ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀನಿವಾಸಪುರ: ಹಲಸು ಬೆಳೆದು ಗಮನ ಸೆಳೆದ ಕೃಷಿಕ

ವಿಯೆಟ್ನಾಂ, ಪ್ರಶಾಂತಿ, ಸಿಂಗಪುರ್, ರುದ್ರಾಕ್ಷಿ, ತೂಬುಗೆರೆ, ಸಿದ್ದು ತಳಿ ಬೆಳೆದ ಖುಷಿ
Last Updated 12 ಅಕ್ಟೋಬರ್ 2022, 4:13 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ತಾಲ್ಲೂಕಿನ ರಾಂಪುರ ಗ್ರಾಮದ ಸಾವಯವ ಕೃಷಿಕ ಎಸ್.ಅಶೋಕ್ ಕುಮಾರ್ ವಿವಿಧ ಜಾತಿಯ ಹಲಸಿನ ಮರ ಬೆಳೆಯುವುದರ ಮೂಲಕ ಜನರ ಗಮನ ಸೆಳೆದಿದ್ದಾರೆ. ಹಲಸು ಪ್ರಿಯರ ಬಾಯಲ್ಲಿ ನೀರೂರುವಂತೆ ಮಾಡಿದ್ದಾರೆ.

ಹೌದು, ಅವರು ತಮ್ಮ ತೋಟದಲ್ಲಿ ಅಲ್ಪಾವಧಿ ಹಾಗೂ ವರ್ಷಕ್ಕೆ ಎರಡು ಫಸಲು ನೀಡುವ ವಿಯಟ್ನಾಂ ತಳಿ ಹಲಸು ಸೇರಿದಂತೆ, ಪ್ರಶಾಂತಿ, ಸಿಂಗಪುರ್, ರುದ್ರಾಕ್ಷಿ, ತೂಬುಗೆರೆ, ಸದಾನಂದ, ಸಿದ್ದು ಹಲಸು ಹೆಸರಿನ ಹಲಸಿನ ಗಿಡಗಳನ್ನು ನೆಟ್ಟು ಬೆಳೆಸುತ್ತಿದ್ದಾರೆ. ಆ ಪೈಕಿ ಕೆಲವು ತಳಿಗಳು ಫಸಲು ನೀಡುತ್ತಿವೆ. ಸಾಮಾನ್ಯವಾಗಿ ಸ್ಥಳೀಯ ಜಾತಿಯ ಹಲಸು ನೆಟ್ಟ ಬಳಿಕ ಆರರಿಂದ ಏಳು ವರ್ಷಕ್ಕೆ ಫಸಲು ಕೊಡುತ್ತದೆ. ಆದರೆ ವಿಯೆಟ್ನಾಂ ಹಲಸು ನೆಟ್ಟ ಒಂದೂವರೆ ವರ್ಷಕ್ಕೇ ಕಾಯಿ ಬಿಡುತ್ತದೆ.

‘ಬದಲಾದ ಪರಿಸ್ಥಿತಿಯಲ್ಲಿ ರೈತರು ಯಾವುದೇ ಒಂದು ಬೆಳೆಗೆ ಅಂಟಿಕೊಳ್ಳುವುದು ಕ್ಷೇಮಕರವಲ್ಲ. ಕಡಿಮೆ ಶ್ರಮದಲ್ಲಿ ಹೆಚ್ಚುಕಾಲ ಫಸಲು ನೀಡುವ ಹಣ್ಣಿನ ಮರ ಬೆಳೆಸುವುದರ ಮೂಲಕ ಲಾಭದ ಬೆನ್ನು ಹತ್ತಬೇಕು. ಬಹುಪಯೋಗಿ ಹಲಸು ಉತ್ತಮ ಆಯ್ಕೆ’ ಎಂದು ಅಶೋಕ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಹಲಸು ಜಾತಿಗೆ ಅನುಗುಣವಾಗಿ 1 ಕೆ.ಜಿಯಿಂದ 15 ಕೆ.ಜಿ ತೂಗುವ ಕಾಯಿ ಬಿಡುತ್ತದೆ. ತೊಳೆಯ ರುಚಿ ಹಾಗೂ ಬಣ್ಣದಲ್ಲೂ ವೈವಿಧ್ಯತೆ ಇರುತ್ತದೆ. ಗ್ರಾಹಕರು ತಮಗೆ ಇಷ್ಟವಾದ ತೊಳೆ ಆಯ್ಕೆ ಮಾಡಿಕೊಳ್ಳಬಹುದು. ಹಣ್ಣು ಕತ್ತರಿಸಿ ಹೋಳು ಮಾಡಿ, ಹಣ್ಣಿನ ಅಂಗಡಿಗಳಿಗೆ ಪೂರೈಸಲಾಗುತ್ತದೆ. ನೀಡುವ ಮುನ್ನ ಬೆಲೆ ನಿಗದಿಯಾಗಿರುತ್ತದೆ. ಇಷ್ಟು ಮಾತ್ರವಲ್ಲದೆ ಹಲಸು ಹೀಚಿಗೂ ಬೇಡಿಕೆ ಇದೆ. ಅದರಿಂದ ಕರಿದ ಪದಾರ್ಥ ತಯಾರಿಸಲಾಗುತ್ತದೆ. ಬೀಜ ಹಾಗೂ ತೊಳೆಯಿಂದಲೂ ವಿವಿಧ ತಿನಿಸುಗಳನ್ನು ತಯಾರಿಸಲಾಗುತ್ತದೆ.

ಅಶೋಕ್ ಕುಮಾರ್ ಹಸಲು ಮಾತ್ರವಲ್ಲದೆ ತಮ್ಮ ತೋಟದಲ್ಲಿ ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ಸೀತಾಫಲದಂತೆ ಕಾಣುವ ಸ್ಟಾರ್ ಫ್ರೂಟ್ ಬೆಳೆದಿದ್ದಾರೆ. ಪ್ರಯೋಗಾತ್ಮಕವಾಗಿ ಬೆಳೆಯಲಾಗಿರುವ ಈ ಹಣ್ಣು ಬಣ್ಣ ಹಾಗೂ ರುಚಿಯಿಂದ ಗಮನ ಸೆಳೆದಿದೆ.

ಸಾವಯವ ಕೃಷಿಕರೆಂದೇ ಹೆಸರಾಗಿರುವ ಎಸ್.ಅಶೋಕ್ ಕುಮಾರ್, ಪ್ರಯೋಗಶೀಲ ರೈತ. ಮಳೆ ಆಶ್ರಯದಲ್ಲಿ ಆಹಾರ ಹಾಗೂ ಹಣ್ಣಿನ ಬೆಳೆ ಬೆಳೆಯುವಲ್ಲಿ ಅವರು ಕೈಗೊಂಡ ಪ್ರಯೋಗಗಳು ಮಾದರಿಯಾಗಿವೆ. ರೇಷ್ಮೆ ಕೃಷಿಯಲ್ಲಿ ಸ್ನಾತಕೊತ್ತರ ಪದವಿ ಪಡೆದು, ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದ ಅವರು, ಉದ್ಯೋಗಕ್ಕೆ ರಾಜೀನಾಮೆ ನೀಡಿ ಸಾವಯವ ಕೃಷಿ ಕೈಗೊಂಡಿದ್ದಾರೆ.

ಗಿಡದ ಬುಡಕ್ಕೆ ಬಾಟಲಿ ನೀರು ಉಣಿಸುವಿಕೆ, ಎರೆಗೊಬ್ಬರ ತಯಾರಿಕೆ, ಜೈವಿಕ ವಿಧಾನದಲ್ಲಿ ಕೀಟ ಹಾಗೂ ರೋಗ ನಿಯಂತ್ರಣ, ಸಾವಯವ ಲಘು ಪೋಷಕಾಂಶ ತಯಾರಿಕೆ ಮತ್ತು ಬಳಕೆಯಂಥ ವಿಷಯಗಳಲ್ಲಿ ಅವರು ಮಾಡಿರುವ ಪ್ರಯೋಗಗಳು ಕೃಷಿ ಹಾಗೂ ತೋಟಗಾರಿಕಾ ತಜ್ಞರ ಗಮನ ಸೆಳೆದಿವೆ.

ರಾಜ್ಯ ಮಟ್ಟದ ಕೃಷಿ ಪಂಡಿತ ಪ್ರಶಸ್ತಿ, ಡಾ.ಎಂ.ಎಚ್.ಮರಿಗೌಡ ತೋಟಗಾರಿಕಾ ಪ್ರಶಸ್ತಿ, ಸಾಲು ಮರದ ತಿಮ್ಮಕ್ಕ ಪ್ರಶಸ್ತಿ, ಜಿಲ್ಲಾ ಮಟ್ಟದ ಉತ್ತಮ ಕೃಷಿಕ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಹಾಗೂ ಸನ್ಮಾನಗಳಿಗೆ ಭಾಜನರಾಗಿದ್ದಾರೆ.

‘ಗ್ರಾಮೀಣ ಪ್ರದೇಶದ ವಿದ್ಯಾವಂತ ಸಮುದಾಯ ಉದ್ಯೋಗಕ್ಕಾಗಿ ನಗರಗಳ ಕಡೆ ಮುಖ ಮಾಡಿದೆ. ವಯಸ್ಸಾದ ವ್ಯಕ್ತಿಗಳು ಕೃಷಿಯಲ್ಲಿ ತೊಡಗಿದ್ದಾರೆ. ಇದು ಕೃಷಿ ಅಭಿವೃದ್ಧಿಗೆ ತೊಡಕಾಗಿ ಪರಿಣಮಿಸಿದೆ. ಕೃಷಿಕ ಕುಟುಂಬಗಳ ವಿದ್ಯಾವಂತ ಯುವ ಜನರು, ಕೃಷಿಯನ್ನು ಸವಾಲಾಗಿ ಸ್ವೀಕರಿಸಬೇಕು. ವೈಜ್ಞಾನಿಕ ಪದ್ಧತಿಯಲ್ಲಿ ಸಾವಯವ ಕೃಷಿ ಕೈಕೊಳ್ಳಬೇಕು. ಬದಲಾವಣೆಗೆ ತೆರೆದುಕೊಳ್ಳಬೇಕು’ ಎಂಬುದು ಅಶೋಕ್ ಕುಮಾರ್ ಅವರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT