್ಷಾ ಕೇಂದ್ರಗಳಲ್ಲಿ ಮಾಸ್ಕ್‌, ಸ್ಯಾನಿಟೈಸರ್‌ ವಿತರಣೆಗೆ ಪೈಪೋಟಿ !

ನರಗುಂದ: ಪಟ್ಟಣದ ಆರು ಹಾಗೂ ಗ್ರಾಮೀಣ ಪ್ರದೇಶದಲ್ಲಿನ ಆರು ಕೇಂದ್ರ ಸೇರಿದಂತೆ 12 ಕೇಂದ್ರಗಳಲ್ಲಿ ಸೋಮವಾರ ಎಸ್ಸೆಸ್ಸೆಲ್ಸಿ ಪರೀಕ್ಷೆ ಶಾಂತಿಯುತವಾಗಿ ನಡೆಯಿತು.ಪರೀಕ್ಷೆಗೆ ಒಟ್ಟು1850 ಜನ ವಿದ್ಯಾರ್ಥಿಗಳು ಹಾಜರಾಗಿದ್ದರು. ಬೆಳಿಗ್ಗೆಯಿಂದಲೇ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಥರ್ಮಲ್ ಸ್ಕ್ಯಾನರ್‌ನ ಮೂಲಕ ವಿದ್ಯಾರ್ಥಿಗಳನ್ನು ಪರೀಕ್ಷೆ ನಡೆಸಿ ಕೋವಿಡ್ ನಿಯಮ ಅನುಸರಿಸಿದರು.

ಪರೀಕ್ಷಾ ಕೇಂದ್ರದಲ್ಲಿ ವಿವಿಧ ಸಂಘಟನೆಗಳ ಸದಸ್ಯರು ಹಾಗೂ ಪಕ್ಷಗಳ ಕಾರ್ಯಕರ್ತರು ಮಾಸ್ಕ್‌ ಮತ್ತು ಸ್ಯಾನಿಟೈಸರ್‌ ನೀಡಲು ಪೈಪೋಟಿ ನಡೆಸಿದ್ದು, ಕಂಡುಬಂತು.

ಕೊಣ್ಣೂರ: ಪರೀಕ್ಷೆಗೆ ಹಾಜರಾಗಲು ನಿರಾಕರಿಸಿದ ಕೊಣ್ಣೂರನ ಅಂಗವಿಕಲ ವಿದ್ಯಾರ್ಥಿನಿ ಪವಿತ್ರಾ ಸುನ್ಹಾಳ ಮನೆಗೆ ಎಪಿಎಂಸಿ ಅಧ್ಯಕ್ಷ ಶಂಖರಗೌಡ ಯಲ್ಲಪ್ಪಗೌಡ್ರ ಭೇಟಿ ನೀಡಿಮನವೊಲಿಸಿ ಪರೀಕ್ಷಾ ಕೇಂದ್ರಕ್ಕೆ ಕರೆ ತಂದರು.ಕೊಣ್ಣೂರ ಹಾಗೂ ಶಿರೋಳದ ಎರಡು ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಶಾಂತಿಯುತವಾಗಿ ನಡೆದರು‌ ಹಿರೇಕೊಪ್ಪ, ಕಲ್ಲಾಪುರ, ಪಟ್ಟಣದ ಎರಡು ಶಾಲೆಯ ತಲಾ ಒಬ್ಬರು ವಿದ್ಯಾರ್ಥಿ ಗೈರಾಗಿದ್ದರು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಶ್ವರಿ ಕುಡಚಿ ಹೇಳಿದರು.

ತಹಶೀಲ್ದಾರ್ ಅಮರಾವದಗಿ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಜಿಲ್ಲಾ ವಿಚಕ್ಷಣಾ ತಂಡದ ಶರಣು ಗೋಗೇರಿ ತಂಡ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT