ತ್ರಿವಿಧ ದಾಸೋಹಿಯ ಜನ್ಮ ದಿನಾಚರಣೆ

ಬುಧವಾರ, ಏಪ್ರಿಲ್ 24, 2019
27 °C
ಗಣ್ಯರಿಂದ ಶಿವಕುಮಾರ ಸ್ವಾಮೀಜಿಯ ಸ್ಮರಣೆ

ತ್ರಿವಿಧ ದಾಸೋಹಿಯ ಜನ್ಮ ದಿನಾಚರಣೆ

Published:
Updated:
Prajavani

ಕೋಲಾರ: ನಾಡು ಕಂಡ ಮಹಾನ್ ಮಾನವತಾವಾದಿ, ತ್ರಿವಿಧ ದಾಸೋಹಿ, ನಡೆದಾಡುವ ದೇವರು ಎಂದೇ ಖ್ಯಾತರಾಗಿದ್ದ ದಿವಂಗತ ಶಿವಕುಮಾರ ಸ್ವಾಮೀಜಿಯವರ 112ನೇ ವರ್ಷದ ಹುಟ್ಟು ಹಬ್ಬವನ್ನು ನಗರದಲ್ಲಿ ಸೋಮವಾರ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

‘7 ದಶಕಕ್ಕೂ ಹೆಚ್ಚು ಕಾಲ ಸಮಾಜದಲ್ಲಿ ಬಡವರು, ದೀನ ದಲಿತರಿಗೆ ಅಕ್ಷರ, ಆಶ್ರಯ, ಅನ್ನ ನೀಡಿದ ಶಿವಕುಮಾರ ಸ್ವಾಮೀಜಿಯವರ ಜನ್ಮ ದಿನವನ್ನು ನಾಡಿನೆಲ್ಲೆಡೆ ಆಚರಿಸಲಾಗುತ್ತಿದೆ’ ಎಂದು ತಾಲ್ಲೂಕು ಶರಣ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮರಿಸ್ವಾಮಿ ಹೇಳಿದರು.

‘ಕಾಯಕದಲ್ಲಿ ಕೈಲಾಸ ಕಾಣುವ ಮೂಲಕ ದಣಿವರಿಯದೆ ಸೇವೆ ಸಲ್ಲಿಸಿದ ಶಿವಕುಮಾರ ಸ್ವಾಮೀಜಿಯವರು ಇಹಲೋಕ ತ್ಯಜಿಸಿದ್ದರೂ ಅವರ ತತ್ವಾದರ್ಶ ಸಮಾಜಕ್ಕೆ ಆದರ್ಶ. ಸ್ವಾಮೀಜಿಯು ಬಸವಣ್ಣರ ಸಿದ್ಧಾಂತ ಹಾಗೂ ಆದರ್ಶಗಳನ್ನು ಸಾಕಾರಗೊಳಿಸಿದರು. 12ನೇ ಶತಮಾನದಲ್ಲಿ ಬಸವ ಕಲ್ಯಾಣದಲ್ಲಿ ನಡೆದ ಸಾಮಾಜಿಕ ಮತ್ತು ಧಾರ್ಮಿಕ ಕ್ರಾಂತಿ, ದಾಸೋಹದ ವೈಭವವನ್ನು ಸಿದ್ಧಗಂಗಾ ಮಠದಲ್ಲಿ ಮತ್ತೆ ನೋಡುವ ಭಾಗ್ಯ ಕರುಣಿಸಿದರು’ ಎಂದು ಸ್ಮರಿಸಿದರು.

‘ಸ್ವಾಮೀಜಿಯು ಧರ್ಮ, ಜಾತಿ, ವರ್ಣ ಭೇದವಿಲ್ಲದೆ ಲಕ್ಷಾಂತರ ಮಂದಿಗೆ ಶಿಕ್ಷಣ ನೀಡುವ ಮೂಲಕ ಜ್ಞಾನದ ಬೆಳಕು ತೋರಿದರು. ಸಿದ್ಧಗಂಗಾ ಮಠದಲ್ಲಿ ಶಿಕ್ಷಣ ಪಡೆದ ಬಹುತೇಕ ಮಂದಿ ಉನ್ನತ ಸ್ಥಾನಗಳಲಿದ್ದು, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಕಾರ್ಯದರ್ಶಿ ವೆಂಕಟಸ್ವಾಮಿ ಹೇಳಿದರು.

ದಾರಿ ದೀಪ: ‘ಸ್ವಾಮೀಜಿಯು 1941ರಲ್ಲಿ ಸಿದ್ಧಗಂಗಾ ಮಠಕ್ಕೆ ಆಗಮಿಸಿ ನಿರಂತರವಾಗಿ 78 ವರ್ಷ ಕಾಲ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಎಲ್ಲರಿಗೂ ದಾರಿ ದೀಪವಾದರು. ವಿವಿಧ ಸ್ತರದ ಬಡ ಜನರನ್ನು ಸಮಾಜದ ಮುಖ್ಯವಾಹಿನಿಗೆ ತಂದರು. ಸಿದ್ಧಗಂಗಾ ಮಠವು ಇತರ ಮಠಗಳಿಗೆ ಮಾದರಿಯಾಗಿದ್ದು, ಸಮಾಜದ ಏಳಿಗೆಗೆ ಶ್ರಮಿಸುವುದಕ್ಕೆ ಶ್ರೀಗಳೇ ಪ್ರೇರಣೆ’ ಎಂದು ಬಣ್ಣಿಸಿದರು.

‘ಸಿದ್ಧಗಂಗಾ ಮಠವು ಭಾರತೀಯ ಸಂಸ್ಕೃತಿಯ ಸಾಕಾರ ಕೇಂದ್ರವಾಗಿದೆ. ಸಕಲರಿಗೂ ಲೇಸು ಬಯಸುವ ಶರಣ ಸಂದೇಶ ಸಾರ್ಥಕಗೊಳಿಸಿದೆ. ಸ್ವಾಮೀಜಿಗೆ ಭಾರತರತ್ನ ಪ್ರಶಸ್ತಿ ನೀಡಬೇಕೆಂಬುದು ನಾಡಿನ ಜನರ ಒತ್ತಾಸೆಯಾಗಿತ್ತು. ಆದರೆ, ಅದು ಸಾಧ್ಯವಾಗಲಿಲ್ಲ’ ಎಂದು ಗೋಕುಲ ಕಾಲೇಜು ಪ್ರಾಂಶುಪಾಲ ಮಹೇಶ್ ವಿಷಾದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !