ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಪ್ರತಿಭಟನೆ

ಎಐಸಿಸಿ ವರಿಷ್ಠರ ವರ್ಚಸ್ಸಿಗೆ ಧಕ್ಕೆ ತರಲು ಹುನ್ನಾರ: ಶಾಸಕ ಕೆ.ವೈ. ನಂಜೇಗೌಡ ಆರೋಪ
Last Updated 23 ಜೂನ್ 2022, 4:20 IST
ಅಕ್ಷರ ಗಾತ್ರ

ಮಾಲೂರು: ಎಐಸಿಸಿ ನಾಯಕರನ್ನು ಇಲ್ಲಸಲ್ಲದ ಕೇಸುಗಳಲ್ಲಿ ವಿಚಾರಣೆಗೆ ಒಳಪಡಿಸಿ ಅವರ ವರ್ಚಸ್ಸು ಕುಗ್ಗಿಸಲು ಬಿಜೆಪಿ ಕೇಂದ್ರ ಸರ್ಕಾರ ಇ.ಡಿ, ಐಟಿ, ಸಿಬಿಐ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದೆ ಎಂದು ಶಾಸಕ ಕೆ.ವೈ. ನಂಜೇಗೌಡ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ತಾಲ್ಲೂಕು ಕಾಂಗ್ರೆಸ್ ಘಟಕದಿಂದ ಬುಧವಾರ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವವಹಿಸಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ನೆಹರೂ ಕುಟುಂಬವನ್ನು ಗುರಿಯಾಗಿಟ್ಟುಕೊಂಡಿದೆ. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ಮೇಲೆ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ವಿಚಾರದಲ್ಲಿ ಇ.ಡಿ ಮೂಲಕ ತನಿಖೆ ನಡೆಸುವ ನೆಪದಲ್ಲಿ ಅವರು ಮತ್ತು ಪಕ್ಷದ ವರ್ಚಸ್ಸನ್ನು ಕುಂದಿಸಲು ಹೊರಟಿದೆ ಎಂದು ದೂರಿದರು.

ಸರ್ಕಾರ ದ್ವೇಷ ರಾಜಕಾರಣ ಬಿಡಬೇಕು. ನಿರುದ್ಯೋಗ ಸಮಸ್ಯೆ ನಿವಾರಣೆ, ಬೆಲೆ ಏರಿಕೆ ನಿಯಂತ್ರಣ ಸೇರಿದಂತೆ ಜನಪರ ಯೋಜನೆಗಳನ್ನು ಜಾರಿಗೆ ತಂದು ತಮಗೆ ಅಧಿಕಾರ ನೀಡಿರುವ ಮತದಾರರ ಹಿತ ಕಾಪಾಡಲು ಮುಂದಾಗಬೇಕು. ಇದೇ ಧೋರಣೆ ಮುಂದುವರಿದರೆ ಸ್ವಾತಂತ್ರ್ಯ ಹೋರಾಟದ ರೀತಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಎಂ.ಎಲ್. ಅನಿಲ್ ಕುಮಾರ್ ಮಾತನಾಡಿ, ದೇಶದ ಅಭಿವೃದ್ಧಿ ಬಿಟ್ಟು ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿ ಜಾರಿಗೆ ತಂದಿದ್ದ ಜನಪರ ಯೋಜನೆಗಳ ಹೆಸರನ್ನು ಬದಲಾಯಿಸಲಾಗಿದೆ. ಖಾಸಗೀಕರಣದಿಂದ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಅಗ್ನಿಪಥ್ ಎಂಬ ಆರ್‌ಎಸ್‌ಎಸ್ ಪ್ರಾಯೋಜಿತ ಯೋಜನೆಯಾಗಿದೆ ಎಂದು ಟೀಕಿಸಿದರು.

ರಾಜ್ಯದಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ವಿಚಾರದಲ್ಲೂ ಲೋಪ ಎಸಗಿದೆ. ಒಂದೇ ಸಮುದಾಯದ 9 ಮಂದಿಯನ್ನು ಒಳಗೊಂಡ ಸಮಿತಿ ರಚನೆ ಮಾಡಿ ಅವಶ್ಯವಿಲ್ಲದ ವ್ಯಕ್ತಿಗಳ ಬಗ್ಗೆ ಪಠ್ಯದಲ್ಲಿ ಸೇರಿಸಿದೆ. ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್, ಬಸವಣ್ಣ, ಕುವೆಂಪು ಅವರಂತಹ ಮಹಾನ್ ಚೇತನರನ್ನು ಅವಮಾನಿಸಲಾಗಿದೆ ಎಂದು ಆರೋಪಿಸಿದರು.

ಮಾಜಿ ಶಾಸಕ ಎ. ನಾಗರಾಜು ಮಾತನಾಡಿ, ಪ್ರಭಾವಿ ನಾಯಕರ ವಿರುದ್ಧ ಇ.ಡಿ, ಐಟಿ, ಸಿಬಿಐ ಬಳಸಿಕೊಂಡು ಕಿರುಕುಳ ನೀಡಲಾಗುತ್ತಿದೆ. ಸಂಘ ಪರಿವಾರದ ಕೈಗೊಂಬೆಯಂತಾಗಿರುವ ಸರ್ಕಾರ ಲಜ್ಜೆಗೆಟ್ಟು ಆರ್‌ಎಸ್‌ಎಸ್ ನಾಯಕರ ಮಾತಿನಂತೆ ವರ್ತಿಸುತ್ತಿದೆ. ದೇಶದ ಜನತೆ ಬಗ್ಗೆ ಅವರಿಗೆ ಕಾಳಜಿ ಇಲ್ಲ ಎಂದು ಟೀಕಿಸಿದರು.

ಇಂದಿರಾ ಕ್ಯಾಂಟೀನ್‌ನಿಂದ ಪ್ರತಿಭಟನಾ ಜಾಥಾ ಆರಂಭಿಸಿ ಮಾರಿಕಾಂಬಾ ವೃತ್ತದಲ್ಲಿ ರಸ್ತೆ ನಡೆಸಿದರು. ನಂತರ ತಾಲ್ಲೂಕು ಕಚೇರಿ ಮುಂಭಾಗ ಪ್ರತಿಭಟಿಸಿ ತಹಶೀಲ್ದಾರ್ ರಮೇಶ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಜಿ. ಮಧುಸೂದನ್, ಎಚ್.ಎಂ. ವಿಜಯನರಸಿಂಹ, ಕೆಪಿಸಿಸಿ ಕಾರ್ಯದರ್ಶಿ ಸಿ. ಲಕ್ಷ್ಮಿನಾರಾಯಣ, ಡಿಸಿಸಿ ಪ್ರಧಾನ ಕಾರ್ಯದರ್ಶಿ ಸಂತೇಹಳ್ಳಿ ನಾರಾಯಣಸ್ವಾಮಿ, ಎಂ.ಎಸ್. ಪ್ರದೀಪ್ ರೆಡ್ಡಿ, ಒಬಿಸಿ ಜಿಲ್ಲಾ ಅಧ್ಯಕ್ಷ ಟಿ.ಎಂ. ಅಶೋಕ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮೈಲಾಂಡಹಳ್ಳಿ ನಾರಾಯಣಸ್ವಾಮಿ, ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ರತ್ನಮ್ಮ, ಬ್ಲಾಕ್ ಅಧ್ಯಕ್ಷರಾದ ಚಂದ್ರಿಕಾ, ವಿಜಯಲಕ್ಷ್ಮಿ, ಯುವ ಕಾಂಗ್ರೆಸ್ ಅಧ್ಯಕ್ಷರಾದ ತನ್ವೀರ್, ಮಾಸ್ತಿ ಚೇತನ್, ಪುರಸಭಾ ಅಧ್ಯಕ್ಷೆ ಭವ್ಯಾ ಶಂಕರ್, ಉಪಾಧ್ಯಕ್ಷೆ ಭಾರತಮ್ಮ ಶಂಕರಪ್ಪ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT