ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಗಾರಪೇಟೆ: ಸರ್ಕಾರಿ ಶಾಲೆಗಳಲ್ಲಿ ಕಾಯಂ ಶಿಕ್ಷಕರ ಕೊರತೆ

ಅತಿಥಿ ಶಿಕ್ಷಕರ ನೇಮಕ ವಿಳಂಬ, ಶಾಲಾ ಸ್ವಚ್ಛತೆಯೂ ಸವಾಲು
ಮಂಜುನಾಥ ಎಸ್.
Published 30 ಮೇ 2024, 6:11 IST
Last Updated 30 ಮೇ 2024, 6:11 IST
ಅಕ್ಷರ ಗಾತ್ರ

ಬಂಗಾರಪೇಟೆ: ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದಲ್ಲಿ ತಾಲ್ಲೂಕಿನ ಶಾಲೆಗಳ ಪ್ರಾರಂಭೋತ್ಸವಕ್ಕೆ ಭರದ ಸಿದ್ಧತೆ ನಡೆದಿದೆ. ಆದರೆ, ತಾಲ್ಲೂಕಿನ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಕಾಯಂ ಶಿಕ್ಷಕರಿಲ್ಲದೇ ಗ್ರಾಮೀಣ ಪ್ರದೇಶದ ಶಾಲೆಗಳು ಕಳೆಗುಂದಿವೆ.

ತಾಲ್ಲೂಕಿನಲ್ಲಿ ಒಟ್ಟು 20 ಸರ್ಕಾರಿ ಪ್ರೌಢಶಾಲೆಗಳು, 183 ಕಿರಿಯ, 67 ಹಿರಿಯ ಪ್ರಾಥಮಿಕ ಶಾಲೆಗಳಿವೆ. ಅದರಲ್ಲಿ 604 ಶಿಕ್ಷಕರು ಪ್ರಾಥಮಿಕ ಶಾಲೆಗಳಲ್ಲೂ, 139 ಶಿಕ್ಷಕರು ಪ್ರೌಢಶಾಲೆಗಳಲ್ಲೂ ಕಾರ್ಯ ನಿರ್ವಹಿಸುತ್ತಿದ್ದಾರೆ. ತಾಲ್ಲೂಕಿನ 16 ಸರ್ಕಾರಿ ಶಾಲೆಗಳಲ್ಲಿ ಕಾಯಂ ಶಿಕ್ಷಕರೇ ಇಲ್ಲ. ಹೀಗಾಗಿ ಆ ಶಾಲೆಗಳ ಪ್ರಾರಂಭೋತ್ಸವಕ್ಕೆ ಆರಂಭದಲ್ಲೇ ವಿಘ್ನ ಎದುರಾಗಿದೆ.

ಲೋಕಸಭೆ ಚುನಾವಣೆಯ ನೀತಿ ಸಂಹಿತೆ ಜಾರಿ ಇರುವ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಅತಿಥಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯೂ ವಿಳಂಬಗೊಂಡಿದೆ ಎನ್ನಲಾಗುತ್ತಿದೆ.

ಕಳೆದ ವರ್ಷದ ಶೈಕ್ಷಣಿಕ ಅವಧಿ ಪ್ರಾರಂಭಕ್ಕೂ ಮುನ್ನವೇ ಅತಿಥಿ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆ ಮುಕ್ತಾಯಗೊಂಡಿತ್ತು. ಬಂಗಾರಪೇಟೆಯಲ್ಲಿ ಒಟ್ಟು 136 ಅತಿಥಿ ಶಿಕ್ಷಕರನ್ನು ನೇಮಿಸಲಾಗಿತ್ತು. ಪ್ರಸ್ತುತ ಅಂದಾಜು 150 ಅತಿಥಿ ಶಿಕ್ಷಕರು ಅಗತ್ಯ ಇದ್ದು, ಶಿಕ್ಷಕರ ಕೊರತೆಯಿಂದ ಶೈಕ್ಷಣಿಕ ಅವಧಿಗೆ ಅಡೆತಡೆ ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ.

‘ಸರ್ಕಾರವೇ ಶಾಲೆಗಳ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದೆ. ಕೆಲ ಗೊಂದಲಗಳಿಂದಾಗಿ ಖಾಸಗಿ ಶಾಲೆಗಳಿಗೆ ಲಾಭವಾಗುತ್ತಿದೆ. ಮಾದರಿ ಶಾಲೆಯ ಭರವಸೆ ಹುಸಿಯಾಗಿದೆ. ಶಿಕ್ಷಕರಿಲ್ಲದೇ ಶಾಲೆ ಹೇಗೆ ತೆರೆಯಬೇಕು? ಒಬ್ಬಶಿಕ್ಷಕ ಎಲ್ಲ ವಿಷಯಗಳ ಪಾಠ ಮಾಡುವುದಾದರೂ ಹೇಗೆ? ಆರ್ಥಿಕವಾಗಿ ಹೊರೆಯಾದರೂ ಪರವಾಗಿಲ್ಲ ಎಂದೇ ಮಕ್ಕಳನ್ನು ಖಾಸಗಿ ಶಾಲೆಗೆ ಕಳುಹಿಸುವ ನಿರ್ಧಾರಿಸಿದ್ದೇನೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಪಾಲಕರೊಬ್ಬರು ಹೇಳಿದರು.

ಶಾಲೆ ಸ್ವಚ್ಛತೆಯೂ ಸವಾಲು: ಎರಡು ತಿಂಗಳಿನಿಂದ ಮುಚ್ಚಿರುವ ಸರ್ಕಾರಿ ಶಾಲೆಗಳ ಆವರಣ ಮತ್ತು ಕೊಠಡಿಗಳನ್ನು ಸ್ವಚ್ಛಗೊಳಿಸುವ ಸವಾಲು ಈಗ ಶಿಕ್ಷಕರಿಗೆ ಎದುರಾಗಿದೆ. ವಿದ್ಯಾರ್ಥಿಗಳನ್ನು ಸ್ವಚ್ಛತೆ ಕಾರ್ಯಕ್ಕೆ ಬಳಸಿದರೆ ಸಮಸ್ಯೆ ಎದುರಾಗಲಿದೆ. ಈ ಕಾರ್ಯಕ್ಕೆ ಪಾಲಕರೂ ಕೈಜೋಡಿಸುತ್ತಿಲ್ಲ. ಕಾರ್ಮಿಕರಿಂದ ಸ್ವಚ್ಛಗೊಳಿಸಲು ಹಣ ಇಲ್ಲ ಅಥವಾ ದುಬಾರಿ ಹಣ ತೆರಬೇಕಾದ ಕ್ಲಿಷ್ಟ ವಾತಾವರಣ ನಿರ್ಮಾಣವಾಗಿದೆ. ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳ ಮನವೊಲಿಸಿ ಶಾಲೆಗೆ ಕರೆತರುವ ಪ್ರಯತ್ನವೂ ನಡೆಯುತ್ತಿರುವುದರಿಂದ ಭಿನ್ನ ಸವಾಲು ನಿರ್ವಹಿಸುವ ಗೊಂದಲ ಏರ್ಪಟ್ಟಿದೆ ಎಂದು ತಾಲ್ಲೂಕಿನ ಶಿಕ್ಷಕರೊಬ್ಬರು ಅಳಲು ತೋಡಿಕೊಂಡರು.

ವಸತಿ ಶಾಲೆಗಳು: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ಸುಸಜ್ಜಿತವಾದ ಕಟ್ಟಡ ಮತ್ತು ಸೌಲಭ್ಯಗಳನ್ನು ಕಲ್ಪಿಸಿದ್ದಾರೆ. ಆದರೆ, ಶಿಕ್ಷಕರಿಲ್ಲದೇ ಗುಣಮಟ್ಟದ ಶಿಕ್ಷಣವನ್ನು ನೀಡಲು ಸಾಧ್ಯವಾಗುತ್ತಿಲ್ಲ. ಅತಿಥಿ ಶಿಕ್ಷಕರೇ ಆಸರೆಯಾಗಿದ್ದಾರೆ ಎಂದು ಪೋಷಕರು ಹೇಳಿದರು.

ಬಂಗಾರಪೇಟೆಯ ಸರ್ಕಾರಿ ಪ್ರೌಢಶಾಲೆ
ಬಂಗಾರಪೇಟೆಯ ಸರ್ಕಾರಿ ಪ್ರೌಢಶಾಲೆ

ಸರ್ಕಾರಿ ಶಾಲೆ ಮತ್ತು ಶೌಚಾಲಯಗಳನ್ನು ಯಾರು ಸ್ವಚ್ಛ ಮಾಡಬೇಕು ಎಂಬ ಗೊಂದಲವಿದೆ. ಈಗಾಗಲೇ ಸ್ವಚ್ಛತೆಗೂಳಿಸಲು ಪರ್ಯಾಯ ವ್ಯವಸ್ಥೆಯನ್ನು ಮಾಡಲು ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿದ್ದೇವೆ

-ಅಪ್ಪಯ್ಯ ಗೌಡ, ಅಧ್ಯಕ್ಷ ಜಿಲ್ಲಾ ಶಿಕ್ಷಕರ ಸಂಘ ಕೋಲಾರ

ಕೂಲಿ ಕಾರ್ಮಿಕರ ಮೂಲಕ ಸರ್ಕಾರಿ ಶಾಲೆಯನ್ನು ಸ್ವಚ್ಛಗೊಳಿಸಲು ಸೂಚಿಸಲಾಗಿದೆ. ಶಾಲೆಗಳಲ್ಲಿ ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳುವುದರ ಮೂಲಕ ಶಿಕ್ಷಕರ ಕೊರತೆಯನ್ನು ನಿವಾರಿಸಲಾಗುವುದು.

-ಸುಕನ್ಯಾ, ಕ್ಷೇತ್ರ ಶಿಕ್ಷಣಾಧಿಕಾರಿ ಬಂಗಾರಪೇಟೆ

ಶಿಕ್ಷಕರನ್ನು ಡೆಪ್ಯೂಟೇಷನ್‌ ಮೇಲೆ ಕಳುಹಿಸಿದರೆ ಸಮಸ್ಯೆ ಇತ್ಯರ್ಥವಾಗದು. ಬೋಧನೆಗೆ ತೊಂದರೆಯಾಗಲಿದೆ.

-ಹುಣಸನಹಳ್ಳಿ ವೆಂಕಟೇಶ್, ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಹುಣಸನಹಳ್ಳಿ ಸರ್ಕಾರಿ ಶಾಲೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT