ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಪ್ರತಿಭಟನೆ

ಕೋಲಾರ: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ದಲಿತರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಇಲ್ಲಿ ಬುಧವಾರ ಪ್ರತಿಭಟನೆ ಮಾಡಿದರು.
ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ವೃತ್ತದಲ್ಲಿ ಸಿದ್ದರಾಮಯ್ಯರ ಪ್ರತಿಕೃತಿ ದಹಿಸಿದ ಪ್ರತಿಭಟನಾಕಾರರು ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
‘ಸಿದ್ದರಾಮಯ್ಯ ಅವರು ಇತ್ತೀಚೆಗೆ ಸಿಂದಗಿಯಲ್ಲಿ ನಡೆದ ಮಾದಿಗ ದಂಡೋರ ಸಭೆಯಲ್ಲಿ ಕೆಲ ದಲಿತ ನಾಯಕರು ಹೊಟ್ಟೆಪಾಡಿಗಾಗಿ ಬಿಜೆಪಿಗೆ ಸೇರಿದ್ದು, ಅಂತಹ ನಾಯಕರಿಂದ ದಲಿತರಿಗೆ ಯಾವುದೇ ಅನುಕೂಲವಾಗಲ್ಲ ಎಂದು ಮಾತನಾಡಿದ್ದಾರೆ. ಸಿದ್ದರಾಮಯ್ಯ ಅವರಿಗೆ ದಲಿತರ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ’ ಎಂದು ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಓಂಶಕ್ತಿ ಚಲಪತಿ ಕಿಡಿಕಾರಿದರು.
‘ಸಿದ್ದರಾಮಯ್ಯ ಅವರು ದಲಿತ ಸಮುದಾಯದ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ. ಅವರ ಹೇಳಿಕೆಯಿಂದ ದಲಿತ ಸಮುದಾಯಕ್ಕೆ ನೋವಾಗಿದೆ. ವಿಪಕ್ಷ ನಾಯಕರಾಗಿರುವ ಅವರು ತಮ್ಮ ಸ್ಥಾನದ ಘನತೆ ಮರೆತು ಬೇಜವಾಬ್ದಾರಿ ಹೇಳಿಕೆ ನೀಡಿರುವುದು ಶೋಭೆಯಲ್ಲ. ಅವರ ಹೇಳಿಕೆಯು ಕಾಂಗ್ರೆಸ್‌ನ ದಲಿತ ವಿರೋಧಿ ಮನಸ್ಥಿತಿಯ ಸಂಕೇತ’ ಎಂದು ದೂರಿದರು.
‘ಸಿದ್ದರಾಮಯ್ಯ ಅವರು ತಮ್ಮ ತಪ್ಪು ಅರಿತು ಬಹಿರಂಗವಾಗಿ ದಲಿತ ಸಮುದಾಯದ ಕ್ಷಮೆ ಯಾಚಿಸಬೇಕು. ಇಲ್ಲವಾದರೆ ಅವರ ವಿರುದ್ಧ ರಾಜ್ಯದೆಲ್ಲೆಡೆ ತೀವ್ರ ಹೋರಾಟ ನಡೆಸುತ್ತೇವೆ’ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಬಿಜೆಪಿ ಮಹಿಳಾ ಘಟಕದ ಉಪಾಧ್ಯಕ್ಷೆ ಶ್ರೀದೇವಿ, ಜಿಲ್ಲಾ ಎಸ್‌ಸಿ ಘಟಕದ ಅಧ್ಯಕ್ಷ ಅಂಬರೀಶ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಬಾಲಾಜಿ, ನಗರ ಘಟಕದ ಅಧ್ಯಕ್ಷ ತಿಮ್ಮರಾಯಪ್ಪ, ಪಕ್ಷದ ಮುಖಂಡರಾದ ಮಹೇಶ್, ವಿಜಯ್‌ಕುಮಾರ್, ವೆಂಕಟೇಶ್, ನವೀನ್, ಅರುಣಮ್ಮ, ಮಮತಾ ಪಾಲ್ಗೊಂಡರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.