ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿ: ಕಾಡಾನೆಗೆ 75 ದಿನದಲ್ಲಿ ಮೂವರ ಸಾವು

ಜಿಲ್ಲೆಯಲ್ಲಿ ಹೆಚ್ಚಿದ ವನ್ಯಜೀವಿಗಳ ದಾಂದಲೆ; ಕಾಡಂಚಿನ ಪ್ರದೇಶಗಳಲ್ಲಿ ಆತಂಕ
Published 14 ಮಾರ್ಚ್ 2024, 6:25 IST
Last Updated 14 ಮಾರ್ಚ್ 2024, 6:25 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಬೇಸಿಗೆಯ ಝಳ ಹೆಚ್ಚುತ್ತಿದ್ದಂತೆ ಕಾಡಾನೆಗಳ ಉಪಟಳವೂ ಅಧಿಕವಾಗುತ್ತಿದೆ. ಕಳೆದ ಎರಡೂವರೆ ತಿಂಗಳಿನಲ್ಲಿ ಮೂವರು ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟಿದ್ದಾರೆ. ಮೂವರು ಮಹಿಳೆಯರು ಗಾಯಗೊಂಡಿದ್ದಾರೆ.  ಕಾಡಾನೆಗಳ ನಿರಂತರ ಓಡಾಟದಿಂದ ಬೆಳೆಗಳು ನಾಶವಾಗಿವೆ. ಕಾಡಂಚಿನ ಜನರು ಆತಂಕದಲ್ಲೇ ದಿನದೂಡುವಂತಾಗಿದೆ.

ಜನವರಿ 24ರಂದು ಸಿದ್ದಾಪುರದ ಸಮೀಪದ ಹೊಸೂರು ಬೆಟ್ಟಗೇರಿಯಲ್ಲಿ ಕಾರ್ಮಿಕ ಮಹಿಳೆ ಬೇಬಿ (55) ಎಂಬುವರು ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟಿದ್ದರು. ಕಳೆದ ವಾರ ನಿಶಾನಿ ಬೆಟ್ಟದ ತಪ್ಪಲಿನಲ್ಲಿ ವ್ಯಕ್ತಿಯೊಬ್ಬರು ಕಾಡಾನೆ ದಾಳಿಯಿಂದ ಮೃತಪಟ್ಟಿದ್ದರು. ಬುಧವಾರ ವಿರಾಜಪೇಟೆಯ ಚೆನ್ನಂಗಿ ಸಮೀಪ ಕಾರ್ಮಿಕ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.

ಈ ಮಧ್ಯೆ ಕುಶಾಲನಗರ ತಾಲ್ಲೂಕಿನ ಚಿನ್ನೇನಹಳ್ಳಿಯಲ್ಲಿ ವೃದ್ಧ ಮಹಿಳೆ ಹಾಗೂ ಸಿದ್ದಾಪುರದ ಪಳ್ಳಕೆರೆ ಹಾಗೂ ಹೇರೂರು ಗ್ರಾಮದಲ್ಲಿ ಮಹಿಳೆಯರಿಬ್ಬರು ಕಾಡಾನೆ ದಾಳಿಗೆ ಸಿಲುಕಿ ಗಾಯಗೊಂಡಿದ್ದರು. ಇಷ್ಟು ಮಾತ್ರವಲ್ಲ, ಸೋಮವಾರಪೇಟೆಯ ಯಡವನಾಡು ಗ್ರಾಮ, ಕಾಜೂರು ಅರಣ್ಯ ಪ್ರದೇಶ, ನಾ‍ಪೋಕ್ಲು
ಸಮೀಪದ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿ, ಸುಂಟಿಕೊಪ್ಪ ವ್ಯಾಪ್ತಿ ಸೇರಿದಂತೆ ಕೊಡಗು ಜಿಲ್ಲೆಯ ಅನೇಕ ಭಾಗಗಳಲ್ಲಿ ಕಾಡಾನೆಗಳು ದಾಳಿ ನಡೆಸಿ ಬೆಳೆಗಾರರಿಗೆ ನಷ್ಟ ಉಂಟು ಮಾಡಿವೆ.

ಕಾಡಾನೆ ದಾಳಿಗೆ ಸಿಲುಕಿದವರಲ್ಲಿ ಈ ವರ್ಷ ಕಾರ್ಮಿಕರೇ ಹೆಚ್ಚು. ಅದರಲ್ಲೂ ಮಹಿಳಾ ಕಾರ್ಮಿಕರೇ ಅಧಿಕ. ಮೃತಪಟ್ಟವರಲ್ಲಿ ಇಬ್ಬರು ಮಹಿಳೆಯರಿದ್ದರೆ, ಗಾಯಗೊಂಡವರ ಪೈಕಿ ಮೂವರೂ ಮಹಿಳೆಯರೇ ಆಗಿದ್ದಾರೆ. ಇದು ಮಹಿಳಾ ಕಾರ್ಮಿಕರಲ್ಲಿ ಆತಂಕ ಹೆಚ್ಚಿಸಿದೆ.

ಕಾಡಿನೊಳಗೆ ನೀರಿನ ಒರತೆಗಳು ಇಂಗುತ್ತಿವೆ. ಮೇಲ್ನೋಟಕ್ಕೆ ಒಂದಿಷ್ಟು ಅಲ್ಪಸ್ವಲ್ಪ ನೀರಿದೆ ಎಂದು ಕಂಡು ಬಂದರೂ ಆನೆಗಳಿಗೆ ಸಾಕಾಗುವಷ್ಟು ನೀರು ಬಹುತೇಕ ಕಡೆ ಸಿಗುತ್ತಿಲ್ಲ. ನೀರು  ಮಾತ್ರವಲ್ಲ, ಹಸಿರು ಮೇವೂ ಸಹ ಈಗ ದುರ್ಲಭ ಎನಿಸಿದೆ. ಬಿರುಬಿಸಿಲಿನ ಪ್ರಖರತೆ ಹೆಚ್ಚಿರುವುದರಿಂದ ಸಹಜವಾಗಿಯೇ ನೀರು ಮತ್ತು ಮೇವನ್ನು ಅರಸಿ ಕಾಡಿನಿಂದ ನಾಡಿಗೆ ಕಾಡಾನೆಗಳು ಲಗ್ಗೆ ಇಡುತ್ತಿವೆ.

ಹಿಂದಿನ ವರ್ಷಗಳಲ್ಲಿ ಇಷ್ಟೊತ್ತಿಗೆ ಒಂದೆರಡು ಬಾರಿ ಸಾಕಷ್ಟು ಕಡೆ ಜೋರು ಮಳೆ ಸುರಿದಿತ್ತು. ಹಸಿರು ಮೇವು, ನೀರು ಕಾಡಿನಲ್ಲೇ ಲಭ್ಯವಿತ್ತು. ಆದರೆ, ಈಗ ಜನವರಿ ಮೊದಲ ವಾರ ಒಂದಿಷ್ಟು ಮಳೆ ಬಂದಿದ್ದು, ಬಿಟ್ಟರೆ ನಂತರದ ದಿನಗಳಲ್ಲಿ ಜಿಲ್ಲೆಯ ಎಲ್ಲೂ ಒಂದು ಹನಿ ಮಳೆಯಾಗಿಲ್ಲ. ಎಲ್ಲೆಡೆ ಭೀಕರ ಬರದ ಛಾಯೆ ಆವರಿಸಿದೆ. ಇದೂ ಕಾಡಾನೆ ದಾಳಿ ಹೆಚ್ಚಲು ಕಾರಣ ಎಂದು ಅರಣ್ಯಾಧಿಕಾರಿಗಳು ಹೇಳುತ್ತಾರೆ.

ಮತ್ತೊಂದು ಕಡೆ, ಬೇಸಿಗೆ ಯಾಗಿರುವುದರಿಂದ ಕಾಫಿ ತೋಟಗಳಲ್ಲಿ ಹಲಸಿನ ಹಣ್ಣುಗಳು, ಕಾಯಿಗಳು ಬಿಡಲಾರಂಭಿಸಿವೆ. ನೂರಾರು ಹಲಸಿನ ಮರಗಳಿಂದ ಹೊಮ್ಮುವ ಸುವಾಸನೆಯ ಜಾಡು ಹಿಡಿಯುವ ಕಾಡಾನೆಗಳು ತೋಟಗಳಿಗೆ ಬರುತ್ತಿವೆ. ಇದೂ ಕಾಡಾನೆ ದಾಳಿಗೆ ಕಾರಣ ಎನಿಸಿದೆ.

ಹಗಲಿನಲ್ಲೇ ರಸ್ತೆಯಲ್ಲಿ ಕಾಡಾನೆ ಪ್ರತ್ಯಕ್ಷ

ಸೋಮವಾರಪೇಟೆ: ಕಾಜೂರು ಮೀಸಲು ಅರಣ್ಯದ ಬಳಿ ಮಡಿಕೇರಿ ಸೋಮವಾರಪೇಟೆ ರಾಜ್ಯ ಹೆದ್ದಾರಿಯಲ್ಲಿ ಒಂಟಿ ಸಲಗ ಬೆಳ್ಳಂ ಬೆಳಿಗ್ಗೆಯೇ ಸಂಚರಿಸುತ್ತಿದ್ದು, ಜನ ಸಾಮಾನ್ಯರು ಭಯಭೀತರಾಗಿದ್ದಾರೆ.

‘ಈ ಭಾಗದಲ್ಲಿ ಟ್ರಂಚ್, ಸೋಲಾರ್ ತಂತಿ ಹಾಗೂ ರೈಲ್ವೆ ಬ್ಯಾರಿಕೇಡ್ ಅಳವಡಿಸಲಾಗಿದೆ. ಆದರೂ ರಸ್ತೆಯಲ್ಲಿ ಆನೆ ಸಂಚಾರ ಮಾತ್ರ ಕಡಿಮೆಯಾಗಿಲ್ಲ. ಸರ್ಕಾರದ ಯೋಜನೆಗಳು ಯಾವುದೂ ಸರಿಯಾಗಿ ಅನುಷ್ಠಾನವಾಗದೆ, ಕೋಟ್ಯಂತರ ಹಣವೆಲ್ಲಾ ನೀರು ಪಾಲಾಗುತ್ತಿದೆ’ ಎಂದು ಸ್ಥಳೀಯ ಗ್ರಾಮಸ್ಥರು ದೂರಿದ್ದಾರೆ.

‘ಕಾಡಾನೆಗಳಿಗೆ ಶಾಶ್ವತ ಪರಿಹಾರ ಒದಗಿಸಬೇಕು. ಕಾಡಿನಲ್ಲಿ ಕುಡಿಯುವ ನೀರು ಮತ್ತು ಮೇವಿನ ವ್ಯವಸ್ಥೆಯಾಗದ ಹೊರತು ಕಾಡಾನೆಗಳ ನಿಯಂತ್ರಣ ಸಾಧ್ಯವಿಲ್ಲ’ ಎಂದು ಯಡವಾರೆ ಗ್ರಾಮದ ಕೃಷಿಕ ಅಶೋಕ್ ದೂರಿದರು.

****

ಕಾಡಿನೊಳಗೆ ನೀರು ಲಭ್ಯವಿದ್ದರೂ ತೋಟಗಳಲ್ಲಿರುವ ಹಲಸಿನ ಹಣ್ಣಿನ ವಾಸನೆ ಹಿಡಿದು ಕಾಡಾನೆ ಬರುತ್ತಿವೆ. ಹಿಂದಿನ ವರ್ಷ ಬಂದು ಹೋಗಿದ್ದ ಆನೆಗಳೂ ಈ ವರ್ಷವೂ ಬರುತ್ತಿವೆ

-ಭಾಸ್ಕರ್, ಡಿಸಿಎಫ್, ಮಡಿಕೇರಿ ವಲಯ</span></p>

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT