ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಿ: ಶಾಸಕ ಶ್ರೀನಿವಾಸಗೌಡ ಕಿವಿಮಾತು

Last Updated 17 ಮೇ 2022, 13:36 IST
ಅಕ್ಷರ ಗಾತ್ರ

ಕೋಲಾರ: ‘ಪೋಷಕರು ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಿ ಭವಿಷ್ಯ ಉಜ್ವಲಗೊಳಿಸಬೇಕು’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಕಿವಿಮಾತು ಹೇಳಿದರು.

ಯಳಚೀಪುರ ಗ್ರಾಮದಲ್ಲಿ ಮಂಗಳವಾರ ನಡೆದ ‘ಆದರ್ಶ ವ್ಯಕ್ತಿ ಬಿ.ಚೌಡಪ್ಪ’ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿ, ‘ಶಿಕ್ಷಣವು ಮಾನವನ ಹಕ್ಕು. ವೈಯಕ್ತಿಕ ಸಬಲೀಕರಣ ಮತ್ತು ಸಾಮಾಜಿಕವಾಗಿ ಮಾನವನ ಅಭಿವೃದ್ಧಿಗೆ ಇದು ಸಾಧನವಾಗಿದೆ’ ಎಂದು ಅಭಿಪ್ರಾಯಪಟ್ಟರು.

‘ಶಿಕ್ಷಣದ ಅವಕಾಶಗಳು ಸಾಕ್ಷರತೆಯನ್ನು ಅವಲಂಬಿಸಿವೆ. ಶಿಕ್ಷಣವು ಬಡತನ ನಿರ್ಮೂಲನೆ ಮಾಡುವ ಒಂದು ಅಸ್ತ್ರ. ಗಂಡು-ಹೆಣ್ಣು ಮಕ್ಕಳೆಂಬ ತಾರತಮ್ಯ ಮಾಡದೆ ಮಕ್ಕಳಿಗೆ ಶಿಕ್ಷಣ ಕೊಡಿಸುವುದು ಪೋಷಕರ ಜವಾಬ್ದಾರಿ. ಈ ಹಿಂದೆ ಮಕ್ಕಳಿಗೆ ಶಿಕ್ಷಣ ನೀಡುವ ಚಿಂತನೆ ಪೋಷಕರಲ್ಲಿ ಕಡಿಮೆಯಿತ್ತು. ಆದರೆ, ಈಗ ಪೋಷಕರ ಮನಸ್ಥಿತಿ ಬದಲಾಗಿದೆ’ ಎಂದರು.

‘ಪೋಷಕರು ಮಕ್ಕಳಲ್ಲಿ ಸಾಧನೆ ಮಾಡುವ ಛಲ ಮೂಡಿಸಿ ಅವರನ್ನು ಸಮಾಜದಲ್ಲಿ ಸತ್ಪ್ರಜೆಗಳಾಗಿ ಮಾಡಬೇಕು. ಶಿಕ್ಷಣದ ಮೂಲಕ ಮಕ್ಕಳನ್ನು ಸ್ವಾವಲಂಬಿಗಳಾಗಿಸಬೇಕು’ ಎಂದು ವಿಧಾನ ಪರಿಷತ್‌ ಸದಸ್ಯ ಗೋವಿಂದರಾಜು ಕಿವಿಮಾತು ಹೇಳಿದರು.
‘ವಿದ್ಯಾರ್ಥಿಗಳು ಪೋಷಕರ ಆಶಯದಂತೆ ಓದಿ ವಿದ್ಯಾವಂತರಾಗಬೇಕು. ಜತೆಗೆ ಉನ್ನತ ಹುದ್ದೆಗಳನ್ನು ಅಲಂಕರಿಸಿ ಹುಟ್ಟಿದ ಊರು ಮತ್ತು ಪೋಷಕರಿಗೆ ಕೀರ್ತಿ ತರಬೇಕು’ ಎಂದು ವಿಧಾನ ಪರಿಷತ್‌ ಸದಸ್ಯ ಎಂ.ಎಲ್‌.ಅನಿಲ್‌ಕುಮಾರ್‌ ಆಶಿಸಿದರು.

ಜಿಲ್ಲೆಯ ವಿಶೇಷ: ‘ಯಳಚೀಪುರ ಗ್ರಾಮದ ಚೌಡಪ್ಪ ಅವರ ಕುಟುಂಬದಲ್ಲಿ 11 ಮಂದಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಗಾಂಡ್ಲಹಳ್ಳಿ ಗ್ರಾಮದಲ್ಲಿ ಒಂದೇ ಕುಟುಂಬದ 7 ಮಂದಿ ಐಎಎಸ್, ಐಪಿಎಸ್ ಅಧಿಕಾರಿಗಳಾಗಿರುವುದು ಚಿನ್ನದ ಜಿಲ್ಲೆಯ ವಿಶೇಷ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ದೇವರಾಜ್ ಮೆಚ್ಚುಗೆ ವ್ಯಕ್ತಪಡಿಸಿದರು.

‘ಯಳಚೀಪುರದ ದಿವಂಗತ ಬಿ.ಚೌಡಪ್ಪ ಅವರು ಆಧುನಿಕ ಕೃಷಿ ಪದ್ಧತಿ ಅಳವಡಿಕೆಗೆ ಮುಂದಾಗುವ ಮೂಲಕ ಜಿಲ್ಲೆಯಲ್ಲಿ ಮಾದರಿ ರೈತರಾಗಿ ಹೊರಹೊಮ್ಮಿದ್ದರು. ಅಲ್ಲದೇ, ಇತರೆ ರೈತ ಆಧುನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವಂತೆ ಜಾಗೃತಿ ಮೂಡಿಸುತ್ತಿದ್ದರು’ ಎಂದು ಸಾಹಿತಿ ದೊಡ್ಡರಂಗೇಗೌಡ ಹೇಳಿದರು.

‘ಚೌಡಪ್ಪ ಅವರು ಸಮಾಜಮುಖಿ ಚಿಂತನೆ ಮೈಗೂಡಿಸಿಕೊಂಡು ಕೃಷಿ ಹಾಗೂ ವಿದ್ಯೆಗೆ ಹೆಚ್ಚು ಗೌರವ ನೀಡಿದ್ದರು. ಇತ್ತೀಚಿನ ದಿನಗಳಲ್ಲಿ ರೈತರು ಕಷ್ಟಪಟ್ಟು ಬೆವರು ಸುರಿಸಿ ದುಡಿದರೂ ದುಡಿಮೆಗೆ ತಕ್ಕ ಪ್ರತಿಫಲ ಪಡೆಯಲು ಸಾಧ್ಯವಾಗುತ್ತಿಲ್ಲ’ ಎಂದು ಕಳವಳ ವ್ಯಕ್ತಪಡಿಸಿದರು.

ದಿವಂಗತ ಚೌಡಪ್ಪ ಮತ್ತು ಕೃಷ್ಣಮ್ಮರ ಸ್ಮರಣಾರ್ಥ ಕುಟುಂಬ ಸದಸ್ಯರು ಆಯೋಜಿಸಿದ್ದ ಬೃಹತ್ ಆರೋಗ್ಯ ಶಿಬಿರದಲ್ಲಿ ಗ್ರಾಮೀಣ ಭಾಗದ 1 ಸಾವಿರಕ್ಕೂ ಹೆಚ್ಚು ಮಂದಿಯ ಆರೋಗ್ಯ ತಪಾಸಣೆ ಮಾಡಲಾಯಿತು. ದಲಿತ ಮುಖಂಡ ಸಿ.ಎಂ.ಮುನಿಯಪ್ಪ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ನಿಕಟಪೂರ್ವ ಅಧ್ಯಕ್ಷ ನಾಗಾನಂದ ಕೆಂಪರಾಜ್, ಚಿಂತಕ ಕೃಷ್ಣೇಗೌಡ, ನಟಿ ಖುಷಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT