ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಯೊಂದಿಗೆ ಬೆಳೆಗಾರರ ಜೀವ ಹಿಂಡುತ್ತಿವೆ ವನ್ಯಜೀವಿಗಳು!

ಸಿದ್ದಾಪುರ ಭಾಗದಲ್ಲಿ ಕಾಫಿ ಹಣ್ಣುಗಳನ್ನು ಉದುರಿಸುತ್ತಿವೆ ಕಾಡುಕೋಣ, ಕಾಡೆಮ್ಮೆ, ಕಾಡಾನೆ, ಮಂಗಗಳು
ರೆಜಿತ್ ಕುಮಾರ್ ಗುಹ್ಯ
Published 12 ಜನವರಿ 2024, 7:35 IST
Last Updated 12 ಜನವರಿ 2024, 7:35 IST
ಅಕ್ಷರ ಗಾತ್ರ

ಸಿದ್ದಾಪುರ: ಒಂದೆಡೆ ಮಳೆ ಬಿದ್ದು ಕಾಫಿ ಕೊಯ್ಲಿಗೆ ಸಮಸ್ಯೆಯಾಗಿದ್ದರೆ ಮತ್ತೊಂದೆಡೆ ವನ್ಯಜೀವಿಗಳ ಹಾವಳಿಯು ಆ ಸಮಸ್ಯೆಯನ್ನು ಬಿಗಡಾಯಿಸಿದೆ.

ಬೀಳುತ್ತಿರುವ ಮಳೆಗೆ ಕಾಫಿ ಹಣ್ಣುಗಳು ಉದುರುವುದು ಒಂದೆಡೆಯಾದರೆ, ಮತ್ತೊಂದೆಡೆ ಕಾಡಾನೆ, ಕಾಡುಕೋಣ, ಮಂಗಗಳಿಂದಲೂ ಕಾಫಿ ಹಣ್ಣುಗಳು ಯಥೇಚ್ಛ ಪ್ರಮಾಣದಲ್ಲಿ ಧರೆಶಾಯಿಯಾಗುತ್ತಿವೆ. ಇದೂ ಸಹ ರೈತರಿಗೆ ಅಪಾರ ನಷ್ಟ ತಂದೊಡ್ಡುತ್ತಿದೆ.

ವಿಶೇಷವಾಗಿ ಕರಗೋಡು ಭಾಗದಲ್ಲಿ ಈ ಸಮಸ್ಯೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಸುಮಾರು 20ಕ್ಕೂ ಹೆಚ್ಚು ಕಾಡಾನೆಗಳಿರುವ ಹಿಂಡು ಕಾಫಿ ತೋಟದಲ್ಲಿ ಬೀಡುಬಿಟ್ಟಿದ್ದು, ಕಾಫಿ ಗಿಡ ಸೇರಿದಂತೆ ಫಸಲನ್ನು ನಾಶ ಮಾಡುತ್ತಿದೆ.

ಕಾಡಾನೆಗಳು ಕಾಫಿ ತೋಟದಲ್ಲಿ ನಡೆದಾಡುವುದರಿಂದ ಕಾಫಿ ಬೀಜ ಹಾಗೂ ಹಣ್ಣುಗಳು ಒಂದೇ ಸಮನೆ ಉದುರುತ್ತಿವೆ. ಒಮ್ಮೆಲೆ 20ಕ್ಕೂ ಹೆಚ್ಚು ಕಾಡಾನೆಗಳು ಒಂದು ತೋಟದಲ್ಲಿ ನಡೆದಾಡಿದರೆ ಬೆಳೆಗಾರರು ತಾನೆ ಏನು ಮಾಡಬೇಕು. ಕೆಲವು ಆನೆಗಳು ರಾತ್ರಿ ವೇಳೆ ರೋಷದಿಂದ ಘೀಳಿಟ್ಟು, ಕಾಫಿ ಗಿಡಗಳನ್ನೇ ಮುರಿದು, ಗಿಡವನ್ನೇ ನಾಶ ಮಾಡುತ್ತಿವೆ. ಇನ್ನೂ ಮುಂದುವರೆದು ಕಾಫಿ ಹಣ್ಣನ್ನು ಗಿಡದಿಂದಲೇ ಎಳೆದು ತಿನ್ನುತ್ತಿದ್ದು, ಆನೆಯ ಲದ್ದಿಯಿಂದ ಬೀಜ ಹೆಕ್ಕುವಂತಾಗಿದೆ. ಕಾಫಿ ಬೆಳೆಯೊಂದಿಗೆ ಇತರೆ ಬೆಳೆಗಳನ್ನು ಕಾಡ ಕಾಡಾನೆಗಳು ನಾಶ ಮಾಡುತ್ತಿವೆ.

ಕಾಡುಕೋಣ, ಮಂಗಗಳ ಹಾವಳಿ 

ಕರಡಿಗೋಡು ಗ್ರಾಮದ ತೋಟಗಳಲ್ಲಿ ಸುಮಾರು 25ಕ್ಕೂ ಹೆಚ್ಚು ಕಾಡುಕೋಣಗಳು ಬೀಡುಬಿಟ್ಟಿದ್ದು, ಇವುಗಳ ಸಂಚಾರದಿಂದ ಕಾಫಿ ಬೆಳೆ ನಾಶವಾಗುತ್ತಿದೆ. ಗ್ರಾಮದ ನಂದಾ ಗಣಪತಿ, ಜೋಜಿ ಥಾಮಸ್ ಸೇರಿದಂತೆ ಸ್ಥಳೀಯ ಬೆಳೆಗಾರರ ತೋಟದಲ್ಲಿ ಕಾಡುಕೋಣಗಳು ನಿರಂತರವಾಗಿ ಸುತ್ತಾಡುತ್ತಿವೆ. ಇದರಿಂದಾಗಿ ಒಂದೆಡೆ ಮಾಗಿರುವ ಕಾಫಿ ಹಣ್ಣುಗಳು ನೆಲ ಸೇರುತ್ತಿದ್ದರೆ ಮತ್ತೊಂದೆಡೆ ಕಾರ್ಮಿಕರು ಕೂಡ ಕೆಲಸಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಇನ್ನು ಮಂಗಗಳು ಕೂಡ ಕಾಫಿ ಹಣ್ಣನ್ನು ಗಿಡದಿಂದ ಕಿತ್ತು ಹಾಕುತ್ತಿವೆ. ಮಂಗಗಳ ಹಿಂಡು ಕಾಫಿ ಗಿಡದ ರೆಕ್ಕೆಗಳನ್ನು ಮುರಿಯುತ್ತಿವೆ. ಬೆಳೆಗಾರರು ದಿಕ್ಕೆಟ್ಟು ಕೂರುವಂತಹ ಸ್ಥಿತಿ ನಿರ್ಮಾಣವಾಗಿದೆ.

ಪರಿಣಾಮಕಾರಿ ಕಾರ್ಯಾಚರಣೆ ಇಲ್ಲ

ವನ್ಯಜೀವಿಗಳನ್ನು ತೋಟಗಳಿಂದ ಕಾಡಿಗೆ ವಾಪಸ್ ಕಳುಹಿಸಲು ಅರಣ್ಯ ಇಲಾಖೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಸ್ಥಳೀಯ ಬೆಳೆಗಾರರು ಆರೋಪಿಸುತ್ತಾರೆ.

ಆರ್.ಆರ್.ಟಿ ತಂಡ ಮುಖ್ಯರಸ್ತೆಯ ಮುಖಾಂತರ ಗ್ರಾಮಕ್ಕೆ ಬಂದು ಪಟಾಕಿ ಸಿಡಿಸಿ ಅದೇ ರಸ್ತೆಯಲ್ಲಿ ಮರಳುತ್ತಿದೆ. ತೋಟದಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳು ಸೇರಿದಂತೆ ವನ್ಯಪ್ರಾಣಿಗಳನ್ನು ಕಾಡಿಗೆ ಅಟ್ಟುತ್ತಿಲ್ಲ ಎಂದು ಸ್ಥಳಿಯರು ಹೇಳುತ್ತಾರೆ.

ಆರ್‌ಆರ್‌ಟಿ ವಾಟ್ಸ್ಆ್ಯಪ್‌ ಗ್ರೂಪ್‌ನಲ್ಲಿ ವನ್ಯಜೀವಿಗಳ ಉಪಟಳದ ಕುರಿತ ಫೋಟೋ, ಮಾಹಿತಿ ನೀಡುತ್ತೇವೆ. ಆರ್‌ಆರ್‌ಟಿ ತಂಡದ ಸಿಬ್ಬಂದಿ ಬಂದು ಹಾನಿಯನ್ನು ವೀಕ್ಷಿಸಿ ತೆರಳುತ್ತಾರೆ. ಆದರೆ, ಕಾಡಾನೆಗಳು ಓಡಿಸುವಲ್ಲಿ ವಿಫಲವಾಗುತ್ತಿದ್ದಾರೆ ಎಂದು ಸ್ಥಳೀಯರಾದ ಪ್ರಕಾಶ್ ದೂರುತ್ತಾರೆ.

ಬೆಳೆಗಾರ ಜೋಜಿ ಥಾಮಸ್ ಪ್ರತಿಕ್ರಿಯಿಸಿ, ‘ಕಾಫಿ ತೋಟದಲ್ಲಿ ನಿರಂತರವಾಗಿ ಕಾಡುಕೋಣ ಓಡಾಡುತ್ತಿದೆ. ಆಗಿಂದಾಗ್ಗೆ ಮನೆಯ ಸಮೀಪಕ್ಕೂ ಬರುತ್ತಿದೆ. ಕಾರ್ಮಿಕರು, ವಿದ್ಯಾರ್ಥಿಗಳು ಭಯದಿಂದ ತೆರಳಬೇಕಾಗಿದೆ. ಕಾಫಿ ಗಿಡ ಸೇರಿದಂತೆ ಫಸಲು ಸಾಶವಾಗುತ್ತಿದೆ’ ಎಂದು ಅಳಲು ತೋಡಿಕೊಳ್ಳುತ್ತಾರೆ.

ಕಾಡಾನೆಗಳಿಂದಾಗಿ ಅರ್ಧದಷ್ಟು ಕಾಫಿ ಬೀಜ ನೆಲದಲ್ಲಿದೆ. ಕಾಫಿ ಹೆಕ್ಕುವ ಕೆಲಸವೇ ಹೆಚ್ಚಾಗಿದೆ. ಕಾಫಿ ಗಿಡಗಳನ್ನು ಮುರಿದು ಹಾಕುತ್ತಿವೆ. ವನ್ಯ ಪ್ರಾಣಿಗಳಿಂದ ಹೈರಾಣಾಗಿದ್ದೇವೆ.
–ನಂದಾ ಗಣಪತಿ, ಕರಡಿಗೋಡು
ಕರಡಿಗೋಡು ಸಮೀಪದ ಅರಣ್ಯದಲ್ಲಿ ಮಳೆಯಿಂದಾಗಿ ಕಂದಕ ಕುಸಿದಿದ್ದು ಇದೀಗ ಕಂದಕ ಸರಿಪಡಿಸಲಾಗುತ್ತಿದೆ. ಕಾಡಾನೆ ನಿಯಂತ್ರಣಕ್ಕೆ ‌ಅವರೆಗುಂದ ಘಟ್ಟದಳ ಭಾಗದಲ್ಲಿ ಗೇಟ್ ಅಳವಡಿಸಲಾಗುತ್ತಿದೆ. ಕಾಫಿ ಹಾನಿಗೂ ಪರಿಹಾರ ನೀಡಲಾಗುತ್ತಿದೆ.
–ಕಳ್ಳಿರ ದೇವಯ್ಯ, ವಲಯ ಅರಣ್ಯ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT