ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರ ಪ್ರದಕ್ಷಿಣೆ: ಸಮಸ್ಯೆಗಳ ದಿಗ್ದದರ್ಶನ

ನಗರಸಭೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸತ್ಯಭಾಮ ತರಾಟೆ
Last Updated 7 ನವೆಂಬರ್ 2020, 14:56 IST
ಅಕ್ಷರ ಗಾತ್ರ

ಕೋಲಾರ: ಇಲ್ಲಿ ಶನಿವಾರ ದಿಢೀರ್‌ ನಗರ ಪ್ರದಕ್ಷಿಣೆ ನಡೆಸಿದ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅವರಿಗೆ ಕಸದ ಸಮಸ್ಯೆ ಹಾಗೂ ಪಾದಚಾರಿ ಮಾರ್ಗದ ಒತ್ತುವರಿಯ ದಿಗ್ದದರ್ಶನವಾಯಿತು.

ಯಾವುದೇ ಮುನ್ಸೂಚನೆ ನೀಡದೆ ಬೆಳಿಗ್ಗೆಯೇ ರಸ್ತೆಗಿಳಿದ ಜಿಲ್ಲಾಧಿಕಾರಿಯು ಹಲವೆಡೆ ರಾಶಿಯಾಗಿ ಬಿದ್ದಿದ್ದ ಕಸದ ರಾಶಿ ಮತ್ತು ಪಾದಚಾರಿ ಮಾರ್ಗ ಒತ್ತುವರಿ ಆಗಿರುವುದನ್ನು ಕಂಡು ನಗರಸಭೆ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

‘ನಗರದಲ್ಲಿ ಕಸ ವಿಲೇವಾರಿ ಪ್ರಕ್ರಿಯೆ ಸಮರ್ಪಕವಾಗಿ ನಡೆಯಬೇಕು. ಜಿಲ್ಲಾ ಕೇಂದ್ರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ನಗರವಾಸಿಗಳು ಮನೆಯಲ್ಲೇ ಹಸಿ ಮತ್ತು ಒಣ ಕಸ ವಿಂಗಡಿಸಿ ಪೌರ ಕಾರ್ಮಿಕರಿಗೆ ವಿಲೇವಾರಿ ಮಾಡಬೇಕು. ಮನಬಂದಂತೆ ರಸ್ತೆ ಬದಿಯಲ್ಲಿ ಅಥವಾ ಖಾಲಿ ನಿವೇಶನಗಳಲ್ಲಿ ಕಸ ಸುರಿಯಬಾರದು’ ಎಂದು ತಿಳಿಸಿದರು.

ಅಮ್ಮವಾರಿಪೇಟೆ ವೃತ್ತ, ಕಾಳಮ್ಮ ಗುಡಿ ರಸ್ತೆ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಅಂತರಗಂಗೆ ಬೆಟ್ಟದ ರಸ್ತೆ, ಕಾರಂಜಿಕಟ್ಟೆ ರಸ್ತೆ, ನ್ಯಾಮತ್‌ ಬಿ ದರ್ಗಾ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಸಂಚರಿಸಿದ ಜಿಲ್ಲಾಧಿಕಾರಿಯು ಸ್ಥಳೀಯರ ಅಹವಾಲು ಆಲಿಸಿದರು.

‘ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಮುಂಭಾಗದ ಮದ್ಯದಂಗಡಿಗಳನ್ನು ನಿಯಮಬಾಹಿರವಾಗಿ ಬೆಳಿಗ್ಗೆಯೇ ತೆರೆದು ವಹಿವಾಟು ನಡೆಸಲಾಗುತ್ತದೆ. ಈ ಸಂಬಂಧ ಅಬಕಾರಿ ಇಲಾಖೆಗೆ ಹಾಗೂ ಪೊಲೀಸರಿಗೆ ಹಲವು ಬಾರಿ ದೂರು ನೀಡಿದರೂ ಪ್ರಯೋಜನವಾಗಿಲ್ಲ’ ಎಂದು ಸಾರ್ವಜನಿಕರು ದೂರಿದರು.

ದೂರಿಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಯು, ‘ಆ ಮದ್ಯಂಗಡಿಗಳ ಮಾಲೀಕರಿಗೆ ನೋಟಿಸ್ ಜಾರಿ ಮಾಡಿ. ಜತೆಗೆ ಅವರ ವಾಣಿಜ್ಯ ಪರವಾನಗಿ ರದ್ದುಪಡಿಸಲು ಶಿಫಾರಸು ಮಾಡಿ’ ಎಂದು ಅಧಿಕಾರಿಗಳಿಗೆ ಆದೇಶಿಸಿದರು.

ದಂಡ ಹಾಕಿ: ‘ಸಾಕಷ್ಟು ಕಡೆ ಪಾದಚಾರಿ ಮಾರ್ಗ ಒತ್ತುವರಿಯಾಗಿದ್ದು, ಜನರ ಓಡಾಟಕ್ಕೆ ಸಮಸ್ಯೆಯಾಗಿದೆ. ಪಾದಚಾರಿ ಮಾರ್ಗ ಅತಿಕ್ರಮಿಸಿಕೊಂಡಿರುವ ಅಂಗಡಿಗಳ ಮಾಲೀಕರಿಗೆ ತೆರವು ಮಾಡಲು ಸೂಚಿಸಿ. ಆಗಲೂ ಎಚ್ಚೆತ್ತುಕೊಳ್ಳದಿದ್ದರೆ ದಂಡ ಹಾಕಿ. ಬಸ್ ನಿಲ್ದಾಣ ಮುಂಭಾಗದ ಚರಂಡಿ ಮೇಲೆ ನಿರ್ಮಿಸಿರುವ ಅನಧಿಕೃತ ಕಟ್ಟಡಗಳನ್ನು ಕೂಡಲೇ ತೆರವು ಮಾಡಿಸಿ’ ಎಂದು ನಗರಸಭೆ ಅಧಿಕಾರಿಗಳಿಗೆ ಸೂಚಿಸಿದರು.

‘ಅಂತರಗಂಗೆ ರಸ್ತೆಯಲ್ಲಿನ ಚರಂಡಿ ಕಾಮಗಾರಿಯನ್ನು ಸಾಧ್ಯವಾದಷ್ಟು ಬೇಗನೆ ಪೂರ್ಣಗೊಳಿಸಿ. ನಗರಸಭೆ ಜಾಗದ ಒತ್ತುವರಿ ತೆರವು ಮಾಡುವಂತೆ ನರ್ಸಿಂಗ್‌ ಹೋಂ ಮಾಲೀಕರಿಗೆ ಸೂಚಿಸಿ. ನಗರಸಭೆ ಆಸ್ತಿಗಳ ಸುತ್ತ ತಂತಿ ಬೇಲಿ ಅಳವಡಿಸಿ ರಕ್ಷಣೆ ಮಾಡಬೇಕು’ ಎಂದು ತಿಳಿಸಿದರು.

ಕುಡುಕರ ತಾಣ: ನಗರಸಭೆ ವಾಣಿಜ್ಯ ಸಮುಚ್ಚಯದ ಮಳಿಗೆಗಳನ್ನು ಜಿಲ್ಲಾಧಿಕಾರಿ ವೀಕ್ಷಿಸಿದರು. ಆಗ ಸಾರ್ವಜನಿಕರು, ‘ಮದ್ಯದಂಗಡಿಗೆ ಸೇರಿದ ಕೆಲ ಮಳಿಗೆಗಳ ಬಾಗಿಲಿಗೆ ಬೀಗ ಹಾಕಿಲ್ಲ. ಆ ಮಳಿಗೆಗಳಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದ್ದು, ಕುಡುಕರ ತಾಣವಾಗಿ ಪರಿವರ್ತನೆಯಾಗಿವೆ’ ಎಂದು ಆರೋಪಿಸಿದರು.

ಮಾಸ್ಕ್‌ ಧರಿಸದೆ ಬರುತ್ತಿದ್ದ ಬೈಕ್‌ ಸವಾರನನ್ನು ತಡೆದು ನಿಲ್ಲಿಸಿದ ಜಿಲ್ಲಾಧಿಕಾರಿಯು ಪಕ್ಕದಲ್ಲೇ ನಿಂತಿದ್ದ ಪೊಲೀಸರಿಂದ ಲಾಠಿ ಪಡೆದು, ‘ಏಕೆ ಮಾಸ್ಕ್‌ ಹಾಕಿಲ್ಲ’ ಎಂದು ಪ್ರಶ್ನಿಸಿದರು. ಅಲ್ಲದೇ, ಅಧಿಕಾರಿಗಳಿಂದ ಬೈಕ್‌ ಸವಾರನಿಗೆ ದಂಡ ಹಾಕಿಸಿದರು.

ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಂಗಸ್ವಾಮಿ, ನಗರಸಭೆ ಆಯುಕ್ತ ಶ್ರೀಕಾಂತ್‌, ಆರೋಗ್ಯ ನಿರೀಕ್ಷಕಕಿ ದೀಪಾ, ಕಂದಾಯ ಮತ್ತು ಆರೋಗ್ಯ ವಿಭಾಗದ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT