ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರನ್ನು ನಂಬದ ವಾಣಿಜ್ಯ ಬ್ಯಾಂಕ್‌: ಶಾಸಕ ರಮೇಶ್‌ಕುಮಾರ್‌ ಗುಡುಗು

ಸಾಲ ವಿತರಣೆ ಕಾರ್ಯಕ್ರಮದಲ್ಲಿ ಶಾಸಕ ರಮೇಶ್‌ಕುಮಾರ್‌ ಗುಡುಗು
Last Updated 26 ನವೆಂಬರ್ 2020, 13:03 IST
ಅಕ್ಷರ ಗಾತ್ರ

ಕೋಲಾರ: ‘ರೈತರನ್ನು ನಂಬದೆ ಕಳ್ಳರಿಗೆ ಸಾಲ ಕೊಡುವ ವಾಣಿಜ್ಯ ಬ್ಯಾಂಕ್‌ಗಳ ಬಾಗಿಲು ಮುಚ್ಚುವ ಪರಿಸ್ಥಿತಿ ಬರಬೇಕು’ ಎಂದು ಶಾಸಕ ಕೆ.ಆರ್.ರಮೇಶ್‌ಕುಮಾರ್‌ ಗುಡುಗಿದರು.

ತಾಲ್ಲೂಕಿನ ಸುಗಟೂರು ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘವು (ಎಸ್‌ಎಫ್‌ಸಿಎಸ್‌) ಮತ್ತು ಡಿಸಿಸಿ ಬ್ಯಾಂಕ್‌ ಸಹಯೋಗದಲ್ಲಿ ತಾಲ್ಲೂಕಿನ ಸುಗಟೂರು ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ವಿತರಿಸಿ ಮಾತನಾಡಿದರು.

‘ಬದುಕುವ ಆಸೆಯಿಂದ ಬ್ಯಾಂಕ್‌ಗೆ ಬರುವ ಪ್ರತಿ ಬಡವರಿಗೆ ಸಾಲ ನೀಡುವಂತಾಗಲು ಡಿಸಿಸಿ ಬ್ಯಾಂಕ್‍ ಸದೃಢಗೊಳಿಸಬೇಕು. ಡಿಸಿಸಿ ಬ್ಯಾಂಕ್ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರನ್ನು ಕೂರಿಸಿ ಸಾಲ ಕೊಡುತ್ತಿದೆ. ಸಾಲ ಕೇಳುವವರು ಕಷ್ಟದಲ್ಲಿರುತ್ತಾರೆ, ಅವರು ಕಳ್ಳರಲ್ಲ. ದೇಶ ಬಿಟ್ಟು ಓಡಿ ಹೋಗುವ ಕಳ್ಳರಿಗೆ ಸಾಲ ನೀಡುವ ವಾಣಿಜ್ಯ ಬ್ಯಾಂಕ್‌ಗಳು ಬಾಗಿಲು ಮುಚ್ಚುವ ಸ್ಥಿತಿ ಬರಬೇಕು. ಅದೇ ನನ್ನ ಆಸೆ’ ಎಂದರು.

‘ಸದ್ಯ ₹ 32 ಕೋಟಿ ವಹಿವಾಟು ನಡೆಸುತ್ತಿರುವ ಸುಗಟೂರು ಸೊಸೈಟಿ ಮುಂದಿನ ವರ್ಷದೊಳಗೆ ₹ 100 ಕೋಟಿ ವಹಿವಾಟು ನಡೆಸುವಂತಾಗಬೇಕು. ಸೊಸೈಟಿಗೆ ಪ್ರತಿ ಕುಟುಂಬದಿಂದಲೂ ಸದಸ್ಯರಿರಬೇಕು. ಜಾತಿ, ಪಕ್ಷ ನೋಡಬೇಡಿ. ಮನೆ ಮನೆಗೂ ಹೋಗಿ ಸದಸ್ಯತ್ವ ಮಾಡಿಸಿಕೊಳ್ಳಿ. ಉಪವಾಸ ಇರುವವರಿಗೆ ಊಟ ಹಾಕಿ, ಹೊಟ್ಟೆ ತುಂಬಿದವರಿಗಲ್ಲ’ ಎಂದು ಸಲಹೆ ನೀಡಿದರು.

‘ಡಿಸಿಸಿ ಬ್ಯಾಂಕ್‌ ದೇವಾಲಯ ಇದ್ದಂತೆ. ಪಡೆದ ಸಾಲದ ಕಂತುಗಳನ್ನು ಸಕಾಲಕ್ಕೆ ಕಟ್ಟಿ ಬ್ಯಾಂಕ್ ಉಳಿಸಬೇಕು. ಮಹಿಳೆಯರಿಗೆ ನೀಡುತ್ತಿರುವ ಸಾಲದ ಮೊತ್ತವನ್ನು ₹ 50 ಸಾವಿರದಿಂದ ₹ 1 ಲಕ್ಷಕ್ಕೆ ಏರಿಸಬೇಕು. ಈ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಸಿದ್ದೇನೆ. ಸೊಸೈಟಿಯಲ್ಲಿ ದುಂದು ವೆಚ್ಚಕ್ಕೆ ಅವಕಾಶ ನೀಡದೆ ವಹಿವಾಟು ಹೆಚ್ಚಿಸಬೇಕು’ ಎಂದು ಕಿವಿಮಾತು ಹೇಳಿದರು.

₹ 4.40 ಕೋಟಿ ಸಾಲ: ‘ಬ್ಯಾಂಕ್ ಉಳಿಸಿ ಬೆಳೆಸುವ ಜವಾಬ್ದಾರಿ ಮಹಿಳೆಯರದು. ಡಿಸಿಸಿ ಬ್ಯಾಂಕ್‌ ಮಹಿಳೆಯರಿಗೆ ಶೂನ್ಯ ಬಡ್ಡಿ ಸಾಲ ನೀಡಿ ಕೈಹಿಡಿಯುತ್ತಿದೆ. ಆದ ಕಾರಣ ಪ್ರತಿ ಮಹಿಳೆ ಡಿಸಿಸಿ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ ತೆರೆಯಬೇಕು’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಗೋವಿಂದಗೌಡ ಮನವಿ ಮಾಡಿದರು.

‘ರೈತರಿಗೆ ವಾರದೊಳಗೆ ₹ 4.40 ಕೋಟಿ ಸಾಲ ವಿತರಿಸುತ್ತೇವೆ. ಸಮರ್ಪಕವಾಗಿ ಸಾಲ ಮರುಪಾವತಿ ಮಾಡುವ ಬ್ಯಾಂಕ್‌ ಉಳಿಸಿ. ಬ್ಯಾಂಕ್‌ ದೇಶದಲ್ಲೇ ನಬಾರ್ಡ್‌ನ ಇ-ಶಕ್ತಿ ಯೋಜನೆಗೆ ಆಯ್ಕೆಯಾದ ಬ್ಯಾಂಕ್‌ ಆಗಿದೆ’ ಎಂದು ಹೇಳಿದರು.

ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರಿಗೆ ₹ 1.74 ಕೋಟಿ ಸಾಲ ವಿತರಿಸಲಾಯಿತು. ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮಣ್ಣ, ಸುಗಟೂರು ಎಸ್‌ಎಫ್‌ಸಿಎಸ್‌ ಅಧ್ಯಕ್ಷ ಟಿ.ವಿ.ತಿಮ್ಮರಾಯಪ್ಪ, ಉಪಾಧ್ಯಕ್ಷೆ ರುಕ್ಕಮ್ಮ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಶಶಿಧರ್, ಮಾಜಿ ನಿರ್ದೇಶಕ ಕೃಷ್ಣೇಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಟಿ.ವಿ.ಕೃಷ್ಣಪ್ಪ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT