ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸದ ರಾಶಿ: ಆರೋಗ್ಯಕ್ಕೆ ಸಂಚಕಾರ

Last Updated 23 ಏಪ್ರಿಲ್ 2014, 6:46 IST
ಅಕ್ಷರ ಗಾತ್ರ

ಕುಶಾಲನಗರ: ಕುಡಿಯುವ ನೀರು, ರಸ್ತೆ ಮತ್ತು ಸ್ವಚ್ಛತಾ ಸಮಸ್ಯೆಗಳು ಒಂದೆಡೆಯಾದರೆ, ಮತ್ತೊಂದೆಡೆ ಪಂಚಾಯಿತಿಯವರೇ ಗ್ರಾಮದ ಮಧ್ಯದಲ್ಲಿರುವ ಕಲ್ಲುಕೋರೆಯೊಂದರ ಗುಂಡಿಗೆ ಕಸದ ರಾಶಿ ತಂದು ಸುರಿಯುತ್ತಿರುವುದು ಗ್ರಾಮದ ಸ್ವಾಸ್ಥ್ಯಕ್ಕೆ ಸಂಚಕಾರ ತಂದಿದೆ.

ಇಂತಹ ಸ್ಥಿತಿ ಇರುವುದು ಸಮೀಪದ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೊಂದಿಬಸವನಹಳ್ಳಿಯ ಮುಖ್ಯ ಕಲ್ಲುಕೋರೆ ಬಡಾವಣೆಯಲ್ಲಿ. ಮುನ್ನೂರಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿರುವ ಇಲ್ಲಿ ಕುಡಿಯುವ ನೀರಿಗಾಗಿ ಕೇವಲ ಎರಡು ಕಿರುನೀರುಸರಬರಾಜು ತೊಟ್ಟಿಗಳನ್ನು ನಿರ್ಮಿಸಲಾಗಿದೆ.

ವಿಪರ್ಯಾಸವೆಂದರೆ ಈ ತೊಟ್ಟಿಗಳಿಗೆ ಮೂರು ದಿನಗಳಿಗೊಮ್ಮೆ ಅಥವಾ ವಾರಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ. ಪಂಚಾಯಿತಿಗೆ ದೂರು ನೀಡಿದರೆ ಬೇಸಿಗೆಯಾಗಿರುವುದರಿಂದ ಕೊಳವೆಬಾವಿ ಕೊರೆಯಿಸಿದರೂ ನೀರು ಬರುವುದಿಲ್ಲ ನಾವೇನು ಮಾಡುವುದೆಂಬ ಬೇಜಾಬ್ದಾರಿ ಉತ್ತರ ನೀಡುತ್ತಾರೆ ಎನ್ನುತ್ತಾರೆ ಇಲ್ಲಿಯ ಮಹಿಳೆಯರು.

ಗ್ರಾಮದ ಹಲವು ರಸ್ತೆಗಳಲ್ಲಿ ನಿರ್ಮಿಸಲಾಗಿರುವ ಚಿಕ್ಕಪುಟ್ಟ ಚರಂಡಿಗಳು ಕಸದ ರಾಶಿಯಿಂದ ತುಂಬಿ ತುಳುಕುತ್ತಿವೆ. ಹಲವು ರಸ್ತೆಗಳಲ್ಲಿ ಚರಂಡಿಗಳೇ ಇಲ್ಲ. ಹೊಸದಾಗಿ ಚರಂಡಿ ನಿರ್ಮಿಸುವುದಕ್ಕಾಗಿ ಒಂದುವರೆ ವರ್ಷದ ಹಿಂದೆ ತೆಗೆದಿದ್ದ ಗುಂಡಿ ಹಾಗೆಯೇ ಉಳಿದಿದೆ. ಇದಕ್ಕಾಗಿಯೇ ಪಂಚಾಯಿತಿ ಸದಸ್ಯರಿಗೆ ಗ್ರಾಮಸ್ಥರು ಹಿಡಿ ಶಾಪ ಹಾಕುತ್ತಾರೆ.

ಗ್ರಾಮದ ಒಳಗೆ ಹತ್ತಾರು ಕಲ್ಲುಕೋರೆಗಳು ಕೆಲಸ ನಿರ್ವಹಿಸುತ್ತಿರುವುದರಿಂದ ಪ್ರತಿದಿನ ನೂರಾರು ಲಾರಿಗಳು ಮತ್ತು ಟ್ರ್ಯಾಕ್ಟರ್‌ಗಳು ಓಡಾಡುತ್ತಿವೆ. ಹೀಗಾಗಿ ಯಾವುದೋ ಕಾಲದಲ್ಲಿ ನಿರ್ಮಿಸಿದ್ದ ರಸ್ತೆ ಹೇಳ ಹೆಸರಿಲ್ಲದಂತಾಗಿದೆ. ಹತ್ತಾರು ಗುಂಡಿಗಳು ಬಿದ್ದು ಮನುಷ್ಯರೂ ಓಡಾಡಲು ಸಾಧ್ಯವಿಲ್ಲ ಎನ್ನುವಂತಾಗಿದೆ. ಗ್ರಾಮದ ಮುಖ್ಯ ರಸ್ತೆ ಹೋಗಲಿ ಕೊನೆ ಪಕ್ಷ ಗ್ರಾಮದ ಚಿಕ್ಕಪುಟ್ಟ ರಸ್ತೆಗಳೂ ಗುಂಡಿ, ಕೊಳಚೆಯಿಂದ ಮುಕ್ತವಾಗಿಲ್ಲ.

ಇಲ್ಲಿಗೆ ಯಾವುದೇ ಸಾರಿಗೆ ಸಂಪರ್ಕದ ವ್ಯವಸ್ಥೆ ಇಲ್ಲವೇ ಇಲ್ಲ. ಇದರಿಂದಾಗಿ ಅನಾರೋಗ್ಯದಿಂದ ಬಳಲುವ ಗ್ರಾಮದ ಜನತೆ ಯಾವಾಗಲೂ ಖಾಸಗಿ ವಾಹನಗಳನ್ನೇ ಅವಲಂಬಿಸಬೇಕಾದ ದುಃಸ್ಥಿತಿ ಇದೆ. ಗ್ರಾಮದ ಮಧ್ಯದಲ್ಲೇ ಇರುವ ಹಳೇ ಕಲ್ಲುಕೋರೆಯೊಂದರ ಗುಂಡಿಗೆ ಗ್ರಾಮ ಪಂಚಾಯಿತಿಯವರು ಆಗಾಗ ತಂದು ಸುರಿಯುತ್ತಿರುವ ಕಸದ ರಾಶಿ ಕೊಳೆತು ಇಡೀ ಊರಿಗೆ ದುರ್ನಾತ ಬೀರುತ್ತಿದೆ ಎಂದು ಜನತೆ ಆರೋಪಿಸಿದ್ದಾರೆ.
ಇಲ್ಲಿ ನೆಲೆಸಿರುವ ಬಹುತೇಕ ಜನರಿಗೆ ಕಲ್ಲುಕೋರೆಯಲ್ಲಿ ಮಾಡುವ ಕೆಲಸ ಬಿಟ್ಟರೆ ಬೇರೆ ಗೊತ್ತಿಲ್ಲ. ಹೀಗಾಗಿ ಬಹುತೇಕರು ಇದನ್ನೇ ಅವಲಂಬಿಸಿ ಅದರ ದೂಳಿನಲ್ಲೇ ಬದುಕುತ್ತಿದ್ದಾರೆ.

ಒಟ್ಟಾರೆ ಹಲವು ಸಮಸ್ಯೆಗಳಿಂದ ಬಳಲುತ್ತಿರುವ ಮುಳ್ಳುಸೋಗೆ ಗ್ರಾಮ ಪಂಚಾಯಿತಿಯ ಗೊಂದಿಬಸವನಹಳ್ಳಿ ಮುಖ್ಯ ಕಲ್ಲುಕೋರೆ ಬಡಾವಣೆಯಲ್ಲಿ ಕಸದ ರಾಶಿಯೇ ಕಾಣುತ್ತದೆ.

ಕಸದ್ದೇ ದೊಡ್ಡ ಸಮಸ್ಯೆ
2–3 ವರ್ಷಗಳಿಂದ ಈ ಕಲ್ಲುಕೋರೆಯಲ್ಲಿ ಕಸ ತಂದು ಸುರಿಯುತ್ತಿದ್ದಾರೆ. ಮಳೆ ಬಂದು ನೀರು ತುಂಬಿಕೊಂಡಾಗಲೆಲ್ಲ ಕಸದ ರಾಶಿ ಕೊಳೆತು ನಾರುತ್ತದೆ. ಕಸದಲ್ಲಿ ಮಾಂಸದ ತ್ಯಾಜ್ಯವೂ ಇರುವುದರಿಂದ ನಾಯಿಗಳು ಅವನ್ನೆಲ್ಲ ಊರೊಳಗೆ ಕಚ್ಚಿ ತರುತ್ತವೆ. ಈ ಬಗ್ಗೆ ಪಂಚಾಯಿತಿಗೆ ಸಾಕಷ್ಟು ಬಾರಿ ದೂರು ನೀಡಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ.                                                         
– ರತೀಶ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT