ಭಾನುವಾರ, ಆಗಸ್ಟ್ 18, 2019
24 °C
ಕ್ರೀಡಾಂಗಣಕ್ಕೆ ಹರಿದು ಬಂದ ಜನಸಾಗರ: ಪಥಸಂಚಲನದ ಮೆರುಗು

ಜಿಲ್ಲೆಯಲ್ಲಿ ಕಳೆಗಟ್ಟಿದ ರಾಷ್ಟ್ರಹಬ್ಬದ ಸಂಭ್ರಮ

Published:
Updated:
Prajavani

ಕೋಲಾರ: ಕ್ರೀಡಾಂಗಣದ ಮೂಲೆ ಮೂಲೆಯಲ್ಲೂ ರಾಷ್ಟ್ರಗೀತೆಯ ಅನುರಣನ... ಮನ ಮನದಲ್ಲೂ ರಾಷ್ಟ್ರಭಕ್ತಿಯ ಸಿಂಚನ... ಕಣ್ಣು ಹಾಯಿಸಿದಲ್ಲೆಲ್ಲಾ ತ್ರಿವರ್ಣ ಧ್ವಜದ ಹಾರಾಟ... ಎಲ್ಲೆಲ್ಲೂ ರಾಷ್ಟ್ರಹಬ್ಬ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ.

ಇಲ್ಲಿನ ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ನಡೆದ ದೇಶದ 73ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಕಂಡುಬಂದ ದೃಶ್ಯಗಳಿವು. ಜಿಲ್ಲಾಡಳಿತವು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಜನಸಾಗರವೇ ಹರಿದು ಬಂದಿತು.

ಶಾಲಾ ಮಕ್ಕಳು, ಪೊಲೀಸರು, ಅಧಿಕಾರಿಗಳು ಹಾಗೂ ಸಾರ್ವಜನಿಕರು ಬೆಳಿಗ್ಗೆಯೇ ಕ್ರೀಡಾಂಗಣದತ್ತ ಹೆಜ್ಜೆ ಹಾಕಿದರು. ಪೂರ್ವ ನಿಗದಿಯಂತೆ 9 ಗಂಟೆಗೆ ಸಮಾರಂಭ ಆರಂಭವಾಯಿತು. ಮುನ್ನೆಚ್ಚರಿಕೆ ಕ್ರಮವಾಗಿ ಕ್ರೀಡಾಂಗಣದಲ್ಲಿ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಹೆಚ್ಚಿನ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು. ಪ್ರವೇಶದ್ವಾರದಲ್ಲಿ ಲೋಹ ಶೋಧಕ ಅಳವಡಿಸಲಾಗಿತ್ತು. ಪೊಲೀಸ್‌ ಸಿಬ್ಬಂದಿ ಪ್ರತಿ ವ್ಯಕ್ತಿಯನ್ನು ತಪಾಸಣೆ ಮಾಡಿ ಕ್ರೀಡಾಂಗಣದ ಒಳ ಹೋಗಲು ಬಿಟ್ಟರು.

ಶಾಲಾ ಮಕ್ಕಳು, ಪೊಲೀಸರು, ಸೇವಾದಳ, ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌, ಎನ್‌ಸಿಸಿ ಹಾಗೂ ಗೃಹರಕ್ಷಕ ದಳ ಸಿಬ್ಬಂದಿ ಆಕರ್ಷಕ ಪಥಸಂಚಲನದ ಮೂಲಕ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದರು. ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಸಮಾರಂಭದ ಸೊಗಸು ಇಮ್ಮಡಿಗೊಳಿಸಿತು.

ಧ್ವಜಾರೋಹಣ ನೆರವೇರಿಸಿದ ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಹಾಗೂ ಗಣ್ಯರು ಪಥಸಂಚಲನ ವೀಕ್ಷಿಸಿದರು. ಪೊಲೀಸ್ ತಂಡ ಸೇರಿದಂತೆ ಮೂರು ವಾದ್ಯವೃಂದ ಒಳಗೊಂಡ 24 ತುಕಡಿಗಳು ಆಕರ್ಷಕ ಪಥಸಂಚಲನ ನಡೆಸಿದವು.

ಬಹುಮಾನ ವಿತರಣೆ: ಆಕರ್ಷಕ ಪಥಸಂಚಲನ ನಡೆಸಿದ ತಂಡಗಳ ಪೈಕಿ ಮಹಿಳಾ ಕಾಲೇಜಿನ ಎನ್‌ಸಿಸಿ ತಂಡಕ್ಕೆ ಪ್ರಥಮ, ಎಇಎಸ್ ಶಾಲೆಯ ಭಾರತ ಸೇವಾದಳ ಬಾಲಕಿಯರ ತಂಡಕ್ಕೆ ದ್ವಿತೀಯ ಹಾಗೂ ಗೃಹರಕ್ಷಕ ದಳದ ಪುರುಷರ ತಂಡಕ್ಕೆ ತೃತೀಯ ಬಹುಮಾನ ನೀಡಲಾಯತು. ಶಾಲಾ ವಿಭಾಗದಲ್ಲಿ ಆರ್.ವಿ ಇಂಟರ್‌ನ್ಯಾಷನಲ್ ಶಾಲೆಯ ಬಾಲಕರ ತಂಡಕ್ಕೆ ಪ್ರಥಮ, ಸುವರ್ಣ ಸೆಂಟ್ರಲ್‌ ಶಾಲೆ ಬಾಲಕಿಯರ ತಂಡ ದ್ವಿತೀಯ ಮತ್ತು ಮಹಿಳಾ ಸಮಾಜ ಶಾಲೆ ಬಾಲಕಿಯರ ತಂಡ ತೃತೀಯ ಬಹುಮಾನ ಪಡೆಯಿತು.

ರಾರಾಜಿಸಿದ ರಾಷ್ಟ್ರಧ್ವಜ: ಅಂತರಗಂಗೆ ರಸ್ತೆಯ ಪ್ರವೇಶ ಭಾಗದಲ್ಲಿ ಬೃಹತ್‌ ಸ್ವಾಗತ ಕಮಾನು ಹಾಕಲಾಗಿತ್ತು. ರಸ್ತೆಯ ಇಕ್ಕೆಲಗಳಲ್ಲಿ ರಾಷ್ಟ್ರಧ್ವಜಗಳು ರಾರಾಜಿಸುತ್ತಿದ್ದವು. ಶಾಲಾ ಕಾಲೇಜುಗಳು, ಸರ್ಕಾರಿ ಕಚೇರಿಗಳು, ಬ್ಯಾಂಕ್‌ ಹಾಗೂ ನ್ಯಾಯಾಲಯ ಕಟ್ಟಡಗಳಲ್ಲಿ ರಾಷ್ಟ್ರಧ್ವಜ ಹಾರಿಸಿ ಸ್ವಾತಂತ್ರ್ಯ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಆಟೊ ಚಾಲಕರು, ಬಸ್‌ ಚಾಲಕರು ಹಾಗೂ ಬೈಕ್‌ ಸವಾರರು ವಾಹನಗಳ ಮೇಲೆ ರಾಷ್ಟ್ರಧ್ವಜ ಹಾಕಿಕೊಂಡು ಓಡಾಡುತ್ತಿದ್ದ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು. ಟಿ.ಚನ್ನಯ್ಯ ರಂಗಮಂದಿರದಲ್ಲಿ ಸಂಜೆ ನಡೆದ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮವು ನೋಡುಗರ ಮನಸೊರೆಗೊಂಡಿತು.

 

Post Comments (+)