ಗುರುವಾರ , ಜೂನ್ 30, 2022
27 °C
ಮಾನಸಿಕ ಆರೋಗ್ಯ ಅತ್ಯಗತ್ಯ: ಡಿಎಚ್‌ಒ ಜಗದೀಶ್‌ ಹೇಳಿಕೆ

ದೇಹ–ಮನಸ್ಸು ನಾಣ್ಯದ ಎರಡು ಮುಖ: ಡಿಎಚ್‌ಒ ಜಗದೀಶ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಮನುಷ್ಯನಿಗೆ ಸ್ಕಿಜೋಫ್ರೇನಿಯ (ಚಿತ್ತ ವಿಕಲತೆ) ಒಂದು ರೋಗವಾಗಿದ್ದು, ಸಕಾಲಕ್ಕೆ ಸರಿಯಾದ ಚಿಕಿತ್ಸೆ ನೀಡುವುದರಿಂದ ರೋಗ ಗುಣಪಡಿಸಬಹುದು‘ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಗದೀಶ್ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಇಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ಸ್ಕಿಜೋಫ್ರೇನಿಯಾ (ಚಿತ್ತ ವಿಕಲತೆ) ದಿನಾಚರಣೆ ಉದ್ಘಾಟಿಸಿ ಮಾತನಾಡಿ, ‘ಮನುಷ್ಯನಿಗೆ ಶಾರೀರಿಕ ಆರೋಗ್ಯದಂತೆಯೇ ಮಾನಸಿಕ ಆರೋಗ್ಯವು ಮುಖ್ಯ. ದೇಹ ಮತ್ತು ಮನಸ್ಸು ನಾಣ್ಯದ ಎರಡು ಮುಖಗಳಿದ್ದಂತೆ. ಈ ಎರಡೂ ಆರೋಗ್ಯವಾಗಿದ್ದಾಗ ಮಾತ್ರ ಮನುಷ್ಯನ ಜೀವನ ಅರ್ಥಪೂರ್ಣ’ ಎಂದರು.

‘ಜೀವನಕ್ಕೆ ನೆಲೆ-ಬೆಲೆ ನೀಡುವ ಮಾನಸಿಕ ಆರೋಗ್ಯ ಅತ್ಯಗತ್ಯವಾಗಿದ್ದು, ಸದೃಢ ಬದುಕು ಕಟ್ಟಿಕೊಳ್ಳಲು ಮುಖ್ಯವಾಗಿದೆ. ಮನಸ್ಸು ಮನುಷ್ಯನ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಮಾನಸಿಕ ಅನಾರೋಗ್ಯಕ್ಕೆ ವಯಸ್ಸಿನ ಭೇದವಿಲ್ಲ. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ವಿವಿಧ ಕಾರಣಕ್ಕೆ ಖಿನ್ನತೆ ಮತ್ತು ಮಾನಸಿಕ ಒತ್ತಡಕ್ಕೆ ಒಳಗಾಗಿರುವವರನ್ನು ರಕ್ಷಣೆ ಮಾಡಬೇಕು’ ಎಂದು ಸಲಹೆ ನೀಡಿದರು.

‘ಸ್ಕಿಜೋಫ್ರೇನಿಯಾ ಕಾಯಿಲೆಯು ಗಂಭೀರವಾದ ಮಾನಸಿಕ ಅಸ್ವಸ್ಥತೆಯಾಗಿದ್ದು, ಇದು ವ್ಯಕ್ತಿಯ ಆಲೋಚನೆ, ಭಾವನೆ ಮತ್ತು ಸ್ಪಷ್ಟವಾಗಿ ವರ್ತಿಸುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ಮನುಷ್ಯನ ಮಿದುಳಿನ ಮಾಹಿತಿಯನ್ನು ಪ್ರಕ್ರಿಯೆಗೊಳಿಸುವ ರೀತಿಯಲ್ಲಿ ಅಡಚಣೆಯಿಂದ ಉಂಟಾಗುವ ಕಾಯಿಲೆ ಇದಾಗಿದೆ. ಸಾಮಾನ್ಯವಾಗಿ ಈ ಕಾಯಿಲೆಯು 15 ವರ್ಷದಿಂದ 30 ವರ್ಷದೊಳಗಿನ ವ್ಯಕ್ತಿಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ’ ಎಂದು ವಿವರಿಸಿದರು.

‘ಗ್ರಾಮೀಣ ಭಾಗದ ಜನರಿಗೆ ಸ್ಕಿಜೋಫ್ರೇನಿಯಾ ಕಾಯಿಲೆ ಬಗ್ಗೆ ಹೆಚ್ಚು ಅರಿವಿಲ್ಲ. ಈ ಕಾಯಿಲೆಯನ್ನು ತಪ್ಪಾಗಿ ಭಾವಿಸಿ ಮಾಠ ಮಂತ್ರ ಹಾಕುವುದು ತಪ್ಪು. ಈ ರೋಗಿಗಳಿಗೂ ಅವರಿಗೂ ಸಮಾಜದಲ್ಲಿ ಬದುಕಬೇಕೆಂಬ ಆಸೆ ಇರುತ್ತದೆ. ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಿ ಶಾಶ್ವತವಾಗಿ ರೋಗ ತಡೆಗಟ್ಟಬೇಕು’ ಎಂದು ಕಿವಿಮಾತು ಹೇಳಿದರು.

ವಯಸ್ಕರಲ್ಲಿ ಹೆಚ್ಚು: ‘ಮನುಷ್ಯ ಹೆಚ್ಚು ಒತ್ತಡಕ್ಕೆ ಸಿಲುಕಿದಾಗ ಮತ್ತು ದೈಹಿಕ ಕ್ರಿಯೆಗಳಲ್ಲಿ ಏರು ಪೇರಾದಾಗ ಸ್ಕಿಜೋಫ್ರೇನಿಯಾ ರೋಗ ಕಾಣಿಸಿಕೊಳ್ಳುತ್ತದೆ. ‌ಸಾಮಾನ್ಯವಾಗಿ ವಯಸ್ಕರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಗ್ರಾಮೀಣ ಭಾಗದಲ್ಲಿ ಸಮುದಾಯ ಆರೋಗ್ಯ ಅಧಿಕಾರಿಗಳು ಮತ್ತು ಆಶಾ ಕಾರ್ಯಕರ್ತೆಯರು ಜನರಿಗೆ ಈ ರೋಗದ ಬಗ್ಗೆ ತಿಳಿವಳಿಕೆ ನೀಡುತ್ತಿದ್ದಾರೆ’ ಎಂದು ತಾಯಿ ಮತ್ತು ಮಕ್ಕಳ ಆರೋಗ್ಯ ಯೋಜನಾಧಿಕಾರಿ (ಆರ್‌ಸಿಎಚ್‌) ಡಾ.ವಿಜಯಕುಮಾರಿ ವಿವರಿಸಿದರು.

‘ಜನರಿಗೆ ಸ್ಕಿಜೋಫ್ರೇನಿಯಾ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ. ಇದನ್ನು 1983ರಲ್ಲಿ ರಾಷ್ಟ್ರೀಯ ಮಾನಸಿಕ ಕಾಯಿಲೆ ಎಂದು ಪರಿಗಣಿಸಲಾಯಿತು. ಜಿಲ್ಲೆಯಲ್ಲಿ ಮಾನಸಿಕ ಆರೋಗ್ಯ ನಿಯಂತ್ರಣಕ್ಕೆ ಪ್ರತ್ಯೇಕ 5 ತಂಡ ರಚಿಸಿ ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡಲಾಗುವುದು. ಸ್ಕಿಜೋಫ್ರೇನಿಯಾ ರೋಗಿಯನ್ನು ಮನೆಯಲ್ಲೇ ಇಟ್ಟು, ಕುಟುಂಬ ಸದಸ್ಯರ ನೆರವಿನಿಂದ ಚಿಕಿತ್ಸೆ ನೀಡಿದರೆ ಕಾಯಿಲೆ ಬೇಗ ವಾಸಿಯಾಗುತ್ತದೆ. ಮತ್ತೆ ರೋಗ ಬರುವ ಸಂಭವ ಕಡಿಮೆ’ ಎಂದು ಜಿಲ್ಲಾ ಮಾನಸಿಕ ಆರೋಗ್ಯಾಧಿಕಾರಿ ಡಾ.ನಾರಾಯಣಸ್ವಾಮಿ ಮಾಹಿತಿ ನೀಡಿದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಚಾರಿಣಿ, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಕಮಲಾ, ಜಿಲ್ಲಾ ಕಾರಾಗೃಹ ಸೂಪರಿಂಟೆಂಡೆಂಟ್‌ ಮೋಹನ್‍ಕುಮಾರ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಪ್ರೇಮಾ ಪಾಲ್ಗೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.