ಜನಹಿತಕ್ಕೆ ಸ್ವಚ್ಛ ಮೇವ ಜಯತೆ ಆಂದೋಲನ

ಶುಕ್ರವಾರ, ಜೂಲೈ 19, 2019
23 °C

ಜನಹಿತಕ್ಕೆ ಸ್ವಚ್ಛ ಮೇವ ಜಯತೆ ಆಂದೋಲನ

Published:
Updated:
Prajavani

ಕೋಲಾರ: ‘ಜನಹಿತಕ್ಕಾಗಿ ಹಮ್ಮಿಕೊಂಡಿರುವ ಸದುದ್ದೇಶದ ಸ್ವಚ್ಛ ಮೇವ ಜಯತೆ ಆಂದೋಲನವು ನಿಜಕ್ಕೂ ಜನಮನ ಮುಟ್ಟುವಂತಾಗಿದೆ’ ಎಂದು ಹರಟಿ ಗ್ರಾಮ ಪಂಚಾಯಿತಿ ಸದಸ್ಯೆ ಮಂಜುಳಾ ವೆಂಕಟರಾಮ್ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಹರಟಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆ ಅವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಗ್ರಾಮ ಗೌರವ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ‘ಸ್ವಚ್ಛ ಮೇವ ಜಯತೆ ಆಂದೋಲನದ ಭಾಗವಾಗಿ ಸ್ವಚ್ಛತಾ ರಥ, ಗ್ರಾ.ಪಂ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ, ಗೋಡೆ ಬರಹ, ಶಾಲಾ ಜಾಥಾ, ಪ್ರಬಂಧ ಸ್ಪರ್ಧೆ, ರಂಗೋಲಿ ಸ್ಪರ್ಧೆ ನಡೆಸಲಾಗುತ್ತದೆ ಎಂದರು.

‘ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಜಗದೀಶ್ ಅವರು ವಿಶೇಷ ಕಾಳಜಿಯೊಂದಿಗೆ ಒಂದು ತಿಂಗಳ ಕಾಲ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಸ್ಥಳಗಳಲ್ಲಿ 1,000 ಸಸಿ ನೆಟ್ಟು ಪೋಷಿಸುವ ಅಭಿಯಾನ ಹಮ್ಮಿಕೊಂಡಿದ್ದಾರೆ. ಸಮುದಾಯಕ್ಕೆ ಶೌಚಾಲಯದ ಮಹತ್ವ ಹಾಗೂ ಬಳಕೆ ಬಗ್ಗೆ ಅರಿವು ಮೂಡಿಸಲಾಗುತ್ತದೆ. ಶ್ರಮದಾನ, ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡುವುದು, ಒಣ ಮತ್ತು ಹಸಿ ಕಸ ವಿಂಗಡಣೆ ಬಗ್ಗೆ ಅರಿವು ಮೂಡಿಸಲಾಗುತ್ತದೆ’ ಎಂದು ವಿವರಿಸಿದರು.

‘ಜಿಲ್ಲೆಯ ವಿವಿಧ ಭಾಗಗಳ ಗ್ರಾಮಗಳಲ್ಲಿ ಡಂಗುರ ಸಾರುವ ಮೂಲಕ ಜನರನ್ನು ಜಾಗೃತಿಗೊಳಿಸಲಾಗುತ್ತದೆ. ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳು ಮತ್ತು ನೌಕರರ ಮೂಲಕ ಈ ಕಾರ್ಯಕ್ರಮಗಳನ್ನು ಗ್ರಾಮಗಳಲ್ಲಿ ಪರಿಚಯಿಸಲಾಗಿದೆ. ಜನರು ಸರ್ಕಾರದ ಸೌಲಭ್ಯಗಳ ಮಾಹಿತಿ ಪಡೆದು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

‘ಪ್ರತಿ ಮನೆಯಲ್ಲೂ ಕಡ್ಡಾಯವಾಗಿ ಶೌಚಾಲಯ ನಿರ್ಮಿಸಿಕೊಳ್ಳಬೇಕು ಮತ್ತು ಬಳಕೆ ಮಾಡಬೇಕು. ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ಪೋಷಕರು ಮಕ್ಕಳಿಗೆ ತಿಳಿವಳಿಕೆ ನೀಡಿ ಪರಿಸರ ಶುಚಿಯಾಗಿ ಇಟ್ಟುಕೊಳ್ಳಬೇಕು. ಗ್ರಾಮೀಣ ಸಮುದಾಯಕ್ಕೆ ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಹಾಗೂ ನಿರ್ವಹಣೆ ಮಾಡುವ ಬಗ್ಗೆ ಅರಿವು ಮೂಡಿಸಬೇಕು. ಸ್ವಚ್ಛತಾ ಕಾರ್ಯಕ್ಕೆ ಪ್ರತಿಯೊಬ್ಬರು ಕೈಜೋಡಿಸಿದಾಗ ಮಾತ್ರ ಸುಂದರ ಗ್ರಾಮ ನಿರ್ಮಾಣ ಸಾಧ್ಯ’ ಎಂದು ಸಲಹೆ ನೀಡಿದರು.

ರಂಗೋಲಿ ಸ್ಪರ್ಧೆಯಲ್ಲಿ ಬಹುಮಾನ ವಿತರಿಸಲಾಯಿತು. ಹರಟಿ ಗ್ರಾ.ಪಂ ಸದಸ್ಯೆ ಶಿಲ್ಪಾ, ಸರ್ಕಾರಿ ಶಾಲೆ ಮುಖ್ಯ ಶಿಕ್ಷಕ ಅಶೋಕ್, ಪಿಡಿಒ ರಾಮಕೃಷ್ಣ, ಕರ ಸಂಗ್ರಹಗಾರ ಶ್ರೀನಿವಾಸ್ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !