ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಐಡಿ ತನಿಖೆಗೆ ಕಾಂಗ್ರೆಸ್‌ ಪಟ್ಟು

ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಪ್ರತಿಧ್ವನಿಸಿದ ಖಾಸಗಿ ಬ್ಯಾಂಕ್‌ನಲ್ಲಿ ಹಣ ಜಮಾ ಪ್ರಕರಣ
Last Updated 7 ನವೆಂಬರ್ 2019, 19:45 IST
ಅಕ್ಷರ ಗಾತ್ರ

ಮಡಿಕೇರಿ: ಪ್ರಾಕೃತಿಕ ವಿಕೋಪದ ನಿರ್ವಹಣೆ ನಿಧಿಯನ್ನು ಕಾರ್ಯಪಾಲಕ ಎಂಜಿನಿಯರ್‌ ಶ್ರೀಕಂಠಯ್ಯ ಅವರು ಖಾಸಗಿ ಬ್ಯಾಂಕ್‌ನಲ್ಲಿ ಇಟ್ಟಿದ್ದ ಪ್ರಕರಣವು ಗುರುವಾರ ನಡೆದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಪ್ರತಿಧ್ವನಿಸಿತು.

ಈ ಪ್ರಕರಣದಲ್ಲಿ ಕಾಂಗ್ರೆಸ್‌ನ ಕೆಲವು ಸದಸ್ಯರು ಅವ್ಯವಹಾರದ ಶಂಕೆ ವ್ಯಕ್ತಪಡಿಸಿ, ಸಿಐಡಿ ತನಿಖೆಗೆ ವಹಿಸಬೇಕೆಂದು ಪಟ್ಟುಹಿಡಿದರು. ಆಡಳಿತ ಪಕ್ಷದಿಂದ ಸಿಐಡಿ ತನಿಖೆ ಆಸಕ್ತಿ ಬರಲಿಲ್ಲ. ಇದಕ್ಕೆ ಒಪ್ಪದಿರುವಾಗ ಕಾಂಗ್ರೆಸ್‌ ಕೆಲವು ಸದಸ್ಯರು, ಶಿವು ಮಾದಪ್ಪ ಹಾಗೂ ಬಾನಂಡ ಪ್ರಥ್ಯು ನೇತೃತ್ವದಲ್ಲಿ ಸಭಾತ್ಯಾಗ ಮಾಡಿದರು.

ನಗರ ಹೊರವಲಯದ ಜಿಲ್ಲಾ ಪಂಚಾಯಿತಿ ನೂತನ ಸಭಾಂಗಣದಲ್ಲಿ ಸಭೆ ಆರಂಭಗೊಳ್ಳುತ್ತಿದ್ದಂತೆಯೇ ನಾಪೋಕ್ಲು ಕ್ಷೇತ್ರದ ಸದಸ್ಯ ಮುರಳಿ ಕರುಂಬಯ್ಯ ಅವರು, ಪ್ರಾಕೃತಿಕ ವಿಕೋಪದಿಂದ ಮೃತಪಟ್ಟವರಿಗೆ ಸಂತಾಪ ಸೂಚಿಸಲು ಕೋರಿದರು. ಅದರಂತೆ ಒಂದು ನಿಮಿಷ ಮೌನಾಚರಣೆ ನಡೆಯಿತು. ಅದಾದ ಮೇಲೆ ಸಭೆಯಲ್ಲಿ ₹21 ಕೋಟಿ ಪ್ರಕರಣ ವಿಚಾರದಲ್ಲಿ ಗದ್ದಲ, ಮಾತಿನ ಚಕಮಕಿ, ಏಕವಚನ ಪದ ಪ್ರಯೋಗ ನಡೆಯಿತು.

ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಸದಸ್ಯರು ಸಿಐಡಿ ತನಿಖೆಗೆ ಪಟ್ಟು ಹಿಡಿದರೆ, ಆಡಳಿತರೂಢ ಬಿಜೆಪಿ ಸದಸ್ಯರು ಮಾತ್ರ ಈಗಾಗಲೇ ಅಸ್ತಿತ್ವದಲ್ಲಿರುವ ಸಮಿತಿಯಿಂದಲೇ ತನಿಖೆಗೆ ನಡೆಯಲಿ ಎಂಬ ಪ್ರಸ್ತಾಪ ಮುಂದಿಟ್ಟರು. ಆಗ ಬಿಜೆಪಿ ಹಾಗೂ ಕಾಂಗ್ರೆಸ್‌ ಸದಸ್ಯರ ನಡುವೆ ಪರಸ್ಪರ ವಾಗ್ವಾದ ನಡೆಯಿತು.

ಕಾಂಗ್ರೆಸ್‌ ಸದಸ್ಯ ಶಿವು ಮಾದಪ್ಪ ಮಾತನಾಡಿ, ‘ಪ್ರತಿ ವರ್ಷವೂ ಪ್ರಾಕೃತಿಕ ವಿಕೋಪ ಆಗಲಿ. ನಮ್ಮ ಜೇಬಿ ತುಂಬಿಸಿಕೊಳ್ಳಬಹುದು ಎಂದು ಅಧಿಕಾರಿಗಳು ಭಾವಿಸಿದ್ದಾರೆ. 4‘ಜಿ’ ವಿನಾಯಿತಿ ಅಡಿ ನಡೆದಿರುವ ಎಲ್ಲ ಕಾಮಗಾರಿಗಳ ತನಿಖೆಯೂ ಆಗಬೇಕು. ಖಾಸಗಿ ಬ್ಯಾಂಕ್‌ನಲ್ಲಿ ₹ 21 ಕೋಟಿ ಹಣ ಇಟ್ಟಿರುವ ಉದ್ದೇಶವಾದರೂ ಏನು? ಅಕ್ರಮದ ವಾಸನೆಯಿದ್ದು, ಕೊಡಗಿನ ಜನರಿಗೆ ಏನೆಂದು ಉತ್ತರ ನೀಡುವುದು. ಈ ಪ್ರಕರಣವನ್ನು ಸಿಐಡಿಗೆ ವಹಿಸಲೇಬೇಕು’ ಎಂದು ಆಗ್ರಹಿಸಿದರು.

ಅದಕ್ಕೆ ದನಿಗೂಡಿಸಿದ ಬಾನಂಡ ‍ಪ್ರಥ್ಯು, ಸಿಐಡಿ ತನಿಖೆ ಆಗಬೇಕು ಎಂದು ಪಟ್ಟು ಹಿಡಿದರು. ಮಧ್ಯ ಪ್ರವೇಶಿಸಿದ ಬಿಜೆ‍ಪಿ ಸದಸ್ಯ ಮುರಳಿ ಅವರು, ಅದರಲ್ಲಿ ಅವ್ಯವಹಾರ ನಡೆದಿಲ್ಲ. ಅನುಮತಿ ಪಡೆದುಕೊಳ್ಳದಿರುವುದು ಅಧಿಕಾರಿಯಿಂದ ಆಗಿರುವ ಲೋಪ’ ಎಂದು ಹೇಳಿದರು. ಅದಕ್ಕೆ ಕಾಂಗ್ರೆಸ್‌ ಸದಸ್ಯರು ಕಿಡಿಕಾರಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ.ಹರೀಶ್‌ ಮಾತನಾಡಿ, ‘ಇದು ಪ್ರಾಕೃತಿಕ ವಿಕೋಪದ ಹಣ. ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡಿದ್ದರು. ಶ್ರೀಕಂಠಯ್ಯ ಅವರು ಅನುಮತಿ ಇಲ್ಲದೇ ಬ್ಯಾಂಕ್‌ನಲ್ಲಿ ಹಣ ಇಟ್ಟಿದ್ದರು. ಅವ್ಯವಹಾರ ನಡೆದಿಲ್ಲ. ತನಿಖಾ ವರದಿಯೂ ಬಂದಿದೆ. ಅದರಂತೆ ಸರ್ಕಾರಕ್ಕೆ ವರದಿ ಕಳುಹಿಸಲಾಗಿದೆ. ಮೂರು ತಿಂಗಳ ಹಿಂದೆ ರಚನೆ ಮಾಡಲಾಗಿದ್ದ ಸಮಿತಿಯು ಮತ್ತೊಮ್ಮೆ ಸಭೆ ಸೇರಿ ಚರ್ಚಿಸೋಣ. ಅದಕ್ಕೆ ಒಪ್ಪಿಗೆ ಆಗದಿದ್ದರೆ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಸಭೆಯ ಗಮನಕ್ಕೆ ತಂದರು. ಆದರೂ, ಕಾಂಗ್ರೆಸ್‌ ಸದಸ್ಯರ ಆಕ್ರೋಶ ತಣಿಯಲಿಲ್ಲ.

ಸದಸ್ಯೆ ಸರಿತಾ ಪ್ರತಿಕ್ರಿಯಿಸಿ, ಅಧಿಕಾರಿಗಳ ಪರ ಮಾತನಾಡಬೇಡಿ. ಸಿಐಡಿ ತನಿಖೆ ಪ್ರಕರಣವನ್ನು ಒಪ್ಪಿಸದಿದ್ದರೆ ಬಿಜೆಪಿ ಸದಸ್ಯರೂ ಇದರಲ್ಲಿ ಶಾಮೀಲಾಗಿದ್ದರೆ ಎಂದು ತಿಳಿದುಕೊಳ್ಳಬೇಕಾಗುತ್ತದೆ ಎಂದು ಗಂಭೀರ ಆರೋಪ ಮಾಡಿದರು. ಈ ಆರೋಪ ಎರಡು ಪಕ್ಷಗಳ ಸದಸ್ಯರ ನಡುವೆ ವಾಗ್ವಾದಕ್ಕೆ ಕಾರಣವಾಯಿತು. ಏಕವಚನ ಪದ ಪ್ರಯೋಗವೂ ನಡೆಯಿತು.

ಸಿಇಒ ಕೆ.ಲಕ್ಷ್ಮಿಪ್ರಿಯಾ ಮಾತನಾಡಿ, ‘ಮೂರು ತಿಂಗಳ ಹಿಂದೆ ಸಾರ್ವಜನಿಕರೊಬ್ಬರು ಪಂಚಾಯತ್‌ರಾಜ್‌ ಇಲಾಖೆಗೆ ಪ್ರಕರಣ ಕುರಿತು ದೂರು ನೀಡಿದ್ದರು. ಅಲ್ಲಿಂದ ವರದಿ ನೀಡಲು ಮೇಲಾಧಿಕಾರಿಗಳಿಂದ ಪತ್ರ ಬಂದಿತ್ತು. ಅದರಂತೆಯೇ, ಅಧ್ಯಕ್ಷರ ಸೂಚನೆಯಂತೆ ಸಮಿತಿ ರಚನೆ ಮಾಡಲಾಗಿತ್ತು. ಮುಖ್ಯ ಲೆಕ್ಕಾಧಿಕಾರಿ ವರದಿ ನೀಡಿದ್ದು ವರದಿಯನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ’ ಎಂದು ಹೇಳಿದರು.

ಸದಸ್ಯೆ ಕೆ.ಪಿ.ಚಂದ್ರಕಲಾ ಪ್ರತಿಕ್ರಿಯಿಸಿ, ಸಮಿತಿಯ ಮುಂದೆ ವರದಿ ಹಾಜರುಪಡಿಸಬೇಕಿತ್ತು. ಅದನ್ನು ಬಿಟ್ಟು ಏಕಾಏಕಿ ಸರ್ಕಾರಕ್ಕೆ ವರದಿಯನ್ನು ಯಾವ ಕಾರಣಕ್ಕೆ ಕಳುಹಿಸಬೇಕಿತ್ತು. ಶ್ರೀಕಂಠಯ್ಯ ಮಾತ್ರ ಅಲ್ಲ. ಜಿಲ್ಲಾಧಿಕಾರಿ ಸೇರಿದಂತೆ ಹಲವು ಅಧಿಕಾರಿಗಳು ಈ ಖಾಸಗಿ ಬ್ಯಾಂಕ್‌ನಲ್ಲಿ ಸರ್ಕಾರದ ಹಣ ಜಮಾ ಮಾಡಿದ್ದಾರೆ ಎಂದು ಸಭೆಯ ಗಮನಕ್ಕೆ ತಂದರು. ಆದರೂ, ಆಡಳಿತ ಪಕ್ಷದಿಂದ ತನಿಖೆ ನಿರಾಸಕ್ತಿ ಬಂದ ಕಾರಣ, ಬಾನಂಡ ಪ್ರಥ್ಯು ಹಾಗೂ ಶಿವು ಮಾದಪ್ಪ ಅವರ ನೇತೃತ್ವದಲ್ಲಿ ಕಾಂಗ್ರೆಸ್‌ ಸದಸ್ಯರ ಸಭಾತ್ಯಾಗ ಮಾಡಿದರು. ಕೆ.ಪಿ.ಚಂದ್ರಕಲಾ, ಕುಮುದಾ ಧರ್ಮಪ್ಪ ಹಾಗೂ ಜೆಡಿಎಸ್‌ನ ಪುಟ್ಟರಾಜು ಹೊರಹೋಗಲಿಲ್ಲ. ಅದಾದ ನಂತರ ಮಧ್ಯಾಹ್ನ ಸಭೆಯು ಭರವಸೆಯನ್ನು ಹರೀಶ್‌ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT