ಬುಧವಾರ, ಅಕ್ಟೋಬರ್ 28, 2020
28 °C
ಸಭೆಯಲ್ಲಿ ಸಿಬ್ಬಂದಿಗೆ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಗೋವಿಂದಗೌಡ ಕಿವಿಮಾತು

ಬ್ಯಾಂಕ್ ಉಳಿಸುವ ಬದ್ಧತೆ ಇರಲಿ: ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಗೋವಿಂದಗೌಡ ಕಿವಿಮಾತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಸಿಬ್ಬಂದಿಯು ಆಡಳಿತ ಮಂಡಳಿಗೆ ಗೌರವ ನೀಡುತ್ತಲೇ ಬ್ಯಾಂಕ್‌ನ ಕತೆ ಮುಗಿಸಿದ್ದು ಇತಿಹಾಸ. ಅದು ಪುನರಾವರ್ತನೆಯಾಗಲು ಬಿಡುವುದಿಲ್ಲ. ಸಿಬ್ಬಂದಿ ಬದ್ಧತೆಯಿಂದ ಕೆಲಸ ಮಾಡಿದರೆ ಸಾಕು’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಗೋವಿಂದಗೌಡ ಗುಡುಗಿದರು.

ಇಲ್ಲಿ ಶುಕ್ರವಾರ ನಡೆದ ಬ್ಯಾಂಕ್‌ನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ‘ಸಿಬ್ಬಂದಿ ಈ ಹಿಂದೆ ಆಡಳಿತ ಮಂಡಳಿಗೆ ಗೌರವ ನೀಡುತ್ತಲೇ ಗೊಣ್ಣೆ ಹುಳುವಿನಂತೆ ಬ್ಯಾಂಕ್‌ ನಿರ್ನಾಮ ಮಾಡಿದ್ದನ್ನು ನೋಡಿದ್ದೇವೆ. ಅನ್ನ ನೀಡಿರುವ ಬ್ಯಾಂಕ್ ಉಳಿಸುವ ಬದ್ಧತೆ ಸಿಬ್ಬಂದಿಯಲ್ಲಿ ಇರಬೇಕು’ ಎಂದು ತಾಕೀತು ಮಾಡಿದರು.

‘ಬಡ ರೈತರು, ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ನೀಡುವ ಜವಾಬ್ದಾರಿಯಿದೆ. ಶೋಷಿತರಿಗೆ ಸೌಲಭ್ಯ ನೀಡುವ ಮೂಲಕ ಸಾರ್ಥಕತೆ ಮೆರೆಯಬೇಕು. ಮುಲಾಜಿಗೆ ಒಳಗಾದರೆ ಸಹಕಾರಿ ಸಂಸ್ಥೆ ಹಾಳಾಗುತ್ತದೆ. ಸಿಬ್ಬಂದಿ ಕೈ ಶುದ್ಧವಾಗಿಟ್ಟುಕೊಂಡು ಕೆಲಸ ಮಾಡಿ’ ಎಂದು ಕಿವಿಮಾತು ಹೇಳಿದರು.

‘ಬ್ಯಾಂಕ್‌ಗೆ ಅ.7ರಂದು ಮೈಕ್ರೋ ಎಟಿಎಂ ಉಪಕರಣಗಳು ಪೂರೈಕೆಯಾಗಲಿದ್ದು, ಮರು ದಿನದಿಂದಲೇ ಸೊಸೈಟಿಗಳಿಗೆ ವಿತರಣೆ ಮಾಡಲಾಗುತ್ತದೆ. ಮಹಿಳಾ ಸಂಘಗಳು ಮತ್ತು ಹಾಲು ಸೊಸೈಟಿ ಸದಸ್ಯರ ವೈಯಕ್ತಿಕ ಖಾತೆಗೆ ಹಣ ವರ್ಗಾವಣೆ ಮಾಡಬೇಕು. ಗ್ರಾಹಕರಿಗೆ ಮೈಕ್ರೋ ಎಟಿಎಂ ಸೇವೆ ಉಚಿತವಾಗಿದ್ದು, ಯಾವುದೇ ನಿರ್ವಹಣಾ ವೆಚ್ಚ ಇರುವುದಿಲ್ಲ. ಈ ಬಗ್ಗೆ ಗ್ರಾಹಕರಿಗೆ ಜಾಗೃತಿ ಮೂಡಿಸಬೇಕು’ ಎಂದು ಸೂಚಿಸಿದರು.

ಎಟಿಎಂ ಸೇವೆ: ‘ಆಂಬುಲೆನ್ಸ್‌ ಮಾದರಿಯಲ್ಲಿ ಎಟಿಎಂ ವಾಹನಗಳು ಕರೆ ಬಂದೆಡೆಗೆ ಹೋಗುವ ವ್ಯವಸ್ಥೆ ಮಾಡಲಾಗುತ್ತದೆ. ಈ ಸೇವೆಗೆ ಶೀಘ್ರವೇ ಚಾಲನೆ ನೀಡುತ್ತೇವೆ. ಬ್ಯಾಂಕ್‌ನ ಸಿಬ್ಬಂದಿ ಸಾಲ ಸುಸ್ತಿ ಆಗದಂತೆ ಎಚ್ಚರ ವಹಿಸಬೇಕು. ಹಿಂದಿನ ವರ್ಷ ಶೇ 2.40ರಷ್ಟಿದ್ದ ವಸೂಲಾಗದ ಸಾಲದ (ಎನ್‌ಪಿಎ) ದಾಖಲೆ ಮುರಿದು ಈ ಬಾರಿ ಮತ್ತಷ್ಟು ಕಡಿಮೆ ಮಾಡಬೇಕು’ ಎಂದು ಹೇಳಿದರು.

‘ಮಧ್ಯಮಾವಧಿ ಸಾಲ ಪಡೆದಿರುವ ಗ್ರಾಹಕರು ಯೋಜನೆ ಆರಂಭಿಸದ ಪ್ರಕರಣಗಳ ಸಂಬಂಧ ತಕ್ಷಣ ನೋಟಿಸ್ ಜಾರಿ ಮಾಡಿ. ಅಕ್ಟೋಬರ್ ಅಂತ್ಯದೊಳಗೆ ಕೆಸಿಸಿ ಸಾಲ ವಸೂಲಿ ಮಾಡಬೇಕು. ಸ್ತ್ರೀಶಕ್ತಿ ಸಂಘಗಳಿಗೆ ಸ್ಥಳ ಪರಿಶೀಲನೆ ಮತ್ತು ದಾಖಲೆಪತ್ರ ಪರಿಶೀಲನೆ ಆಗದೆ ಸಾಲ ಮಂಜೂರು ಮಾಡುವುದು ಸರಿಯಲ್ಲ. ನಬಾರ್ಡ್ ಅಧಿಕಾರಿಗಳು ಈ ಬಗ್ಗೆ ಬ್ಯಾಂಕ್‌ನಲ್ಲಿ ಸದ್ಯದಲ್ಲೇ ಪರಿಶೀಲನೆ ನಡೆಸಲಿದ್ದು, ದಾಖಲೆಪತ್ರಗಳು ಪಕ್ಕಾ ಇರಬೇಕು’ ಎಂದರು.

ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಹನುಮಂತರೆಡ್ಡಿ, ನಾಗಿರೆಡ್ಡಿ, ಮೋಹನ್‌ರೆಡ್ಡಿ, ವೆಂಕಟರೆಡ್ಡಿ, ವ್ಯವಸ್ಥಾಪಕ ನಿರ್ದೇಶಕ ರವಿ, ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಶಿವಕುಮಾರ್, ಚೌಡಪ್ಪ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.