ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮಸ್ಥರ ನಿದ್ದೆಗೆಡಿಸಿದ ವಿಷಕಾರಿ ಹೊಗೆ

ವಳಗೇರನಹಳ್ಳಿಯಲ್ಲಿ ಅನಧಿಕೃತ ಡಾಂಬರು ಮಿಶ್ರಣ ಘಟಕ
Last Updated 30 ಜುಲೈ 2020, 17:02 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ವಳಗೇರನಹಳ್ಳಿಯಲ್ಲಿ (ರೋಜರ್‌ಪಲ್ಲಿ ಕ್ರಾಸ್) ಅನಧಿಕೃತವಾಗಿ ತಲೆ ಎತ್ತಿರುವ ಡಾಂಬರು ಮಿಶ್ರಣ ಘಟಕವು ಗ್ರಾಮಸ್ಥರ ನಿದ್ದೆಗೆಡಿಸಿದೆ.

ಘಟಕದಿಂದ ಹೊರಹೊಮ್ಮುವ ವಿಷಕಾರಿ ಹೊಗೆಯು ವಳಗೇರನಹಳ್ಳಿ ಗ್ರಾಮಸ್ಥರ ಆರೋಗ್ಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ರಾಸಾಯನಿಕಯುಕ್ತ ವಿಷಕಾರಿ ಹೊಗೆಯಿಂದಾಗಿ ಗ್ರಾಮಸ್ಥರಲ್ಲಿ ಉಸಿರಾಟ ಸಮಸ್ಯೆ ಕಾಣಿಸಿಕೊಂಡಿದ್ದು, ಘಟಕದ ಮಾಲೀಕರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ದಳಸನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಳಗೇರನಹಳ್ಳಿಯಲ್ಲಿ ಸುಮಾರು 110 ಮನೆಗಳಿದ್ದು, ಜನಸಂಖ್ಯೆ 500ರ ಗಡಿ ದಾಟಿದೆ. ಗ್ರಾಮಕ್ಕೆ ಹೊಂದಿಕೊಂಡಂತೆ ಕೂಗಳತೆ ದೂರದಲ್ಲಿರುವ ಡಾಂಬರು ಮಿಶ್ರಣ ಘಟಕಕ್ಕೆ ಗ್ರಾಮ ಪಂಚಾಯಿತಿಯಿಂದ ಪೂರ್ವಾನುಮತಿ ಪಡೆದಿಲ್ಲ. ಅಲ್ಲದೇ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿ ಸಹ ಇಲ್ಲ.

ಶಿವಾರೆಡ್ಡಿ ಎಂಬುವರಿಗೆ ಸೇರಿದ ಈ ಘಟಕದಲ್ಲಿ ಸುಮಾರು 50 ಮಂದಿ ಕಾರ್ಮಿಕರಿದ್ದು, ಇಲ್ಲಿಂದ ಜಿಲ್ಲೆಯ ವಿವಿಧೆಡೆಗೆ ಡಾಂಬರು ಮಿಶ್ರಣ ಸರಬರಾಜು ಮಾಡಲಾಗುತ್ತಿದೆ. ಘಟಕದ ಸಮೀಪವೇ ಈಶ್ವರ ವಿದ್ಯಾಲಯ ಹಾಗೂ ಖಾಸಗಿ ಶಾಲೆಯಿದೆ. ಜತೆಗೆ ಘಟಕದಿಂದ 10 ಮೀಟರ್‌ ದೂರದಲ್ಲಿ ವಾರಕ್ಕೊಮ್ಮೆ ಸಂತೆ ನಡೆಯುತ್ತಿದ್ದು, ವಿಷ ಗಾಳಿಯು ಸದ್ದಿಲ್ಲದೆ ಜನರ ಶ್ವಾಸಕೋಶ ಸೇರುತ್ತಿದೆ.

ಘಟಕವು ರಸ್ತೆ ಪಕ್ಕದಲ್ಲೇ ಇರುವುದರಿಂದ ವಾಹನ ಸವಾರರು ವಿಷಕಾರಿ ಹೊಗೆ ಸೇವನೆಯ ಅಪಾಯದಿಂದ ಪಾರಾಗಲು ಪರ್ಯಾಯ ರಸ್ತೆಗಳಲ್ಲಿ ಸಂಚರಿಸುತ್ತಿದ್ದಾರೆ. ಗ್ರಾಮಸ್ಥರು ಮುಖಕ್ಕೆ ಕರವಸ್ತ್ರ ಕಟ್ಟಿಕೊಂಡು ಓಡಾಡುವುದು ಸಾಮಾನ್ಯವಾಗಿದೆ.

ನಿಯಮವೇನು?: ನಿಯಮದ ಪ್ರಕಾರ ಜನವಸತಿ ಪ್ರದೇಶದ ಗ್ರಾಮದಲ್ಲಿ ಅಥವಾ ಸಮೀಪದಲ್ಲಿ ಡಾಂಬರು ಮಿಶ್ರಣ ಘಟಕ ನಡೆಸುವಂತಿಲ್ಲ. ಜತೆಗೆ ಘಟಕ ಆರಂಭಕ್ಕೆ ಗ್ರಾ.ಪಂ ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಡಾಂಬರು ಮಿಶ್ರಣ ಘಟಕದ ಸೇರಿದಂತೆ ಕೈಗಾರಿಕೆಗಳ ಚಿಮಣಿಯ ಎತ್ತರ ಹೆಚ್ಚಿರಬೇಕು.

ಆದರೆ, ಶಿವಾರೆಡ್ಡಿ ಅವರ ಘಟಕದ ಚಿಮಣಿಯ ಎತ್ತರ ನಿಗದಿತ ಮಿತಿಗಿಂತ ಕಡಿಮೆಯಿದೆ. ಜತೆಗೆ ಘಟಕಕ್ಕೆ ಅನುಮತಿ ಇಲ್ಲದಿದ್ದರೂ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ. ಗ್ರಾಮಸ್ಥರು ಗ್ರಾ.ಪಂಗೆ ಹಲವು ಬಾರಿ ದೂರು ನೀಡಿದ್ದರೂ ಅಧಿಕಾರಿಗಳು ಘಟಕದ ಮಾಲೀಕರ ವಿರುದ್ಧ ಕ್ರಮ ಜರುಗಿಸಿಲ್ಲ.

ಕೃಷಿಗೆ ಕಂಟಕ: ಘಟಕದ ವಿಷಕಾರಿ ಹೊಗೆಯು ಜನರ ಆರೋಗ್ಯದ ಜತೆಗೆ ಕೃಷಿ ಚಟುವಟಿಕೆಗೂ ಕಂಟಕವಾಗಿದೆ. ಘಟಕದಲ್ಲಿ ಕಚ್ಚಾ ರೂಪದ ಡಾಂಬರನ್ನು ಬಿಸಿ ಮಾಡಲು ಉರುವಲಾಗಿ ಟಯರ್‌ ಹಾಗೂ ಕೆಲ ರಾಸಾಯನಿಕಗಳನ್ನು ಬಳಸಲಾಗುತ್ತಿದೆ. ರಾಸಾಯನಿಕಗಳು ಮತ್ತು ಟಯರ್‌ಗಳ ದಹನದಿಂದ ಬರುವ ಹೊಗೆಯ ದುರ್ನಾತದಿಂದ ರೇಷ್ಮೆ ಹುಳುಗಳು ಸಾಯುತ್ತಿವೆ. ಹೀಗಾಗಿ ಗ್ರಾಮದ ರೈತರು ರೇಷ್ಮೆ ಕೃಷಿ ಮಾಡುವುದನ್ನೇ ನಿಲ್ಲಿಸಿದ್ದಾರೆ.

ಗ್ರಾಮಸ್ಥರಲ್ಲಿ ಘಟಕದ ಮಾಲೀಕರ ವಿರುದ್ಧ ಆಕ್ರೋಶ ಮಡುಗಟ್ಟಿದ್ದು, ಹಲವು ಬಾರಿ ಪ್ರತಿಭಟನೆ ಮಾಡಿದ್ದಾರೆ. ಜಿಲ್ಲಾಧಿಕಾರಿಯು ಮಧ್ಯಪ್ರವೇಶಿಸಿ ಘಟಕದ ಹೊಗೆ ಸಮಸ್ಯೆಗೆ ಮುಕ್ತಿ ನೀಡಬೇಕೆಂಬುದು ಗ್ರಾಮಸ್ಥರ ಒತ್ತಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT