ಗುರುವಾರ , ಜುಲೈ 29, 2021
20 °C
ಜಿಲ್ಲೆಯಲ್ಲಿ 19ಕ್ಕೇರಿದ ಸೋಂಕಿತರು: ಹೆಚ್ಚಿದ ಆತಂಕ

ಒಂದೇ ದಿನ 5 ಮಂದಿಗೆ ಸೋಂಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ಜಿಲ್ಲೆಯಲ್ಲಿ ಶನಿವಾರ ರಾಜಸ್ತಾನದ ಕಾರ್ಮಿಕ ಸೇರಿದಂತೆ 5 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 19ಕ್ಕೇರಿದೆ.

ಸೋಂಕಿತ ಕಾರ್ಮಿಕ ಕೋಲಾರ ತಾಲ್ಲೂಕಿನ ನರಸಾಪುರ ಕೈಗಾರಿಕಾ ಪ್ರದೇಶದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಾರೆ. ಲಾಕ್‌ಡೌನ್‌ ಕಾರಣಕ್ಕೆ ಕಂಪನಿ ಬಂದ್‌ ಆಗಿದ್ದರಿಂದ ಅವರು ರಾಜಸ್ತಾನಕ್ಕೆ ವಾಪಸ್‌ ಹೋಗಿದ್ದರು.

ಮಾಲೂರು ಪಟ್ಟಣದ ಸೋಮಣ್ಣ ಬಡಾವಣೆಯಲ್ಲಿ ವಾಸವಾಗಿದ್ದ ಕಾರ್ಮಿಕ ಲಾಕ್‌ಡೌನ್‌ ಸಡಿಲಿಕೆಯಾದ ಹಿನ್ನೆಲೆಯಲ್ಲಿ ಮೇ ತಿಂಗಳಲ್ಲಿ ರಾಜ್ಯಕ್ಕೆ ವಾಪಸ್‌ ಬಂದಿದ್ದರು. ಹೀಗಾಗಿ ಅವರನ್ನು ಬೆಂಗಳೂರಿನಲ್ಲೇ ಕ್ವಾರಂಟೈನ್‌ ಮಾಡಲಾಗಿತ್ತು. ಆರೋಗ್ಯ ಇಲಾಖೆ ಸಿಬ್ಬಂದಿಯು ಅವರ ಗಂಟಲು ದ್ರವ ಮತ್ತು ರಕ್ತ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ವ್ಯಕ್ತಿ ವಾಸವಾಗಿದ್ದ ಸೋಮಣ್ಣ ಬಡಾವಣೆಯನ್ನು ಸೀಲ್‌ಡೌನ್‌ ಮಾಡಲಾಗಿದೆ.

ಆರೋಗ್ಯ ಇಲಾಖೆ ಸಿಬ್ಬಂದಿಗೆ ಸುಳ್ಳು ಮಾಹಿತಿ ಕೊಟ್ಟಿದ್ದ ಇವರು ಜೂನ್‌ 1ರಂದು ಬೆಂಗಳೂರಿನ ಕ್ವಾರಂಟೈನ್‌ ಕೇಂದ್ರದಿಂದ ತಪ್ಪಿಸಿಕೊಂಡು ಮಾಲೂರಿಗೆ ಬಂದಿದ್ದರು. ಬಳಿಕ ಬುಧವಾರ (ಜೂನ್‌ 10) ಬಂದ ಪ್ರಯೋಗಾಲಯದ ವರದಿಯಲ್ಲಿ ಇವರಿಗೆ ಕೊರೊನಾ ಸೋಂಕು ಇರುವುದು ಗೊತ್ತಾಗಿತ್ತು. ನಂತರ ಬೆಂಗಳೂರಿನ ಆರೋಗ್ಯ ಇಲಾಖೆ ಸಿಬ್ಬಂದಿಯು ಜಿಲ್ಲಾಡಳಿತಕ್ಕೆ ಶುಕ್ರವಾರ ರಾತ್ರಿ ಮಾಹಿತಿ ನೀಡಿದ್ದರು.

ಆದರೆ, ಈ ವೇಳೆಗಾಗಲೇ ಸೋಂಕಿತ ಕಾರ್ಮಿಕ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿನ ಕಂಪನಿಯಲ್ಲಿ ಕೆಲಸಕ್ಕೆ ಹಾಜರಾಗಿದ್ದರು. ಅಲ್ಲದೇ, ಮಾಲೂರು ಪಟ್ಟಣದ ವಿವಿಧೆಡೆ ಸುತ್ತಾಡಿ ಹಲವರ ಸಂಪರ್ಕಕ್ಕೆ ಬಂದಿದ್ದರು. ಈ ಮಾಹಿತಿ ಆಧರಿಸಿ ನರಸಾಪುರ ಕಂಪನಿಯಲ್ಲಿನ ಸುಮಾರು 48 ಮಂದಿಯನ್ನು ಕ್ವಾರಂಟೈನ್‌ ಮಾಡಲಾಗಿದೆ. ಜತೆಗೆ ಇಡೀ ಕಂಪನಿ ಸೀಲ್‌ಡೌನ್‌ ಮಾಡಲಾಗಿದೆ.

ಇವರು ಪ್ರತಿನಿತ್ಯ ಹೋಟೆಲ್‌ಗೆ ಬಂದು ವಹಿವಾಟು ನೋಡಿಕೊಳ್ಳುತ್ತಿದ್ದರು. ಹೀಗಾಗಿ ಇವರ ಸಂಪರ್ಕಕ್ಕೆ ಬಂದಿರುವ ವ್ಯಕ್ತಿಗಳ ಪತ್ತೆ ಕಾರ್ಯ ಮುಂದುವರಿದಿದೆ. ಇವರ ಹೋಟೆಲ್‌ ಮತ್ತು ಮನೆ ಇರುವ ಪ್ರದೇಶವನ್ನು ಸೀಲ್‌ಡೌನ್‌ ಮಾಡಲಾಗಿದೆ.

ಮಧ್ಯಪ್ರದೇಶದಿಂದ ಜಿಲ್ಲಾ ಕೇಂದ್ರದ ರಹಮತ್‌ನಗರಕ್ಕೆ ಬಂದಿದ್ದ ಬೇಕರಿ ಕೆಲಸಗಾರರೊಬ್ಬರಿಗೆ ಸೋಂಕು ಇರುವುದು ಖಚಿತವಾಗಿದೆ. ರಹಮತ್‌ನಗರ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ಇವರು ಲಾಕ್‌ಡೌನ್‌ ವೇಳೆ ಮಧ್ಯಪ್ರದೇಶಕ್ಕೆ ವಾಪಸ್‌ ಹೋಗಿದ್ದರು. ಲಾಕ್‌ಡೌನ್‌ ಸಡಿಲಿಕೆ ಬಳಿಕ ಇವರು 4 ಮಂದಿ ಸ್ನೇಹಿತರೊಂದಿಗೆ ಜೂನ್‌ 11ರಂದು ನಗರಕ್ಕೆ ಹಿಂದಿರುಗಿದ್ದರು. ಹೀಗಾಗಿ ಈ ಐದೂ ಮಂದಿಯನ್ನು ರಹಮತ್‌ನಗರದ ಬಾಡಿಗೆ ಮನೆಯಲ್ಲಿ ಕ್ವಾರಂಟೈನ್‌ ಮಾಡಿ, ಗಂಟಲು ದ್ರವ ಮತ್ತು ರಕ್ತ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು.

ನಗರದ ಪಿಡಬ್ಲ್ಯೂಡಿ ವಸತಿ ಸಮುಚ್ಚಯದಲ್ಲಿನ ವ್ಯಕ್ತಿಯೊಬ್ಬರಿಗೆ ಸೋಂಕು ತಗುಲಿದೆ. ಇವರು ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಇವರಿಗೆ ಸೋಂಕು ತಗುಲಿತು ಎಂಬ ಬಗ್ಗೆ ಆರೋಗ್ಯ ಇಲಾಖೆಗೆ ಮಾಹಿತಿ ಲಭ್ಯವಾಗಿಲ್ಲ.

ಶನಿವಾರ ರಾತ್ರಿ ಬಂದ ಪ್ರಯೋಗಾಲಯದ ವರದಿಯಲ್ಲಿ ಒಬ್ಬರಿಗೆ ಸೋಂಕು ಇರುವುದು ದೃಢಪಟ್ಟಿದೆ. ಈ ಸೋಂಕಿತ ವ್ಯಕ್ತಿ ಮತ್ತು ಅವರ ಜತೆ ಪ್ರಾಥಮಿಕ ಸಂಪರ್ಕಕ್ಕೆ ಸ್ನೇಹಿತರನ್ನು ಎಸ್‌ಎನ್‌ಆರ್‌ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ರಹಮತ್‌ನಗರವನ್ನು ಸೀಲ್‌ಡೌನ್‌ ಮಾಡಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.