ಸಮಸ್ಯೆಗೆ ತಕ್ಷಣ ಸ್ಪಂದಿಸಿ ಬಗೆಹರಿಸಿ: ಕೆ.ಆರ್.ರಮೇಶ್‌ಕುಮಾರ್

7

ಸಮಸ್ಯೆಗೆ ತಕ್ಷಣ ಸ್ಪಂದಿಸಿ ಬಗೆಹರಿಸಿ: ಕೆ.ಆರ್.ರಮೇಶ್‌ಕುಮಾರ್

Published:
Updated:
Deccan Herald

ಕೋಲಾರ: ‘ಗ್ರಾಮೀಣ ಭಾಗದಲ್ಲಿ ಸಮಸ್ಯೆ ಹೆಚ್ಚಾಗಿರುತ್ತವೆ. ಅಧಿಕಾರಿಗಳು ಜನರ ಸಮಸ್ಯೆಗೆ ಸ್ಪಂದಿಸಿ ಕೆಲಸ ಮಾಡಿ ನಂಬಿಕೆ ಉಳಿಸಿಕೊಳ್ಳಬೇಕು’ ಎಂದು ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್‌ಕುಮಾರ್ ಸೂಚನೆ ನೀಡಿದರು.

ತಾಲ್ಲೂಕಿನ ಮುದುವಾಡಿ ಗ್ರಾಮ ಪಂಚಾಯಿತಿಯಲ್ಲಿ ಶನಿವಾರ ನಡೆದ ಜನಸಂಪರ್ಕ ಸಭೆಯಲ್ಲಿ ಮಾತನಾಡಿ, ‘ಗ್ರಾಮದಲ್ಲಿ ಸಮಸ್ಯೆ ಎದುರಾದಾಗ ಜನರು ಜನಪ್ರತಿನಿಧಿಗಳನ್ನು ಪ್ರಶ್ನೆ ಮಾಡುತ್ತಾರೆ. ಅಧಿಕಾರಿಗಳು ಸಮಸ್ಯೆ ಗಮನಕ್ಕೆ ಬಂದ ತಕ್ಷಣ ಸ್ಪಂದಿಸಿ ಬಗೆಹರಿಸಬೇಕು’ ಎಂದು ಹೇಳಿದರು.

‘ನೀರಿನ ವಿಚಾರದಲ್ಲಿ ಯಾರೂ ಪಕ್ಷಬೇಧ ಮಾಡಬೇಡಿ. ಸಮಸ್ಯೆ ಎದುರಾದ ತಕ್ಷಣ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಗ್ರಾಮ ಪಂಚಾಯಿತಿಯು ಸ್ಥಳೀಯ ಸರ್ಕಾರವಿದ್ದಂತೆ. ಅಭಿವೃದ್ಧಿಗೆ ಅಗತ್ಯವಿರುವ ಅನುದಾನಕ್ಕೆ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಿದರೆ ಬಿಡುಗಡೆ ಮಾಡಿಸುತ್ತೇನೆ’ ಎಂದು ಭರವಸೆ ನೀಡಿದರು.

‘ಪಂಚಾಯಿತಿ ಮಟ್ಟದ ಅಧಿಕಾರಿಗಳು ನಿಯಮಿತವಾಗಿ ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಚರ್ಚಿಸಿ ಸಮಸ್ಯೆ ಅರಿಯಬೇಕು. ಸಮಸ್ಯೆಯ ವಸ್ತುಸ್ಥಿತಿ ತಿಳಿಯದೆ ಸಭೆಗಳಲ್ಲಿ ಮನಸ್ಸಿಗೆ ಬಂದಂತೆ ಮಾಹಿತಿ ನೀಡಬಾರದು. ಅಭಿವೃದ್ಧಿ ಕೆಲಸಕ್ಕೆ ಜನ ಅಡ್ಡಿಪಡಿಸುವುದಿಲ್ಲ’ ಎಂದು ತಿಳಿಸಿದರು.

‘ಗ್ರಾಮಗಳಲ್ಲಿ ಸಿ.ಸಿ ರಸ್ತೆ ಕಾಮಗಾರಿಯನ್ನು ಶೀಘ್ರವೇ ಪೂರ್ಣಗೊಳಿಸಬೇಕು. ಸಮರ್ಪಕವಾಗಿ ಚರಂಡಿ ನಿರ್ಮಿಸಬೇಕು. ಬೀದಿ ದೀಪಗಳ ನಿರ್ವಹಣೆ ಕಾರ್ಯ ಸರಿಯಾಗಿ ನಡೆಯಬೇಕು. ನರೇಗಾ ಯೋಜನೆಡಿ ಲಭ್ಯವಿರುವ ಸೌಕರ್ಯ ಕುರಿತು ಅರಿವು ಮೂಡಿಸಬೇಕು’ ಎಂದರು.

ನೀಲಗಿರಿ ತೆರವು: ‘ಕೃಷಿ ಜಮೀನುಗಳಲ್ಲಿರುವ ನೀಲಗಿರಿ ಮರ ತೆರವುಗೊಳಿಸಲು ರೈತರಿಗೆ ಸೂಚನೆ ನೀಡಬೇಕು. ನೀಲಗಿರಿಗೆ ಪರ್ಯಾಯ ಬೆಳೆ ಬೆಳೆಯಲು ನರೇಗಾದಲ್ಲಿ ರೈತರಿಗೆ ನೆರವು ನೀಡಬೇಕು. ಪಂಚಾಯಿತಿ ವ್ಯಾಪ್ತಿಯಲ್ಲಿನ ನೀಲಗಿರಿ ನರ್ಸರಿಗಳನ್ನು ಕಡ್ಡಾಯವಾಗಿ ಬಂದ್‌ ಮಾಡಿಸಬೇಕು’ ಎಂದು ಹೇಳಿದರು.

ಮುದುವಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ್‌, ಉಪಾಧ್ಯಕ್ಷೆ ರತ್ನಮ್ಮ, ಗ್ರಾಮಸ್ಥರಾದ ವೇಣು, ಶಂಕರೇಗೌಡ, ಕೃಷ್ಣಮೂರ್ತಿ, ಶ್ರೀರಾಮಪ್ಪ, ನಾರಾಯಣಸ್ವಾಮಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !