ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

8 ಎಕರೆ ಜಮೀನು ಕಬಳಿಕೆಗೆ ಯತ್ನ

ಮೃತರ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿ: 9 ಆರೋಪಿಗಳ ಬಂಧನ
Last Updated 22 ಸೆಪ್ಟೆಂಬರ್ 2022, 4:29 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯ ಮುಳಬಾಗಿಲು ಬಳಿ ನಕಲಿ ದಾಖಲೆ ಸೃಷ್ಟಿಸಿ ದೆಹಲಿಯ ವ್ಯಕ್ತಿಯೊಬ್ಬರ ₹ 7 ಕೋಟಿ ಬೆಲೆ ಬಾಳುವ 8 ಎಕರೆ 38 ಗುಂಟೆ ಜಮೀನು ಲಪಟಾಯಿಸಲು ಹೊರಟಿದ್ದ ಆರೋಪದ ಮೇಲೆ 9 ಮಂದಿಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ವರಿಷ್ಠಾಧಿಕಾರಿ ಡಿ. ದೇವರಾಜ್ ತಿಳಿಸಿದರು.

‘ಕರ್ನಾಟಕ ರೈತ ಸೇನೆಅಧ್ಯಕ್ಷ ಕೃಷ್ಣಾರೆಡ್ಡಿ ಪ್ರಕರಣದ ಕಿಂಗ್‌ ಪಿನ್‌ ಆಗಿದ್ದು, ₹ 45 ಲಕ್ಷ ವ್ಯವಹಾರ ನಡೆದಿರುವುದು ತನಿಖೆಯಲ್ಲಿ ಗೊತ್ತಾಗಿದೆ. ಪ್ರಕರಣದಲ್ಲಿ ಭಾಗಿಯಾದ ಆರೋಪದ ಮೇಲೆ ಕೃಷ್ಣಾರೆಡ್ಡಿ, ಶ್ರೀನಿವಾಸರೆಡ್ಡಿ, ಮುಖೇಶ್ ಸಬರವಾಲ್‌, ಕುಮಾರ್‌, ನಾರಾಯಣಪ್ಪ, ಮಂಜುನಾಥ್‌, ಕಾಮಸಮುದ್ರ ಮಂಜುನಾಥ್‌, ವೆಂಕಟೇಶಪ್ಪ, ರಮೇಶ್‌ ರೆಡ್ಡಿಯನ್ನು ಬಂಧಿಸಲಾಗಿದೆ’ ಎಂದು ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಮುಳಬಾಗಿಲು ತಾಲ್ಲೂಕಿನ ದಾರೇನಹಳ್ಳಿ ಗ್ರಾಮದ ಸರ್ವೆ ನಂ. 36/1 ರಲ್ಲಿ 1 ಎಕರೆ 28 ಗುಂಟೆ, 36/2 ರಲ್ಲಿ 6 ಎಕರೆ 1 ಗುಂಟೆ, 33/2 ರಲ್ಲಿ 1 ಎಕರೆ 9 ಗುಂಟೆ ಸೇರಿದಂತೆ ಒಟ್ಟು 8 ಎಕರೆ 38 ಗುಂಟೆ ಜಮೀನು ನವದೆಹಲಿ ಮೂಲದ ಧರ್ಮನಾಥ ಕುನ್ವರ್ ಹೆಸರಲ್ಲಿದೆ. ಅವರು ಮೃತಪಟ್ಟಿದ್ದು, ಅವರ ಮಗ ಮುಕೇಶ್ ಕುನ್ವರ್‌ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿ ಮುಳಬಾಗಿಲು ತಾಲ್ಲೂಕು ಕಚೇರಿಯಲ್ಲಿ ಖಾತೆ ಮಾಡಿಸಿಕೊಳ್ಳಲು ಮುಕೇಶ್ ಸಬರವಾಲ್ ಮತ್ತು ಕೃಷ್ಣಾರೆಡ್ಡಿ ಸೇರಿ ಇತರರು ಸಂಚು ರೂಪಿಸಿದ್ದರು’ ಎಂದರು.

‘ತಮ್ಮ ಜಮೀನಿನಲ್ಲಿ ಮರಗಳನ್ನು ಕಡಿದು ಹಾಕಿರುವವರ ವಿರುದ್ಧ ಕ್ರಮ ಕೈಗೊಳ್ಳಲು ಆ.17 ರಂದು ಜಮೀನಿನ ಮೂಲ ವಾರಸುದಾರರಾದ ಧರ್ಮನಾಥ ಕುನ್ವರ್ ಪುತ್ರ ಮುಖೇಶ್‌ ಕುನ್ವರ್‌ಮುಳಬಾಗಿಲು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು. ಅದರಂತೆ ವಿಶೇಷ ತಂಡ ರಚಿಸಿ ತನಿಖೆಯನ್ನು ಕೈಗೊಂಡು ಪ್ರಕರಣ ಪರಿಶೀಲಿಸಲಾಗಿತ್ತು. ಧರ್ಮನಾಥ ಕುನ್ವರ್ ಮತ್ತು ಬ್ರಿಜ್ ಕಿಶೋರಿ ದೇವಿ ಅವರ ನಕಲಿ ಮರಣ ಪ್ರಮಾಣ ಪತ್ರ ಮತ್ತು ಇವರ ಮಗ ಮುಕೇಶ್ ಕುನ್ವರ್ ಅವರ ಆಧಾರ್ ಕಾರ್ಡ್, ಪಾನ್‌ ಕಾರ್ಡ್‌ಗಳಿಗೆ ಆರೋಪಿ ಮುಕೇಶ್ ಸಬರವಾಲ್‌ ಫೋಟೊ ಹಾಕಿ ತಾನೇ ಧರ್ಮನಾಥ ಕನ್ವರ್ ಅವರ ಪುತ್ರ ಎಂದು ಬಿಂಬಿಸುವಂತೆ ನಕಲಿ ಆಧಾರ್, ಪಾನ್ ಕಾರ್ಡ್ ಮತ್ತು ಇತರೆ ದಾಖಲಾತಿಗಳು ಸೃಷ್ಟಿ ಮಾಡಿಕೊಂಡಿದ್ದ’ ಎಂದು ಹೇಳಿದರು.

‘ಪ್ರಕರಣಗಳ ತನಿಖೆ ಸಲುವಾಗಿ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಸಚಿನ್ ಘೋರ್ಪಡೆ ಮಾರ್ಗದರ್ಶನದಲ್ಲಿ, ಮುಳಬಾಗಿಲು ಡಿವೈಎಸ್‌ಪಿ ಜೈಶಂಕರ್ ಉಸ್ತುವಾರಿಯಲ್ಲಿ, ವೃತ್ತ ನಿರೀಕ್ಷಕ ಲಕ್ಷ್ಮಿಕಾಂತಯ್ಯ ತನಿಖೆ ಕೈಗೊಂಡಿದ್ದರು. ಪ್ರಕರಣವನ್ನು ಪರಿಶೀಲಿಸಿದಾಗ ಜಮೀನು ಮಾಲೀಕ ಧರ್ಮನಾಥ ಕನ್ವರ್ ಮೃತಪಟ್ಟಿದ್ದು, ಪುತ್ರ ಮುಕೇಶ್ ಕುನ್ವರ್ ದೆಹಲಿಯಲ್ಲಿ ವಾಸವಿದ್ದರು. ಬಂಧಿತ ಆರೋಪಿಗಳು ಜಮೀನು ಲಪಟಾಯಿಸಲುಮುಂದಾಗಿದ್ದರು’ ಎಂದರು.

‘ಇದೇ ತಂಡ ಆಶೋಕ್ ಕುಮಾರ್‌ ಎಂಬುವವರಿಗೆ ನೋಂದಣಿ ಇಲ್ಲದ ಕ್ರಯದ ಕರಾರು ಮಾಡಿಕೊಟ್ಟು, ₹ 49 ಲಕ್ಷ ನಗದು ಹಣ ಹಾಗೂ ₹ 25 ಲಕ್ಷ ಮೌಲ್ಯದ ಎರಡು ಚೆಕ್‌ ಪಡೆದುಕೊಂಡು ಮೋಸ ಮಾಡಿದೆ. ಆರೋಪಿ ಕೃಷ್ಣಾರೆಡ್ಡಿ ವಿರುದ್ಧ ಈ ಹಿಂದೆ ನಂಗಲಿ ಪೊಲೀಸ್ ಠಾಣೆಯಲ್ಲಿಯೂ ಪ್ರಕರಣ ದಾಖಲಾಗಿತ್ತು’ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಸಚಿನ್‌ ಘೋರ್ಪಡೆ, ಮುಳಬಾಗಿಲು ಡಿವೈಎಸ್‌ಪಿ ಜೈಶಂಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT