ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲ ವಸೂಲಾತಿ: ಸಿಬ್ಬಂದಿಗೆ ಕೋಲಾರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗೋವಿಂದಗೌಡ ತಾಕೀತು

Last Updated 28 ಆಗಸ್ಟ್ 2021, 17:14 IST
ಅಕ್ಷರ ಗಾತ್ರ

ಕೋಲಾರ: ‘ಕೋವಿಡ್‌ ಕಾರಣಕ್ಕೆ ವಸೂಲಾಗದೆ ಇರುವ ₹ 20 ಕೋಟಿಯನ್ನು ಸಕಾಲಕ್ಕೆ ವಸೂಲು ಮಾಡಬೇಕು. ಅನ್ನ ನೀಡುತ್ತಿರುವ ಬ್ಯಾಂಕ್‌ನ ಘನತೆಗೆ ಕುತ್ತು ತರಬೇಡಿ’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಸಿಬ್ಬಂದಿಗೆ ತಾಕೀತು ಮಾಡಿದರು.

ಇಲ್ಲಿ ಶನಿವಾರ ನಡೆದ ಬ್ಯಾಂಕ್‌ನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ‘ಕೋವಿಡ್ ಸಂಕಷ್ಟದ ಸಂದರ್ಭದಲ್ಲೂ ಮಹಿಳಾ ಸಂಘಗಳ ಸಾಲ ಮರುಪಾವತಿ ಉತ್ತಮವಾಗಿದೆ. ಆದರೆ, ಉಳಿದ ಸಾಲಗಳ ವಸೂಲಾತಿಯಲ್ಲಿ ಹಿನ್ನಡೆಯಾಗಿದೆ. ಶನಿವಾರ, ಭಾನುವಾರ ರಜೆ ಎಂದು ಮೈಮರೆಯದೆ ಸಾಲ ವಸೂಲಾತಿ ಮಾಡಿ’ ಎಂದು ಸೂಚಿಸಿದರು.

‘ಬ್ಯಾಂಕ್ ಮುಳುಗಿ ಹೋಗಿದ್ದಾಗ ಯಾರೂ ಮಾತನಾಡಲಿಲ್ಲ. ಬ್ಯಾಂಕ್‌ನ ಪ್ರಗತಿಗೆ ಹಗಲಿರುಳು ಶ್ರಮಿಸಿದ್ದಕ್ಕೆ ನಮ್ಮ ವಿರುದ್ಧ ಪಿತೂರಿ ನಡೆಯುತ್ತಿದೆ. ಮುಚ್ಚುವ ಹಂತ ತಲುಪಿದ್ದ ಬ್ಯಾಂಕನ್ನು ಉಳಿಸಿ ಬೆಳೆಸಿದ್ದೇ ಅಪರಾಧ ಎನ್ನುವಂತಾಗಿದೆ. ದಶಕದ ಕಾಲ ಜಿಲ್ಲೆಯ ರೈತರು, ಮಹಿಳೆಯರಿಗೆ ಕಡಿಮೆ ಬಡ್ಡಿ ಸಾಲ, ಸಾಲ ಮನ್ನಾ ಯೋಜನೆ ಪ್ರಯೋಜನ ಸಿಗದೆ ವಂಚನೆಯಾದಾಗ ಯಾರೂ ತುಟಿ ಬಿಚ್ಚಲಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಇಡೀ ದೇಶದಲ್ಲಿ ಅತಿ ಹೆಚ್ಚು ಮಹಿಳೆಯರಿಗೆ ಸಾಲ ನೀಡಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ನೆರವಾಗಿರುವ ಹೆಗ್ಗಳಿಕೆ ಸಾಧಿಸಿದ್ದೇವೆ. ₹ 50 ಕೋಟಿ ವಹಿವಾಟು ಇಲ್ಲದ ಬ್ಯಾಂಕ್ ಇಂದು ₹ 1,500 ಕೋಟಿ ವಹಿವಾಟು ನಡೆಸುವ ಶಕ್ತಿ ಪಡೆದಿದೆ. ಆದರೂ ಪ್ರತಿನಿತ್ಯ ಸುಳ್ಳು ಆರೋಪ ಕೇಳುತ್ತಿದ್ದೇವೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ದುಷ್ಟ ಶಕ್ತಿಗಳಿಗೆ ಬ್ಯಾಂಕ್‌ನ ಕೆಲ ಸಿಬ್ಬಂದಿ ನೆರವಾಗಿದ್ದಾರೆ. ಬ್ಯಾಂಕ್ ದಿವಾಳಿಯಾದಾಗ ಸಂಬಳವಿಲ್ಲದೆ ಸಮಸ್ಯೆ ಅನುಭವಿಸಿದ್ದನ್ನು ಮರೆಯಬೇಡಿ. ಈಗ ಬ್ಯಾಂಕ್ ಚೆನ್ನಾಗಿರುವುದರಿಂದ ಒಳ್ಳೆಯ ವೇತನ ಸಿಗುತ್ತಿದೆ. ನಿಮ್ಮ ಮನೆಗೆ ನೀವೇ ಬೆಂಕಿ ಹಾಕಿಕೊಂಡರೇ ನಿಮ್ಮ ಕುಟುಂಬಗಳು ಬೀದಿಗೆ ಬರುತ್ತವೆ’ ಎಂದು ಎಚ್ಚರಿಸಿದರು.
‘ಸಾಲ ವಸೂಲಾತಿಯಲ್ಲಿನ ಹಿನ್ನಡೆ ಸರಿಪಡಿಸಿ. ನಿಜವಾದ ರೈತರನ್ನು ಗುರುತಿಸಿ ಸಾಲ ನೀಡಿದರೆ ವಸೂಲಾತಿಯಲ್ಲಿ ಮೋಸ ಆಗುವುದಿಲ್ಲ. ಇ–ಶಕ್ತಿ ಅನುಷ್ಠಾನ ಶೀಘ್ರವಾಗಿ ಪೂರ್ಣಗೊಳಿಸಬೇಕು’ ಎಂದು ಸೂಚಿಸಿದರು.

ಸತ್ಯಾಂಶದ ಅರಿವಾಗಿದೆ: ‘ಟೀಕೆ ಮಾಡುವವರು ಮಾಡಲಿ. ಸುಳ್ಳು ದೂರು ನೀಡುವವರು ನೀಡಲಿ. ಇಲ್ಲಿ ತಪ್ಪಾಗಿದ್ದರೆ ಹೆದರಬೇಕು. ಈಗಾಗಲೇ ಹಲವು ಬಾರಿ ದೂರು ಕೊಟ್ಟವರಿಗೆ ಸತ್ಯಾಂಶದ ಅರಿವಾಗಿದೆ. ಒಳ್ಳೆಯ ಕೆಲಸ ಮಾಡುವ ಮೂಲಕವೇ ಟೀಕಾಕಾರರಿಗೆ ತಕ್ಕ ಉತ್ತರ ನೀಡೋಣ’ ಎಂದು ಬ್ಯಾಂಕ್‌ನ ನಿರ್ದೇಶಕ ಎಂ.ಎಲ್‌.ಅನಿಲ್‌ಕುಮಾರ್‌ ಹೇಳಿದರು.

ಬ್ಯಾಂಕ್‌ನ ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಬೈರೇಗೌಡ, ಖಲೀಮ್‌ ಉಲ್ಲಾ, ಹುಸೇನ್‌ಸಾಬ್‌ ದೊಡ್ಡಮನಿ ಹಾಗೂ ಸಿಬ್ಬಂದಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT