ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಜಿಎಫ್‌: ಉಪಯೋಗಕ್ಕೆ ಬಾರದ ಹೊಸ ಜನರೇಟರ್‌

ತಾಲ್ಲೂಕು ಆಡಳಿತ ಸೌಧದಲ್ಲಿ ಸೌಕರ್ಯದ ಕೊರತೆ
ಕೃಷ್ಣಮೂರ್ತಿ
Published 7 ಮೇ 2024, 6:19 IST
Last Updated 7 ಮೇ 2024, 6:19 IST
ಅಕ್ಷರ ಗಾತ್ರ

ಕೆಜಿಎಫ್‌: ಸುಮಾರು ಹತ್ತು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ತಾಲ್ಲೂಕು ಆಡಳಿತ ಸೌಧದಲ್ಲಿ ಮೂಲಭೂತ ಸೌಕರ್ಯಗಳಿಗೆ ಕೊರತೆ ಉಂಟಾಗಿದ್ದು, ಸಿಬ್ಬಂದಿ ಮತ್ತು ಸಾರ್ವಜನಿಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಬಿಜೆಪಿ ಆಡಳಿತಾವಧಿಯಲ್ಲಿ ಕಂದಾಯ ಸಚಿವರಾಗಿದ್ದ ಆರ್.ಅಶೋಕ ಅವರು ತಾಲ್ಲೂಕು ಆಡಳಿತ ಸೌಧವನ್ನು ಲೋಕಾರ್ಪಣೆ ಮಾಡಿದ್ದರು. ರಾಜ್ಯದಲ್ಲಿ ಹೊಸದಾಗಿ ರಚಿತವಾದ ತಾಲ್ಲೂಕುಗಳ ಪೈಕಿ ಕೆಜಿಎಫ್‌ನಲ್ಲಿ ಮಾತ್ರ ತಾಲ್ಲೂಕು ಆಡಳಿತ ಸೌಧ ನಿರ್ಮಾಣವಾಗಿದೆ ಎಂಬ ಹೆಗ್ಗಳಿಕೆ ಇತ್ತು. ಆದರೆ, ಇಲ್ಲಿ ಸರ್ಕಾರ ನೀಡಿದ ಸವಲತ್ತುಗಳು ಸಮರ್ಪಕವಾಗಿ ಉಪಯೋಗವಾಗದೆ ಇರುವುದು ಕಂಡು ಬಂದಿದೆ.

ತಾಲ್ಲೂಕು ಕಚೇರಿ, ಕಾರ್ಮಿಕ ಇಲಾಖೆ, ಉಪ ನೋಂದಣಾಧಿಕಾರಿಗಳ ಕಚೇರಿ, ಶಿಶು ಅಭಿವೃದ್ಧಿ ಇಲಾಖೆ, ಅಬಕಾರಿ ಇಲಾಖೆ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಗಳು ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದೆ. ವಿದ್ಯುತ್ ಸಮಸ್ಯೆ ಉಂಟಾದಾಗ ಬ್ಯಾಕ್‌ ಅಪ್‌ಗಾಗಿ ಜನರೇಟರ್ ಅಳವಡಿಸಲಾಗಿದೆ. ಆದರೆ, ಜನರೇಟರ್ ಅಳವಡಿಸಿ ಒಂದು ವರ್ಷವಾದರೂ ಇದುವರೆವಿಗೂ ಅದರ ಉಪಯೋಗ ಕಚೇರಿಗಳಿಗೆ ಸಿಗುತ್ತಿಲ್ಲ. ವಿದ್ಯುತ್ ಸಮಸ್ಯೆ ಉಂಟಾದಾಗ ಕಚೇರಿ ಸಿಬ್ಬಂದಿ ಇನ್ನೂ ಯುಪಿಎಸ್ ಉಪಯೋಗಿಸುತ್ತಿದ್ದಾರೆ. ಗುತ್ತಿಗೆದಾರ ಮತ್ತು ಅಧಿಕಾರಿಗಳ ನಡುವಿನ ಸಂವಹನ ಕೊರತೆಯಿಂದಾಗಿ ಈ ಸಮಸ್ಯೆ ಉಂಟಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಸುಮಾರು ಒಂದು ವರ್ಷದ ಹಿಂದೆಯೇ 115 ಲೀಟರ್ ಡೀಸಲ್‌ ಹಾಕಿ, ಜನರೇಟರ್ ಉಪಯೋಗಿಸುವ ರೀತಿಯನ್ನು ಕಂದಾಯ ಇಲಾಖೆ ಸಿಬ್ಬಂದಿಗೆ ತೋರಿಸಿ, ಅದರ ಬೀಗದ ಕೈಯನ್ನು ಕೊಡಲಾಗಿದೆ. ನಮ್ಮದೇನೂ ಪಾತ್ರ ಇಲ್ಲ ಎಂದು ಕಟ್ಟಡದ ಗುತ್ತಿಗೆದಾರರು ಹೇಳುತ್ತಾರೆ. ಆದರೆ, ಸ್ವಲ್ಪ ದಿನಗಳ ಕಾಲ ಜನರೇಟರ್ ಕೆಲಸ ಹಾಗೂ ಅದರ ಕ್ಷಮತೆ ಬಗ್ಗೆ ತಿಳಿದುಕೊಂಡು ಗುತ್ತಿಗೆದಾರರಿಂದ ಜನರೇಟರ್ ಪಡೆದುಕೊಳ್ಳಲು ನಿರ್ಧರಿಸಿತ್ತು. ಆದರೆ, ಸ್ವಲ್ಪ ದಿನಗಳ ಪ್ರಾತ್ಯಕ್ಷಿಕೆ ತೋರಿಸದ ಕಾರಣ, ಅದನ್ನು ಉಪಯೋಗಿಸಲು ಸಾಧ್ಯವಾಗುತ್ತಿಲ್ಲ ಎಂಬುದು ಕಂದಾಯ ಅಧಿಕಾರಿಗಳ ದೂರಾಗಿದೆ. ಕಂದಾಯ ಇಲಾಖೆ ಮತ್ತು ಗುತ್ತಿಗೆದಾರರ ನಡುವಿನ ಸಂವಹನ ಕೊರತೆಯಿಂದಾಗಿ ಜನರೇಟರ್ ಉಪಯೋಗವಾಗುತ್ತಿಲ್ಲ. ಕೂಡಲೇ ಅದನ್ನು ಉಪಯೋಗಿಸಲು ಕ್ರಮ ಕೈಗೊಳ್ಳುವುದಾಗಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಕಚೇರಿಯ ಭೂಮಿ ವಿಭಾಗವು ಸಾರ್ವಜನಿಕರಿಗೆ ದಾಖಲೆ ನೀಡುತ್ತಿರುವ ಸ್ಥಳ ಕೂಡ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುತ್ತಿದೆ. ಮಧ್ಯಾಹ್ನ ಸುಮಾರು 40 ಡಿಗ್ರಿ ಬಿಸಿಲಿನಲ್ಲಿ ಸರದಿಯಲ್ಲಿ ನಿಂತು ದಾಖಲೆ ಪಡೆಯಬೇಕಾಗಿದೆ. ಕಚೇರಿಯ ಒಳಗೆ ಬೇಕಾದಷ್ಟು ಜಾಗವಿದ್ದು, ನೆರಳಿರುವ ಜಾಗದಲ್ಲಿ ದಾಖಲೆ ಕೊಟ್ಟರೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂಬುದು ಸಾರ್ವಜನಿಕರ ಮಾತಾಗಿದೆ.

ತಾಲ್ಲೂಕು ಕಚೇರಿಯಲ್ಲಿ ಸಂಗ್ರಹವಾಗುವ ಕಸವನ್ನು ಕೂಡ ನಗರಸಭೆ ವಾಹನಕ್ಕೆ ಹಾಕದೆ, ಕಚೇರಿ ಹಿಂಭಾಗದಲ್ಲಿ ಸುಟ್ಟು ಹಾಕುತ್ತಿರುವುದರಿಂದ ತ್ಯಾಜ್ಯದ ರಾಶಿ ಕಾಣುತ್ತಿದೆ. ಕಚೇರಿಗೆ ಸಿಬ್ಬಂದಿ ಬರುವ ಮೊದಲೇ ನಗರಸಭೆಯ ಕಸ ಒಯ್ಯುವ ಗಾಡಿ ಬಂದು ಹೋಗುತ್ತದೆ. ಆದ್ದರಿಂದ ಕಸಕ್ಕೆ ಬೆಂಕಿ ಇಡಲಾಗುತ್ತಿದೆ ಎಂದು ಡಿ ಗ್ರೂಪ್‌ ನೌಕರರು ತಿಳಿಸಿದ್ದಾರೆ.

ಒಂದು ವರ್ಷದಿಂದ ಉಪಯೋಗಕ್ಕೆ ಬಾರದ ಜನರೇಟರ್‌
ಒಂದು ವರ್ಷದಿಂದ ಉಪಯೋಗಕ್ಕೆ ಬಾರದ ಜನರೇಟರ್‌
ಬೆಂಕಿ ಹಾಕುವುದು ನಿಷೇಧ
ಕಸಕ್ಕೆ ಬೆಂಕಿ ಹಾಕಬಾರದು ಎಂದು ತಾಲ್ಲೂಕು ಕಚೇರಿ ಸಿಬ್ಬಂದಿಗೆ ನಗರಸಭೆಯಿಂದ ಮೊದಲೇ ಎಚ್ಚರಿಕೆ ನೀಡಲಾಗಿತ್ತು. ಬೆಂಕಿ ಹಚ್ಚುವುದು ನಿಷೇಧಿಸಲಾಗಿದೆ. ಕಸ ಒಯ್ಯವ ಸಮಯವನ್ನು ತಿಳಿಸಿದರೆ ನಗರಸಭೆಯಿಂದಲೇ ವಾಹನ ಕಳಿಸಲಾಗುವುದು ಎಂದು ನಗರಸಭೆ ಆಯುಕ್ತ ಪವನ್‌ಕುಮಾರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT