ಸಮರೋಪಾದಿಯಲ್ಲಿ ಒತ್ತುವರಿ ತೆರವುಗೊಳಿಸಿ

7
ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳಿಗೆ ಸಂಸದ ಮುನಿಯಪ್ಪ ಸೂಚನೆ

ಸಮರೋಪಾದಿಯಲ್ಲಿ ಒತ್ತುವರಿ ತೆರವುಗೊಳಿಸಿ

Published:
Updated:
ಕೋಲಾರದಲ್ಲಿ ಶನಿವಾರ ನಡೆದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸಂಸದ ಕೆ.ಎಚ್‌.ಮುನಿಯಪ್ಪ ಮಾತನಾಡಿದರು.

ಕೋಲಾರ: ‘ಕೆ.ಸಿ ವ್ಯಾಲಿ ಯೋಜನೆ ಕಾಮಗಾರಿ ಪೂರ್ಣಗೊಂಡು ಜಿಲ್ಲೆಯ ನರಸಾಪುರ ಕೆರೆ ತುಂಬಿದ್ದು, ಉಳಿದ ಕೆರೆಗಳಿಗೆ ನೀರು ಹರಿಸುವ ಮುನ್ನ ರಾಜಕಾಲುವೆ ಮತ್ತು ಕೆರೆಗಳನ್ನು ಸ್ವಚ್ಛಗೊಳಿಸಬೇಕು’ ಎಂದು ಸಂಸದ ಕೆ.ಎಚ್.ಮುನಿಯಪ್ಪ ಅಧಿಕಾರಿಗಳಿಗೆ ಸೂಚಿಸಿದರು.

ನಗರದಲ್ಲಿ ಶನಿವಾರ ನಡೆದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ‘ಕೆ.ಸಿ ವ್ಯಾಲಿ ಯೋಜನೆಯಿಂದ ಕೆರೆಗಳಿಗೆ ನೀರು ತುಂಬಿಸುವುದರಿಂದ ಅಂತರ್ಜಲ ವೃದ್ಧಿಯಾಗಿ ಜಿಲ್ಲೆಯ ನೀರಿನ ಬವಣೆ ನೀಗಲಿದೆ. ಸಮರೋಪಾದಿಯಲ್ಲಿ ಕೆರೆ ಮತ್ತು ರಾಜಕಾಲುವೆ ಒತ್ತುವರಿ ತೆರವುಗೊಳಿಸಬೇಕು’ ಎಂದರು.

‘ಜಿಲ್ಲೆಯ 200 ಅಂಗನವಾಡಿ ಕೇಂದ್ರಗಳಲ್ಲಿನ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು ಎರಡು ವರ್ಷದಿಂದ ಖಾಲಿ ಇವೆ. ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಆಯ್ಕೆ ಪ್ರಕ್ರಿಯೆ ನಡೆಯಬೇಕಿದೆ. ಈಗಾಗಲೇ ಅರ್ಹರ ಪಟ್ಟಿ ನೀಡಿದ್ದರೂ ಸಮಸ್ಯೆ ಬಗೆಹರಿಸಲು ಜಿಲ್ಲಾಧಿಕಾರಿಗೆ ಆಸಕ್ತಿಯಿಲ್ಲ’ ಎಂದು ಜಿ.ಪಂ ಸದಸ್ಯ ನಾರಾಯಣಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ಧ್ವನಿಗೂಡಿಸಿದ ಜಿ.ಪಂ ಸದಸ್ಯ ಅರುಣ್‌ ಪ್ರಸಾದ್‌, ‘ಕೆಜಿಎಫ್‌ ತಾಲ್ಲೂಕಿನ ಅಂಗನವಾಡಿಗಳಲ್ಲೂ ಇದೇ ಸಮಸ್ಯೆ. ಎಲ್ಲಾ ಅರ್ಹತೆ ಇರುವ ಒಬ್ಬ ಮಹಿಳೆಗೆ 2 ವರ್ಷದಿಂದ ಅಂಗನವಾಡಿ ಕಾರ್ಯಕರ್ತೆಯ ಹುದ್ದೆ ಕೊಡಿಸಲು ಆಗಿಲ್ಲ. ಇಲಾಖೆಯಲ್ಲಿ ಸಾಕಷ್ಟು ಅಕ್ರಮ ಎಸಗಿರುವ ಸಿಡಿಪಿಒ ನಿರ್ಭಯವಾಗಿ ಕಚೇರಿಯಲ್ಲಿ ಕೂತು ಕೆಲಸ ಮಾಡುತ್ತಿದ್ದಾರೆ. ಆದರೆ, ಶ್ರಮ ಪಟ್ಟವರು ಕೆಲಸವಿಲ್ಲದೆ ಮನೆಯಲ್ಲಿದ್ದಾರೆ’ ಎಂದು ದೂರಿದರು.

‘ನಮ್ಮ ತಾಲ್ಲೂಕಿನ ಅಂಗನವಾಡಿಗಳ ಕಥೆಯೂ ಇದೇ ರೀತಿ ಇದೆ. ನಾನು ಜಿ.ಪಂ ಸದಸ್ಯನಾಗಿದ್ದರೂ ಸಮಸ್ಯೆ ಬಗೆಹರಿಸಲು ಸಾಧ್ಯವಾಗಿಲ್ಲ. ಸುಮ್ಮನೆ ಟಿಕೆಟ್ ತೆಗೆದುಕೊಂಡು ಸಿನಿಮಾ ನೋಡಿ ಹೋಗಬೇಕಷ್ಟೇ’ ಎಂದು ಜಿ.ಪಂ ಸದಸ್ಯ ಶ್ರೀನಿವಾಸ್ ಕಿಡಿಕಾರಿದರು.

ಸದಸ್ಯರ ಅಸಮಾಧಾನಕ್ಕೆ ಪ್ರತಿಕ್ರಿಯಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಸೌಮ್ಯ, ‘ಜಿಲ್ಲೆಯ 277 ಅಂಗನವಾಡಿ ಕೇಂದ್ರಗಳಿಗೆ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ನೇಮಕಕ್ಕೆ ಅರ್ಜಿ ಆಹ್ವಾನಿಸಲಾಗಿತ್ತು. ಈಗಾಗಲೇ 121 ಕೇಂದ್ರಗಳಿಗೆ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಉಳಿದ ಕೇಂದ್ರಗಳಿಗೆ ಸಿಬ್ಬಂದಿ ನೇಮಕಾತಿ ಪ್ರಗತಿಯಲ್ಲಿದೆ’ ಎಂದು ವಿವರಿಸಿದರು.

ಕಪ್ಪು ಬಣ್ಣದ ರಾಗಿ: ‘ಹಿಂದಿನ ವರ್ಷ ಬಾರಿ ಕೃಷಿ ಇಲಾಖೆಯಿಂದ ನೀಡಲಾಗಿದ್ದ ರಾಗಿ ಬಿತ್ತನೆ ಬೀಜದ ಗುಣಮಟ್ಟ ಕಳಪೆಯಾಗಿದ್ದರಿಂದ ರೈತರಿಗೆ ಸಾಕಷ್ಟು ನಷ್ಟವಾಗಿದೆ. ಈ ಬಾರಿ ನೀಡಿರುವ ಬಿತ್ತನೆ ಬೀಜದಲ್ಲಿ ಶೇ 30ರಷ್ಟು ಕಪ್ಪು ಬಣ್ಣದ ರಾಗಿ ಕಂಡುಬಂದಿದೆ’ ಎಂದು ಜಿ.ಪಂ ಸದಸ್ಯರಾದ ಕೃಷ್ಣಪ್ಪ ಮತ್ತು ಗೋವಿಂದಸ್ವಾಮಿ ಆರೋಪಿಸಿದರು.

ಇದಕ್ಕೆ ಸ್ಪಷ್ಟನೆ ನೀಡಿದ ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವಕುಮಾರ್, ‘ರಾಜ್ಯ ಬೀಜ ನಿಗಮದಿಂದ ಪೂರೈಕೆಯಾಗಿದ್ದ ಜಿಪಿಯು 28 ತಳಿಗೆ ಬೇರೆ ತಳಿ ಮಿಶ್ರಣವಾಗಿದ್ದ ಕಾರಣ ಹಿಂದಿನ ಬಾರಿ ಕೆಲವೆಡೆ ಬೆಳೆ ನಷ್ಟವಾಗಿದೆ. ಈ ಬಗ್ಗೆ ರೈತರಿಂದ ದೂರು ಬಂದಿದ್ದವು. ಬಳಿಕ ವಿಜ್ಞಾನಿಗಳ ತಂಡ ರೈತರ ಜಮೀನುಗಳಿಗೆ ಭೇಟಿ ನೀಡಿ ವರದಿ ಪಡೆದಿದ್ದು, ಉತ್ತಮ ಮಳೆಯಾದ ಕಾರಣ ಎಲ್ಲಿಯೂ ಬೆಳೆ ನಷ್ಟವಾಗಿಲ್ಲ’ ಎಂದು ತಿಳಿಸಿದರು.

‘ಹಿಂದಿನ ವರ್ಷ ಜಿಲ್ಲೆಯಾದ್ಯಂತ ರಾಗಿ ಬೆಳೆ ಉತ್ತಮ ಇಳುವರಿ ಬಂದಿತ್ತು. ಆದರೂ ಬೀಜ ನಿಗಮಕ್ಕೆ ಕೃಷಿ ಸಚಿವರು ಎಚ್ಚರಿಕೆ ನೀಡಿದ್ದಾರೆ. ಈ ಬಾರಿ ರೈತರಿಗೆ ಯಾವುದೇ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗಿದೆ’ ಎಂದು ಹೇಳಿದರು.

ಕತ್ತಲ ಕೋಣೆ: ‘ಜಿ.ಪಂ ಕಟ್ಟಡವನ್ನು ಎರಡು ವರ್ಷಗಳ ಹಿಂದೆ ₹ 1.50 ಕೋಟಿ ಅಂದಾಜು ವೆಚ್ಚದಲ್ಲಿ ನವೀಕರಿಸಲಾಗಿತ್ತು. ಆದರೆ, ಕಟ್ಟಡದ ಕೆಲವೆಡೆ ನೀರು ಸೋರುತ್ತಿದೆ. ವಿದ್ಯುತ್‌ ಇಲ್ಲದ ವೇಳೆ ಕಟ್ಟಡವು ಹಗಲು ಹೊತ್ತಿನಲ್ಲೇ ಕತ್ತಲ ಕೋಣೆಯಂತೆ ಇರುತ್ತದೆ’ ಎಂದು ಸದಸ್ಯ ಬಿ.ವಿ.ಮಹೇಶ್ ದೂರಿದರು.

‘ಈ ವರ್ಷ ಜಿ.ಪಂ ಕಟ್ಟಡ ನಿರ್ವಹಣೆಗೆ ಪುನಃ ₹ 85 ಲಕ್ಷ ಬಿಡುಗಡೆ ಮಾಡಲಾಗಿತ್ತು. ತುಂತುರು ಮಳೆ ಬಂದರೂ ಕಟ್ಟಡ ಸೋರುತ್ತಿದೆ. ಈ ರೀತಿ ಕಟ್ಟಡಕ್ಕೆ ಪದೇ ಪದೇ ಹಣ ಬಿಡುಗಡೆಯಾಗುತ್ತಿದೆ. ಆದರೆ, ಸದಸ್ಯರಿಗೆ ವಿಶ್ರಾಂತಿ ಪಡೆಯಲು ಹಾಗೂ ಚರ್ಚಿಸಲು ಸುಸಜ್ಜಿತ ಕೊಠಡಿ ಇಲ್ಲದಿರುವುದು ದುರಂತ’ ಎಂದು ವಿಷಾದಿಸಿದರು.

‘ಸದಸ್ಯರಿಗೆ ವಿಶ್ರಾಂತಿ ಕೊಠಡಿ, ಟಿ.ವಿ ಸೇರಿದಂತೆ ಮೂಲಸೌಕರ್ಯಗಳ ಅಗತ್ಯವಿದೆ’ ಎಂದು ಜಿ.ಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಎಸ್‌.ಲತಾಕುಮಾರಿ ಹೇಳಿದರು. ಆಗ ಶಾಸಕ ಕೆ.ಶ್ರೀನಿವಾಸಗೌಡ ಮಾತನಾಡಿ, ‘ಜಿಲ್ಲಾ ಪಂಚಾಯಿತಿಗಾಗಿಯೇ ಕೊಠಡಿಗಳನ್ನು ನಿರ್ಮಿಸಿ. ಆದರೆ, ಆ ಕೊಠಡಿಗಳನ್ನು ಸದಸ್ಯರು ಬಳಸಿಕೊಳ್ಳಲು ಅವಕಾಶ ಕಲ್ಪಿಸಿ’ ಎಂದು ಸೂಚಿಸಿದರು.

ಹಗರಣ ನಡೆದಿದೆ: ‘ದೇವರಾಜ ಅರಸು ಅಭಿವೃದ್ಧಿ ನಿಗಮದ ಯೋಜನೆಗಳ ಬಗ್ಗೆ ಅಧಿಕಾರಿಗಳು ಸಮರ್ಪಕ ಮಾಹಿತಿ ನೀಡುತ್ತಿಲ್ಲ. ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ಸಾಕಷ್ಟು ಹಗರಣ ನಡೆದಿದೆ. ಫಲಾನುಭವಿಗಳು ಸೌಕರ್ಯ ಪಡೆಯಲು ಮೊದಲು ದಲ್ಲಾಳಿಗಳನ್ನು ಸಂಪರ್ಕಿಸುವ ಪರಿಸ್ಥಿತಿ ಇದೆ. ಈ ನಿಗಮಗಳ ಅಧಿಕಾರಿಗಳು ಸಮಸ್ಯೆಗೆ ಸ್ಪಂದಿಸುವುದಿಲ್ಲ’ ಎಂದು ಉಪಾಧ್ಯಕ್ಷೆ ಯಶೋದಾ ಮತ್ತು ಸದಸ್ಯ ಅರವಿಂದ್ ಆರೋಪಿಸಿದರು.

ಇತ್ತೀಚೆಗೆ ನಿಧನರಾದ ಜಿ.ಪಂ ಮಾಜಿ ಅಧ್ಯಕ್ಷ ಮುನಿನಾರಾಯಣಪ್ಪ ಅವರ ಗೌರವಾರ್ಥ ಸಭೆಯ ಆರಂಭದಲ್ಲಿ ಮೌನಾಚರಣೆ ಮಾಡಲಾಯಿತು. ಬಳಿಕ ನೂತನ ಶಾಸಕರನ್ನು ಸನ್ಮಾನಿಸಲಾಯಿತು. ಮಾಲೂರು ಶಾಸಕ ಕೆ.ವೈ.ನಂಜೇಗೌಡ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.

ಸಂಸದರಿಗೆ ಕಸಿವಿಸಿ

‘ವಿಧಾನಸಭಾ ಸ್ಪೀಕರ್‌ ಕೆ.ಆರ್‌.ರಮೇಶ್‌ಕುಮಾರ್‌ರ ಪರಿಶ್ರಮದ ಫಲವಾಗಿ ಕೆ.ಸಿ ವ್ಯಾಲಿ ಯೋಜನೆ ಬೇಗನೆ ಪೂರ್ಣಗೊಂಡು ಜಿಲ್ಲೆಯ ಕೆರೆಗಳಿಗೆ ನೀರು ಬರುತ್ತಿದೆ’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಸ್ಮರಿಸಿದರು.
ಶ್ರೀನಿವಾಸಗೌಡರ ಹೇಳಿಕೆಯಿಂದ ಒಳಗೊಳಗೆ ಕಸಿವಿಸಿಗೊಂಡ ಸಂಸದ ಮುನಿಯಪ್ಪ, ‘ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ದಿವಂಗತ ಡಿ.ಕೆ.ರವಿ ಅವರು ಸತತ ಒಂದು ವರ್ಷ ಅಧ್ಯಯನ ನಡೆಸಿ ಕೆ.ಸಿ ವ್ಯಾಲಿ ನೀರಿನ ಗುಣಮಟ್ಟದ ಬಗ್ಗೆ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿದ್ದರು. ನಂತರ ಕಾಂಗ್ರೆಸ್ ಸರ್ಕಾರ ಯೋಜನೆಗೆ ಅನುಮೋದನೆ ನೀಡಿತು. ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳ ಸಹಕಾರದಿಂದ ಯೋಜನೆ ಅಂತಿಮ ರೂಪ ಪಡೆಯಿತು. ಆ ನಂತರವಷ್ಟೇ ರಮೇಶ್‌ಕುಮಾರ್ ಸಚಿವರಾದರು’ ಎಂದು ತಿರುಗೇಟು ನೀಡಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !