ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: ವಿಡಿಯೊ ಸಂವಾದದಲ್ಲಿ ವಿಚಾರಣೆ

ಕಾರ್ಯಕ್ರಮದಲ್ಲಿ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಪವನೇಶ್‌ ಹೇಳಿಕೆ
Last Updated 25 ಜೂನ್ 2021, 11:38 IST
ಅಕ್ಷರ ಗಾತ್ರ

ಕೋಲಾರ: ‘ಕೋವಿಡ್‌ ಆತಂಕದ ನಡುವೆಯೂ ನ್ಯಾಯ ವಿಲೇವಾರಿ ವಿಳಂಬವಾಗದಂತೆ ವಿಡಿಯೋ ಸಂವಾದದ ಮೂಲಕ ಪ್ರಕರಣಗಳ ವಿಚಾರಣೆ ನಡೆಸುತ್ತಿದ್ದು, ಕಕ್ಷಿದಾರರು ಇದರ ಸದುಪಯೋಗ ಪಡೆಯಬೇಕು’ ಎಂದು ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಡಿ.ಪವನೇಶ್‌ ಕೋರಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಕಾರಾಗೃಹ ಇಲಾಖೆ ಸಹಯೋಗದಲ್ಲಿ ಇಲ್ಲಿ ಶುಕ್ರವಾರ ಜಿಲ್ಲಾ ಕಾರಾಗೃಹದ ವಿಚಾರಣಾಧೀನ ಕೈದಿಗಳಿಗೆ ಹಮ್ಮಿಕೊಂಡಿದ್ದ ಕೋವಿಡ್ ಮಾರ್ಗಸೂಚಿ ಪಾಲನೆ ಕುರಿತ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಕೋವಿಡ್ ಸಾಂಕ್ರಾಮಿಕ ರೋಗದಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ದೇಶದ ಆರ್ಥಿಕತೆಗೂ ದೊಡ್ಡ ಪೆಟ್ಟು ಬಿದ್ದಿದೆ. ನ್ಯಾಯಾಂಗ ವ್ಯವಸ್ಥೆಯ ಕಾರ್ಯ ಕಲಾಪಕ್ಕೂ ಅಡ್ಡಿಯಾಗಿದೆ. ಆದರೂ ವಿಚಾರಣಾಧೀನ ಕೈದಿಗಳಿಗೆ ನ್ಯಾಯ ವಿಲೇವಾರಿ ವಿಳಂಬವಾಗದಂತೆ ನ್ಯಾಯಾಲಯ ಕ್ರಮ ವಹಿಸಿದೆ. ವಿಡಿಯೋ ಸಂವಾದದ ಮೂಲಕ ಹಲವು ಪ್ರಕರಣಗಳ ವಿಚಾರಣೆ ನಡೆಸಿ ಇತ್ಯರ್ಥಪಡಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ಕೊರೊನಾ ಸೋಂಕು ಇಡೀ ಸಮಾಜವನ್ನು ತತ್ತರಿಸುವಂತೆ ಮಾಡಿದೆ. ಸೋಂಕು ತಡೆಗೆ ಸರ್ಕಾರ ಸೂಚಿಸಿರುವ ಮಾರ್ಗಸೂಚಿ ಪಾಲನೆ ಕಡ್ಡಾಯವಾಗಿದೆ. ಕೈದಿಗಳು ಕಾರಾಗೃಹದಲ್ಲಿ ಅಂತರ ಕಾಪಾಡಿಕೊಳ್ಳಬೇಕು. ಸೋಂಕಿನ ಲಕ್ಷಣ ಕಂಡುಬಂದರೆ ಜೈಲು ಸಿಬ್ಬಂದಿಯ ಗಮನಕ್ಕೆ ತಂದು ಶೀಘ್ರವೇ ಚಿಕಿತ್ಸೆ ಪಡೆಯಬೇಕು’ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಿದ ಸದಸ್ಯ ಕಾರ್ಯದರ್ಶಿ ಸಿ.ಎಚ್.ಗಂಗಾಧರ್‌ ಸಲಹೆ ನೀಡಿದರು.

‘ಕಾನೂನು ಸೇವಾ ಪ್ರಾಧಿಕಾರ ಉಚಿತ ಕಾನೂನು ನೆರವು ನೀಡುತ್ತಿದೆ. ಮಹಿಳೆಯರು, ಅಂಗವಿಕಲರು ಹಾಗೂ ಆರ್ಥಿಕವಾಗಿ ಹಿಂದುಳಿದ ಎಲ್ಲರಿಗೂ ಈ ಸೌಲಭ್ಯವಿದ್ದು, ವಿಚಾರಣಾಧೀನ ಕೈದಿಗಳು ಇದರ ಪ್ರಯೋಜನ ಪಡೆಯಬೇಕು’ ಎಂದು ಕಿವಿಮಾತು ಹೇಳಿದರು.

ಸಂವಿಧಾನ ಗೌರವಿಸಿ: ‘ಕಾನೂನು ಅರಿವು ನೆರವು ಕಾರ್ಯಕ್ರಮಗಳಿಗೆ ಸಂಘ ಸಂಪೂರ್ಣ ಸಹಕಾರ ನೀಡಿದೆ. ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ಸಂಘವು ಕಟಿಬದ್ಧವಾಗಿದೆ. ವಿಚಾರಣಾಧೀನ ಕೈದಿಗಳು ಕಾನೂನಿನ ಅರಿವು ಪಡೆಯಿರಿ. ಇದರಿಂದ ಜೀವನದಲ್ಲಿ ತಪ್ಪು ಮಾಡದೆ ಎಚ್ಚರ ವಹಿಸಬಹುದು. ದೇಶದ ಸಂವಿಧಾನ ಮತ್ತು ಕಾನೂನು ಗೌರವಿಸುವುದು ಎಲ್ಲರ ಕರ್ತವ್ಯ’ ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಜಿ.ಶ್ರೀಧರ್ ತಿಳಿಸಿದರು.

ವಿಚಾರಣಾಧೀನ ಕೈದಿಗಳ ಹಕ್ಕುಗಳ ಕುರಿತು ಮಾತನಾಡಿದ ಜಿಲ್ಲಾ ಕಾರಾಗೃಹದ ಸೂಪರಿಂಟೆಂಡೆಂಟ್‌ ಕೆ.ಎನ್.ಮೋಹನ್‌ಕುಮಾರ್, ‘ಕೈದಿಗಳಿಗೂ ಕಾನೂನಿನಲ್ಲಿ ಹಕ್ಕುಗಳಿವೆ. ಆ ಹಕ್ಕುಗಳನ್ನು ಪಡೆಯಲು ಕಾನೂನು ಸೇವಾ ಪ್ರಾಧಿಕಾರದ ನೆರವು ಪಡೆಯಬಹುದು’ ಎಂದು ಮಾಹಿತಿ ನೀಡಿದರು.

‘ದೇಶದಲ್ಲಿ ಹುಟ್ಟಿದ ಪ್ರತಿಯೊಬ್ಬರೂ ಕನಿಷ್ಠ ದೈನಂದಿನ ಬದುಕಿಗೆ ಅಗತ್ಯವಿರುವ ಕಾನೂನುಗಳನ್ನು ತಿಳಿದಿರಬೇಕು. ಕಾನೂನಿನ ಜತೆಗೆ ಮಾನವೀಯತೆ ಬೆಳೆಸಿಕೊಳ್ಳಬೇಕು. ಅಪರಾಧ ಮುಕ್ತ ಜೀವನ ನಡೆಸಬೇಕು. ಮಾಡಿದ ತಪ್ಪು ಒಪ್ಪಿಕೊಂಡರೆ ಶಿಕ್ಷೆ ಪ್ರಮಾಣ ಕಡಿಮೆಯಾಗುತ್ತದೆ’ ಎಂದು ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ರಘುಪತಿಗೌಡ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT