ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಮಾಂಸ ಪ್ರಿಯರಿಂದ ಕದ್ದು ಮುಚ್ಚಿ ಬಾವಲಿ ಬೇಟೆ

7

ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಮಾಂಸ ಪ್ರಿಯರಿಂದ ಕದ್ದು ಮುಚ್ಚಿ ಬಾವಲಿ ಬೇಟೆ

Published:
Updated:
Deccan Herald

ಬಾವಲಿ ಮಾಂಸ ಪ್ರಿಯರು ಕದ್ದು ಮುಚ್ಚಿ ಇವುಗಳನ್ನು ಬೇಟೆ ಆಡುತ್ತಿರುವುದರಿಂದ ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಬಾವಲಿಗಳು ಹೆಚ್ಚು ಕಣ್ಮರೆ ಆಗುತ್ತಿವೆ.

ಅತ್ತಿ ಹಣ್ಣು ಮರಗಳಲ್ಲಿ ಕಾಣಿಸಿಕೊಂಡರೆ ಬಾವಲಿ ಬೇಟೆಗಾರರಿಗೆ ಸುಗ್ಗಿ. ಎತ್ತರವಾದ ಅತ್ತಿ ಮರದಲ್ಲಿರುವ ಬಾವಲಿಗಳನ್ನು ಬಲಿಗೆ ಬೀಳಿಸುವರು. ಕೆಲವರು ಬಾಯಿ ಆಹಾರಕ್ಕಾಗಿ ಬೇಟೆಯಾಡಿದರೆ, ಇನ್ನೂ ಕೆಲವರು ಮಾರಾಟ ಮಾಡಲು ಬೇಟೆಯಾಡುವರು.  

ಹೊರ ರಾಜ್ಯಗಳಿಂದ ಬಂದು ಇಲ್ಲಿ ನೆಲೆಸಿರುವ ಕೆಲವು ಕಾರ್ಮಿಕರು ಹೆಚ್ಚಾಗಿ ಬಾವಲಿ ಬೇಟೆಯಾಡುವರು. ಅವರು ಬಾವಲಿ ಬೇಟೆಯಲ್ಲಿ ಪರಿಣತರು. ರಾತ್ರಿ ಅತ್ತಿ ಮರದ ಸುತ್ತ ಇತರ ಮರಗಳನ್ನು ಆಧಾರವಾಗಿ ಬಳಸಿಕೊಂಡು ಎತ್ತರವಾಗಿ ಬಲೆ ಕಟ್ಟುತ್ತಾರೆ. ಕತ್ತಲಲ್ಲಿ ಆಹಾರ ಹುಡುಕಿ ಬರುವ ಬಾವಲಿಗಳು ಬಲೆಯಲ್ಲಿ ಸಿಕ್ಕಿ ಒದ್ದಾಡುತ್ತವೆ. ಚೀರಾಟ ಕೇಳಿಸುತ್ತಿದ್ದಂತೆ, ಬೇಟೆಗಾರರು ಅವುಗಳನ್ನು ಕೊಲ್ಲುವರು.

ಬಾವಲಿ ಮಾಂಸ ಹೆಚ್ಚು ರುಚಿಕರ. ಜೊತೆಗೆ ನಾಟಿ ಔಷಧ ತಯಾರಿಕೆಯಲ್ಲಿ ಬಳಸುವರು. ಆದ ಕಾರಣ ಬಾವಲಿಗೆ ಹೆಚ್ಚಿನ ಬೇಡಿಕೆ ಇದೆ.

ಶ್ರೀನಿವಾಸಪುರದ ಪೊಲೀಸ್‌ ಠಾಣೆ ಸಮೀಪ ಹಾಗೂ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಬಳಿಯ ಎತ್ತರವಾದ ಮರಗಳಲ್ಲಿ ಹಲವು ದಶಕಗಳಿಂದ ಸಾವಿರಾರು ಬಾವಲಿಗಳು ಮನೆ ಮಾಡಿಕೊಂಡಿವೆ. ಕತ್ತಲಾಗುತ್ತಿದ್ದಂತೆ ಮೇವು ಹುಡುಕಿ ಹೊರಡುವ ಅವು, ಬೆಳಗಾಗುವುದರೊಳಗೆ ಬಂದು ಮರದ ಕೊಂಬೆ, ರೆಂಬೆಗಳಿಗೆ ತಲೆಕೆಳಗಾಗಿ ಜೋತು ಬೀಳುತ್ತವೆ.

ಮೇವಿಗಾಗಿ ಹೋದ ಎಲ್ಲ ಬಾವಲಿಗಳೂ ಕ್ಷೇಮವಾಗಿ ತಮ್ಮ ನೆಲೆಗೆ ಹಿಂದಿರುಗುತ್ತವೆ ಎಂದು ಹೇಳಲಾಗದು. ಎಷ್ಟು ಬಾವಲಿಗಳು ಬೇಟೆಗಾರರ ಪಾಲಾಗಿವೆ ಎಂಬುದೂ ತಿಳಿಯುವುದಿಲ್ಲ. 

ಗಾಢ ಕತ್ತಲೆಯಲ್ಲಿ ಹಾರಾಡುವಾಗ ಎದುರಿಗೆ ಸಿಗುವ ಮರ, ಬೆಟ್ಟ, ಗುಡ್ಡಗಳಿಗೆ ತಾಕದಂತೆ ವಿಶೇಷ ಎಚ್ಚರಿಕೆ ವಹಿಸುವ ಬಾವಲಿಗಳು ಬಲೆಗೆ ಬೀಳುವುದು ಆಶ್ಚರ್ಯದ ಸಂಗತಿ. ಇದು ಬಾವಲಿಗಳ ವಿಶೇಷ ನಡವಳಿಕೆ ಬಗ್ಗೆ ಈವರೆಗೆ ಕೈಗೊಳ್ಳಲಾಗಿರುವ ಎಲ್ಲ ಸಂಶೋಧನೆಗಳಿಗೂ ಸವಾಲಾಗಿದೆ.

ಇನ್ನು ಸ್ಥಳೀಯವಾಗಿ ‘ಜಿಬುಟ’ ಎಂದು ಕರೆಯುವ ಪುಟ್ಟ ಬಾವಲಿಗಳು ಹಳೇ ಮನೆಗಳ ಬೋದಿಗೆ, ಹಳೇ ಬಾವಿ, ಬಳಕೆಯಿಂದ ದೂರ ಉಳಿದ ಅರವಟ್ಟಿಗೆಗಳಲ್ಲಿ ವಾಸಿಸುತ್ತವೆ. ಈ ಬಾವಲಿಗಳಿಂದ ಕೆಲವು ನಾಟಿ ವೈದ್ಯರು, ಮಕ್ಕಳ ಅಪೌಷ್ಟಿಕತೆ ನಿವಾರಣೆಗೆ ಔಷಧ ಮಾಡಿಕೊಡುತ್ತಾರೆ. ಕುದಿಯುವ ಎಣ್ಣೆಯಲ್ಲಿ ಈ ಹೆಬ್ಬೆರಳು ಗಾತ್ರದ ಬಾವಲಿಯನ್ನು ಜೀವಂತ ಮುಳುಗಿಸಿ ಬೇಯಿಸುತ್ತಾರೆ.

ಬಾವಲಿಯನ್ನು ‘ಫ್ಲೈಯಿಂಗ್‌ ಫಾಕ್ಸ್‌’ (ಹಾಡುವ ನರಿ), ‘ಹಾರಾಟುವ ಸಸ್ತನಿ’ ಎಂದು ಕರೆಯುವರು. ಕಾಲ ಕಾಲಕ್ಕೆ ಸಿಗುವ ಹಣ್ಣುಗಳು ಹಾಗೂ ನಿಶಾಚರ ಕೀಟಗಳನ್ನು ತಿಂದು ಬದುಕುವ ಬಾವಲಿಗಳು ಹಿಂಡು ಹಿಂಡಾಗಿ ತಲೆಕೆಳಗಾಗಿ ಕೊಂಬೆಗಳಿಗೆ ಜೋತು ಬಿದ್ದಿರುತ್ತವೆ.

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !