ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಗ್ರ ಕೃಷಿಯಿಂದ ಹಸನಾದ ಬದುಕು

ಒಂದೇ ಕೃಷಿ ಭೂಮಿಯಲ್ಲಿ ಕಾಫಿ, ಕಾಳು ಮೆಣಸು, ಕೋಕೋ, ವೆನಿಲ್ಲಾ !
Last Updated 10 ಮಾರ್ಚ್ 2023, 6:10 IST
ಅಕ್ಷರ ಗಾತ್ರ

ನಾಪೋಕ್ಲು: ‘ಕೃಷಿಕರು ಒಂದೇ ಬೆಳೆಯನ್ನು ನೆಚ್ಚಿಕೊಂಡಿರಬಾರದು. ತಮ್ಮ ಕೃಷಿಭೂಮಿಯಲ್ಲಿ ವೈವಿಧ್ಯಮಯ ಬೆಳೆಗಳನ್ನು ಬೆಳೆಯುವುದರ ಮೂಲಕ ಆರ್ಥಿಕವಾಗಿ ಸಬಲರಾಗುವುದು ಸಾಧ್ಯ’ ಎನ್ನುವುದು ಕೃಷಿಕ ತಳೂರು ಆರ್. ಅಪ್ಪಾಜಿ ಮತ್ತು ಬಿ.ಎ ನಾಗವೇಣಿ ದಂಪತಿಯ ಮಾತು. ಅವರು ಸಮಗ್ರ ಕೃಷಿಯಲ್ಲಿ ತೊಡಗಿಸಿಕೊಂಡು ಸಂತೃಪ್ತಿಯ ಜೀವನ ನಡೆಸುತ್ತಿದ್ದಾರೆ.

ಕೃಷಿ ಇಲಾಖೆಯಲ್ಲಿ ಉದ್ಯೋಗದಲ್ಲಿದ್ದ ಅಪ್ಪಾಜಿ, ನಿವೃತ್ತಿಯ ನಂತರ ಮಡಿಕೇರಿ ಸಮೀಪದ ಮದೆ ಗ್ರಾಮದಲ್ಲಿನ ತಮ್ಮ ಕೃಷಿ ಭೂಮಿಯಲ್ಲಿ ವೈವಿಧ್ಯಮಯ ಬೆಳೆಗಳನ್ನು ಬೆಳೆಯುವುದರ ಮೂಲಕ ಇತರ ಕೃಷಿಕರಿಗೆ ಮಾದರಿಯಾಗಿದ್ದಾರೆ.

ಅಪ್ಪಾಜಿ ಅವರು ಕಾಫಿ ಜತೆಗೆ ಕಾಳು ಮೆಣಸು, ಕೋಕೋ, ವೆನಿಲ್ಲಾ ಬೆಳೆಗಳನ್ನು ಬೆಳೆಯುವ ಮೂಲಕ ಸಮಗ್ರ ಕೃಷಿ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ.

ವೆನಿಲ್ಲಾ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಜಿಲ್ಲೆಯ ಕೆಲವೇ ಕೆಲವು ರೈತರಲ್ಲಿ ಅಪ್ಪಾಜಿ ಸಹ ಒಬ್ಬರು. ಅಡಿಕೆ ಮರಗಳಿಗೆ ವೆನಿಲಾ ಗಿಡಗಳನ್ನು ಹಬ್ಬಿಸಿದ್ದಾರೆ. 2019ರಲ್ಲಿ ಒಂದು ಕೆ.ಜಿ ವೆನಿಲ್ಲಾಕ್ಕೆ ₹ 4,700 ದರ ಲಭಿಸಿತ್ತು. ಒಂದೇ ವರ್ಷದಲ್ಲಿ ಇಳುವರಿ ಹೆಚ್ಚಿತು. ಆದರೆ, ದರ ಕುಸಿದು, ₹ 1,700ಕ್ಕೆ ಮಾರಾಟವಾಯಿತು. 2021ರಲ್ಲಿ ಧಾರಣೆ ₹ 1,500ಕ್ಕೆ ಇಳಿಯಿತು. ಆದರೂ, ವೆನಿಲ್ಲಾ ಕೃಷಿ ಲಾಭದಾಯಕವಾಗಿದೆ ಎನ್ನುತ್ತಾರೆ ಅಪ್ಪಾಜಿ.

ಮಳೆ ಅಧಿಕವಾದರೆ ಇಳುವರಿ ಕಡಿಮೆಯಾಗುತ್ತದೆ. ನವೆಂಬರ್- ಡಿಸೆಂಬರ್‌ನಲ್ಲಿ ಒಣ ವಾತಾವರಣ ಇದ್ದರೆ ವೆನಿಲ್ಲಾಕ್ಕೆ ಒಳ್ಳೆಯದು ಎನ್ನುವುದು ಅಪ್ಪಾಜಿ ಅವರ ಅಭಿಪ್ರಾಯ. ಮಾರ್ಚ್- ಏಪ್ರಿಲ್ ತಿಂಗಳುಗಳಲ್ಲಿ ವೆನಿಲ್ಲಾಕ್ಕೆ ಪರಾಗಸ್ಪರ್ಶವನ್ನು ಅಪ್ಪಾಜಿ ದಂಪತಿ ಸ್ವತಃ ಮಾಡುತ್ತಾರೆ.

ಕೋಕೋ ಗಿಡಗಳನ್ನು ಹಾಕಿ 7 ವರ್ಷಗಳಾಗಿವೆ. 3ನೇ ವರ್ಷದಿಂದ ಇಳುವರಿ ಪಡೆಯುತ್ತಿದ್ದಾರೆ. ಕಾಫಿಗೆ ಹೋಲಿಸಿದರೆ ಕೋಕೋ ಮತ್ತು ವೆನಿಲ್ಲಾ ಕೃಷಿಯಲ್ಲಿ ಹೆಚ್ಚಿನ ಶ್ರಮಪಡುವ ಅಗತ್ಯವಿಲ್ಲ ಎನ್ನುತ್ತಾರೆ ಅವರು. ಕೆ.ಜಿಗೆ ₹ 45 ರಿಂದ 65 ದೊರೆತಿದೆ. ವಾರಕ್ಕೊಮ್ಮೆ ಕ್ಯಾಂಪ್ಕೋ ವತಿಯಿಂದ ಕೋಕೋ ಬೀಜಗಳನ್ನು ಖರೀದಿಸಲಾಗುತ್ತಿದೆ. ಸಮೀಪದ ಸಂಪಾಜೆಗೆ ತೆರಳಿದರೆ ಪ್ರತಿದಿನ ಕೋಕೋವನ್ನು ಮಾರಾಟ ಮಾಡಬಹುದು.

ಅಪ್ಪಾಜಿ ಅಡಿಕೆ ಕೃಷಿಯನ್ನು ವ್ಯಾಪಕವಾಗಿ ಮಾಡಿದ್ದರು. ಆದರೆ, ರೋಗದಿಂದಾಗಿ ಅಡಿಕೆ ಸಂಪೂರ್ಣ ನಶಿಸಿ ಹೋಗಿದೆ. ವೆನಿಲ್ಲಾ ಬಳ್ಳಿಗಳಿಗೆ ಆಸರೆಯಾಗಿ ಹಾಲುವಾಣವನ್ನು ಬೆಳೆಸುತ್ತಿದ್ದಾರೆ. 8 ತಿಂಗಳಲ್ಲಿ ಕಾಯಿ ಕಟಾವಿಗೆ ಬರುತ್ತದೆ. ಕಾಯಿಗಳನ್ನು ಮಾರಾಟ ಮಾಡಲು ಯಾವುದೇ ಸಮಸ್ಯೆ ಇಲ್ಲ ಎನ್ನುತ್ತಾರೆ ಅವರು. 7 ವರ್ಷದ ಕೋಕೋ ಗಿಡಗಳಿವೆ. ಪ್ರಸ್ತುತ ₹ 60 ದರ ಲಭಿಸುತ್ತಿದೆ. ಒಂದು ಗಿಡದಲ್ಲಿ ಕನಿಷ್ಠ 30 ಕೆ.ಜಿ ಕಾಯಿಗಳನ್ನು ಬೆಳೆಯಬಹುದು. ಒಂದೇ ಗಿಡದಿಂದ ₹ 1,800 ಉತ್ಪತ್ತಿ ಗಳಿಸಬಹುದು. ವರ್ಷದಲ್ಲಿ 4 ತಿಂಗಳು ಬೆಳೆ ಸಿಗುತ್ತದೆ. ಉತ್ತಮ ಲಾಭದಾಯಕ ಕೃಷಿ ಎನ್ನುವುದು ಅಪ್ಪಾಜಿ ಅವರ ಪ್ರತಿಪಾದನೆ.

ಎಲ್ಲಾ ಕೃಷಿಕರಂತೆ ಇವರೂ ಸಹ ಹಲವು ಸಮಸ್ಯೆಗಳನ್ನು ಎದುರಿಸಿದ್ದಾರೆ. ಇವರ ತೋಟದ ಪಕ್ಕದಲ್ಲಿ ಪಯಸ್ವಿನಿ ಹೊಳೆ ಹರಿಯುತ್ತಿದೆ. ಕಾಡಾನೆಗಳು ಅಲ್ಲಲ್ಲಿ ಸುಳಿದಾಡಿ ನೀರು ಸರಬರಾಜಿನ ಪೈಪ್‌ಗಳನ್ನು ಹಾಳು ಮಾಡಿವೆ. 2 ಕಿ.ಮೀ ದೂರದ ಬೆಟ್ಟದಿಂದ ಕೃಷಿಗೆ, ಮನಬಳಕೆಗೆ ಪೈಪ್ ಮೂಲಕ ನೀರಿನ ಸಂಪರ್ಕವನ್ನು ಪಡೆದುಕೊಂಡಿದ್ದಾರೆ. ಕಾಡುಹಂದಿ, ಕಾಡಾನೆಗಳ ಉಪದ್ರವ ತಪ್ಪಿಸಲು 3 ವರ್ಷದ ಹಿಂದೆ ಸೌರಶಕ್ತಿ ಬೇಲಿಯನ್ನು ಅಳವಡಿಸಿದ್ದಾರೆ. ಆಗ ಸುಮಾರು ₹ 90,000 ವೆಚ್ಚವಾಗಿದೆ. ಸೌರಶಕ್ತಿ ಬೇಲಿಯಿಂದಾಗಿ ತೋಟಕ್ಕೆ ಕಾಡುಹಂದಿ, ಕಾಡಾನೆಗಳ ಕಾಟ ಇಲ್ಲ. ಆದರೆ, ಅಪರೂಪಕೊಮ್ಮೆ ಕೋತಿಗಳು ದಾಳಿ ಮಾಡಿ ಕೃಷಿಗೆ ಹಾನಿ ತಂದೊಡುತ್ತಿದೆ. ಇಂತಹ ಅನೇಕ ಸಮಸ್ಯೆಗಳ ಮಧ್ಯೆಯೂ ಅವರು ಸಮಗ್ರ ಕೃಷಿ ಪದ್ಧತಿಯನ್ನು ಅನುಸರಿಸಿರುತ್ತಿರುವುದು ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT