ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ–ಸಂಶೋಧನೆ ನಡುವೆ ಸಮನ್ವಯ ಅಗತ್ಯ: ಕುಲಪತಿ ಕೆಂಪರಾಜು

Last Updated 3 ಏಪ್ರಿಲ್ 2019, 15:00 IST
ಅಕ್ಷರ ಗಾತ್ರ

ಕೋಲಾರ: ‘ಸಮಾಜದಲ್ಲಿ ಸಮಸ್ಯೆಗಳನ್ನು ಗುರುತಿಸಿ ಸಂಶೋಧನೆ ಮೂಲಕ ಪರಿಹರಿಸಿಕೊಳ್ಳಬಹುದು’ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಟಿ.ಡಿ.ಕೆಂಪರಾಜು ಅಭಿಪ್ರಾಯಪಟ್ಟರು.

ಈ ನೆಲ ಜಲ ಕಲೆ ಮತ್ತು ಸಾಂಸ್ಕೃತಿಕ ಸಂಸ್ಥೆಯು ಇಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ‘ಶಿಕ್ಷಣ ಮತ್ತು ಸಂಶೋಧನೆ ನಡುವೆ ಸಮನ್ವಯ ಇದ್ದಾಗ ಮಾತ್ರ ದೇಶ, ರಾಜ್ಯದ ಸಮಗ್ರ ಅಭಿವೃದ್ಧಿ ಸಾಧ್ಯ’ ಎಂದು ಹೇಳಿದರು.

‘ಇತ್ತೀಚಿನ ವರ್ಷಗಳಲ್ಲಿ ಸಂಶೋಧನೆ ತುಂಬಾ ಅವಶ್ಯಕವಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಸಂಶೋಧನೆಯತ್ತ ಗಮನಹರಿಸಿ ವೃತ್ತಿ ಜೀವನ ರೂಪಿಸಿಕೊಳ್ಳಬೇಕು. ಸಂಶೋಧನೆ ನಂತರ ಜವಾಬ್ದಾರಿ ಹೆಚ್ಚುತ್ತದೆ. ಈ ಹಿಂದೆ ಸಂಶೋಧನೆಗೆ ಪೋತ್ಸಾಹ ಇರಲಿಲ್ಲ. ಉನ್ನತ ಶಿಕ್ಷಣ ಪಡೆದರೆ ಉನ್ನತ ಸ್ಧಾನ ಪಡೆಯಲು ಸಾಧ್ಯವಾಗುತ್ತದೆ’ ಎಂದು ಸಲಹೆ ನೀಡಿದರು.

‘ತಾಂತ್ರಿಕತೆಯ ಭಾಗವಾಗಿ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಾಕಷ್ಟು ಉದ್ಯೋಗಾವಕಾಶ ಇವೆ. ವಿದ್ಯಾರ್ಥಿಗಳು ಉದ್ಯೋಗಾವಕಾಶದತ್ತ ಹೆಚ್ಚು ಗಮನ ಹರಿಸಬೇಕು. ಸರ್ಕಾರ ಸಂಶೋಧನೆಗಾಗಿ ನೀಡುವ ವಿವಿಧ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಬೇಕು. ಸಂಶೋಧನೆ ಮೂಲಕ ಜನರ ಜೀವನ ಮಟ್ಟ ಸುಧಾರಣೆಗೆ ಮತ್ತು ಸಮಾಜದಲ್ಲಿನ ಬದಲಾವಣೆಗೆ ಶ್ರಮಿಸಬೇಕು’ ಎಂದು ಕಿವಿಮಾತು ಹೇಳಿದರು.

‘ಸಂಶೋಧನೆ ಮಾಡಲು ಸಾಮರ್ಥ್ಯವಿದ್ದರೂ ಸರಿಯಾದ ಮಾರ್ಗದರ್ಶನ ಪೋತ್ಸಾಹ ಸಹಕಾರ ಸಿಗದೆ ಸಾಕಷ್ಟು ಮಂದಿ ಅವಕಾಶ ವಂಚಿತರಾಗಿದ್ದಾರೆ. ಶೈಕ್ಷಣಿಕ ಕ್ಷೇತ್ರದಲ್ಲಿ ಡಾಕ್ಟರೇಟ್ ಪದವಿಯ ಮಹತ್ವ ಹೆಚ್ಚಿಸಲು ಸರ್ಕಾರಗಳು ಸಾಕಷ್ಟು ಸೌಲಭ್ಯ ನೀಡುತ್ತಿವೆ’ ಎಂದು ವಿವರಿಸಿದರು.

ಜಾಗೃತಿ ಮೂಡಿಸಬೇಕು: ‘ಯಾವುದೇ ಸಂಶೋಧನೆ ಪ್ರಸ್ತುತ ಸನ್ನಿವೇಶದಲ್ಲಿ ಇರುವ ಕೊರತೆ ಗುರುತಿಸಿ ಜಾಗೃತಿ ಮೂಡಿಸಬೇಕು. ಶಿಕ್ಷಣ ಒಂದೆಡೆ ಕಣ್ಣು ತೆರೆಸುತ್ತದೆ. ಮತ್ತೊಂದೆಡೆ ವಿದ್ಯಾವಂತರು ಕಣ್ಣು ಮುಚ್ಚಿಕೊಂಡು ಲಂಚ ಪಡೆಯಲು ಬಳಕೆಯಾಗುತ್ತಿರುತ್ತದೆ’ ಎಂದು ಸರ್ಕಾರಿ ಮಹಿಳಾ ಕಾಲೇಜು ಪ್ರಾಧ್ಯಾಪಕ ಶಿವಪ್ಪ ಜಿ.ಅರಿವು ಕಳವಳ ವ್ಯಕ್ತಪಡಿಸಿದರು.

‘ಅಕ್ಷರ ಕಲಿತ ಮೇಲೆ ಉದ್ಯೋಗದ ಹೆಸರಿನಲ್ಲಿ ವಿದ್ಯಾವಂತರು ಹಳ್ಳಿ ಬಿಟ್ಟು ನಗರ ಪ್ರದೇಶಕ್ಕೆ ಹೋಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಪಿಎಚ್‌ಡಿ ಪದವಿ ಸಂಭ್ರಮಕ್ಕೆ ಸೀಮಿತವಾಗದೆ ಜನರ ಒಳಿತಿಗೆ ನಾಂದಿ ಹಾಡಿದರೆ ಬೆಲೆ ಸಿಗುತ್ತದೆ’ ಎಂದು ಅಭಿಪ್ರಾಯಪಟ್ಟರು.

ಪಿಎಚ್‌ಡಿ ಪದವಿ ಪಡೆದ ಆರ್.ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಆರ್.ಗೀತಾ, ಈ ನೆಲ ಜಲ ಕಲೆ ಮತ್ತು ಸಾಂಸ್ಕೃತಿಕ ಸಂಸ್ಥೆ ಅಧ್ಯಕ್ಷ ಬಿ.ವೆಂಕಟಾಚಲಪತಿ, ದಲಿತ ಮುಖಂಡ ಟಿ.ವಿಜಯ್‌ಕುಮಾರ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT