ಮಂಗಳವಾರ, ಜನವರಿ 25, 2022
28 °C
ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ ಕಾರಿಡಾರ್‌

ಸಮಸ್ಯೆ ಇತ್ಯರ್ಥಕ್ಕೆ ಉಪ ತಹಶೀಲ್ದಾರ್‌ ನೇಮಕ: ಜಿಲ್ಲಾಧಿಕಾರಿ ಸೆಲ್ವಮಣಿ ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ ಕಾರಿಡಾರ್‌ ಹಾದು ಹೋಗುವ ಭಾಗದ ರೈತರ ಸಮಸ್ಯೆಗಳ ಇತ್ಯರ್ಥಕ್ಕೆ ಜಿಲ್ಲೆಯ 3 ತಾಲ್ಲೂಕುಗಳಲ್ಲಿ ಉಪ ತಹಶೀಲ್ದಾರ್‌ಗಳನ್ನು ನೇಮಿಸಿ ಶೀಘ್ರವಾಗಿ ಪರಿಹರಿಸಲಾಗುತ್ತದೆ’ ಎಂದು ಜಿಲ್ಲಾಧಿಕಾರಿ ಆರ್‌.ಸೆಲ್ವಮಣಿ ಭರವಸೆ ನೀಡಿದರು.

ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ ಕಾರಿಡಾರ್‌ ಸಂತ್ರಸ್ತರ ಹೋರಾಟ ಸಮಿತಿಯು ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪಾದಯಾತ್ರೆ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ರೈತ ಮುಖಂಡರು ಹಾಗೂ ಜನಪ್ರತಿನಿಧಿಗಳೊಂದಿಗೆ ಇಲ್ಲಿ ಶುಕ್ರವಾರ ಸಭೆ ನಡೆಸಿದ ಜಿಲ್ಲಾಧಿಕಾರಿ, ‘ಕಾರಿಡಾರ್‌ ಯೋಜನೆಯಿಂದ ಜಮೀನು ಕಳೆದುಕೊಂಡ ರೈತರ ಸಮಸ್ಯೆ ಆಲಿಸಲು ಅಧಿಕಾರಿಗಳು ಪ್ರತಿ ವಾರ ಕನಿಷ್ಠ 2 ಹಳ್ಳಿಗೆ ಭೇಟಿ ಕೊಟ್ಟು ಪರಿಶೀಲನೆ ಮಾಡಬೇಕು’ ಎಂದು ಸೂಚಿಸಿದರು.

‘ಅಧಿಕಾರಿಗಳು ಸಂತ್ರಸ್ತ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮಸ್ಯೆ ಬಗೆಹರಿಸಬೇಕು. ಜಿಲ್ಲೆಯಲ್ಲಿ ಸುಮಾರು 28 ಸಾವಿರ ಪಿ ನಂಬರ್‌ಗಳ ಸಮಸ್ಯೆಯಿದ್ದು, ಹಂತ ಹಂತವಾಗಿ ಪರಿಹರಿಸಿದ್ದೇವೆ. 3 ಸಾವಿರ ರೈತರ ಜಮೀನುಗಳ ಪಿ ನಂಬರ್‌ ಸಮಸ್ಯೆ ಬಗೆಹರಿಸಲಾಗುತ್ತಿದೆ. ಕಾರಿಡಾರ್ ಮಾರ್ಗದಲ್ಲಿ ಬರುವ 45 ರೈತರ ಪಿ ನಂಬರ್‌ ಸಮಸ್ಯೆ ಬಗೆಹರಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದು ಹೇಳಿದರು.

‘ಅಧಿಕಾರಿಗಳು ಜವಾಬ್ದಾರಿ ತೆಗೆದುಕೊಂಡು ತಿಂಗಳೊಳಗೆ ಸಮಸ್ಯೆ ಬಗೆಹರಿಸುತ್ತಾರೆ. ಭೂಮಿ ಮತ್ತು ಮರ ಕಳೆದುಕೊಂಡವರ ಬಗ್ಗೆ ಮತ್ತೆ ಸರ್ವೆ ಮಾಡಿಸಿ ಪರಿಹಾರ ನೀಡಲು ಕ್ರಮ ಕೈಗೊಳ್ಳುತ್ತೇವೆ. ಕಾರಿಡಾರ್‌ಗೆ ಸ್ವಾಧೀನವಾಗುವ ಜಮೀನಿನ ಬಗ್ಗೆ ರೈತರು ಪೂರಕ ದಾಖಲೆಪತ್ರ ನೀಡಿದರೆ ಸಂಬಂಧಿಸಿದ ಅಧಿಕಾರಿಗಳಿಂದ ಪರಿಹಾರ ಬಿಡುಗಡೆ ಮಾಡಿಸುತ್ತೇವೆ’ ಎಂದು ತಿಳಿಸಿದರು.

‘ಸಂಪೂರ್ಣವಾಗಿ ಭೂಮಿ ಕಳೆದುಕೊಂಡವರಿಗೆ ಬೇರೆಡೆ ಜಮೀನು ನೀಡಲು ಮತ್ತು ಜೀವನೋಪಾಯಕ್ಕೆ ಸರ್ಕಾರದ ಯಾವುದಾದರೂ ಯೋಜನೆಯಲ್ಲಿ ಅನುಕೂಲ ಮಾಡಿಕೊಡಲು ಪ್ರಸ್ತಾವ ಕಳುಹಿಸುತ್ತೇವೆ’ ಎಂದು ಮಾಹಿತಿ ನೀಡಿದರು.

ಮಧ್ಯವರ್ತಿಗಳಿಂದ ಅನ್ಯಾಯ: ‘ರೈತರು ತುಂಬಾ ಕಷ್ಟದಲ್ಲಿದ್ದಾರೆ. ರಸ್ತೆ ಮಾಡುವಾಗ ಅಧಿಕಾರಿಗಳು ಸ್ಥಳೀಯ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ರೈತರು ಹೋರಾಟ ಮಾಡಿದ್ದರಿಂದ ಸಮಸ್ಯೆ ನಮ್ಮ ಗಮನಕ್ಕೆ ಬಂದಿದೆ. ದಲ್ಲಾಳಿಗಳಿಗೆ ಹೆಚ್ಚಿನ ಹಣ ಕೊಡುವ ರೈತರ ಭೂಮಿಗೆ ಅಧಿಕಾರಿಗಳು ಹೆಚ್ಚಿನ ಪರಿಹಾರ ನೀಡಿದ್ದಾರೆ. ಮಧ್ಯವರ್ತಿಗಳಿಂದ ರೈತರಿಗೆ ಅನ್ಯಾಯವಾಗುತ್ತಿದೆ’ ಎಂದು ಮಾಲೂರು ಶಾಸಕ ಕೆ.ವೈ.ನಂಜೇಗೌಡ ಆರೋಪಿಸಿದರು.

‘ಕೆಲವೆಡೆ ₹ 3 ಕೋಟಿ, ಮತ್ತೆ ಕೆಲವೆಡೆ ₹ 3 ಲಕ್ಷ ಭೂ ಪರಿಹಾರ ಕೊಡಲಾಗಿದೆ. ಈ ತಾರತಮ್ಯವೇಕೆ? ಪ್ರತಿ ಜಮೀನಿನ ಬಗ್ಗೆ ಸರ್ವೆ ಮಾಡಿಸಿ ಪರಿಹಾರ ನಿಗದಿಪಡಿಸಬೇಕು. ರೈತರು ಮತ್ತು ಸಾರ್ವಜನಿಕರು ಕೇಳುವ ಕಡೆ ಕೆಳ ಸೇತುವೆ ಹಾಗೂ ಸರ್ವಿಸ್‌ ರಸ್ತೆ ನಿರ್ಮಿಸಬೇಕು. ರೈತರಿಗೆ ಅನ್ಯಾಯವಾಗಲು ಬಿಡಲ್ಲ. ಕಾನೂನಿನ ಅನ್ವಯ ರೈತರ ಸಮಸ್ಯೆ ಬಗೆಹರಿಸಿ ಪರಿಹಾರ ಕೊಡಿ’ ಎಂದು ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಆಗ್ರಹಿಸಿದರು.

ಗೌರವ ಕೊಡಿ: ‘ರೈತರು ಕಾರಿಡಾರ್‌ಗೆ ಭೂಮಿ ಕೊಟ್ಟಿದ್ದಾರೆ. ಅಧಿಕಾರಿಗಳು ಮೊದಲು ಅವರಿಗೆ ಗೌರವ ಕೊಡುವುದನ್ನು ಕಲಿಯಬೇಕು. ಪರಿಹಾರ ನೀಡಿಕೆಯಲ್ಲಿ ಆಗಿರುವ ತಾರತಮ್ಯ ಮತ್ತು ಲೋಪಗಳನ್ನು ಶೀಘ್ರವೇ ಪರಿಹರಿಸಿ. ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಭೆ ನಡೆಸಬೇಕು’ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಜಿ.ಸಿಬಯ್ಯಾರೆಡ್ಡಿ ಒತ್ತಾಯಿಸಿದರು.

ವಿಧಾನ ಪರಿಷತ್‌ ಸದಸ್ಯ ಎಂ.ಎಲ್‌.ಅನಿಲ್‌ಕುಮಾರ್, ಸಿಪಿಎಂ ಜಿಲ್ಲಾ ಸಮಿತಿ ಕಾರ್ಯದರ್ಶಿ ಗಾಂಧಿನಗರ ನಾರಾಯಣಸ್ವಾಮಿ, ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಟಿ.ಎಂ.ವೆಂಕಟೇಶ್, ರೈತಪರ ಸಂಘಟನೆಗಳ ಮುಖಂಡರಾದ ಗಣೇಶ್‌ಗೌಡ, ಟಿ.ಎನ್‌.ರಾಮೇಗೌಡ, ಶ್ರೀನಿವಾಸ್ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು