ಶನಿವಾರ, ಜನವರಿ 25, 2020
29 °C

ಬ್ಯಾಂಕ್ ಗೌರವ ಉಳಿಸಲು ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಮಹಿಳೆಯರು ಸ್ವಾವಲಂಭಿ ಬದುಕು ರೂಪಿಸಿಕೊಳ್ಳಲು ಕಾಯಕ ಯೋಜನೆ ಜಾರಿಗೆ ತಂದಿದ್ದು, ಇದರಡಿ ಸಾಲ ಪಡೆದುಕೊಂಡವರು ಪ್ರಮಾಣಿಕವಾಗಿ ಮರುಪಾವತಿ ಮಾಡಬೇಕು’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಸಲಹೆ ನೀಡಿದರು.

ತಾಲ್ಲೂಕಿನ ಚಿನ್ನಾಪುರ ಗ್ರಾಮದಲ್ಲಿ ಡಿಸಿಸಿ ಬ್ಯಾಂಕ್‌ವತಿಯಿಂದ ಮಹಿಳಾ ಸ್ವಸಹಾಯ ಸಂಘಗಳಿಗೆ ಶುಕ್ರವಾರ ಹಮ್ಮಿಕೊಂಡಿದ್ದ ಬಡವರ ಬಂಧು, ಕಾಯಕ ಯೋಜನೆಗಳಡಿ ಸಾಲದ ಚೆಕ್ ವಿತರಿಸಿ ಮಾತನಾಡಿ, ‘ಕಾಯಕ ಯೋಜನೆಯಡಿ ಗ್ರಾಮದ ಸ್ತ್ರೀಶಕ್ತಿ ಸಂಘಕ್ಕೆ ₨ 10 ಲಕ್ಷ ಸಾಲ ನೀಡುತ್ತಿದ್ದು, ಇದನ್ನು ಸದುದ್ದೇಶಕ್ಕೆ ಬಳಕೆ ಮಾಡಿಕೊಳ್ಳಬೇಕು’ ಎಂದು ತಿಳಿಸಿದರು.

‘ಡಿಸಿಸಿ ಬ್ಯಾಂಕ್ ಮಹಿಳೆಯರ ಪಾಲಿಗೆ ವರದಾನವಾಗಿದೆ. ಬಡವರ ಬಂಧು, ಕಾಯಕ ಯೋಜನೆಗಳ ಮೂಲಕ ಸ್ವಾಭಿಮಾನಿ ಬದುಕು ರೂಪಿಸಿಕೊಳ್ಳಲು ಪ್ರತಿ ಸಂಘಕ್ಕೆ ₨ ೧೦ ಲಕ್ಷ ನೀಡಲಾಗುತ್ತಿದೆ. ಇದನ್ನು ಪ್ರಮಾಣಿಕವಾಗಿ ಮರುಪಾವತಿ ಮಾಡಿ ನಂಬಿಕೆ ಉಳಿಸಿಕೊಳ್ಳಬೇಕು’ ಎಂದರು.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಮಾತನಾಡಿ, ‘ಗ್ರಾಮದಲ್ಲಿ ಶೇ.೮೦ರಷ್ಟು ದಲಿತ ಸಮುದಾಯದ ತಾಯಂದಿರೇ ಇದ್ದು, ಅನಕ್ಷರ ಸಸಂಖ್ಯೆಯೂ ಹೆಚ್ಚಿದೆ. ಆದರೆ ಸಾಲ ಮರುಪಾವತಿಯಲ್ಲಿನ ಇವರ ಪ್ರಾಮಾಣಿಕತೆ ಜಿಲ್ಲೆಗೆ ಮಾದರಿಯಾಗಿದೆ’ ಎಂದು ಶ್ಲಾಘಿಸಿದರು.

‘ವಾರ್ಷಿಕವಾಗಿ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಲಾಗುತ್ತಿದ್ದು, ನೀವು ಪಡೆದುಕೊಂಡಿರುವ ಶೇ.50ರಷ್ಟು ದುಡ್ಡಿಗೆ ಮಾತ್ರ ಬಡ್ಡಿ ಪಾವತಿ ಮಾಡಬೇಕು, ಸಾಲದ ಕಂತುಗಳನ್ನು ಸಮಯಕ್ಕೆ ಸರಿಯಾಗಿ ಪಾವತಿ ಮಾಡಿದರೆ ಸಾಲ ತೀರಿಸಲು ಸುಲಭವಾಗುತ್ತದೆ’ ಎಂದು ಹೇಳಿದರು.

ಟಿಎಪಿಸಿಎಂಎಸ್ ಅಧ್ಯಕ್ಷ ಸೋಮಣ್ಣ ಮಾತನಾಡಿ, ‘ಪಡೆದುಕೊಂಡಿರುವ ಸಾಲವನ್ನು ಹೈನೋದ್ಯಮಕ್ಕೆ ಬಳಕೆ ಮಾಡಿಕೊಳ್ಳಬೇಕು. ಇದರಿಂದ ಹಾಲು ಉತ್ಪಾದನೆ ಹೆಚ್ಚಿಸಿಕೊಂಡು ಆರ್ಥಿಕವಾಗಿ ಸಲಬರಾಗಲು ಸಹಕಾರಿಯಾಗುತ್ತದೆ’ ಎಂದು ತಿಳಿಸಿದರು.

ಗ್ರಾಮದ ೪ ಮಹಿಳಾ ಸಂಘಗಳಿಗೆ ₨ ೪೦ ಲಕ್ಷ ಚೆಕ್ ವಿತರಿಸಲಾಯಿತು. ಬ್ಯಾಂಕಿನ ನಿರ್ದೇಶಕ ಎಂ.ಎಲ್.ಅನಿಲ್ ಕುಮಾರ್, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ರಮೇಶ್, ಅಣ್ಣಿಹಳ್ಳಿ ಎಸ್‌ಎಫ್ ಸಿಎಸ್ ಉಪಾಧ್ಯಕ್ಷ ನಾಗರಾಜ್, ಗ್ರಾ.ಪಂ ಮಾಜಿ ಅಧ್ಯಕ್ಷ ಮಾರ್ಕೋಂಡಪ್ಪ, ಸದಸ್ಯೆ ಲಕ್ಷಮ್ಮ ಹಾಜರಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು