ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀತ–ಬಾಲಕಾರ್ಮಿಕ ಪದ್ಧತಿ ಜೀವಂತ

ಕಾರ್ಯಾಗಾರದಲ್ಲಿ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಪವನೇಶ್ ಕಳವಳ
Last Updated 25 ಫೆಬ್ರುವರಿ 2021, 13:50 IST
ಅಕ್ಷರ ಗಾತ್ರ

ಕೋಲಾರ: ‘ಅನಕ್ಷರತೆ, ಆರ್ಥಿಕ ಸಮಸ್ಯೆಯ ಕಾರಣಕ್ಕೆ ಜೀತ ಹಾಗೂ ಬಾಲಕಾರ್ಮಿಕ ಪದ್ಧತಿಯಂತಹ ಸಾಮಾಜಿಕ ಪಿಡುಗುಗಳು ಇಂದಿಗೂ ಜೀವಂತವಾಗಿವೆ’ ಎಂದು 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಡಿ.ಪವನೇಶ್ ಕಳವಳ ವ್ಯಕ್ತಪಡಿಸಿದರು.

ಬಾಲಕಾರ್ಮಿಕ ಕಾಯ್ದೆ ಕಲಂ 16 ಮತ್ತು 17ರ ಅಡಿ ನೇಮಕಗೊಂಡಿರುವ ನಿರೀಕ್ಷಕರು ಹಾಗೂ ಜೀತ ಕಾರ್ಮಿಕ ಕಾಯ್ದೆಯಡಿ ಅನುಸೂಚಿತಗೊಂಡಿರುವ ಅಧಿಕಾರಿಗಳಿಗೆ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಪಂಚಾಯಿತಿ, ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ವಕೀಲರ ಸಂಘದ ಸಹಯೋಗದಲ್ಲಿ ಇಲ್ಲಿ ಗುರುವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.

‘ದೇಶದಲ್ಲಿ ಸಂವಿಧಾನವೇ ಮೂಲ ಗ್ರಂಥ. ಬಾಲ್ಯಾವಸ್ಥೆ ಮತ್ತು ಕಿಶೋರಾವಸ್ಥೆಯ ಕಾರ್ಮಿಕ ಕಾಯ್ದೆ 1986 ಮತ್ತು 2016ರ ತಿದ್ದುಪಡಿಯಂತೆ 14 ವರ್ಷದೊಳಗಿನ ಮಕ್ಕಳನ್ನು ಯಾವುದೇ ಕ್ಷೇತ್ರದಲ್ಲಿ ದುಡಿಸಿಕೊಳ್ಳುವುದು, 14 ವರ್ಷದಿಂದ 18 ವರ್ಷದೊಳಗಿನ ಮಕ್ಕಳನ್ನು ಅಪಾಯಕಾರಿ ಕ್ಷೇತ್ರದಲ್ಲಿ ದುಡಿಸಿಕೊಳ್ಳುವುದನ್ನು ನಿಷೇಧಿಸಲಾಗಿದೆ. ಈ ಕಾನೂನು ಉಲ್ಲಂಘಿಸಿದರೆ ಗರಿಷ್ಠ 2 ವರ್ಷದವರೆಗೆ ಜೈಲು ಶಿಕ್ಷೆ ಹಾಗೂ ₹ 50 ಸಾವಿರ ದಂಡ ವಿಧಿಸಲಾಗುತ್ತದೆ’ ಎಂದು ಮಾಹಿತಿ ನೀಡಿದರು.

‘ಜೀತ ಪದ್ಧತಿಯಲ್ಲಿ ವ್ಯಕ್ತಿಯ ಹಕ್ಕು ಸ್ವಾತಂತ್ರ್ಯ ಕಸಿದುಕೊಳ್ಳಲು ಸಾಧ್ಯವಿಲ್ಲ. ಸಂವಿಧಾನವು ಸಮಾನತೆ ಘನತೆಯಿಂದ ಬದುಕಲು ಎಲ್ಲರಿಗೂ ಅವಕಾಶ ಕಲ್ಪಿಸಿದೆ. ಸಂವಿಧಾನದ ಕಾಯ್ದೆ 21ಎ, 24 ಮತ್ತು 32ರಲ್ಲಿ ಮಕ್ಕಳಿಗೆ ಕಡ್ಡಾಯ ಶಿಕ್ಷಣ, ಆರೋಗ್ಯ, ಸಂರಕ್ಷಣೆ ಮತ್ತು ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡಲಾಗಿದೆ’ ಎಂದು ವಿವರಿಸಿದರು.

‘ಪೋಷಕರು ಮಕ್ಕಳಿಗೆ ಉತ್ತಮ ಶಿಕ್ಷಣ, ಆರೋಗ್ಯ ನೀಡುವುದರ ಮೂಲಕ ಸತ್ಪ್ರಜೆಗಳಾಗಿ ಮಾಡಬೇಕು. ಅನಾದಿ ಕಾಲದಿಂದಲೂ ಬಂದಿರುವ ಜೀತಪದ್ಧತಿ, ಬಾಲಕಾರ್ಮಿಕ ಪದ್ಧತಿಯನ್ನು ಸಮಾಜದಲ್ಲಿ ಬೇರುಸಹಿತ ನಿರ್ಮೂಲನೆ ಮಾಡಬೇಕು’ ಎಂದು ಕಿವಿಮಾತು ಹೇಳಿದರು.

ದೇಶಕ್ಕೆ ಪಿಡುಗು: ‘ಬಾಲಕಾರ್ಮಿಕ ಪದ್ಧತಿಯು ದೇಶಕ್ಕೆ ಪಿಡುಗಾಗಿ ಪರಿಣಮಿಸಿದೆ. ಜೀತದಿಂದ ಮುಕ್ತಿಗೊಳಿಸಿ ವ್ಯಕ್ತಿಗೆ ಪರಿಹಾರ ರೂಪವಾಗಿ ₹ 20 ಸಾವಿರ ನೀಡಲಾಗುವುದು. ಕನಿಷ್ಠ ವೇತನ ನೀಡದೆ ದುಡಿಸಿಕೊಳ್ಳುವುದು, ಬೇರೆಡೆ ಕೆಲಸ ಮಾಡಲು ನಿರ್ಬಂಧ ಹೇರುವುದು. ಮುಕ್ತ ಸಂಚಾರಕ್ಕೆ ಅವಕಾಶ ನೀಡದಿರುವುದು ಕಾನೂನುಬಾಹಿರ’ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಚ್‌.ಗಂಗಾಧರ್ ತಿಳಿಸಿದರು.

‘ಬಾಲ ಕಾರ್ಮಿಕರನ್ನು ಕಾರ್ಖಾನೆ, ಹೋಟೆಲ್‌, ಚಿತ್ರಮಂದಿರ, ಇಟ್ಟಿಗೆ ಕಾರ್ಖಾನೆಗಳಲ್ಲಿ ಕೆಲಸಕ್ಕೆ ನಿಯೋಜಿಸಲಾಗುತ್ತಿದೆ. ಇದು ಕಾನೂನುಬಾಹಿರ ಕೆಲಸ. ಇಂತಹ ಕಡೆಗಳಲ್ಲಿ ಬಾಲಕಾರ್ಮಿಕರು ಕಂಡರೆ ಸಾರ್ವಜನಿಕರು ಅದನ್ನು ಪ್ರಶ್ನಿಸಬೇಕು. ಜತೆಗೆ ಮಕ್ಕಳ ಸಮಸ್ಯೆ ಆಲಿಸಿ ಅವರ ಕಲ್ಯಾಣಕ್ಕಾಗಿ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು’ ಎಂದು ಮನವಿ ಮಾಡಿದರು.

ಅರಿವು ಮೂಡಿಸಿ: ‘ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಗ್ರಾಮೀಣ ಭಾಗದ ಜನರಿಗೆ ಅರಿವು ಮೂಡಿಸಬೇಕು. ಸಾಮಾಜಿಕ ಪಿಡುಗುಗಳ ನಿರ್ಮೂಲನೆಗೆ ಪ್ರತಿಯೊಬ್ಬರೂ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು. ವಯಸ್ಸಿನ ಪ್ರಮಾಣಪತ್ರ ನೀಡುವಾಗ ನಿಗಾ ವಹಿಸಬೇಕು’ ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಜಿ.ಶ್ರೀಧರ್‌ ಹೇಳಿದರು.

ಉಪ ವಿಭಾಗಾಧಿಕಾರಿ ಸೋಮಶೇಖರ್, ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಆರ್.ರಘುಪತಿಗೌಡ, ಸಂಪನ್ಮೂಲ ವ್ಯಕ್ತಿಗಳಾದ ವೆಂಕಟೇಶ್, ವಿಲಿಯಂ ಕ್ರಿಸ್ಟೋಫರ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT