ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಸು ಯೋಜನೆ ಸಮಾಜಕ್ಕೆ ದಾರಿದೀಪ

ದೇವರಾಜ ಅರಸು ಜಯಂತಿಯಲ್ಲಿ ಜಿಲ್ಲಾಧಿಕಾರಿ ಮಂಜುನಾಥ್‌ ಬಣ್ಣನೆ
Last Updated 20 ಆಗಸ್ಟ್ 2019, 15:23 IST
ಅಕ್ಷರ ಗಾತ್ರ

ಕೋಲಾರ: ‘ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರು ಕಟ್ಟ ಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಕಲ್ಪಿಸಿದ ಸಾಮಾಜಿಕ ಹರಿಕಾರರು’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಬಣ್ಣಿಸಿದರು.

ಜಿಲ್ಲಾಡಳಿತವು ಇಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ದೇವರಾಜ ಅರಸು ಜಯಂತಿ ಉದ್ಘಾಟಿಸಿ ಮಾತನಾಡಿ, ‘ಅರಸು ಅವರ ಅಧಿಕಾರಾವಧಿಯಲ್ಲಿ ಜಾರಿಯಾದ ಯೋಜನೆಗಳು ರಾಜ್ಯದಲ್ಲಿ ಇಂದಿಗೂ ಮನೆ ಮಾತಾಗಿವೆ’ ಎಂದರು.

‘ಸರ್ವರಿಗೂ ಸಮಬಾಳು ಮತ್ತು ಸರ್ವರಿಗೂ ಸಮಪಾಲು ಕಲ್ಪಿಸಲು ಅರಸು ಸಾಕಷ್ಟು ಶ್ರಮಿಸಿದರು. ಅವರ ಯೋಜನೆಗಳು ಸಮಾಜಕ್ಕೆ ದಾರಿದೀಪ. 28 ವರ್ಷ ಶಾಸಕರಾಗಿದ್ದ ಅವರು ಮುಖ್ಯಮಂತ್ರಿಯಾಗಿಯೂ ಸೇವೆ ಸಲ್ಲಿಸಿದರು. ಅವರ ಅಧಿಕಾರಾವಧಿಯಲ್ಲಿ ಬಡವರು, ಹಿಂದುಳಿದ ವರ್ಗದವರ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದರು’ ಎಂದು ಹೇಳಿದರು.

‘ಈ ಹಿಂದೆ ಬಡವರು ಬೆಳೆದ ಬೆಳೆಯನ್ನು ಶ್ರೀಮಂತರು ದೋಚಿಕೊಂಡು ಹೋಗುತ್ತಿದ್ದರು. ಇದನ್ನು ಸಹಿಸದ ಅರಸು ಉಳುವವನಿಗೆ ಭೂಮಿ ಯೋಜನೆ ಜಾರಿಗೊಳಿಸಿದರು. ಅವರ ಸೇವೆಯನ್ನು ರೈತರು ಎಂದಿಗೂ ಮರೆಯಬಾರದು. ಹಿಂದುಳಿದ ವರ್ಗಗಳ ಶೈಕ್ಷಣಿಕ ಅಭಿವೃದ್ಧಿಗೆ ರಾಜ್ಯದಲ್ಲಿ ವಿದ್ಯಾರ್ಥಿನಿಲಯ ಸ್ಥಾಪಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ’ ಎಂದು ಶ್ಲಾಘಿಸಿದರು.

‘ಅರಸು ಅವರು ಜೀತದಾಳು ಹಾಗೂ ಮಲಹೊರುವ ಪದ್ಧತಿ ನಿಷೇಧಿಸಿ ಪ್ರಜಾಪ್ರಭುತ್ವಕ್ಕೆ ಅರ್ಥ ಕಲ್ಪಿಸಿದರು. ಎಲ್ಲಾ ಬಡವರಿಗೂ ವಸತಿ ಸೌಲಭ್ಯ, ಶಿಕ್ಷಣದಲ್ಲಿ ಸಮಾನತೆ ಕಲ್ಪಿಸುವ ಮೂಲಕ ಸಮಾಜಮುಖಿಯಾಗಿ ಕೆಲಸ ಮಾಡಿದರು. ಜನಸಂಖ್ಯೆ ಅಧಾರದಲ್ಲಿ ಮೀಸಲಾತಿ ಕಲ್ಪಿಸಿ ಸಹಾಯಧನ ನೀಡಿದರು. ಮೌನಕ್ರಾಂತಿ ಮೂಲಕ ಸಾಮಾಜಿಕ ಬದಲಾವಣೆಗೆ ನಾಂದಿ ಹಾಡಿದರು’ ಎಂದು ತಿಳಿಸಿದರು.

ಸುಶಿಕ್ಷಿತರಾಗಿ: ‘ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ 60 ವಿದ್ಯಾರ್ಥಿನಿಲಯ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ 6 ಹಾಸ್ಟೆಲ್‌ಗಳಿವೆ. ಈ ಎಲ್ಲಾ ಹಾಸ್ಟೆಲ್‌ಗಳಲ್ಲಿ ಊಟ, ವಸತಿ ವ್ಯವಸ್ಥೆ ಉತ್ತಮವಾಗಿದೆ. ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಸುಶಿಕ್ಷಿತರಾಗಿ ಉನ್ನತ ಹುದ್ದೆ ಅಲಂಕರಿಸಬೇಕು’ ಎಂದು ಆಶಿಸಿದರು.

‘ಅರಸು ಅವರು ಕೃಷಿ ಕ್ಷೇತ್ರಕ್ಕೂ ಹೆಚ್ಚಿನ ಆದ್ಯತೆ ನೀಡಿದ್ದರು. ಆಗಲೇ ರೈತರ ಸಾಲ ಮನ್ನಾ ಮಾಡಿದ್ದರು. ಅಸಮಾನತೆ ತೊಡೆದು ಹಾಕಲು ಹೆಚ್ಚು ಶ್ರಮ ವಹಿಸಿ ಅಹಿಂದ ವರ್ಗಗಳಿಗೆ ಪ್ರಗತಿಪರ ಯೋಜನೆಗಳನ್ನು ಜಾರಿಗೊಳಿಸಿದರು. ಅವರ ಉದಾತ್ತ ಚಿಂತನೆ ಎಲ್ಲರಿಗೂ ಆದರ್ಶವಾಗಬೇಕು’ ಎಂದು ಕಿವಿಮಾತು ಹೇಳಿದರು.

ಅರಸು ಭವನದ ಆವರಣದಲ್ಲಿ ಸಸಿ ನಡೆಲಾಯಿತು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉಪನಿರ್ದೇಶಕ ರಾಜಣ್ಣ, ತಾಲ್ಲೂಕು ಅಧಿಕಾರಿ ಮಂಜುಳಾ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT