ಬೆಸ್ಕಾಂ ಸಿಬ್ಬಂದಿ ಮೇಲೆ ಹಲ್ಲೆ: ಧರಣಿ

7

ಬೆಸ್ಕಾಂ ಸಿಬ್ಬಂದಿ ಮೇಲೆ ಹಲ್ಲೆ: ಧರಣಿ

Published:
Updated:
Deccan Herald

ಕೋಲಾರ: ಇಲ್ಲಿನ ಕುತುಬ್‌ ಗೋರಿ ಮೊಹಲ್ಲಾದ ಮನೆಗಳ ವಿದ್ಯುತ್‌ ಬಿಲ್‌ ವಸೂಲಿ ಮಾಡಲು ಹೋಗಿದ್ದ ಬೆಸ್ಕಾಂ ಸಿಬ್ಬಂದಿ ಮೇಲೆ ಸ್ಥಳೀಯರು ಶುಕ್ರವಾರ ಹಲ್ಲೆ ನಡೆಸಿದ್ದು, ಇದರಿಂದ ಆಕ್ರೋಶಗೊಂಡ ಸಿಬ್ಬಂದಿಯು ಕರ್ತವ್ಯ ಬಹಿಷ್ಕರಿಸಿ ಬೆಸ್ಕಾಂ ಕಚೇರಿ ಎದುರು ದಿಢೀರ್‌ ಧರಣಿ ಮಾಡಿದರು.

ಕುತುಬ್‌ ಗೋರಿ ಮೊಹಲ್ಲಾ ಬಡಾವಣೆಯ ಹಲವು ಮನೆಗಳ ಮಾಲೀಕರು ವಿದ್ಯುತ್‌ ಬಿಲ್ ಪಾವತಿಸಿರಲಿಲ್ಲ. ಹೀಗಾಗಿ ಬೆಸ್ಕಾಂ ಸಹಾಯಕ ಎಂಜಿನಿಯರ್‌ ಏಳುಮಲೈ, ಮಾಪಕ ಓದುಗ ಚಲಪತಿ ಹಾಗೂ ಸಿಬ್ಬಂದಿಯು ಮಧ್ಯಾಹ್ನ ಮನೆಗಳ ಬಳಿ ಹೋಗಿ ವಿದ್ಯುತ್‌ ಬಿಲ್‌ ಕಟ್ಟುವಂತೆ ಕೇಳಿದ್ದಾರೆ.

ಆದರೆ, ಮನೆ ಮಾಲೀಕರು ಬಿಲ್‌ ಪಾವತಿಸಲು ನಿರಾಕರಿಸಿದ್ದಾರೆ. ಹೀಗಾಗಿ ಸಿಬ್ಬಂದಿಯು ವಿದ್ಯುತ್‌ ಸಂಪರ್ಕ ಕಡಿತಗೊಳಿಸಲು ಮುಂದಾದಾಗ ಮಾಲೀಕರು ಮತ್ತು ಸಿಬ್ಬಂದಿ ನಡುವೆ ವಾಗ್ವಾದ ನಡೆದಿದೆ. ವಾಗ್ವಾದ ವಿಕೋಪಕ್ಕೆ ತಿರುಗಿ ಸ್ಥಳೀಯರು ಏಳುಮಲೈ ಮತ್ತು ಚಲಪತಿ ಮೇಲೆ ಹಲ್ಲೆ ನಡೆಸಿದ್ದಾರೆ.

ಬಂಧನಕ್ಕೆ ಒತ್ತಾಯ: ಬಳಿಕ ಬೆಸ್ಕಾಂ ಸಿಬ್ಬಂದಿಯು ದಿಢೀರ್‌ ಧರಣಿ ನಡೆಸಿ, ‘ಹಲ್ಲೆ ಆರೋಪಿಗಳನ್ನು ಬಂಧಿಸಬೇಕು ಮತ್ತು ಸಿಬ್ಬಂದಿಗೆ ರಕ್ಷಣೆ ನೀಡಬೇಕು’ ಎಂದು ಒತ್ತಾಯಿಸಿದರು.

‘ಸಿಬ್ಬಂದಿ ಮೇಲೆ ಇದೇ ರೀತಿ ನಾಲ್ಕೈದು ಬಾರಿ ಹಲ್ಲೆ ನಡೆದಿದೆ. ಆದರೆ, ಹಲ್ಲೆ ನಡೆಸಿದವರಿಗೆ ಯಾವುದೇ ಶಿಕ್ಷೆಯಾಗಿಲ್ಲ. ಸಿಬ್ಬಂದಿ ಕಾನೂನು ರೀತಿ ಕರ್ತವ್ಯ ನಿರ್ವಹಿಸುವುದೇ ಕಷ್ಟವಾಗಿದೆ. ಪೊಲೀಸರು ಆರೋಪಿಗಳ ಮೇಲೆ ಪ್ರಕರಣ ದಾಖಲಿಸಲು ಹಿಂದೇಟು ಹಾಕುತ್ತಿದ್ದಾರೆ’ ಎಂದು ದೂರಿದರು.

‘ಕುತುಬ್‌ ಗೋರಿ ಮೊಹಲ್ಲಾ ಮತ್ತು ಫೂಲ್‌ಷಾ ಮೊಹಲ್ಲಾ ಬಡಾವಣೆಯ ಬಹುಪಾಲು ಮನೆಗಳ ಮಾಲೀಕರು ಐದಾರು ತಿಂಗಳಿಂದ ವಿದ್ಯುತ್‌ ಬಿಲ್‌ ಕಟ್ಟಿಲ್ಲ. ಬಿಲ್‌ ಕೇಳಿದರೆ ಬೆದರಿಕೆ ಹಾಕುತ್ತಾರೆ. ಬಾಕಿ ಬಿಲ್‌ ವಸೂಲಿ ಮಾಡದಿದ್ದರೆ ಅಧಿಕಾರಿಗಳು ಪ್ರಶ್ನೆ ಮಾಡುತ್ತಾರೆ’ ಎಂದು ಅಳಲು ತೋಡಿಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !