ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂದ್‌: ಕಾಂಗ್ರೆಸ್‌– ಎಡ ಪಕ್ಷಗಳ ಪಿತೂರಿ

ಪತ್ರಿಕಾಗೋಷ್ಠಿಯಲ್ಲಿ ಸಂಸದ ಮುನಿಸ್ವಾಮಿ ತೀವ್ರ ವಾಗ್ದಾಳಿ
Last Updated 8 ಡಿಸೆಂಬರ್ 2020, 15:24 IST
ಅಕ್ಷರ ಗಾತ್ರ

ಕೋಲಾರ: ‘ರಾಜಕೀಯವಾಗಿ ಪತನದ ಹಾದಿಯಲ್ಲಿರುವ ಕಾಂಗ್ರೆಸ್‌ ಪಕ್ಷವು ಪ್ರಧಾನಿ ಮೋದಿ ಅವರನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದೆ’ ಎಂದು ಸಂಸದ ಎಸ್‌.ಮುನಿಸ್ವಾಮಿ ತೀವ್ರ ವಾಗ್ದಾಳಿ ನಡೆಸಿದರು.

ಇಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ದೇಶದಲ್ಲಿ ಇತ್ತೀಚೆಗೆ ನಡೆದ ಎಲ್ಲಾ ಚುನಾವಣೆಗಳಲ್ಲಿ ಕಾಂಗ್ರೆಸ್‌ ಸೋತಿದೆ. ಈ ನೋವು ಮರೆಯಲು ಹಣ ಕೊಟ್ಟು ಬಾಡಿಗೆದಾರರಿಂದ ದೇಶದಲ್ಲಿ ಬಂದ್‌ ಮಾಡಿಸುತ್ತಿದೆ’ ಎಂದು ವ್ಯಂಗ್ಯವಾಡಿದರು.

‘ದೇಶದಲ್ಲಿ 60 ವರ್ಷ ಅಧಿಕಾರದಲ್ಲಿದ್ದ ಕಾಂಗ್ರೆಸ್‌ ದಲಿತರು, ರೈತರು ನೆಪ ಮಾತ್ರಕ್ಕೆ ಹೆಸರೇಳಿಕೊಂಡು ರಾಜಕಾರಣ ಮಾಡಿದೆ. ಎಪಿಎಂಸಿ ಕಾಯ್ದೆ ತಿದ್ದುಪಡಿ ವಿಚಾರ ಕಾಂಗ್ರೆಸ್‌ನ ಚುನಾವಣಾ ಪ್ರಣಾಳಿಕೆಯಲ್ಲೇ ಇತ್ತು. ಈಗ ಕಾಂಗ್ರೆಸ್‌ ಮುಖಂಡರಿಗೆ ಪ್ರಧಾನಿ ಮೋದಿ ವಿರುದ್ಧ ಆರೋಪ ಮಾಡಲು ಯಾವುದೇ ವಿಚಾರಗಳಿಲ್ಲ. ಹೀಗಾಗಿ ಸುಳ್ಳು ಹೇಳುತ್ತಾ ರೈತರ ದಿಕ್ಕು ತಪ್ಪಿಸುತ್ತಿದ್ದಾರೆ’ ಎಂದು ಕಿಡಿಕಾರಿದರು.

‘ಮೋದಿಯವರು ರೈತರ ಆದಾಯ ದ್ವಿಗುಣಗೊಳಿಸುವ ಮತ್ತು ಕೃಷಿ ಮಾರುಕಟ್ಟೆಗಳಲ್ಲಿ ದಲ್ಲಾಳಿಗಳ ಹಾವಳಿ ತಡೆಗಾಗಿ ಕೃಷಿ ಕಾಯ್ದೆಗಳಿಗೆ ತಿದ್ದುಪಡಿ ತಂದಿದ್ದಾರೆ. ಆದರೆ, ಕಾಂಗ್ರೆಸ್‌ ಮತ್ತು ಎಡ ಪಕ್ಷಗಳು ಮೋದಿಯವರನ್ನು ರೈತ ವಿರೋಧಿ ಎಂದು ಬಿಂಬಿಸುವ ಪಿತೂರಿ ಮಾಡುತ್ತಿವೆ. ಹತಾಶೆಯಿಂದ ರೈತರನ್ನು ಕೇಂದ್ರದ ವಿರುದ್ಧ ಎತ್ತಿ ಕಟ್ಟುತ್ತಿವೆ’ ಎಂದು ಆರೋಪಿಸಿದರು.

‘2011ರ ಯುಪಿಎ ಸರ್ಕಾರದಲ್ಲಿ ಕೇಂದ್ರ ಕೃಷಿ ಸಚಿವರಾಗಿದ್ದ ಶರದ್ ಪವಾರ್ ಅವರು ಇದೇ ಎಪಿಎಂಸಿ ಕಾಯ್ದೆ ಮಾದರಿಯ ಪ್ರಸ್ತಾವ ಮುಂದಿಟ್ಟಿದ್ದರು. 2018–19ರ ಸಂಸತ್ತಿನ ಕೃಷಿ ಸ್ಥಾಯಿ ಸಮಿತಿಯಲ್ಲಿ ಈ ವಿಚಾರ ಚರ್ಚಿಸಲಾಗಿದೆ. ಸಮಸ್ಯೆ ಪರಿಹಾರಕ್ಕಾಗಿ ರಚಿಸಲಾದ ಉನ್ನತಾಧಿಕಾರ ಸಮಿತಿಯಲ್ಲಿ ಕಾಂಗ್ರೆಸ್‌ನ ಕಮಲ್‌ನಾಥ್‌ ಮತ್ತು ಅಮರೇಂದರ್‌ ಸಿಂಗ್‌ ಸದಸ್ಯರಾಗಿದ್ದರು. ಈ ಸಮಿತಿಯ ಸಲಹೆಯಂತೆ ಕಾಯ್ದೆ ಜಾರಿಗೊಳಿಸಲಾಗಿದೆ’ ಎಂದು ವಿವರಿಸಿದರು.

ದಲ್ಲಾಳಿಗಳ ಹಿಡಿತ: ‘ಪಂಜಾಬ್‌ನಲ್ಲಿ ಕೃಷಿಯು ಸಂಪೂರ್ಣವಾಗಿ ದಲ್ಲಾಳಿಗಳ ಹಿಡಿತದಲ್ಲಿದೆ. ಆ ದಲ್ಲಾಳಿಗಳೇ ಅಲ್ಲಿನ ಸರ್ಕಾರ ಮತ್ತು ರಾಜಕೀಯ ವ್ಯವಸ್ಥೆ ನಿಯಂತ್ರಿಸುತ್ತಾರೆ. ಈ ದಲ್ಲಾಳಿಗಳೇ ರೈತರ ಹೆಸರಿನಲ್ಲಿ ಹೋರಾಟ ಮಾಡಿಸುತ್ತಿದ್ದಾರೆ. ರೈತರು ಆ ದಲ್ಲಾಳಿಗಳ ಹಾಗೂ ವಿಪಕ್ಷಗಳ ಕಪಿಚೇಷ್ಟೆಗಳಿಗೆ ಕೈಜೋಡಿಸಬಾರದು’ ಎಂದರು.

‘ಜಿಲ್ಲೆಯಲ್ಲಿ ಕಾಡಾನೆ ಹಾವಳಿ ತಡೆಗೆ ಆನೆ ಕಾರಿಡಾರ್‌ ಮಾಡುವ ಸಂಬಂಧ ಅರಣ್ಯ ಸಚಿವ ಆನಂದ್‌ಸಿಂಗ್‌ ಜತೆ ಮಾತನಾಡಿದ್ದೇನೆ. ಜಿಲ್ಲಾ ಕೇಂದ್ರದ ಎಪಿಎಂಸಿ ಸ್ಥಳಾಂತರಕ್ಕೆ ಕೋರಗೊಂಡಹಳ್ಳಿ ಬಳಿ 50 ಎಕರೆ ಜಮೀನು ನೀಡುವ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳ ಜತೆ ಚರ್ಚಿಸಲಾಗಿದೆ. ಗ್ರಾ.ಪಂ ಚುನಾವಣೆ ಬಳಿಕ ಜಮೀನು ಮಂಜೂರಿಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುತ್ತದೆ’ ಎಂದು ಭರವಸೆ ನೀಡಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ವೇಣುಗೋಪಾಲ್, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಲಕ್ಷ್ಮಣಗೌಡ, ಮುಖಂಡರಾದ ನಾರಾಯಣಸ್ವಾಮಿ, ವಾಸು, ತಿಮ್ಮರಾಯಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT