ಸೋಮವಾರ, ನವೆಂಬರ್ 18, 2019
25 °C
ನಗರಸಭೆ ಚುನಾವಣೆ ನಾಮಪತ್ರ ಪರಿಶೀಲನೆ ಪ್ರಕ್ರಿಯೆ ಪೂರ್ಣ

601 ಅಭ್ಯರ್ಥಿಗಳ ಉಮೇದುವಾರಿಕೆ ಸಿಂಧು

Published:
Updated:
Prajavani

ಕೋಲಾರ: ಜಿಲ್ಲೆಯ 3 ನಗರಸಭೆಗಳ ಚುನಾವಣೆಗೆ ಸಲ್ಲಿಕೆಯಾಗಿದ್ದ 797 ನಾಮಪತ್ರಗಳನ್ನು ಶನಿವಾರ ಪರಿಶೀಲನೆ ಮಾಡಿದ ಚುನಾವಣಾಧಿಕಾರಿಗಳು 601 ಅಭ್ಯರ್ಥಿಗಳ ನಾಮಪತ್ರ ಸಿಂಧುಗೊಳಿಸಿದ್ದಾರೆ.

ಮೂರೂ ನಗರಸಭೆಗಳ ಚುನಾವಣಾಧಿಕಾರಿ ಕಚೇರಿಯಲ್ಲಿ ಚುನಾವಣಾ ವೀಕ್ಷಕರು, ಅಭ್ಯರ್ಥಿಗಳು ಹಾಗೂ ಪಕ್ಷಗಳ ಏಜೆಂಟರ ಸಮ್ಮುಖದಲ್ಲಿ ನಾಮಪತ್ರ ಪರಿಶೀಲನೆ ಮಾಡಲಾಯಿತು. ಒಟ್ಟಾರೆ 92 ಅಭ್ಯರ್ಥಿಗಳ ಉಮೇದುವಾರಿಕೆ ಅಸಿಂಧುಗೊಳಿಸಲಾಯಿತು.

ಅಭ್ಯರ್ಥಿಗಳು ನಾಮಪತ್ರದ ಜತೆ ಸಲ್ಲಿಸಿದ್ದ ಪೂರಕ ದಾಖಲೆಪತ್ರಗಳು, ಆಸ್ತಿಗೆ ಸಂಬಂಧಪಟ್ಟ ಘೋಷಣಾ ಪತ್ರ ಹಾಗೂ ಮಾಹಿತಿಯನ್ನು ಸಮಗ್ರವಾಗಿ ಪರಿಶೀಲಿಸಲಾಯಿತು. ಇಡೀ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ವಿಡಿಯೋ ಚಿತ್ರೀಕರಿಸಲಾಯಿತು.

3 ನಗರಸಭೆ ವ್ಯಾಪ್ತಿಯ 101 ವಾರ್ಡ್‌ಗಳಿಂದ 797 ನಾಮಪತ್ರ ಸಲ್ಲಿಕೆಯಾಗಿದ್ದವು. ಕೆಲ ಅಭ್ಯರ್ಥಿಗಳು ರಾಜಕೀಯ ಪಕ್ಷಗಳಿಂದ ಹಾಗೂ ಪಕ್ಷೇತರರಾಗಿ, ಮತ್ತೆ ಕೆಲವರು ಎರಡೆರಡು ಬಾರಿ ನಾಮಪತ್ರ ಹಾಕಿದ್ದರು. ಕೋಲಾರ ನಗರಸಭೆಯ 35 ವಾರ್ಡ್‌ಗಳಿಗೆ 233, ಮುಳಬಾಗಿಲು ನಗರಸಭೆಯ 31 ವಾರ್ಡ್‌ಗೆ 255 ಹಾಗೂ ಕೆಜಿಎಫ್‌ (ರಾಬರ್ಟ್‌ಸನ್‌ಪೇಟೆ) ನಗರಸಭೆಗೆ 309 ನಾಮಪತ್ರ ಸಲ್ಲಿಕೆಯಾಗಿದ್ದವು.

ನಾಮಪತ್ರ ಅಂಗೀಕೃತಗೊಳ್ಳುವವರೆಗೂ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರಲ್ಲಿ ಆತಂಕ ಮನೆ ಮಾಡಿತ್ತು. ನಾಮಪತ್ರ ಸಿಂಧುವಾದ ನಂತರ ಅಭ್ಯರ್ಥಿಗಳು ನಿಟ್ಟುಸಿರು ಬಿಟ್ಟರು. ನಾಮಪತ್ರ ಪರಿಶೀಲನೆ ನಡೆದ ಚುನಾವಣಾಧಿಕಾರಿಗಳ ಕಚೇರಿ ಬಳಿ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು.

ನಗರಸಭೆವಾರು ವಿವರ: ಕೋಲಾರ ನಗರಸಭೆಯಲ್ಲಿ 175 ಅಭ್ಯರ್ಥಿಗಳ ನಾಮಪತ್ರ ಸಿಂಧುವಾಗಿದ್ದು, 32 ಮಂದಿಯ ಉಮೇದುವಾರಿಕೆ ಅಸಿಂಧುಗೊಳಿಸಲಾಗಿದೆ. ಮುಳಬಾಗಿಲು ನಗರಸಭೆಯಲ್ಲಿ 190 ಅಭ್ಯರ್ಥಿಗಳ ನಾಮಪತ್ರ ಸಿಂಧುವಾಗಿದ್ದು, 28 ಮಂದಿಯ ಉಮೇದುವಾರಿಕೆ ತಿರಸ್ಕೃತಗೊಂಡಿದೆ. ಕೆಜಿಎಫ್‌ ನಗರಸಭೆಯಲ್ಲಿ 236 ಅಭ್ಯರ್ಥಿಗಳ ನಾಮಪತ್ರ ಅಂಗೀಕಾರವಾಗಿದ್ದು, 32 ಮಂದಿಯ ಉಮೇದುವಾರಿಕೆ ಅಸಿಂಧುಗೊಳಿಸಲಾಗಿದೆ.

ಪ್ರತಿಕ್ರಿಯಿಸಿ (+)