ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಸೂತ್ರ ಚುನಾವಣೆಗೆ ಸಹಕರಿಸಿ

ಸಭೆಯಲ್ಲಿ ಗಡಿ ರಾಜ್ಯಗಳ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಮನವಿ
Last Updated 23 ಫೆಬ್ರುವರಿ 2019, 13:33 IST
ಅಕ್ಷರ ಗಾತ್ರ

ಕೋಲಾರ: ‘ಯಾವುದೇ ಅಕ್ರಮಕ್ಕೆ ಅವಕಾಶ ನೀಡದೆ ಲೋಕಸಭಾ ಚುನಾವಣೆಯನ್ನು ಸುಸೂತ್ರವಾಗಿ ನಡೆಸಲು ಗಡಿ ರಾಜ್ಯಗಳ ಅಧಿಕಾರಿಗಳು ಸಹಕಾರ ನೀಡಬೇಕು’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಮನವಿ ಮಾಡಿದರು.

ಲೋಕಸಭಾ ಚುನಾವಣೆ ಸಂಬಂಧ ಇಲ್ಲಿ ಶನಿವಾರ ಆಂಧ್ರಪ್ರದೇಶದ ಚಿತ್ತೂರು ಮತ್ತು ತಮಿಳುನಾಡಿನ ಕೃಷ್ಣಗಿರಿ, ಧರ್ಮಪುರಿ ಜಿಲ್ಲಾಡಳಿತದ ಪ್ರತಿನಿಧಿಗಳು, ಪೊಲೀಸ್‌ ಮತ್ತು ಅಬಕಾರಿ ಇಲಾಖೆ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿ. ‘ಕೋಲಾರವು ಗಡಿ ಜಿಲ್ಲೆಯಾಗಿದ್ದು, ಆಂಧ್ರಪ್ರದೇಶ ಮತ್ತು ತಮಿಳುನಾಡಿಗೆ ಹೊಂದಿಕೊಂಡಿದೆ’ ಎಂದರು.

‘ಚುನಾವಣೆ ಸಂದರ್ಭದಲ್ಲಿ ಗಡಿಯಲ್ಲಿ ಕಟ್ಟೆಚ್ಚರ ವಹಿಸಬೇಕು. ನಮ್ಮ ಜಿಲ್ಲೆಯ ಅಧಿಕಾರಿಗಳ ಜತೆಗೆ ಅಕ್ಕಪಕ್ಕದ ಚಿತ್ತೂರು, ಕೃಷ್ಣಗಿರಿ, ಧರ್ಮಪುರಿ ಜಿಲ್ಲೆಯ ಅಧಿಕಾರಿಗಳು ಸಹಕಾರ ನೀಡಬೇಕು. ಅದೇ ರೀತಿ ನಾವು ನಿಮಗೆ ಸಹಕಾರ ನೀಡುತ್ತೇವೆ’ ಎಂದು ತಿಳಿಸಿದರು.

‘ಚುನಾವಣಾ ದಿನಾಂಕ ಬೇರೆ ಬೇರೆಯಾಗಿರುವುದರಿಂದ ಇಲ್ಲಿ ಚುನಾವಣೆ ಇದ್ದಾಗ ನೀವು ಸಹಕಾರ ನೀಡಬೇಕು. ನಿಮ್ಮ ಚುನಾವಣೆಯಂದು ನಾವು ಸಹಕರಿಸುತ್ತೇವೆ. ನೀವು ನಿಗದಿಪಡಿಸಿರುವ ಚೆಕ್‌ಪೋಸ್ಟ್‌ಗಳ ವಿವರ, ಪೊಲೀಸ್ ಠಾಣೆಗಳ ವ್ಯಾಪ್ತಿ ಹಾಗೂ ರಸ್ತೆಗಳ ಮಾಹಿತಿ ನೀಡಬೇಕು. ನೀವು ನಮ್ಮ ಮಾಹಿತಿ ಪಡೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಆಂಧ್ರಪ್ರದೇಶದ ಗಡಿಯಲ್ಲಿ 15 ಮತ್ತು ತಮಿಳುನಾಡು ಗಡಿಯಲ್ಲಿ 5 ಚೆಕ್‌ಪೋಸ್ಟ್‌ಗಳಿವೆ. ರಾಜ್ಯದ ಗಡಿ ಭಾಗದಲ್ಲಿ ಅಗತ್ಯವಿದ್ದರೆ ಚೆಕ್‌ಪೋಸ್ಟ್‌ಗಳನ್ನು ಮತ್ತಷ್ಟು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು. ಒಟ್ಟಾರೆ ಪರಸ್ಪರ ಸೌಹಾರ್ದತೆಯಿಂದ ಶಾಂತಿಯುತವಾಗಿ ಚುನಾವಣೆ ನಡೆಸಬೇಕಿದೆ’ ಎಂದು ಹೇಳಿದರು.

ಮದ್ಯ ನಿಷೇಧ: ‘ಮತದಾನಕ್ಕೆ 48 ತಾಸು ಮುನ್ನ ಮದ್ಯ ನಿಷೇಧ ಜಾರಿ ಮಾಡಲಾಗುತ್ತದೆ. ಆಗ ನಿಮ್ಮ ಗಡಿಯಿಂದ 5 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಕಟ್ಟೆಚ್ಚರ ವಹಿಸಬೇಕು. ಜತೆಗೆ ನಕಲಿ ಮತದಾರರ ಬಗ್ಗೆ ಮಾಹಿತಿ ಬಂದಲ್ಲಿ ನಮಗೆ ತಿಳಿಸಬೇಕು’ ಎಂದು ಕೋರಿದರು.

‘ನಮ್ಮ ಜಿಲ್ಲೆ ವ್ಯಾಪ್ತಿಯಲ್ಲಿ 15 ಚೆಕ್‌ಪೋಸ್ಟ್‌ಗಳಿವೆ. ಚುನಾವಣೆ ವೇಳೆ ಬಂದೋಬಸ್ತ್‌ಗೆ ಬಳಸಿಕೊಳ್ಳುತ್ತೇವೆ. ಆಗ ನಿಮ್ಮ ಭಾಗದ ಅಧಿಕಾರಿಗಳು ವಿಧಾನಸಭೆ ಚುನಾವಣೆಯಲ್ಲಿ ಕಾರ್ಯ ನಿರ್ವಹಿಸಿದಂತೆಯೇ ಈ ಬಾರಿಯೂ ಕೆಲಸ ಮಾಡಬೇಕು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹಿಣಿ ಕಟೋಚ್ ಸೆಪಟ್‌ ಹೇಳಿದರು.

ಡಿವೈಎಸ್ಪಿಗಳಾದ ಬಿ.ಕೆ.ಉಮೇಶ್, ಜಿ.ಅನುಷಾ, ಚಿತ್ತೂರು, ಕೃಷ್ಣಗಿರಿ, ಧರ್ಮಪುರಿ ಜಿಲ್ಲಾಡಳಿತದ ಪ್ರತಿನಿಧಿಗಳು, ಡಿವೈಎಸ್ಪಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT