ಗುರುವಾರ , ನವೆಂಬರ್ 21, 2019
20 °C
ಮುಖ್ಯಮಂತ್ರಿ ಹಿಂದಿ ಭಾಷೆಯ ಗುಲಾಮ: ಕರವೇ ಜಿಲ್ಲಾ ಅಧ್ಯಕ್ಷ ರಾಘವೇಂದ್ರ ಕಿಡಿ

ಕನ್ನಡ ಬಾವುಟಕ್ಕೆ ನಿಷೇಧ: ಖಂಡನೀಯ

Published:
Updated:

ಕೋಲಾರ: ‘ಹಿಂದಿ ಭಾಷೆಯ ಗುಲಾಮರಂತೆ ವರ್ತಿಸುತ್ತಿರುವ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶಾಲೆ ಹಾಗೂ ಸರ್ಕಾರಿ ಕಚೇರಿಗಳಲ್ಲಿ ಕನ್ನಡ ಬಾವುಟ ಹಾರಿಸುವುದಕ್ಕೆ ನಿಷೇಧ ಹೇರಿರುವುದು ಖಂಡನೀಯ’ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ.ರಾಘವೇಂದ್ರ ಕಿಡಿಕಾರಿದರು.

ಕರ್ನಾಟಕ ರಕ್ಷಣಾ ವೇದಿಕೆಯು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ತಾಲ್ಲೂಕಿನ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಕನ್ನಡ ರಥ ನಮ್ಮ ಪಥ’ ಶೀರ್ಷಿಕೆಯ ಕನ್ನಡ ತೇರಿನ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.

‘ರಾಷ್ಟ್ರ ಧ್ವಜದ ಬಗ್ಗೆ ಗೌರವವಿದೆ. ಕನ್ನಡ ಭಾಷೆ ಹಾಗೂ ನಾಡಿಗೆ ಪ್ರತ್ಯೇಕ ಬಾವುಟದ ಅಗತ್ಯವಿದ್ದು, ಬಾವುಟ ಪಡೆಯಲು ನಿರಂತರ ಹೋರಾಟ ನಡೆಸುತ್ತೇವೆ. ಡಿ.ವಿ.ಸದಾನಂದಗೌಡ ಅವರು ಮುಖ್ಯಮಂತ್ರಿಯಾಗಿದ್ದಾಗ ಶಾಲೆ ಮತ್ತು ಸರ್ಕಾರಿ ಕಚೇರಿಗಳಲ್ಲಿ ಕನ್ನಡ ಬಾವುಟ ಹಾರಿಸಲು ಅನುಮತಿ ನೀಡಿದ್ದರು. ಈಗ ಅವರದೇ ಬಿಜೆಪಿ ಸರ್ಕಾರ ಇದಕ್ಕೆ ಅಡ್ಡಿಪಡಿಸುತ್ತಿರುವುದು ಸರಿಯಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಸಚಿವ ಸುರೇಶ್‌ಕುಮಾರ್ ಅವರು ಶಾಲೆಗಳಲ್ಲಿ ಕನ್ನಡ ಭಾಷೆ ಕಡ್ಡಾಯ ಕಲಿಕೆಗೆ ಸೂಚನೆ ನೀಡಿರುವುದನ್ನು ಸ್ವಾಗತಿಸುತ್ತೇವೆ. ಶಾಲೆಗಳಲ್ಲಿ ಕನ್ನಡ ಬಾವುಟ ಹಾರಿಸಲು ಅನುಮತಿ ನೀಡಬೇಕು. ಕೈಗಾರಿಕಾ ಪ್ರದೇಶದಲ್ಲಿರುವ ಅನ್ಯಭಾಷಿಕರಿಗೆ ಕನ್ನಡದ ಸೊಬಗು ಪರಿಚಯಿಸಲು ಕನ್ನಡ ತೇರಿನ ಕಾರ್ಯಕ್ರಮ ರೂಪಿಸಿದ್ದೇವೆ. ಉದ್ಯೋಗಕ್ಕಾಗಿ ರಾಜ್ಯಕ್ಕೆ ಬಂದ ಮೇಲೆ ಅನ್ಯಭಾಷಿಕರೂ ಕನ್ನಡ ಕಲಿಯಬೇಕು’ ಎಂದರು.

‘ಕರ್ನಾಟಕದಲ್ಲಿ ಕನ್ನಡವೇ ಪ್ರಥಮ. ಕೇಂದ್ರ ಸರ್ಕಾರಿ ನೌಕರರು ರಾಜಮನ್ನಾರ್ ವರದಿ ಪಾಲಿಸಬೇಕು. ಸರೋಜಿನಿ ಮಹಿಷಿ ವರದಿ ಸಂಪೂರ್ಣ ಜಾರಿಯಾಗಬೇಕು. ಬ್ಯಾಂಕ್‌ಗಳಲ್ಲಿ ಕನ್ನಡ ಭಾಷೆ ಕಡ್ಡಾಯವಾಗಬೇಕು. ಸರ್ಕಾರಿ ಶಾಲೆಗಳು ಉಳಿಯಬೇಕು. ಪ್ರಾಥಮಿಕ ಶಿಕ್ಷಣ ಕನ್ನಡ ಮಾಧ್ಯಮದಲ್ಲಿ ಕಡ್ಡಾಯವಾಗಿ ಆಗಬೇಕು ಎಂಬುದು ಸಂಘಟನೆಯ ಹಕ್ಕೊತ್ತಾಯ’ ಎಂದು ಹೇಳಿದರು.

ತೆಲುಗು ಪ್ರಭಾವ: ‘ನಾನು ಈ ಹಿಂದೆ ಅವಿಭಜಿತ ಕೋಲಾರ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಿದ್ದೆ. ಜಿಲ್ಲೆಯಲ್ಲಿ ತೆಲುಗು ಭಾಷೆ ಪ್ರಭಾವ ಹೆಚ್ಚಿದ್ದರೂ ಕನ್ನಡಪರ ಹೋರಾಟಗಳು ಇಲ್ಲಿಂದಲೇ ಆರಂಭವಾಗುತ್ತವೆ. ಕಲಿಕೆಗೆ ಇಲ್ಲಿ ಕನ್ನಡವನ್ನೇ ಆಯ್ಕೆ ಮಾಡಿಕೊಳ್ಳುವುದು ಸ್ವಾಗತಾರ್ಹ’ ಎಂದು ನಿವೃತ್ತ ಐಎಎಸ್‌ ಅಧಿಕಾರಿ ಸೈಯದ್‌ ಜಮೀರ್ ಪಾಷಾ ಮೆಚ್ಚುಗೆ ವ್ಯಕ್ತಪಡಿಸಿದರು.

‘ಕದಂಬರು ಸ್ಥಾಪಿಸಿದ ಕನ್ನಡ ನಾಡಿನ ಹಿರಿಮೆ ಓದಿದ್ದೇವೆ. ಹರಿದು ಹಂಚಿ ಹೋಗಿದ್ದ ಕನ್ನಡು ನಾಡು ಒಂದಾಗಿದೆ. ನೆಲ, ಜಲ, ಭಾಷೆ ರಕ್ಷಣೆಗೆ ಪ್ರತಿಯೊಬ್ಬರೂ ದೃಢ ಸಂಕಲ್ಪ ಮಾಡಬೇಕು. ಇಲ್ಲದಿದ್ದರೆ ಕನ್ನಡ ಭಾಷೆಗೆ ದೊಡ್ಡ ಪೆಟ್ಟು ಬೀಳಲಿದೆ’ ಎಂದು ವೇಮಗಲ್ ಪೊಲೀಸ್‌ ಠಾಣೆ ಎಸ್‍ಐ ಕೇಶವಮೂರ್ತಿ ಆತಂಕ ವ್ಯಕ್ತಪಡಿಸಿದರು.

‘ಕನ್ನಡ ನಾಡನ್ನು ಆಳಿದ ಅನೇಕ ರಾಜರು ನಾಡಿಗಾಗಿ ಕೆಲಸ ಮಾಡಿದ್ದಾರೆ. ಇಂದು ಕನ್ನಡ ಉಳಿಸಲು ಹೋರಾಟ ನಡೆಸುವ ಪರಿಸ್ಥಿತಿ ಬಂದಿರುವುದು ದುರಂತ. ಕನ್ನಡ ಭಾಷೆಗೆ ಧಕ್ಕೆಯಾಗದಂತೆ ಸಂಕಲ್ಪ ಮಾಡೋಣ. ನಾಡಿಗೆ ಬರುವ ಅನ್ಯಭಾಷಿಕರಿಗೆ ಪ್ರೀತಿಯಿಂದ ಕನ್ನಡ ಕಲಿಸಬೇಕು’ ಎಂದು ಸಲಹೆ ನೀಡಿದರು.

ಹೋರಾಟಕ್ಕೆ ಕೈಜೋಡಿಸಿ: ‘ಕರ್ನಾಟಕ ರಕ್ಷಣಾ ವೇದಿಕೆಯು ಕನ್ನಡ ಭಾಷೆ, ನೆಲ, ಜಲ ರಕ್ಷಣೆಗೆ ಕಾವಲು ಪಡೆಯಂತೆ ಕೆಲಸ ಮಾಡುತ್ತಿದೆ. ಇಂತಹ ಸಂಘಟನೆಯ ಹೋರಾಟಕ್ಕೆ ಪ್ರತಿಯೊಬ್ಬರು ಬದ್ಧತೆಯಿಂದ ಕೈಜೋಡಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಎಸ್‌.ವೆಂಕಟೇಶ್‌ ಹೇಳಿದರು.

ನರಸಾಪುರ ಕೈಗಾರಿಕಾ ಪ್ರದೇಶದಿಂದ ಹೊರಟ ಕನ್ನಡ ತೇರಿನ ಮೆರವಣಿಗೆಯ ಜತೆ ಸಂಘಟನೆ ಕಾರ್ಯಕರ್ತರು ಬೈಕ್‌ ರ್‌್್ಯಾಲಿ ನಡೆಸಿದರು. ಜಿಲ್ಲಾ ಕೇಂದ್ರದ ಪ್ರಮುಖ ರಸ್ತೆಗಳಲ್ಲಿ ನಡೆದ ಮೆರವಣಿಗೆಯಲ್ಲಿ ಕಾರ್ಯಕರ್ತರು, ‘ಕನ್ನಡಕ್ಕಾಗಿ ನಾವು. ಕನ್ನಡ ನೆಲ, ಜಲ, ಭಾಷೆ ರಕ್ಷಣೆಗೆ ನಾವು ಸೈನಿಕರು’ ಎಂದು ಘೋಷಣೆ ಮೊಳಗಿಸಿ ಜನರಲ್ಲಿ ಜಾಗೃತಿ ಮೂಡಿಸಿದರು.

ಸಂಘಟನೆಯ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮುನಿರಾಜು, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಲತಾಬಾಯಿ ಮಾಡಿಕ್, ನರಸಾಪುರ ಹೋಬಳಿ ಘಟಕದ ಅಧ್ಯಕ್ಷ ನಟೇಶ್‌ಬಾಬು, ಮಾಲೂರು ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀನಿವಾಸ್, ಸದಸ್ಯರಾದ ಡಿ.ಕೆ.ಪ್ರಭಾಕರಗೌಡ, ಸುರೇಶ್, ಮೆಹಬೂಬ್, ನವೀನ್, ಶ್ರೀನಿವಾಸ್, ಮುರಳಿ, ವೆಂಕಟೇಶ್, ಲೋಕೇಶ್, ಶಿವು ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)