ಸರ್ಕಾರಗಳಿಗೆ ಇಚ್ಛಾಶಕ್ತಿ ಕೊರತೆ: ನಂಜಾವಧೂತ ಸ್ವಾಮೀಜಿ ಕಳವಳ

7

ಸರ್ಕಾರಗಳಿಗೆ ಇಚ್ಛಾಶಕ್ತಿ ಕೊರತೆ: ನಂಜಾವಧೂತ ಸ್ವಾಮೀಜಿ ಕಳವಳ

Published:
Updated:

ಕೋಲಾರ: ‘ಸರ್ಕಾರಗಳಿಗೆ ಇಚ್ಛಾಶಕ್ತಿ ಇಲ್ಲದೆ ಇರುವುದರಿಂದ ಬಯಲುಸೀಮೆ ಜಿಲ್ಲೆಗಳ ಜನ ನೀರಾವರಿ ಯೋಜನೆಗಳಿಂದ ವಂಚನೆಗೆ ಒಳಗಾಗಿದ್ದಾರೆ’ ಎಂದು ಸ್ಪಟಿಕ ಪೂರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಂಜಾವಧೂತ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.

ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಬೆಂಗಳೂರಿನ ಕೊಳಚೆ ನೀರನ್ನು ಶುದ್ದೀಕರಿಸಿ ಜಿಲ್ಲೆಗೆ ಹರಿಸಿಕೊಂಡು ಉಪಯೋಗಿಸುವ ದುಸ್ಥಿತಿ ಎದುರಾಗಿದೆ. ಇದನ್ನು ತಪ್ಪಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಮೇಕೆದಾಟು ಯೋಜನೆಯಿಂದ 59 ಟಿಎಂಸಿ ನೀರನ್ನು ಬಯಲು ಸೀಮೆ ಜಿಲ್ಲೆಗಳಿಗೆ ಹರಿಸುವುದಾಗಿ ಹೇಳಿದ್ದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಚ್ಚಾಶಕ್ತಿ ವಹಿಸಿ ಈ ಕಾರ್ಯ ಮುಗಿಸಲು ಮುಂದಾಗಬೇಕು. ಅನುಷ್ಟಾನಕ್ಕೆ ಹಿಂದೆ ನೀಡಿರುವ ಭರವಸೆಯಂತೆ ಕಾರ್ಯೋನ್ಮುಖರಾಗಬೇಕು’ ಎಂದು ಸಲಹೆ ನೀಡಿದರು.

‘ಕೃಷ್ಣಾ ಬೇಸಿನ್‌ನಿಂದ ತುಮಕೂರಿಗೆ ಕಲ್ಪಿಸಬೇಕಾದ ನೀರಿನ ಪಾಲನ್ನು ನೀಡುತ್ತಿಲ್ಲ, ಸರ್ಕಾರಗಳಿಗೆ ದೂರದೃಷ್ಟಿ ಹಾಗೂ ಪೂರ್ವ ಯೋಜನೆ ಇಲ್ಲದ ಕಾರಣ ಯೋಜನೆ ಹೆಸರಿನಲ್ಲಿ ಹಣ ವೆಚ್ಚ ಮಾಡುತ್ತಿದ್ದಾರೆ. ಅದೇ ರೀತಿ ಭದ್ರ ಮೇಲ್ದಂಡೆ, ಎತ್ತಿನ ಹೋಳೆ ಯೋಜನೆ ಕುಂಟುಂತ ಸಾಗುತ್ತಿವೆ. ಆಂದ್ರದವರಿಗೆ ಇರೊ ಇಚ್ಛಾಶಕ್ತಿ ನಮ್ಮನ್ನಾಳುವ ನಾಯಕರಿಗಿಲ್ಲವಾಗಿದೆ’ ಎಂದು ವಿಷಾದಿಸಿದರು.

‘ಕರಾವಳಿ ಭಾಗದಲ್ಲಿ ನೀರು ವ್ಯರ್ಥವಾಗಿ ಸಮುದ್ರಕ್ಕೆ ಹರಿದು ಹೋಗುತ್ತಿದೆ. ರಾಜಕೀಯ ಪಕ್ಷಗಳು ಭಿನ್ನಾಭಿಪ್ರಾಯಗಳನ್ನು ಮರೆತು ಯೋಜನೆ ರೂಪಿಸಿದರೆ ಶಾಶ್ವತ ಪರಿಹಾರ ಸಾಧ್ಯ. ನೀರಾವರಿ ಸಚಿವ ಡಿ.ಕೆ.ಶಿವಕುಮಾರ್ ಅವರೊಂದಿಗೆ ಚರ್ಚಿಸಿ ಯೋಜನೆ ಅನುಷ್ಟಾನಕ್ಕೆ ಹೇಳುತ್ತೇನೆ’ ಎಂದರು.

‘ಒಕ್ಕಲಿಗ ಸಮುದಾಯ ಇರುವ ಜಿಲ್ಲೆಗಳಲ್ಲಿ ಆರ್ಥಿಕವಾಗಿ ಹಿಂದುಳಿದಿದ್ದಾರೆ. ನೈಸರ್ಗಿಕ ಸಂಪನ್ಮೂಲ ಕೊರತೆಯಿರುವ ಕಡೆ ನಮ್ಮ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಹಿಂದುಳಿದಿದ್ದಾರೆ. ಸಮಾಜದ ಉನ್ನತಿಗೆ ವಿದ್ಯೆ ಒಂದೇ ಮಾರ್ಗವಾಗಿದ್ದು, ಜಿಲ್ಲೆಯ ಯುವಕರಿಗೆ ದಿವಂಗತ ಡಿಕೆ ರವಿ ಪ್ರೇರಣೆಯಾಗಿದ್ದಾರೆ’ ಎಂದರು.

‘ಸರ್ಕಾರ ₹ 43,000 ಕೋಟಿ ರೈತರ ಸಾಲ ಮನ್ನಾ ಮಾಡಿದರೆ ಅದು ಸಮಾಜದ ಅಭಿವೃದ್ದಿಗೆ ಶಾಶ್ವತ ಪರಿಹಾರವಲ್ಲ. ಸಮುದಾಯ ಧ್ವನಿ ಇಲ್ಲದ ಶೋಷಿತ ಸಮುದಾಯಗಳ ಪರ ನಿಲ್ಲಬೇಕು. ನಾಯಕತ್ವ ವಹಿಸಿ ಮುನ್ನಡೆಸಬೇಕು’ ಎಂದು ಸಲಹೆ ನೀಡಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗಾನಂದ್ ಕೆಂಪರಾಜ್, ಜೆಡಿಎಸ್ ಜಿಲ್ಲಾ ಘಟದ ಉಪಾಧ್ಯಕ್ಷ ಇ.ಗೋಪಾಲ್, ರವಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ನರೇಶ್‌ಬಾಬು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !