ಕೊಡಗು: ಮನೆ, ಜಮೀನು, ಅಂಗಡಿ ಎಲ್ಲ ನಾಶ; ಬದುಕಿನ ಮೂರು ದಾರಿಗಳೂ ಬಂದ್‌

7
ಬೀದಿಗೆ ಬಿತ್ತು ಕುಟುಂಬ

ಕೊಡಗು: ಮನೆ, ಜಮೀನು, ಅಂಗಡಿ ಎಲ್ಲ ನಾಶ; ಬದುಕಿನ ಮೂರು ದಾರಿಗಳೂ ಬಂದ್‌

Published:
Updated:
Deccan Herald

ಮಡಿಕೇರಿ: ನೆಮ್ಮದಿಯ ಜೀವನ ಸಾಗಿಸುತ್ತಿದ್ದ ಇಲ್ಲಿಯ ಕೃಷಿಕರೊಬ್ಬರ ಬದುಕು ಮಹಾ ಮಳೆಯ ಆರ್ಭಟಕ್ಕೆ ಬೀದಿಪಾಲಾಗಿದೆ.

ಇಗ್ಗೋಡ್ಲು ಗ್ರಾಮದ ನಿವಾಸಿ ಮೆದುರ ಕುಮಾರ್ ಅವರ ಜೀವನಕ್ಕೆ ಆಧಾರವಾಗಿದ್ದ ಮನೆ, ತೋಟ, ಗದ್ದೆ, ಅಂಗಡಿ ಎಲ್ಲವನ್ನು ಕಳೆದುಕೊಂಡು ಈಗ ಅಸಹಾಯಕರಾಗಿದ್ದಾರೆ.

ಸೋಮವಾರಪೇಟೆ ತಾಲ್ಲೂಕು ಮಕ್ಕಂದೂರು ಸಮೀಪ ಕಳೆದ ತಿಂಗಳು ಸಂಭವಿಸಿದ ಜಲಪ್ರಳಯಕ್ಕೆ ಕುಮಾರ್‌ ಅವರ ಮನೆ ಸೇರಿದಂತೆ ಪಕ್ಕದಲ್ಲಿಯೇ ಹತ್ತಾರು ಎಕರೆ ತೋಟ, ಅಂಗಡಿ ಎಲ್ಲವೂ ಕೊಚ್ಚಿಕೊಂಡು ಹೋಗಿದೆ.

‘ಆ.18 ರಂದು ಬೆಳಿಗ್ಗೆ ಎಂದೂ ನೋಡದ ಭೀಕರ ಘಟನೆಯನ್ನು ನೋಡಿದೆವು. ಮಣ್ಣಿನ ರಾಶಿಯೇ ಮನೆಯ ಹತ್ತಿರ ಬರುತ್ತಿತ್ತು. ಭಯಗೊಂಡು ಓಡಿದ ಕ್ಷಣಮಾತ್ರದಲ್ಲಿ ಎಲ್ಲ ಕೊಚ್ಚಿಕೊಂಡು ಹೋಗಿದೆ’ ಎಂದು ನಿರಾಶ್ರಿತ ಕುಮಾರ್ ಘಟನೆಯನ್ನು ನೆನಪಿಸಿಕೊಳ್ಳುತ್ತಾರೆ.

‘ಪತ್ನಿ ಕಳೆದುಕೊಂಡ ನನಗೆ ಪುತ್ರ ಹಾಗೂ ಪುತ್ರಿ ಇದ್ದಾರೆ. ಇಬ್ಬರಿಗೂ ಮದುವೆ ಮಾಡಿಕೊಡಲಾಗಿದೆ. ಇವರಿಬ್ಬರ ವಿದ್ಯಾಭ್ಯಾಸ, ಮದುವೆ, ಮನೆ ಹಾಗೂ ಜಮೀನಿಗೆ ಬ್ಯಾಂಕಿನಲ್ಲಿ ಲಕ್ಷಾಂತರ ಹಣ ಸಾಲ ಮಾಡಿಕೊಂಡಿದ್ದೇನೆ. ಕೃಷಿಯಿಂದ ಬಂದ ಲಾಭ ಹಾಗೂ ಮಗನ ಅಂಗಡಿಯಿಂದ ಬಂದ ಹಣದಿಂದಲೇ ಸಾಲ ತೀರಿಸಿಕೊಳ್ಳುತ್ತಿದ್ದೆವು. ಇನ್ನೆರಡು ವರ್ಷದಲ್ಲಿ ಸಾಲ ಕೂಡ ತೀರಿಸಿಕೊಳ್ಳುವ ವಿಶ್ವಾಸ ಇತ್ತು. ಇದೀಗ ಜೀವನಕ್ಕೆ ಯಾವುದನ್ನೂ ಉಳಿಸಿಕೊಳ್ಳಲಾಗದ ಸ್ಥಿತಿ ಎದುರಾಗಿದೆ’ ಎಂದು ಮೆದುರ ಕುಮಾರ್‌ ಬೇಸರ ವ್ಯಕ್ತ ಪಡಿಸಿದರು.

ಅಂಗಡಿ ನಾಶ: ಮಗ ಡೆನಿಲ್‌ ಖಾಸಗಿ ಬಸ್‌ ನಿಲ್ದಾಣದ ಬಳಿ ವರ್ಷದ ಹಿಂದೆ ಮೊಬೈಲ್‌ ಅಂಗಡಿಯೊಂದು ತೆರೆದಿದ್ದ. ಆ.17ರಂದು ಸುರಿದ ಮಳೆಗೆ ಇಲ್ಲಿದ್ದ ಅಂಗಡಿ ಸಹ ಕುಸಿದಿದೆ. ‘ಸದ್ಯ ಮಗ, ನಾನು ಬಿಳಿಗೇರಿಯಲ್ಲಿರುವ ಸೊಸೆಯ ಮನೆಯಲ್ಲಿ ವಾಸವಾಗಿದ್ದೇವೆ. ಕಳೆದ 5 ವರ್ಷದಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ವೈದ್ಯಕೀಯ ಸೇವೆಗೆ ಖರ್ಚು ಭರಿಸಲು ಸಾಧ್ಯವಾಗುತ್ತಿಲ್ಲ’ ಎಂದು ಅಲವತ್ತುಕೊಂಡರು.

‘ಅಂಗಡಿಯನ್ನು ಕಳೆದುಕೊಂಡ ದುಃಖದಲ್ಲಿದ್ದ ಮರುದಿನವೇ ಮನೆ, ತೋಟ ನೀರಿನಲ್ಲಿ ಕೊಚ್ಚಿ ಹೋಗಿದೆ. ಜತೆಗೆ ಪತ್ನಿ ಗರ್ಭಿಣಿ, ಅಪ್ಪ ಆಗಾಗ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಇದೀಗ ವಾಸಕ್ಕೆ ಬಾಡಿಗೆ ಮನೆ ಕೇಳಿದರೆ ₹ 8ರಿಂದ ₹ 10 ಸಾವಿರ ಹೇಳುತ್ತಾರೆ. ಆದಾಯದ ಮೂಲಗಳೇ ಕಳೆದುಕೊಂಡ ನನಗೆ ದಿಕ್ಕು ತೋಚುತ್ತಿಲ್ಲ’ ಎಂದು ಡೆನಿನ್ ಕಣ್ಣೀರು ಸುರಿಸಿದರು.

ಸರ್ಕಾರ ಈ ಹಂತದಲ್ಲಿ ನೆರವಾಗಬೇಕು. ಕೃಷಿಗೆ ಜಮೀನು, ಮನೆ ಹಾಗೂ ಅಪ್ಪನ ಆರೋಗ್ಯ ಸುಧಾರಿಸಲು ಹಣದ ಸಹಾಯ ಬೇಕಾಗಿದೆ. ಸದ್ಯ ಹಣದ ಅವಶ್ಯಕತೆ ಇರುವುದರಿಂದ ದಾನಿಗಳು ನಮ್ಮ ಕುಟುಂಬಕ್ಕೆ ನೆರವು ನೀಡಬೇಕು ಎಂದು ಅವರು ಕೋರುತ್ತಾರೆ.

 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !