ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಗಮನ ಸೆಳೆದ ಡಿಸಿಸಿ ಬ್ಯಾಂಕ್‌

ಅಧಿಕಾರಿಗಳ ಸಭೆಯಲ್ಲಿ ನಬಾರ್ಡ್‌ ಎಜಿಎಂ ನಟರಾಜನ್‌ ಮೆಚ್ಚುಗೆ
Last Updated 26 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

ಕೋಲಾರ: ‘ಡಿಸಿಸಿ ಬ್ಯಾಂಕ್ ಆರ್ಥಿಕವಾಗಿ ಸದೃಢವಾಗಿದ್ದು, 2020ರ ಮಾರ್ಚ್ ಅಂತ್ಯದೊಳಗೆ ನೂತನ ಶಾಖೆಗಳನ್ನು ಆರಂಭಿಸಬೇಕು. ಬ್ಯಾಂಕ್‌ನ ಯಶಸ್ಸಿನ ಸಾಧನೆ ಬಗ್ಗೆ ಸಾಕ್ಷ್ಯಚಿತ್ರ ರೂಪಿಸಲಾಗುವುದು’ ಎಂದು ನಬಾರ್ಡ್ ಬ್ಯಾಂಕ್ ಸಹಾಯಕ ಪ್ರಧಾನ ವ್ಯವಸ್ಥಾಪಕ (ಎಜಿಎಂ) ನಟರಾಜನ್ ಹೇಳಿದರು.

ಇಲ್ಲಿ ಗುರುವಾರ ನಡೆದ ಡಿಸಿಸಿ ಬ್ಯಾಂಕ್ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ‘ಅವಿಭಜಿತ ಕೋಲಾರ ಜಿಲ್ಲೆಯ ಡಿಸಿಸಿ ಬ್ಯಾಂಕ್ ಇಡೀ ದೇಶದ ಗಮನ ಸೆಳೆದಿದೆ. ಇಂತಹ ಸಂದರ್ಭದಲ್ಲಿ ಬ್ಯಾಂಕ್‌ನ ಸಂಪನ್ಮೂಲತೆ ಹೆಚ್ಚಿಸಲು ನಬಾರ್ಡ್‌ನಿಂದ ಎಲ್ಲಾ ಸಹಕಾರ ಕೊಡುತ್ತೇವೆ’ ಎಂದು ತಿಳಿಸಿದರು.

‘ಡಿಸಿಸಿ ಬ್ಯಾಂಕ್‌ ಠೇವಣಿ ಸಂಗ್ರಹಣೆಯಲ್ಲಿ ಕೊಂಚ ಹಿಂದಿದ್ದರೂ ಸಾಲ ವಿತರಣೆ, ವಸೂಲಿ, ಷೇರು ಲಾಭ ಗಳಿಕೆಯಲ್ಲಿ ಮುಂದಿದೆ. ರಾಜ್ಯದ ಎಲ್ಲಾ ಡಿಸಿಸಿ ಬ್ಯಾಂಕ್‌ಗಳ ಪೈಕಿ ಕೋಲಾರ ಜಿಲ್ಲೆಯಲ್ಲಿ ಮಾತ್ರ ಅತಿ ಹೆಚ್ಚು ಮಹಿಳಾ ಸಂಘಗಳಿಗೆ ಸಾಲ ನೀಡಲಾಗಿದೆ. ಮಹಿಳೆಯರು ಸಾಲದ ಹಣದಲ್ಲಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವುದರ ಜತೆಗೆ ಪ್ರಮಾಣಿಕವಾಗಿ ಸಾಲ ಮರು ಪಾವತಿ ಮಾಡುತ್ತಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಬ್ಯಾಂಕ್‌ನ ನೂತನ ಶಾಖೆಗಳನ್ನು ಆರಂಭಿಸಲು ಹೆಚ್ಚಿನ ಅವಕಾಶವಿದೆ. ನೂತನ ಶಾಖೆ ಆರಂಭಕ್ಕೆ ಜಾಗ ಗುರುತಿಸಬೇಕು. ಆರಂಭದಿಂದಲೇ ಆನ್‌ಲೈನ್‌ ವ್ಯವಸ್ಥೆ ಅಳವಡಿಸಬೇಕು. ಬ್ಯಾಂಕ್‌ ಕೇವಲ ಸಾಲ ವಿತರಣೆಗೆ ಸೀಮಿತವಾಗಬಾರದು. ಇದರ ಜತೆಗೆ ಹೆಚ್ಚು ಠೇವಣಿ ಸಂಗ್ರಹಿಸಬೇಕು’ ಎಂದು ಕಿವಿಮಾತು ಹೇಳಿದರು.

ಠೇವಣಿ ಗುರಿ: ‘ಬ್ಯಾಂಕ್‌ನಿಂದ ₹ 500 ಕೋಟಿ ಠೇವಣಿ ಸಂಗ್ರಹಿಸುವ ಗುರಿಯಿದೆ. ಬ್ಯಾಂಕ್‌ನ ನಿರ್ದೇಶಕರು, ಸೊಸೈಟಿಗಳ ಕಾರ್ಯದರ್ಶಿಗಳು ಹಾಗೂ ಬ್ಯಾಂಕ್‌ನ ಅಧಿಕಾರಿಗಳಿಗೂ ಠೇವಣಿ ಸಂಗ್ರಹಣೆ ಗುರಿ ನೀಡಲಾಗಿದೆ. ಎಲ್ಲರೂ ಸಕ್ರಿಯವಾಗಿ ಕೆಲಸ ಆರಂಭಿಸಿದ್ದಾರೆ’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಗೋವಿಂದಗೌಡ ವಿವರಿಸಿದರು.

‘ಆಡಳಿತ ಮಂಡಳಿ ಪ್ರತಿ ಹಂತದಲ್ಲೂ ಬ್ಯಾಂಕ್‌ನ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಇತ್ತೀಚೆಗೆ ಅಫೆಕ್ಸ್‌ ಬ್ಯಾಂಕ್‌ ಮತ್ತು ನಬಾರ್ಡ್ ಮಟ್ಟದಲ್ಲಿ ನಡೆದ ಸಭೆಯಲ್ಲಿ ಠೇವಣಿ ವಿಚಾರ ಹೊರತುಪಡಿಸಿ ಉಳಿದ ವಿಚಾರಗಳ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಠೇವಣಿ ಹೆಚ್ಚಿಸುವ ಎಂಬ ಸಂಕಲ್ಪದೊಂದಿಗೆ ಅಧಿಕಾರಿ ವರ್ಗ ಮತ್ತು ಆಡಳಿತ ಮಂಡಳಿ ಕೆಲಸ ಮಾಡುತ್ತಿದೆ’ ಎಂದು ಮಾಹಿತಿ ನೀಡಿದರು.

ವಹಿವಾಟು ಹೆಚ್ಚಿಸಿ: ‘ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಸಹಕಾರಿ ಸಂಸ್ಥೆಗಳನ್ನು ಉತ್ತಮ, ಮಧ್ಯಮ ಹಾಗೂ ಸಾಮಾನ್ಯವೆಂದು ವಿಂಗಡಿಸಿ. ಸವಕಲು ಸಂಸ್ಥೆಗಳನ್ನು ಆರ್ಥಿಕವಾಗಿ ಸಶಕ್ತಗೊಳಿಸಲು ಯೋಜನೆ ರೂಪಿಸಿ. ಸಂಸ್ಥೆಗಳ ವಹಿವಾಟು ಹೆಚ್ಚಿಸಿ ಲಾಭದತ್ತ ಕೊಂಡೊಯ್ಯಬೇಕು’ ಎಂದು ನಟರಾಜನ್ ಸಲಹೆ ನೀಡಿದರು.

‘ಎಲ್ಲಾ ಸಹಕಾರಿ ಸಂಸ್ಥೆಗಳಲ್ಲಿ ಭದ್ರತಾ ಠೇವಣಿ ಇರುವಂತೆ ನೋಡಿಕೊಳ್ಳುವುದರ ಜತೆಗೆ ಹಣ ಕಡ್ಡಾಯವಾಗಿ ಬ್ಯಾಂಕ್‌ನಲ್ಲೇ ಇರುವಂತೆ ಮೇಲ್ವಿಚಾರಕರು ಎಚ್ಚರಿಕೆ ವಹಿಸಬೇಕು. ಸಹಕಾರಿ ಸಂಘಗಳ ಆರ್ಥಿಕ ಪರಿಸ್ಥಿತಿ ಉತ್ತಮಗೊಳಿಸಲು ನಬಾರ್ಡ್‌ನಿಂದ ಹಣಕಾಸು ವಹಿವಾಟು ಕಾರ್ಯಾಗಾರ ನಡೆಸಲಾಗುವುದು. ಕಾರ್ಯಾಗಾರಕ್ಕೆ ಸಂಪನ್ಮೂಲ ವ್ಯಕ್ತಿಗಳನ್ನು ಕಳುಹಿಸುತ್ತೇವೆ’ ಎಂದು ಹೇಳಿದರು.

‘2020ರ ಮಾರ್ಚ್ ಅಂತ್ಯದೊಳಗೆ ಎಲ್ಲಾ ಸಂಘಗಳ ಲೆಕ್ಕ ಪರಿಶೋಧನೆ ಆಗಿರಬೇಕು. ಬ್ಯಾಂಕ್‌ ಆಡಳಿತ ಮಂಡಳಿಯು ಅವಧಿ ಮುಗಿರುವ ಸೊಸೈಟಿಗಳಿಗೆ ಚುನಾವಣೆಗೆ ನಡೆಸಬೇಕು’ ಎಂದು ಸೂಚಿಸಿದರು.

ಸಹಕಾರ ಸಂಘಗಳ ಇಲಾಖೆ ಸಹಾಯಕ ನಿಬಂಧಕ ನೀಲಪ್ಪ, ಡಿಸಿಸಿ ಬ್ಯಾಂಕ್‌ ವ್ಯವಸ್ಥಾಪಕ ನಿರ್ದೇಶಕ ರವಿ, ವ್ಯವಸ್ಥಾಪಕರಾದ ಶಿವಕುಮಾರ್, ಖಲೀಮ್‌ ವುಲ್ಲಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT