ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣ ಸಂಪಾದನೆಗೆ ಕಳ್ಳದಾರಿ: ಪ್ರಯಾಣಿಕರ ಜೇಬಿಗೆ ಕತ್ತರಿ

ನಗರದಲ್ಲಿ ಮೇರೆ ಮೀರಿದ ಆಟೊ ಚಾಲಕರ ಆಟಾಟೋಪ: ನಿಯಮ ಆಟಕ್ಕುಂಟು ಲೆಕ್ಕಕ್ಕಿಲ್ಲ
Last Updated 29 ಆಗಸ್ಟ್ 2021, 19:30 IST
ಅಕ್ಷರ ಗಾತ್ರ

ಕೋಲಾರ: ನಗರದಲ್ಲಿ ಆಟೊ ಚಾಲಕರ ಆಟಾಟೋಪ ಮೇರೆ ಮೀರಿದ್ದು, ನಿಯಮಬಾಹಿರವಾಗಿ ದುಪ್ಪಟ್ಟು ಹಣ ಪಡೆದು ಪ್ರಯಾಣಿಕರನ್ನು ಶೋಷಿಸಲಾಗುತ್ತಿದೆ. ಬಹುಪಾಲು ಆಟೊ ಚಾಲಕರು ಡಿಜಿಟಲ್‌ ಮೀಟರ್‌ ಅಳವಡಿಕೆ ನಿಯಮವನ್ನು ಗಾಳಿಗೆ ತೂರಿ ಪ್ರಯಾಣಿಕರನ್ನು ವಂಚಿಸುತ್ತಿದ್ದಾರೆ.

ನಗರವು ಸುಮಾರು 30 ಚದರ ಕಿ.ಮೀ ವಿಸ್ತಾರವಾಗಿದ್ದು, ಜನಸಂಖ್ಯೆ 2 ಲಕ್ಷದ ಗಡಿ ದಾಟಿದೆ. ರಾಜ್ಯ ರಸ್ತೆ ರಸ್ತೆ ಸಾರಿಗೆ ಸಂಸ್ಥೆಯು (ಕೆಎಸ್‌ಆರ್‌ಟಿಸಿ) ಸಾರ್ವಜನಿಕರ ಅನುಕೂಲಕ್ಕಾಗಿ ನಗರ ಸಾರಿಗೆ ಸೇವೆ ಆರಂಭಿಸಿದೆ. ನಗರ ಸಾರಿಗೆ ಬಸ್‌ಗಳಲ್ಲಿ ಪ್ರಯಾಣ ದರ ಕಡಿಮೆಯಿದೆ. ಆದರೆ, ಈ ಸೇವೆಯು ನಿರೀಕ್ಷಿತ ಯಶಸ್ಸು ಕಂಡಿಲ್ಲ.

ನಗರ ಸಾರಿಗೆ ಬಸ್‌ ಸೇವೆಯು ಕೆಲ ಪ್ರಮುಖ ಬಡಾವಣೆಗಳಿಗಷ್ಟೇ ಸೀಮಿತವಾಗಿದೆ. ಜತೆಗೆ ಬಸ್‌ಗಳ ಸಂಖ್ಯೆ ಕಡಿಮೆಯಿದೆ. ಹೀಗಾಗಿ ಬಹುಪಾಲು ಪ್ರಯಾಣಿಕರು ಆಟೊಗಳನ್ನು ಅವಲಂಬಿಸಿದ್ದಾರೆ. ಆರ್ಥಿಕವಾಗಿ ಸ್ಥಿತಿವಂತರಾದವರು ಕಾರು ಅಥವಾ ಬೈಕ್‌ನಂತಹ ಸ್ವಂತ ವಾಹನಗಳಲ್ಲಿ ಓಡಾಡುತ್ತಾರೆ. ಬಡ ಹಾಗೂ ಮಧ್ಯಮ ವರ್ಗದ ಜನರು ಆಟೊಗಳಲ್ಲಿ ಪ್ರಯಾಣಿಸುತ್ತಾರೆ.

ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್‌ಟಿಒ) ಕಚೇರಿ ಮಾಹಿತಿ ಪ್ರಕಾರ ನಗರದಲ್ಲಿ ಸುಮಾರು 7 ಸಾವಿರ ಪರವಾನಗಿ (ಪರ್ಮಿಟ್‌) ಪಡೆದ ಆಟೊಗಳಿವೆ. 2 ಸಾವಿರಕ್ಕೂ ಹೆಚ್ಚು ಅನಧಿಕೃತ ಆಟೊಗಳಿವೆ. ಸಾರಿಗೆ ಇಲಾಖೆ ನಿಯಮದ ಪ್ರಕಾರ ಸ್ಥಳೀಯ ನಗರಸಭೆ ಅಥವಾ ಪುರಸಭೆಯ 10 ಕಿ.ಮೀ ವ್ಯಾಪ್ತಿಯಲ್ಲಿ ಆಟೊ ಸಂಚಾರಕ್ಕೆ ಪರ್ಮಿಟ್‌ ನೀಡಲಾಗುತ್ತದೆ.

ಆದರೆ, ಹೊರ ಜಿಲ್ಲೆ ಹಾಗೂ ರಾಜ್ಯಗಳಲ್ಲಿ ನೋಂದಣಿ ಮಾಡಿಸಿ ಪರ್ಮಿಟ್‌ ಪಡೆದಿರುವ ಆಟೊಗಳನ್ನು ನಿಯಮಬಾಹಿರವಾಗಿ ನಗರದಲ್ಲಿ ಓಡಿಸಲಾಗುತ್ತಿದೆ. ಚಾಲಕರು ಹೊರ ಜಿಲ್ಲೆ ಹಾಗೂ ರಾಜ್ಯಗಳ ಪರ್ಮಿಟ್‌ನ ದಾಖಲೆಪತ್ರವನ್ನೇ ನಗರದಲ್ಲೂ ಬಳಕೆ ಮಾಡುತ್ತಿದ್ದಾರೆ. ಇದರಿಂದ ಸಾರಿಗೆ ಇಲಾಖೆಗೆ ತೆರಿಗೆ ವಂಚನೆಯಾಗುತ್ತಿದೆ.

ಹಳ್ಳಿಗೂ ಆಟೊ: ಆಟೊಗಳಲ್ಲಿ ಗರಿಷ್ಠ 3 ಪ್ರಯಾಣಿಕರನ್ನು ಮಾತ್ರ ಕರೆದೊಯ್ಯಲು ಅವಕಾಶವಿದೆ. ಆದರೆ, ಚಾಲಕರು ಹೆಚ್ಚಿನ ಹಣ ಸಂಪಾದನೆಗಾಗಿ ಪ್ರಯಾಣಿಕರನ್ನು ಕುರಿಗಳಂತೆ ತುಂಬಿಕೊಂಡು ಹೋಗುವುದು ಸಾಮಾನ್ಯವಾಗಿದೆ. ಮತ್ತೊಂದೆಡೆ ಆಟೊ ಮಾದರಿಯ ಸರಕು ಸಾಗಣೆ ತ್ರಿಚಕ್ರ ವಾಹನಗಳಲ್ಲೂ ಪ್ರಯಾಣಿಕರನ್ನು ಕರೆದೊಯ್ಯಲಾಗುತ್ತಿದೆ.

ನಗರಸಭೆಯ ವ್ಯಾಪ್ತಿಯ 10 ಕಿ.ಮೀ ಪ್ರದೇಶವನ್ನು ಮೀರಿ ಅಕ್ಕಪಕ್ಕದ ಹಳ್ಳಿಗಳಿಗೂ ಆಟೊಗಳು ಸಂಚರಿಸುತ್ತಿವೆ. ಗ್ರಾಮೀಣ ಭಾಗಕ್ಕೆ ಸಮರ್ಪಕ ಬಸ್‌ ಸೌಕರ್ಯವಿಲ್ಲದ ಕಾರಣ ಸಾರ್ವಜನಿಕರು ಅನಿವಾರ್ಯವಾಗಿ ಖಾಸಗಿ ವಾಹನಗಳಲ್ಲಿ ಪ್ರಯಾಣಿಸುವ ಪರಿಸ್ಥಿತಿಯಿದೆ. ಆಟೊ ಚಾಲಕರು ಪರಿಸ್ಥಿತಿಯ ಲಾಭ ಪಡೆದು ಗ್ರಾಮೀಣ ಭಾಗದಲ್ಲೂ ವಾಹನ ಓಡಿಸುತ್ತಿದ್ದಾರೆ.

ದುಪ್ಪಟ್ಟು ಹಣ: ಜಿಲ್ಲಾಧಿಕಾರಿ ಅಧ್ಯಕ್ಷತೆಯ ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು (ಆರ್‌ಟಿಎ) ನಗರದ ವ್ಯಾಪ್ತಿಯಲ್ಲಿ ಮೊದಲ 2.25 ಕಿ.ಮೀ ಪ್ರಯಾಣಕ್ಕೆ ₹ 25 ದರ ನಿಗದಿಪಡಿಸಿದೆ. ನಂತರದ ಪ್ರಯಾಣಕ್ಕೆ ಪ್ರತಿ ಕಿಲೋ ಮೀಟರ್‌ಗೆ ₹ 12.50 ದರ ಪಡೆಯಬೇಕೆಂದು ಆದೇಶ ಜಾರಿ ಮಾಡಿದೆ. ಪ್ರಯಾಣಿಕರ ಬೇಡಿಕೆಯಂತೆ ಕಾಯಲು (ವೆಯ್ಟಿಂಗ್‌ ಚಾರ್ಜ್‌) ಮೊದಲ 5 ನಿಮಿಷ ಉಚಿತವಾಗಿದೆ. 5 ನಿಮಿಷದ ನಂತರ ಪ್ರತಿ 15 ನಿಮಿಷಕ್ಕೆ ₹ 1 ದರವಿದೆ.

ಪ್ರಯಾಣಿಕರ ಸರಕು (ಲಗೇಜ್‌) ಸಾಗಣೆಗೆ 20 ಕೆ.ಜಿವರೆಗೆ ಹಣ ಪಡೆಯುವಂತಿಲ್ಲ. ನಂತರದ ಪ್ರತಿ 20 ಕೆ.ಜಿಗೆ ₹ 2 ದರ ನಿಗದಿಪಡಿಸಲಾಗಿದೆ. ಆದರೆ, ಬಹುಪಾಲು ಆಟೊ ಚಾಲಕರು ಆರ್‌ಟಿಎ ಆದೇಶ ಉಲ್ಲಂಘಿಸಿ ಪ್ರಯಾಣಿಕರಿಂದ ದುಪ್ಪಟ್ಟು ಹಣ ಪಡೆಯುತ್ತಿದ್ದಾರೆ. ಈ ಸಂಬಂಧ ಸಾರ್ವಜನಿಕರಿಂದ ಆರ್‌ಟಿಎ, ಆರ್‌ಟಿಒ ಕಚೇರಿಗೆ ಹಾಗೂ ಸಂಚಾರ ಪೊಲೀಸರಿಗೆ ದೂರು ಸಲ್ಲಿಕೆಯಾಗುತ್ತಿದ್ದರೂ ಆಟೊ ಚಾಲಕರ ಅಕ್ರಮಕ್ಕೆ ಕಡಿವಾಣ ಬಿದ್ದಿಲ್ಲ.

ಮೀಟರ್‌ ಅಳವಡಿಸಿಲ್ಲ: ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ನಗರ ವ್ಯಾಪ್ತಿಯಲ್ಲಿ ಸಂಚರಿಸುವ ಎಲ್ಲಾ ಆಟೊಗಳಿಗೆ ಕಡ್ಡಾಯವಾಗಿ ಡಿಜಿಟಲ್‌ ಮೀಟರ್‌ ಅಳವಡಿಸುವಂತೆ ಆದೇಶ ಹೊರಡಿಸಿದೆ. ಮೀಟರ್‌ ಅಳವಡಿಕೆಗೆ ಸಾಕಷ್ಟು ಕಾಲಾವಕಾಶ ಸಹ ನೀಡಿದೆ. ಆದರೆ, ಶೇ 80ರಷ್ಟು ಆಟೊಗಳಿಗೆ ಡಿಜಿಟಲ್‌ ಮೀಟರ್‌ ಅಳವಡಿಸಿಲ್ಲ.

ಪರ್ಮಿಟ್‌ ಹೊಂದಿರುವ ಆಟೊಗಳಲ್ಲಿ ಡಿಜಿಟಲ್‌ ಮೀಟರ್ ಅಳವಡಿಸಿದ್ದರೂ ಚಾಲಕರು ಅವುಗಳನ್ನು ಬಳಕೆ ಮಾಡುತ್ತಿಲ್ಲ. ಪ್ರಯಾಣಿಕರು ಮೀಟರ್‌ ಹಾಕುವಂತೆ ಒತ್ತಾಯಿಸಿದರೂ ಚಾಲಕರು ನಿರಾಕರಿಸಿ ಮನಬಂದಂತೆ ಹಣ ಪಡೆಯುತ್ತಿದ್ದಾರೆ. ನಗರದಲ್ಲಿ ಮುಂಗಡ ಪಾವತಿ (ಪ್ರಿಪೇಯ್ಡ್‌) ಆಟೊ ಸೇವೆ ಜಾರಿಯಾಗದಿರುವುದು ಆಟೊ ಚಾಲಕರಿಗೆ ವರದಾನವಾಗಿದೆ.

ಕಡತಕ್ಕೆ ಸೀಮಿತ: ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು ಪ್ರಯಾಣಿಕರ ಹಿತದೃಷ್ಟಿಯಿಂದ ಆಟೊ ಚಾಲಕರಿಗೆ ಕೆಲ ನಿಯಮಾವಳಿ ರೂಪಿಸಿದೆ. ಆದರೆ, ಈ ನಿಯಮಾವಳಿ ಕಡತಕ್ಕೆ ಸೀಮಿತವಾಗಿದೆ. ಆಟೊ ಚಾಲಕರು ಹಣದಾಸೆಗೆ ನಿಯಮ ಉಲ್ಲಂಘಿಸಿ 3ಕ್ಕೂ ಹೆಚ್ಚು ಪ್ರಯಾಣಿಕರನ್ನು ಕರೆದೊಯ್ಯುತ್ತಾರೆ. ಇದಕ್ಕೆ ಪ್ರತಿಯಾಗಿ ಪ್ರತಿ ಪ್ರಯಾಣಿಕನಿಗೆ ₹ 10ರಂತೆ ಹೆಚ್ಚುವರಿ ಹಣ ಪಡೆಯುತ್ತಿದ್ದಾರೆ.

ಹಗಲು ವೇಳೆಯಲ್ಲೇ ಚಾಲಕರು ಹೆಚ್ಚುವರಿ ಹಣಕ್ಕೆ ಪ್ರಯಾಣಿಕರನ್ನು ಪೀಡಿಸುವುದು ಸಾಮಾನ್ಯವಾಗಿದೆ. ಪ್ರಯಾಣಿಕರು ಕರೆದ ಸ್ಥಳಕ್ಕೆ ಬಾರದೆ ಸತಾಯಿಸುವ ಪ್ರವೃತ್ತಿ ಹೆಚ್ಚುತ್ತಿದೆ. ನಗರಕ್ಕೆ ಪರಿಚಿತರಲ್ಲದ ಹೊಸಬರು ಬಂದರೆ ಚಾಲಕರು ಅವರನ್ನು ಇಡೀ ಊರು ಸುತ್ತಿಸಿ ಹೆಚ್ಚಿನ ಹಣ ಪಡೆಯುವುದು ಮಾಮೂಲಾಗಿದೆ. ಮತ್ತೊಂದೆಡೆ ಪ್ರಯಾಣಿಕರ ಸುರಕ್ಷತೆ ನಿರ್ಲಕ್ಷಿಸಿ ಅತಿ ವೇಗದಲ್ಲಿ ವಾಹನ ಚಾಲನೆ ಮಾಡುತ್ತಿದ್ದಾರೆ. ಸಾಕಷ್ಟು ಚಾಲಕರು ಚಾಲನಾ ಪರವಾನಗಿ (ಡಿ.ಎಲ್‌) ಇಲ್ಲದೆ ಆಟೊ ಚಾಲನೆ ಮಾಡುತ್ತಿದ್ದಾರೆ.

ಅಕ್ರಮಕ್ಕೆ ಅವಕಾಶ: ಡಿಜಿಟಲ್‌ ಮೀಟರ್‌ ಅಳವಡಿಸದ, ದುಪ್ಪಟ್ಟು ದರ ಕೇಳುವ ಮತ್ತು ಪ್ರಯಾಣಿಕರನ್ನು ಶೋಷಿಸುವ ಆಟೊ ಚಾಲಕರ ಪತ್ತೆಗೆ ಆರ್‌ಟಿಒ ಕಚೇರಿ ಸಿಬ್ಬಂದಿ ಹಾಗೂ ಸಂಚಾರ ಪೊಲೀಸರು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿಲ್ಲ. ಬದಲಿಗೆ ಅಂತಹ ಆಟೊ ಚಾಲಕರಿಂದ ಲಂಚ ಪಡೆದು ಅಕ್ರಮಕ್ಕೆ ಅವಕಾಶ ನೀಡುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಪ್ರಮುಖ ರಸ್ತೆ, ವೃತ್ತ ಮತ್ತು ಜಂಕ್ಷನ್‌ಗಳಲ್ಲಿ ಕಾರ್ಯ ನಿರ್ವಹಿಸುವ ಸಂಚಾರ ಪೊಲೀಸರು ಡಿಜಿಟಲ್‌ ಮೀಟರ್‌ ಅಳವಡಿಸದ ಮತ್ತು ಸಂಚಾರ ನಿಯಮ ಉಲ್ಲಂಘಿಸುವ ಆಟೊ ಚಾಲಕರನ್ನು ತಡೆದು ವಾಹನ ಹಾಗೂ ದಾಖಲೆಪತ್ರ ಪರಿಶೀಲಿಸುವ ಪ್ರಯತ್ನ ಮಾಡುತ್ತಿಲ್ಲ. ಆರ್‌ಟಿಓ ಹಾಗೂ ಸಂಚಾರ ಪೊಲೀಸರ ಅದಕ್ಷತೆಯಿಂದ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT