ಶುಕ್ರವಾರ, ಡಿಸೆಂಬರ್ 4, 2020
24 °C
ಜೆಡಿಎಸ್‌ನಲ್ಲೇ ಇದ್ದೇನೆ: ಮಾಜಿ ಶಾಸಕ ಮಧು ಬಂಗಾರಪ್ಪ ಹೇಳಿಕೆ

ಕಾಂಗ್ರೆಸ್‌ ಸೇರ್ಪಡೆ: ನಿರ್ಧಾರ ಮಾಡಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ನಾನು ಇನ್ನೂ ಜೆಡಿಎಸ್‌ ಪಕ್ಷದಲ್ಲೇ ಇದ್ದೇನೆ. ಆದರೆ, ಪಕ್ಷದ ಚಟುವಟಿಕೆಗಳಲ್ಲಿ ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳುತ್ತಿಲ್ಲ. ಕಾಂಗ್ರೆಸ್‌ ಸೇರುವ ಬಗ್ಗೆ ನಿರ್ಧಾರ ಮಾಡಿಲ್ಲ’ ಎಂದು ಮಾಜಿ ಶಾಸಕ ಮಧು ಬಂಗಾರಪ್ಪ ಸ್ಪಷ್ಟಪಡಿಸಿದರು.

ಇಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್‌ ಮತ್ತು ನಾವು ಕುಟುಂಬ ಸ್ನೇಹಿತರು. ತಂದೆ ಮುಖ್ಯಮಂತ್ರಿಯಾಗಿದ್ದಾಗ ಶಿವಕುಮಾರ್ ಅವರ ಜತೆಯಾಗಿ ಕೆಲಸ ಮಾಡಿದ್ದಾರೆ. ಹೀಗಾಗಿ ಶಿವಕುಮಾರ್‌ ಅವರು ನನ್ನನ್ನು ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನಿಸಿದ್ದಾರೆ’ ಎಂದು ಹೇಳಿದರು.

‘ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿ ಸರ್ಕಾರದಲ್ಲಿ ಬಸವರಾಜ ಹೊರಟ್ಟಿ, ಎಚ್‌.ವಿಶ್ವನಾಥ್ ಅವರಿಗೆ ಮಂತ್ರಿ ಸ್ಥಾನ ಕೊಡಬೇಕಿತ್ತು. ಅಧಿಕಾರ ಕೊಟ್ಟಿದ್ದರೆ ವಿಶ್ವನಾಥ್‌ ಜೆಡಿಎಸ್‌ನಲ್ಲೇ ಉಳಿಯುತ್ತಿದ್ದರು. ನಾನು ಕೈ ಮುಗಿದು ಮನವಿ ಮಾಡಿದರೂ ಅವರು ಪಕ್ಷ ಬಿಟ್ಟು ಹೋದರು. ಜೆಡಿಎಸ್‌ ಅಧಿಕಾರದಲ್ಲಿದ್ದಾಗ ಪಕ್ಷದವರಿಗೆ ಸ್ಥಾನಮಾನ ನೀಡಲಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಜೆಡಿಎಸ್‌ನಲ್ಲಿ ಸಾಕಷ್ಟು ಗೊಂದಲವಿದೆ. ನಾನು ಮಾತ್ರವಲ್ಲ, ಇಡೀ ಜೆಡಿಎಸ್ ಪಕ್ಷ ಸುಮ್ಮನಾಗಿ ಕುಳಿತಿದೆ. ವಿಪಕ್ಷದವರು ದುರ್ಬಲವಾಗಿರುವುದರಿಂದ ಬಿಜೆಪಿ ಬಲವಾಗಿದೆ. ಬಿಜೆಪಿ ವಿರುದ್ಧ ರಾಜಕೀಯ ಧ್ರುವೀಕರಣವಾಗದಿದ್ದರೆ ಭವಿಷ್ಯದಲ್ಲಿ ದೇಶಕ್ಕೆ ಕಷ್ಟವಾಗುತ್ತೆ’ ಎಂದು ಅಭಿಪ್ರಾಯಪಟ್ಟರು.

ದುರುದ್ದೇಶದ ನಿರ್ಧಾರ: ‘ನಿಗಮ, ಮಂಡಳಿ ಘೋಷಣೆ ಮುಖ್ಯವಲ್ಲ. ಅನುದಾನ ಕೊಡುವುದು ಮುಖ್ಯ. ಮರಾಠಾ ಅಭಿವೃದ್ಧಿ ನಿಗಮ ರಚನೆಯು ಬಿಜೆಪಿಯ ರಾಜಕೀಯ ದುರುದ್ದೇಶದ ನಿರ್ಧಾರ. ಜಾತಿ ಬಗ್ಗೆ ಮಾತನಾಡುವುದರಲ್ಲಿ ಬಿಜೆಪಿಯವರು ನಿಸ್ಸಿಮರು. ರಾಮನ ವಿಚಾರ ಆಯಿತು, ಮುಂದಿನ ಚುನಾವಣೆಯಲ್ಲಿ ಕೃಷ್ಣನ ಬಗ್ಗೆ ಮಾತನಾಡುತ್ತಾರೆ’ ಎಂದು ವ್ಯಂಗ್ಯವಾಡಿದರು.

‘ನಿಗಮ, ಮಂಡಳಿಗಳ ಅಗತ್ಯವೇನಿತ್ತು? ನಮ್ಮ ಸಮುದಾಯದವರು ಸಹ ನಿಗಮ, ಮಂಡಳಿ ಕೇಳುತ್ತಿದ್ದಾರೆ. ಕೊಡಬೇಡಿ ಅಂತ ಹೇಳುವುದಕ್ಕೆ ಆಗುತ್ತಾ? ಕೊಟ್ಟರೆ ಬೇಡ ಅನ್ನೋಕೆ ಆಗುತ್ತಾ? ಸರ್ಕಾರ ಮೊದಲು ಘೋಷಣೆ ಮಾಡಿರುವ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡಲಿ’ ಎಂದು ಸವಾಲು ಹಾಕಿದರು.

‘ನಮ್ಮ ಅಪ್ಪ ನನಗೆ ಕೆಟ್ಟ ಬುದ್ಧಿ ಹೇಳಿಕೊಟ್ಟಿಲ್ಲ. ಒಳ್ಳೆಯ ಬುದ್ಧಿ ಕಲಿಸಿದ್ದರಿಂದ ಚುನಾವಣೆಯಲ್ಲಿ 4 ಬಾರಿ ಸೋತಿದ್ದೇನೆ. ಪಕ್ಷದಲ್ಲಿ ಬೇರೆಯವರು ಸಕ್ರಿಯರಾಗಿದ್ದರೆ ನಾನೇನು ಮಾಡಲಿ. ಅದು ಮುಖ್ಯಮಂತ್ರಿ ಮಗನೇ ಆಗಿರಲಿ ಅಥವಾ ಮಾಜಿ ಮುಖ್ಯಮಂತ್ರಿ ಮಗನೇ ಆಗಿರಲಿ. ಸಿದ್ಧಾಂತ ಬಿಟ್ಟು ಹಣ, ಅಧಿಕಾರಕ್ಕೆ ಜೋತು ಬಿದ್ದಿದ್ದರೆ ಯಾವಾಗಲೂ ಗೆಲ್ಲುತ್ತಿದೆ. ಜಾತ್ಯತೀತ ಪಕ್ಷವೆಂದು ಹೆಸರು ಇಟ್ಟುಕೊಂಡ ಮೇಲೆ ಜಾತ್ಯಾತೀತವಾಗಿ ನಡೆದುಕೊಳ್ಳಬೇಕು’ ಎಂದು ಪರೋಕ್ಷವಾಗಿ ಜೆಡಿಎಸ್‌ ವರಿಷ್ಠರ ವಿರುದ್ಧ ಹರಿಹಾಯ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು