ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯ ಸಮ್ಮೇಳನಗಳ ಮೂಲಕ ಕನ್ನಡಿಗರ ಸಮಸ್ಯೆಗಳಿಗೆ ಪರಿಹಾರ

Last Updated 1 ಏಪ್ರಿಲ್ 2011, 5:30 IST
ಅಕ್ಷರ ಗಾತ್ರ

ಮಡಿಕೇರಿ: ‘ಭಾಷಾ ಸಮಸ್ಯೆ, ಗಡಿ ಸಮಸ್ಯೆಗಳು ಕರ್ನಾಟಕವನ್ನು ಕಾಡುತ್ತಿವೆ. ಈ ಸಮಸ್ಯೆ ನೆರೆಯ ಆಂಧ್ರ, ಕೇರಳ ಹಾಗೂ ತಮಿಳುನಾಡು ರಾಜ್ಯಗಳಿಗಿಲ್ಲ. ಕನ್ನಡ ಭಾಷೆ ಶ್ರೀಮಂತವಾದುದು. ನೊಬೆಲ್ ಪ್ರಶಸ್ತಿ ಗಳಿಸುವ ಸಾಹಿತಿಗಳೂ ಕನ್ನಡದಲ್ಲಿದ್ದಾರೆ. ಕನ್ನಡಿಗರು ಪಕ್ಷಾತೀತವಾಗಿ ಇಂತಹ ಸಾಹಿತ್ಯ ಸಮ್ಮೇಳನಗಳನ್ನು ನಡೆಸುವ ಮೂಲಕ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಬೇಕು’ ಎಂದು ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ. ಕೃಷ್ಣಮೂರ್ತಿ ಹನೂರು ಕರೆ ನೀಡಿದರು.

ಮೂರ್ನಾಡಿನಲ್ಲಿ ಗುರುವಾರ ನಡೆದ ಕೊಡಗು ಜಿಲ್ಲಾ ಎಂಟನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಸಮಾರೋಪ ಭಾಷಣ ಮಾಡಿದ ಅವರು, ‘ದೇಶೀಯ ಸಂಸ್ಕೃತಿ ಉಳಿಸಬೇಕೇ ಅಥವಾ ಅರಮನೆಯ ಸಂಸ್ಕೃತಿಯನ್ನು ಸ್ವೀಕರಿಸಬೇಕೇ ಎಂಬುದು ಇಂದಿನ ಬಹುಮುಖ್ಯ ಪ್ರಶ್ನೆಯಾಗಿದೆ. ಕೊಡಗಿನಾದ್ಯಂತ ಇರುವ ರೆಸಾರ್ಟ್ ಸಂಸ್ಕೃತಿ ಇಲ್ಲಿನ ಜನರನ್ನು ತಲ್ಲಣಗೊಳಿಸಿದೆ. ಯಾರು ಎಲ್ಲಿ ಬೇಕಾದರೂ ವಾಸಿಸಬಹುದು. ಆದರೆ, ಅದು ಆಕ್ರಮಣಶೀಲದ್ದಾಗಬಾರದು’ ಎಂದರು.

‘ಕನ್ನಡ ಭಾಷೆ ತನ್ನ ಗಡಿಯನ್ನು ದಾಟಿ ಹೋಗುವುದೇ ಇಲ್ಲ. ಆದರೆ, ಇತರ ಭಾಷೆಗಳು ಮಾತ್ರ ಕನ್ನಡದ ಗಡಿಯನ್ನು ನುಸುಳಿ ಬರುತ್ತಿವೆ. ರೊಟ್ಟಿಯನ್ನು ಸುತ್ತಲೂ ಕತ್ತರಿಸುವ ಕೆಲಸ ನಾಡಿನ ಗಡಿ ಉದ್ದಕ್ಕೂ ನಡೆಯುತ್ತಿದೆ’ ಎಂದು ಅವರು ಆತಂಕ ವ್ಯಕ್ತಪಡಿಸಿದರು. ‘ಭಾಷಾ ಬಾಂಧವ್ಯಕ್ಕೆ ಗಡಿ ರೇಖೆ ಹಾಕಲು ಸಾಧ್ಯವಿಲ್ಲ. ದೇಶದಲ್ಲಿ ಭಾಷಾ ಬಾಂಧವ್ಯಕ್ಕೆ ಧಕ್ಕೆಯಿಲ್ಲ. ಆದರೆ, ವ್ಯವಹಾರಿಕ ವಿಷಯ ಎಲ್ಲಿ ಬರುತ್ತೋ ಅಲ್ಲಿ ಸಮಸ್ಯೆಗಳು ಉದ್ಭವವಾಗುತ್ತವೆ. ಇದಕ್ಕೆ ಕಾವೇರಿ ನೀರಿನ ಸಮಸ್ಯೆಯೂ ಒಂದು ನಿದರ್ಶನ’ ಎಂದು ಹೇಳಿದರು.

ಸಮ್ಮೇಳನದ ಅಧ್ಯಕ್ಷೆ ಡಾ. ಪದ್ಮಾಶೇಖರ್ ಅವರನ್ನು ಸನ್ಮಾನಿಸಿ ಮಾತನಾಡಿದ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧಿಕಾರಿ ಪುಂಡಲೀಕ ಹಾಲಂಬಿ, ರಾಜ್ಯ ಮಟ್ಟದಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನಗಳಲ್ಲಿ ಕೇವಲ ಮೂವರು ಮಹಿಳೆಯರಿಗೆ ಅಧ್ಯಕ್ಷ ಸ್ಥಾನ ಲಭಿಸಿದೆ. ಮುಂದೆ, ಡಾ. ಪದ್ಮಾಶೇಖರ್ ಕೂಡ ಅಂತಹ ಸ್ಥಾನವನ್ನು ಅಲಂಕರಿಸುವ ಅವಕಾಶ ಲಭಿಸಲಿ ಎಂದು ಆಶಿಸಿದರು.

ಕನ್ನಡವನ್ನು ಜಾಗೃತಗೊಳಿಸಲು ಹಾಗೂ ಪ್ರತಿಭೆಗಳನ್ನು ಗುರುತಿಸಲು ಹೋಬಳಿ ಮಟ್ಟದಿಂದ ರಾಜ್ಯಮಟ್ಟದವರೆಗೆ ಕನ್ನಡ ಸಮ್ಮೇಳನಗಳು ನಡೆಯಬೇಕಾಗಿದೆ. ಕನ್ನಡದ ಜನತೆಯನ್ನು ಕಲೆ ಹಾಕುವ ಶಕ್ತಿ ಇರುವುದು ಭಾಷೆಗೆ ಮಾತ್ರ ಎಂದು ನುಡಿದರು. ಆಶಯ ಭಾಷಣ ಮಾಡಿದ ಸಮ್ಮೇಳನಾಧ್ಯಕ್ಷೆ ಡಾ. ಪದ್ಮಾಶೇಖರ್, ಕೊಡಗಿನಲ್ಲಿ ಲಿಂಗ ಭೇದ ಇಲ್ಲ. ಮನಸ್ಸು ನಿರ್ಮಲವಿದ್ದರೆ ಎಲ್ಲವೂ ಸುಲಲಿತವಾಗಿ ನಡೆಯುತ್ತದೆ. ಇದಕ್ಕೆ ಎರಡು ದಿನಗಳ ಕಾಲ ನಡೆದ ಈ ಸಮ್ಮೇಳನವೇ ಸಾಕ್ಷಿ ಎಂದು ಸಂತಸ ವ್ಯಕ್ತಪಡಿಸಿದರು.

ವಿಚಾರಗೋಷ್ಠಿಗಳಲ್ಲಿ ಸಾಹಿತ್ಯಕ್ಕೆ ಸಂಬಂಧಿಸಿದ ವಿಷಯಗಳು ಕಡಿಮೆಯಿದ್ದರೂ ಸ್ಥಳೀಯ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಅನೇಕ ವಿಚಾರಗಳು ಚರ್ಚೆಯಾದದ್ದು ಮೆಚ್ಚುವಂಥದ್ದು. ವಿಚಾರಗೋಷ್ಠಿಗಳಲ್ಲಿ ಗ್ರಹಿಕೆ ಮತ್ತು ಆಳವಾದ ವಿಷಯ ಜ್ಞಾನದಿಂದ ವಿದ್ವಾಂಸರು ತಮ್ಮ ಪ್ರಬಂಧ ಮಂಡಿಸಿದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಉದ್ಘಾಟನಾ ಭಾಷಣದಲ್ಲಿ ಮಲೆಯಾಳಿ ಕುಟ್ಟಿ ಎಂದು ಹೇಳಿದ ಬಗ್ಗೆ ಸ್ಪಷ್ಟನೆ ನೀಡಿದ ಅಧ್ಯಕ್ಷೆ, ಕುಟ್ಟಿ ಎಂಬುದರ ಬಗ್ಗೆ ಅಪಾರ್ಥ ಬೇಡ. ನಾನು ಆ ಶಬ್ಧವನ್ನು ಮಗು ಎಂಬ ಅರ್ಥದಲ್ಲಿ ಕರೆದಿದ್ದೇನೆಯೇ ಹೊರತು ಯಾರನ್ನೂ ನೋಯಿಸುವ ದೃಷ್ಟಿಯಿಂದಲ್ಲ. ಮಲೆಯಾಳಿ ಸಹೋದರರು ಅಖಂಡ ಕೊಡಗಿನಲ್ಲಿ ಭ್ರಾತೃತ್ವದ ಭಾವನೆ ಮೂಡಿಸಿದ್ದಾರೆ. ಮುಂದೆಯೂ ಎಲ್ಲ ಭಾಷೆ- ಜನಾಂಗದ ಸಾಮರಸ್ಯ ಮುಂದುವರೆಯಲಿ ಎಂದು ಹೇಳಿದರು.

ಜಿಲ್ಲಾಧಿಕಾರಿ ಕೆ.ಎಚ್. ಅಶ್ವತ್ಥನಾರಾಯಣಗೌಡ ಮಾತನಾಡಿ, ಇನ್ನೊಂದು ತಿಂಗಳಲ್ಲಿ ಸುವರ್ಣ ಸಾಂಸ್ಕೃತಿಕ ಸಮುಚ್ಛಯ ಭವನದ ಕಾಮಗಾರಿ ಪ್ರಾರಂಭವಾಗಲಿದೆ. ಬಾಣೆ ಸಮಸ್ಯೆ ಪರಿಹಾರಕ್ಕೆ ಸಚಿವ ಸಂಪುಟದ ಉಪ ಸಮಿತಿ ರಚನೆಯಾಗಿದೆ. ಇನ್ನು ಎರಡು-ಮೂರು ತಿಂಗಳಲ್ಲಿ ಸಮಸ್ಯೆ ಪರಿಹಾರವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಅವರು, ಕೊಡಗು ಹಾಗೂ ಗಡಿ ಉತ್ಸವವನ್ನು ಶೀಘ್ರ ನಡೆಸಲು ಪ್ರಯತ್ನಿಸಲಾಗುವುದು ಎಂದರು.

ಸಂಸದ ಎಚ್. ವಿಶ್ವನಾಥ್ ಮಾತನಾಡಿ, ಕೊಡಗಿಗೆ ನೂರಾರು ರೆಸಾರ್ಟ್‌ಗಳು ಬಂದರೂ ಇಲ್ಲಿನ ಸಂಸ್ಕೃತಿಯನ್ನು ಅಳಿಸಲು ಸಾಧ್ಯವಿಲ್ಲ. ಅಂತಹ ಶಕ್ತಿ ಇಲ್ಲಿನ ಭಾಷೆ ಮತ್ತು ನೆಲಕ್ಕಿದೆ. ಕನ್ನಡದ ತೇರನ್ನು ಎಳೆಯಲು ಕೊಡಗಿನ ಜನ ಸದಾ ಸಿದ್ಧರಿದ್ದಾರೆ. ಭಾಷೆ ಮತ್ತು ಸಂಸ್ಕೃತಿ ಬಗ್ಗೆ ಇಲ್ಲಿನ ಜನತೆಗೆ ಯಾವುದೇ ಆತಂಕ ಬೇಡ ಎಂದು ಹೇಳಿದರು. ಜಿ.ಪಂ. ಸಿಇಓ ಎನ್. ಕೃಷ್ಣಪ್ಪ, ಜಿ.ಪಂ. ಮಾಜಿ ಅಧ್ಯಕ್ಷೆ ದೀರ್ಘಕೇಶಿ ಶಿವಣ್ಣ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾ ಕಸಾಪ ಅಧ್ಯಕ್ಷ ಟಿ.ಪಿ. ರಮೇಶ್ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಮೂರ್ನಾಡು ಹೋಬಳಿ ಘಟಕದ ಅಧ್ಯಕ್ಷ ಡಾ. ಸುಭಾಶ್ ನಾಣಯ್ಯ ಸ್ವಾಗತಿಸಿದರು. ಮುನೀರ್ ಅಹಮದ್ ನಿರೂಪಿಸಿದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು.

8ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಂಭ್ರಮದ ತೆರೆ
ಮಡಿಕೇರಿ: ಮೂರ್ನಾಡಿನಲ್ಲಿ ಕಳೆದ ಎರಡು ದಿನಗಳ ಕಾಲ ನಡೆದ ಜಿಲ್ಲಾ ಎಂಟನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಗುರುವಾರ ಸಂಭ್ರಮದ ತೆರೆ ಬಿದ್ದಿತು. ಅಂತಿಮ ದಿನವಾದ ಗುರುವಾರ ಬೆಳಿಗ್ಗೆಯಿಂದ ನಡೆದ ವಿವಿಧ ವಿಷಯಗಳ ಬಗೆಗಿನ ವಿಚಾರಗೋಷ್ಠಿಗಳು ಅಚ್ಚುಕಟ್ಟಾಗಿ ನಡೆದವು. ಸಾಹಿತ್ಯದ ಜತೆಗೆ, ಜಿಲ್ಲೆಯ ವಿವಿಧ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ವಿಷಯಗಳು ಗೋಷ್ಠಿಗಳ ವೈಶಿಷ್ಟ್ಯವನ್ನು ಹೆಚ್ಚಿಸಿದವು. ಸಂಜೆ ನಡೆದ ಕವಿಗೋಷ್ಠಿ ಅತ್ಯುತ್ತಮವಾಗಿ ಮೂಡಿ ಬಂದಿತು.

ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಕಾಸರಗೋಡು ಕಸಾಪ ಗಡಿನಾಡ ಘಟಕದ ಅಧ್ಯಕ್ಷ ಸುಬ್ರಮಣ್ಯ ವಿ. ಭಟ್ ಮಾತನಾಡಿ, ಕನ್ನಡ ಸಾಹಿತ್ಯ ಆರಂಭವಾದದ್ದೇ ಕಾವ್ಯದ ಮೂಲಕ. ಕವಿತೆ ಸೃಜನಶೀಲವಾದದ್ದು. ಮನುಷ್ಯನಿಗಿರುವಂತೆ ಕಾವ್ಯಕ್ಕೂ ಒಂದು ಶರೀರವಿದೆ. ಕಾವ್ಯದ ಮನಸ್ಸು ಪ್ರಯೋಗಶೀಲವಾಗಿರಬೇಕಷ್ಟೇ ಎಂದರು. ಇದಕ್ಕೂ ಮುನ್ನ ‘ಕೊಡಗಿನ ಪ್ರವಾಸೋದ್ಯಮ’ ಕುರಿತ ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಉಪ ವಿಭಾಗಾಧಿಕಾರಿ ಡಾ.ಎಂ.ಆರ್. ರವಿ ಮಾತನಾಡಿ, ಪ್ರವಾಸೋದ್ಯಮವನ್ನು ಕೊಡಗಿನಲ್ಲಿ ಗಂಭೀರವಾಗಿ ಪರಿಗಣಿಸಲಾಗಿದೆ.

ಕೊಡಗಿನ ಹೆಸರಿನಲ್ಲಿಯೇ ಆಕರ್ಷಣೆಯಿದ್ದು, ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಕೇರಳದಲ್ಲಿ ಪ್ರವಾಸೋದ್ಯಮವೇ ಆ ರಾಜ್ಯದ ಆರ್ಥಿಕ ಅಭಿವೃದ್ಧಿಯನ್ನು ಹೆಚ್ಚಿಸಿದೆ ಎಂದರು. ಬಳಿಕ ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿವಿಧ ಶಾಲಾ- ಕಾಲೇಜು ವಿದ್ಯಾರ್ಥಿಗಳು ಹಾಗೂ ಕಲಾವಿದರ ಸಂಗೀತ, ನೃತ್ಯ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಸಮ್ಮೇಳನಕ್ಕೆ ಸಂಭ್ರಮದ ತೆರೆ ಬಿದ್ದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT