ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಸಿಸಿ ಬ್ಯಾಂಕ್‌ ವಿರುದ್ಧ ದೂರು: ಶಾಸಕ ಕೆ.ಆರ್.ರಮೇಶ್‌ಕುಮಾರ್ ಆಕ್ರೋಶ

Last Updated 1 ಅಕ್ಟೋಬರ್ 2019, 13:19 IST
ಅಕ್ಷರ ಗಾತ್ರ

ಕೋಲಾರ: ‘ನನ್ನ ಮತ್ತು ಗೋವಿಂದಗೌಡರ ಮೇಲಿನ ರಾಜಕೀಯ ದ್ವೇಷಕ್ಕೆ ಡಿಸಿಸಿ ಬ್ಯಾಂಕ್ ವಿರುದ್ಧ ದೂರು ನೀಡುವವರು ಎಂದಿಗೂ ಉದ್ಧಾರ ಅಗಲ್ಲ’ ಎಂದು ಶಾಸಕ ಕೆ.ಆರ್.ರಮೇಶ್‌ಕುಮಾರ್ ಎಚ್ಚರಿಕೆ ನೀಡಿದರು.

ತಾಲ್ಲೂಕಿನ ವಾನರಾಶಿ ಗ್ರಾಮದಲ್ಲಿ ಡಿಸಿಸಿ ಬ್ಯಾಂಕ್ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಸಾಲ ವಿತರಣಾ ಕಾರ್ಯಕ್ರಮದಲ್ಲಿ ಮಹಿಳಾ ಸಂಘಗಳ ಸದಸ್ಯರಿಗೆ ಸಾಲದ ಚೆಕ್ ವಿತರಿಸಿ ಮಾತನಾಡಿ, ‘ಬ್ಯಾಂಕ್ ವಿರುದ್ಧ ದೂರು ನೀಡುವವರಿಗೆ ಬಡ ಮಹಿಳೆಯರ ಶಾಪ ತಟ್ಟುತ್ತದೆ’ ಎಂದರು.

‘ಜೀವನದಲ್ಲಿ ಹಣ ಎಲ್ಲರಿಗೂ ಅವಶ್ಯಕತೆ ಇರುತ್ತದೆ. ಆರೋಗ್ಯ, ಶಿಕ್ಷಣ, ಮದುವೆ, ಆಸ್ತಿಪಾಸ್ತಿ ಖರೀದಿ ಇತ್ಯಾದಿ ಕುಟುಂಬದ ಗೌರವದ ನಿರ್ವಹಣೆ ಮತ್ತು ಶ್ರೇಯೋಭಿವೃದ್ದಿಗೆ ಹಣದ ಅನಿವಾರ್ಯತೆ ಇರುವುದು ಸಹಜ. ಹಣದ ಸಮಸ್ಯೆ ಎದುರಾದರೆ ಪಡುವ ಕಷ್ಟ ಯಾರಿಗೂ ಬೇಡ ಅನಿಸುತ್ತದೆ’ ಎಂದು ಹೇಳಿದರು.

‘ಕಷ್ಟದ ಸಂದರ್ಭದಲ್ಲಿ ಹಣವನ್ನು ಎಲ್ಲಿಯಾದರೂ ಸರಿ ಹೊಂದಿಸಬೇಕಾಗುತ್ತದೆ. ಆದರೆ ಹಿಂದೆ ಕೊಟ್ಟು ತೆಗೆದುಕೊಳ್ಳುವ ಪದ್ದತಿಯಿತ್ತು. ಕಾಲ ಬದಲಾಗುತ್ತಿದ್ದಂರೆ ಆ ಪದ್ದತಿಗಳೆಲ್ಲಾ ಮಯಾವಾಗಿದೆ. ಸಾಲಕ್ಕಾಗಿ ನೆಂಟರು, ಸ್ನೇಹಿತರು, ವಾಣಿಜ್ಯ ಬ್ಯಾಂಕಿಗೆ ಹೋದರೆ ಬಡ ಸಮಾನ್ಯ ಜನರನ್ನು ಹತ್ತಿರಕ್ಕೆ ಸೇರಿಸುವುದೇ ಇಲ್ಲ’ ಎಂದು ಅಸಮಾಧಾನವ್ಯಕ್ತಪಡಿಸಿದರು.

‘ಲೇವಾದೇವಿದಾರರ ಬಳಿ ಹೋದರೆ ಭೂಮಿ, ಚಿನ್ನಾಭರಣ ಅಡಮಾನ ಇಡ ಬೇಕಾಗುತ್ತದೆ. ಅವರು ವಿಧಿಸುವ ಬಡ್ಡಿ, ಚಕ್ರಬಡ್ಡಿ, ಮೀಟರ್ ಬಡ್ಡಿಗಳು ಕಟ್ಟಲಿಕ್ಕೆ ಆಗದೆ ಕೊನೆಗೆ ಎಲ್ಲಾ ಕಳೆದು ಕೊಂಡು ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗತ್ತದೆ. ಇಂತಹ ಪರಿಸ್ಥಿತಿಯಿಂದ ರೈತರನ್ನು, ಮಹಿಳೆಯರನ್ನು ದೂರ ಮಾಡಬೇಕು ಎಂದು ಉದ್ದೇಶದಿಂದ ಬ್ಯಾಂಕ್‌ ಮೂಲಕ ಪ್ರಯತ್ನ ಮಾಡಲಾಗುತ್ತಿದೆ’ ಎಂದು ಹೇಳಿದರು.

‘ದೇವರು ರೂಪಾಯಿ ಸೃಷ್ಠಸಲಿಲ್ಲ, ಮನುಷ್ಯನನ್ನು ಸೃಷ್ಟಿಸಿದ. ಮನುಷ್ಯ ರೂಪಾಯಿಯನ್ನು ಸೃಷ್ಠಿಸಿ ದೇವರನ್ನು ಮರೆತು ರೂಪಾಯಿಯನ್ನು ಲಕ್ಷ್ಮೀಯೆಂದು ಪೂಜಿಸುತ್ತಿದ್ದಾನೆ. ಮೊದಲು ರಾಜ್ಯದಲ್ಲಿ ಶ್ರೀಧರ್ಮಸ್ಥಳ ಅಭಿವೃದ್ದಿ ಯೋಜನಾ ಸಂಸ್ಥೆಯು ಕಡಿಮೆ ಬಡ್ಡಿ ದರದಲ್ಲಿ ಮಹಿಳಾ ಸಂಘಗಳಿಗೆ ಸಾಲ ವಿತರಿಸಲಾಗುತ್ತಿತ್ತು. ಅದನ್ನು ಕಂಡು ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹಾಕಿ ಮಹಿಳೆಯರಿಗೆ ಸಹಕಾರಿ ಬ್ಯಾಂಕ್‌ಗಳ ಮೂಲಕ ₹50 ಸಾವಿರದವರೆಗೆ ಶೂನ್ಯ ಬಡ್ಡಿದರದಲ್ಲಿ ನೀಡಲು ಯೋಜನೆ ಅನುಷ್ಟಾನಕ್ಕೆ ತರಲಾಯಿತು. ಆದರೂ ಸಹ ಕೆಲವರು ಇದನ್ನು ಸಹಿಸುತ್ತಿಲ್ಲ, ಅವರಿಗೆ ಮನುಷ್ಯತ್ವ ಇಲ್ಲವೇ’ ಎಂದು ಪ್ರಶ್ನಿಸಿದರು.

ಇದೇ ಸಂದರ್ಭದಲ್ಲಿ 11 ಮಹಿಳಾ ಸಂಘಗಳಿಗೆ ₹55 ಲಕ್ಷ ಸಾಲ ವಿತರಿಸಲಾಯಿತು.

ಗ್ರಾಮ ಪಂಚಾಯಿತಿ ಸದಸ್ಯರಾದ ರಾಜಮ್ಮ, ರವೀಂದ್ರ, ಶ್ರೀನಿವಾಸಪುರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸಂಜೀವರೆಡ್ಡಿ, ವಿದ್ವಾನ್ ವಾನರಾಶಿ ಬಾಲಕೃಷ್ಣ ಭಾಗವತಾರ್, ಡಿಸಿಸಿ ಬ್ಯಾಂಕಿನ ವ್ಯವಸ್ಥಾಪಕ ಅಮರೇಶ್ಮ ಮೇಲ್ವಿಚಾರಕ ಅಮೀನ, ಗ್ರಾ,ಪಂ ಮಾಜಿ ಅಧ್ಯಕ್ಷ ಮುನಿವೆಂಕಟಪ್ಪ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜುನಾಥ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT