ಶನಿವಾರ, ಆಗಸ್ಟ್ 17, 2019
24 °C
ಡೆಂಗಿ ವಿರೋಧಿ ಮಾಸಾಚರಣೆಯಲ್ಲಿ ಡಿಎಸ್‌ಒ ವಿಜಯ್‌ಕುಮಾರ್‌ ಮನವಿ

ಡೆಂಗಿ ಕಾಯಿಲೆ ನಿಯಂತ್ರಣಕ್ಕೆ ಕೈಜೋಡಿಸಿ

Published:
Updated:
Prajavani

ಕೋಲಾರ: ‘ಡೆಂಗಿ ಕಾಯಿಲೆ ನಿಯಂತ್ರಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸುವುದರ ಜತೆಗೆ ಮುನ್ನೆಚ್ಚರಿಕೆ ವಹಿಸಬೇಕು’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವಿಜಯ್‌ಕುಮಾರ್ ಮನವಿ ಮಾಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಇಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಡೆಂಗಿ ವಿರೋಧಿ ಮಾಸಾಚರಣೆ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ, ‘ಇತ್ತೀಚಿನ ದಿನಗಳಲ್ಲಿ ಜ್ವರ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಈ ಬಗ್ಗೆ ನಿರ್ಲಕ್ಷ್ಯ ವಹಿಸಬಾರದು’ ಎಂದರು.

‘ಜ್ವರದ ಲಕ್ಷಣ ಕಾಣಿಸಿಕೊಳ್ಳುತ್ತಿದ್ದಂತೆ ಹತ್ತಿರದ ಆಸ್ಪತ್ರೆಗೆ ತೆರಳಿ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಬೇಕು. ಡೆಂಗಿ ಕಾಯಿಲೆ ಗುಣಪಡಿಸಬಹುದು. ಹೀಗಾಗಿ ಈ ಕಾಯಿಲೆ ಬಗ್ಗೆ ಆತಂಕ ಬೇಡ. ಕಾಯಿಲೆ ಬಂದಾಗ ಚಿಕಿತ್ಸೆಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆಯುವ ಬದಲು ಕಾಯಿಲೆ ಬರದಂತೆ ಮೊದಲೇ ಮುನ್ನೆಚ್ಚರಿಕೆ ವಹಿಸಬೇಕು’ ಎಂದು ಸಲಹೆ ನೀಡಿದರು.

‘ಡೆಂಗಿ ಜ್ವರ ಕಾಣಿಸಿಕೊಂಡಾಗ ಸಕಾಲಕ್ಕೆ ಚಿಕಿತ್ಸೆ ಪಡೆದುಕೊಳ್ಳಬೇಕು. ನಿರ್ಲಕ್ಷ್ಯ ವಹಿಸಿದರೆ ಸಮಸ್ಯೆ ಗಂಭೀರವಾಗುತ್ತದೆ. ಮಳೆ ನೀರು ಒಂದೇ ಕಡೆ ನಿಲ್ಲುವುದರಿಂದ ಹಾಗೂ ಮನೆಗಳಲ್ಲಿ ಹೆಚ್ಚು ಕಾಲ ನೀರು ಸಂಗ್ರಹಿಸಿಡುವುದರಿಂದ ಸೊಳ್ಳೆ ಉತ್ಪತ್ತಿಯಾಗುತ್ತವೆ. ಆದ ಕಾರಣ ಸೊಳ್ಳೆ ನಿರ್ಮೂಲನೆಗೆ ಕ್ರಮ ವಹಿಸಬೇಕು’ ಎಂದು ಕಿವಿಮಾತು ಹೇಳಿದರು.

ಮಾರಣಾಂತಿಕ ಕಾಯಿಲೆ: ‘ಡೆಂಗಿ ಜ್ವರವು ಮಾರಣಾಂತಿಕ ಕಾಯಿಲೆ. ನೈರ್ಮಲ್ಯ ಸಮಸ್ಯೆಯಿಂದ ಸೊಳ್ಳೆಗಳು ಉತ್ಪತ್ತಿಯಾಗಿ ಈ ಕಾಯಿಲೆ ಬರುತ್ತದೆ. ಮನೆಗಳಲ್ಲಿ ಹಾಗೂ ಸುತ್ತಮುತ್ತಲ ಪ್ರದೇಶದ ಸ್ವಚ್ಛತೆ ಕಾಪಾಡುವುದರ ಜತೆಗೆ ಸೊಳ್ಳೆಗಳನ್ನು ಸಮರ್ಪಕವಾಗಿ ನಿಯಂತ್ರಿಸುವುದು ಡೆಂಗಿ ತಡೆಗೆ ಇರುವ ಏಕೈಕ ಮಾರ್ಗ’ ಎಂದು ತಿಳಿಸಿದರು.

‘ಗ್ರಾಮೀಣ ಭಾಗದ ಜನರಿಗೆ ಸ್ವಚ್ಛತೆಯ ಅರಿವು ಮೂಡಿಸಬೇಕು. ಮನೆಗಳ ಪಕ್ಕದಲ್ಲೇ ಇರುವ ಕುಂಟೆ, ಚರಂಡಿಗಳಲ್ಲಿ ಸೊಳ್ಳೆ ಉತ್ಪತ್ತಿಯಾಗದಂತೆ ಕ್ರಮ ಕೈಗೊಳ್ಳಬೇಕು. ಪ್ರತಿಯೊಬ್ಬರೂ ನಿತ್ಯ ಜೀವನದಲ್ಲಿ ಸ್ವಚ್ಛತಾ ನಿಯಮಗಳನ್ನು ಅನುಸರಿಸಿದರೆ ಕಾಯಿಲೆ ಬರದಂತೆ ತಡೆಯಬಹುದು’ ಎಂದು ಅಭಿಪ್ರಾಯಪಟ್ಟರು.

ನರ್ಸಿಂಗ್‌ ವಿದ್ಯಾರ್ಥಿಗಳು ರಹಮತ್‌ನಗರ, ಸಂಗೊಂಡಹಳ್ಳಿ, ಬೀಡಿ ಕಾಲೊನಿಯಲ್ಲಿ ಜಾಥಾ ನಡೆಸಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು. ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಚಾರಣಿ, ವೈದ್ಯೆ ಡಾ.ಕಮಲಾ, ಆರೋಗ್ಯ ಶಿಕ್ಷಣಾಧಿಕಾರಿ ಪ್ರಸನ್ನ ಭಾಗವಹಿಸಿದ್ದರು.

Post Comments (+)