ಬುಧವಾರ, ಮೇ 18, 2022
23 °C

ಅಂಕತಟ್ಟಹಳ್ಳಿ: ಅದ್ದೂರಿ ಬಂಡಿ ದ್ಯಾವರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೇತಮಂಗಲ: ಖಡ್ಗಲಿಗರ ಕುಲ ಮಾತೆ ಶ್ರೀಅಕ್ಕೋಜಮ್ಮ ಬಂಡಿ ದ್ಯಾವರ ಎರಡು ದಶಕದ ನಂತರ ಹೋಬಳಿಯ ಅಂಕತಟ್ಟಹಳ್ಳಿಯಲ್ಲಿ ಗುರುವಾರ ವಿಜೃಂಭಣೆಯಿಂದ ನಡೆಯಿತು.

ಗ್ರಾಮಸ್ಥರು ಸುಮಾರು 10 ದಿನಗಳಿಂದ ಅಕ್ಕೋಜಮ್ಮನವರ ಬಂಡಿ ದ್ಯಾವರ ಹಬ್ಬ ಆಚರಣೆ ಮಾಡಿದರು. ದ್ಯಾವರದಲ್ಲಿ ಕಿವಿ ಚುಚ್ಚುವುದು ಹಾಗೂ ಬೆರಳು ಕೊಡುವುದು ಸಂಪ್ರದಾಯ.

ಈ ಬಂಡಿ ದ್ಯಾವರದಲ್ಲಿ ಅಂಕತಟ್ಟಹಳ್ಳಿ, ಹುಲ್ಕೂರು, ನಲ್ಲೂರು, ನತ್ತ, ಕಳ್ಳಿಕುಪ್ಪ, ಹೆಚ್. ಗೊಲ್ಲಹಳ್ಳಿ ಗ್ರಾಮಗಳ ಖಡ್ಗಲಿಗರ ಕುಲ ಮಾತೆಗೆ ಸೇರಿದ ಕುಟುಂಬಸ್ಥರಿಂದ ದ್ಯಾವರ ನಡೆಯುತ್ತದೆ. ಈ ದ್ಯಾವರದ ಅಂಗವಾಗಿ ರಾತ್ರಿ ದೀಪಗಳಿಂದ ಪೂಜೆ ಮಾಡುವುದು, ಕುಟುಂಬದಲ್ಲಿ ಜನಸಿದ ಮಕ್ಕಳಿಗೆ ಕಿವಿ ಚುಚ್ಚುವ ಹಾಗೂ ಬೆರಳು ಕೊಡುವ, ದ್ಯಾವರ ಮಾಡಿದ ನಂತರವೇ ವಿವಾಹ ಮಾಡುವ ಸಂಪ್ರದಾಯವಿದೆ.

20 ವರ್ಷಗಳ ನಂತರ ಅಂಕತಟ್ಟಹಳ್ಳಿ ಹೊರವಲಯದ ಅಕ್ಕೋಜಮ್ಮ ದೇವಾಲಯ ಬಾಗಿಲು ತೆರೆದು ವಿಶೇಷ ಪೂಜೆ ಸಲ್ಲಿಸಲಾಯಿತು. ಗ್ರಾಮದಲ್ಲಿ ದೇವಾಲಯಗಳು ಸೇರಿದಂತೆ ವಿವಿಧ ಮನೆಗಳ ಮೇಲೆ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು.

ವಿವಿಧ ಗ್ರಾಮದ 141ಕ್ಕೂ ಹೆಚ್ಚು ಕುಟುಂಬಗಳ ಸದಸ್ಯರು ದೀಪಗಳನ್ನು ಮಾಡಿದರು. ತಂದೆ, ತಾಯಿ ತಮ್ಮ ಮಕ್ಕಳಿಗೆ ಬಟ್ಟೆ, ಚಿನ್ನ ಸೇರಿದಂತೆ ಇತರೆ ಕೊಡುಗೆ ನೀಡಿ ದ್ಯಾವರವನ್ನು ಅವರಿಗೆ ನೀಡುತ್ತಾರೆ. ಕೆಲವರು ಟಗರುಗಳನ್ನೂ ನೀಡುತ್ತಾರೆ.

ಹೆಚ್. ಗೊಲ್ಲಹಳ್ಳಿ ಕುಟುಂಬಸ್ಥರು, ನತ್ತ ಗೊಳ್ಳೆಪ್ಪ, ರಾಮಚಂದ್ರ, ನಲ್ಲೂರು ವಿ.ಜಿ. ಶಂಕರ್, ದೊಡ್ಡಮನೆ ಪ್ರಭಾಕರ್, ಕೆಳಗಿನ ಮನೆಯ ಸಿ.ಎಂ. ಚೌಡಪ್ಪ, ಬೀದಿಮನೆ ಗೌಡರ ರವಿ, ಎಳೆತೋಟದ ರಘುಪತಿ, ದೊಡ್ಡಗಾನಹಳ್ಳಿ ಸುರೇಶ್, ಕುರಿಮನೆ ಅವುಲಪ್ಪ ದ್ಯಾವರ ಮಾಡುವ ಪ್ರಮುಖ ಕುಟುಂಬಗಳಾಗಿವೆ. 

‘ಕುಟುಂಬದಿಂದ ವಂಶ ಪಾರಂಪರ್ಯವಾಗಿ ಈ ದ್ಯಾವರ ಆಚರಿಸಿಕೊಂಡು ಬರುತ್ತಿದ್ದೇವೆ. ಕುಟುಂಬದ ಹಿರಿಯರು ಹಾಕಿಕೊಟ್ಟ ಸಂಪ್ರದಾಯದಂತೆ ದ್ಯಾವರದ ಮಹತ್ವ ವನ್ನು ಮಕ್ಕಳಿಗೂ ತಿಳಿಸುತ್ತೇವೆ. ಹಲವು ವರ್ಷಗಳ ಬಳಿಕ ಅದ್ದೂರಿಯಾಗಿ ಆಚ ರಣೆ ಮಾಡಿರುವುದು ಖುಷಿ ತಂದಿದೆ’ ಎಂದು ಅಂಕತಟ್ಟಹಳ್ಳಿ ರವಿ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.