ಭಾನುವಾರ, ಜನವರಿ 19, 2020
27 °C
ಆರು ಕಿಂಡಿಗಳ ಮೂಲಕ ದೇವರ ದರ್ಶನ ಇಲ್ಲಿನ ವಿಶೇಷ

ಕೆಜಿಎಫ್‌ನಲ್ಲಿದೆ ಭಕ್ತರ ಸೆಳೆಯುವ ಬಂಗಾರು ತಿರುಪತಿ

ಕೃಷ್ಣಮೂರ್ತಿ Updated:

ಅಕ್ಷರ ಗಾತ್ರ : | |

Prajavani

ಕೆಜಿಎಫ್: ಭೃಗು ಮುನಿಯು ಶಾಪ ವಿಮೋಚನೆಗಾಗಿ ತಪಸ್ಸು ಮಾಡಿದ್ದರೆನ್ನಲಾದ ಶೇಷಾಚಲ ಇಂದಿನ ಬಂಗಾರು ತಿರುಪತಿ (ಗುಟ್ಟಹಳ್ಳಿ) ಎಂದು ಜನಪ್ರಿಯವಾಗಿದೆ.

ತ್ರಿಮೂರ್ತಿಗಳನ್ನು ಪರೀಕ್ಷಿಸಲು ಹೋದ ಭೃಗು ಮಹರ್ಷಿಯು ಬ್ರಹ್ಮ ಮತ್ತು ಶಿವನಿಗೆ ಶಾಪವನ್ನಿತ್ತು, ನಂತರ ಮಹಾವಿಷ್ಣುವಿನ ವಕ್ಷ ಸ್ಥಳಕ್ಕೆ ಒದ್ದಾಗ, ಕುಪಿತಗೊಳ್ಳದ ವಿಷ್ಣು, ಉಪಾಯದಿಂದ ಮಹರ್ಷಿಗಳ ಕಾಲಿನಲ್ಲಿರುವ ಜ್ಞಾನ ನೇತ್ರವನ್ನು ಹಾಳು ಮಾಡುತ್ತಾನೆ. ಆಗ ತಪ್ಪಿನ ಅರಿವಾದ ಭೃಗು ಮಹರ್ಷಿ ಕ್ಷಮೆ ಕೇಳಿ, ಶೇಷಾಚಲದಲ್ಲಿ ತಪ್ಪಸ್ಸಿಗೆ ಕುಳಿತುಕೊಳ್ಳುತ್ತಾನೆ ಎಂಬ ಪುರಾಣಿಕೆ ಹಿನ್ನೆಲೆ ಈ ದೇವಸ್ಥಾನಕ್ಕೆ ಇದೆ.

ಆದ್ದರಿಂದಲೇ ಈ ದೇವಾಲಯದಲ್ಲಿನ ವೆಂಕಟ ರಮಣಸ್ವಾಮಿ ದರ್ಶನವನ್ನು ಭೃಗು ದರ್ಶನವೆಂದು ಕರೆಯುತ್ತಾರೆ. ಭೃಗು ಕಿಂಡಿ ಆರು ಕಿಂಡಿಗಳನ್ನು ಹೊಂದಿದ್ದು, ಆರು ದುರ್ಗುಣಗಳನ್ನು ಮರೆತು ಭಕ್ತಿಯಿಂದ ದೇವರ ದರ್ಶನ ಮಾಡಬೇಕೆಂಬುದು ಪ್ರತೀತಿ. ಎಲ್ಲೆಡೆ ದೇವರ ಮೂರ್ತಿಗೆ ನೇರ ದರ್ಶನವಿದ್ದರೆ, ಇಲ್ಲಿ ಮಾತ್ರ ಕಿಂಡಿ ಮೂಲಕವೇ ದರ್ಶನ ಇರುವುದು ವಿಶೇಷ.

ಹೆಚ್ಚು ಹಣ ವ್ಯಯಿಸಿ ತಿರುಪತಿಗೆ ಹೋಗಲಾರದವರು ಇಲ್ಲಿಯೇ ವೆಂಕಟೇಶ್ವರನ ದರ್ಶನ ಪಡೆಯುತ್ತಾರೆ. ಆದ್ದರಿಂದ ಇದನ್ನು ಬಡವರ ತಿರುಪತಿ ಎಂದೂ ಕರೆಯಲಾಗುತ್ತದೆ. ಚಿನ್ನದ ಗಣಿ ಪ್ರದೇಶದಲ್ಲಿರುವುದರಿಂದ ಬಂಗಾರು ತಿರುಪತಿ ಎಂಬ ಹೆಸರು ಸಹ ಬಂದಿದೆ. ವಾರ್ಷಿಕ ಸುಮಾರು ₹ 1.60 ಕೋಟಿ ಆದಾಯವಿದೆ.

ಇಲ್ಲಿನ ವಿಶೇಷವೆಂದರೆ ವೆಂಕಟೇಶ್ವರನ ಮೂರ್ತಿ ಒಂದೇ ಇರುವುದು. ಆದ ಕಾರಣ ಪದ್ಮಾವತಿ ದೇವರನ್ನು ಪಕ್ಕದ ಸಣ್ಣ ಗುಡ್ಡದ ಮೇಲೆ ಪ್ರತಿಷ್ಠಾಪಿಸಲಾಗಿದೆ. ಕಲ್ಯಾಣಿ ಬಳಿ ಶ್ರೀದೇವಿ ಸಮೇತನಾದ ವರಹಸ್ವಾಮಿ, ವೀರಾಂಜನೇಯಸ್ವಾಮಿ ಮತ್ತು ಪರಿವಾರ ದೇವತೆಯಾಗಿ ಗಣೇಶ, ನವಗ್ರಹ, ಗರುಡ, ನಾಗದೇವತೆ ಪ್ರತಿಷ್ಠಾಪಿಸಲಾಗಿದೆ.

ಹೆಚ್ಚಿದ ಭಕ್ತರ ಸಂಖ್ಯೆ

ಮಾಘ ಶುದ್ಧ ಹುಣ್ಣಿಮೆಯಂದು ಬ್ರಹ್ಮ ರಥೋತ್ಸವ ನಡೆಯುತ್ತದೆ. ಶ್ರಾವಣ ಮಾಸದಲ್ಲಿ ನಾಲ್ಕೂ ಶನಿವಾರಗಳು ಇಲ್ಲಿ ವಿಶೇಷ. ಜಾತ್ರೆ ಮತ್ತು ಪುಷ್ಕರಣಿಯಲ್ಲಿ ತೆಪ್ಪೋತ್ಸವ ನಡೆಯುತ್ತದೆ. ವೈಕುಂಠ ಏಕಾದಶಿಯಂದು ಸಹ ಸಾವಿರಾರು ಭಕ್ತರು ದೇವಾಲಯಕ್ಕೆ ಹಾಜರಾಗಿ, ಭಕ್ತಿಯನ್ನು ಸಮರ್ಪಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಜನವರಿ ಒಂದರಂದು ಸಹ ಭಕ್ತಾದಿಗಳ ಸಂಖ್ಯೆಯಲ್ಲಿ ಹೆಚ್ಚಳಾಗಿದೆ ಎನ್ನುತ್ತಾರೆ ಮುಜರಾಯಿ ಇಲಾಖೆ ಅಧಿಕಾರಿಗಳು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು