ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯದಿಂದ ಮಕ್ಕಳ ಶೈಕ್ಷಣಿಕ ಪ್ರಗತಿ

ರಾಷ್ಟ್ರೀಯ ಜಂತು ಹುಳು ನಿವಾರಣೆ ದಿನಾಚರಣೆಯಲ್ಲಿ ಜಿ.ಪಂ ಅಧ್ಯಕ್ಷ ವೆಂಕಟೇಶ್‌ ಹೇಳಿಕೆ
Last Updated 10 ಫೆಬ್ರುವರಿ 2020, 15:28 IST
ಅಕ್ಷರ ಗಾತ್ರ

ಕೋಲಾರ: ‘ಮಕ್ಕಳಿಗೆ ಇಂದಿಗೂ ಜಂತು ಹುಳು ಸಮಸ್ಯೆ ಕಾಡುತ್ತಿರುವುದು ವಿಷಾದಕರ. ಜಂತು ಹುಳು ಕಾಯಿಲೆ ಮುಕ್ತ ಭಾರತ ನಿರ್ಮಾಣಕ್ಕೆ ಪ್ರತಿಯೊಬ್ಬರು ಸಂಕಲ್ಪ ಮಾಡಬೇಕು’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್ ಕಿವಿಮಾತು ಹೇಳಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಇಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಜಂತು ಹುಳು ನಿವಾರಣೆ ದಿನಾಚರಣೆ ಉದ್ಘಾಟಿಸಿ ಮಾತನಾಡಿ,‘ಸಾಮಾನ್ಯವಾಗಿ ಗರ್ಭಿಣಿಯರಿಗೆ ಜಂತು ಹುಳು ಸಮಸ್ಯೆ ಕಾಡುತ್ತದೆ. ಇದರಿಂದ ಅಪೌಷ್ಟಿಕತೆ ಹೆಚ್ಚುತ್ತದೆ’ ಎಂದು ತಿಳಿಸಿದರು.

‘ಜಂತು ಹುಳು ನಿವಾರಣೆ ಮಾತ್ರೆ ಸೇವನೆಯಿಂದ ಆರೋಗ್ಯ ಕಾಪಾಡುವುದರ ಜತೆಗೆ ಅಪೌಷ್ಟಿಕತೆ ನಿವಾರಣೆಯಾಗಿ ಬೌದ್ಧಿಕ ಬೆಳವಣಿಗೆಯಾಗುತ್ತದೆ. ಜಂತು ಹುಳು ಸಮಸ್ಯೆ ನಿವಾರಣೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಆರೋಗ್ಯ ಇಲಾಖೆ ಅಧಿಕಾರಿಗಳು ಜಾಗೃತಿ ಮೂಡಿಸಬೇಕು’ ಎಂದು ಸೂಚಿಸಿದರು.

‘ಮಕ್ಕಳು ಆರೋಗ್ಯವಂತರಾಗಿದ್ದರೆ ಮಾತ್ರ ಶೈಕ್ಷಣಿಕ ಪ್ರಗತಿ ಸಾಧ್ಯ. ಮಕ್ಕಳಲ್ಲಿನ ರಕ್ತಹೀನತೆ ಸಮಸ್ಯೆ ನಿವಾರಣೆಗೆ ಸರ್ಕಾರ 1 ವರ್ಷದಿಂದ 19 ವರ್ಷದೊಳಗಿನ ಮಕ್ಕಳಿಗೆ ವರ್ಷಕ್ಕೆ 2 ಬಾರಿ ಉಚಿತವಾಗಿ ಜಂತು ಹುಳು ನಿರ್ಮೂಲನಾ ಮಾತ್ರೆ ನೀಡುತ್ತಿದೆ. ಬರಿಗಣ್ಣಿಗೆ ಕಾಣಿಸದ ಜಂತು ಹುಳುಗಳು ಮಕ್ಕಳ ದೈಹಿಕ ಬೆಳವಣಿಗೆ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ. ಇದರಿಂದ ಜ್ಞಾಪಕ ಶಕ್ತಿ ಕುಂದಿ ವಿದ್ಯಾಭ್ಯಾಸಕ್ಕೆ ತಡೆಯಾಗುತ್ತದೆ’ ಎಂದು ವಿವರಿಸಿದರು.

‘ಪೋಷಕರು ವದಂತಿಗೆ ಕಿವಿಗೂಟ್ಟು ಮಕ್ಕಳಿಗೆ ಮಾತ್ರೆ ಕೊಡಲು ಹಿಂದೇಟು ಹಾಕುತ್ತಾರೆ. ಆದರೆ, ಮಾತ್ರೆ ಸೇವನೆಯಿಂದ ಮಗುವಿನ ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮ ಆಗುವುದಿಲ್ಲ ಎಂದು ಪೋಷಕರಿಗೆ ಅರಿವು ಮೂಡಿಸಬೇಕು. ಮಕ್ಕಳು ತಪ್ಪದೇ ಈ ಮಾತ್ರೆ ಸೇವಿಸಿದರೆ ಆರೋಗ್ಯವಂತರಾಗಿ ಬೆಳೆಯುತ್ತಾರೆ’ ಎಂದರು.

ಬೆಳವಣಿಗೆಗೆ ಮಾರಕ

‘ಬಯಲು ಬಹಿರ್ದೆಸೆಯಿಂದ ಜಂತು ಹುಳುಗಳು ದೇಹ ಸೇರುತ್ತವೆ. ಜಂತು ಹುಳು ಸೋಂಕಿನಿಂದ ರಕ್ತಹೀನತೆ, ಅಪೌಷ್ಟಿಕತೆ, ನಿಶಕ್ತಿ, ವಾಂತಿ, ಭೇದಿ ಮೂಲಕ ದೇಹ ನಿತ್ರಾಣಗೊಳ್ಳುವ ಸಾಧ್ಯತೆಯಿದೆ. ರಕ್ತಹೀನತೆ ಸಮಸ್ಯೆಯು ಮಕ್ಕಳ ದೈಹಿಕ ಮತ್ತು ಶೈಕ್ಷಣಿಕ ಬೆಳವಣಿಗೆಗೆ ಮಾರಕವಾಗಿ ಪರಿಣಮಿಸುತ್ತದೆ. ಆರೋಗ್ಯದ ದೃಷ್ಟಿಯಿಂದ ಸ್ವಚ್ಛತೆಗೆ ಒತ್ತು ಕೊಡಬೇಕು’ ಎಂದು ಸಲಹೆ ನೀಡಿದರು.

‘ಮಣ್ಣಿನಲ್ಲಿ ರೋಗಾಣು ಬೆರೆತಿರುತ್ತವೆ. ಆ ಭಾಗದಲ್ಲಿ ಬೆಳೆದ ತರಕಾರಿ, ಹಣ್ಣುಗಳನ್ನು ಸರಿಯಾಗಿ ತೊಳೆಯದೆ ಅಥವಾ ಬೇಯಿಸದೆ ಸೇವನೆ ಮಾಡಿದರೆ ಜಂತು ಹುಳು ದೇಹ ಸೇರುತ್ತದೆ. ವೈಯಕ್ತಿಕ ಸ್ವಚ್ಛತೆ ಇಲ್ಲದಿದ್ದರೆ, ಚಪ್ಪಲಿ ಹಾಕದೆ ಬರಿಗಾಲಿನಲ್ಲಿ ನಡೆದರೆ ಜಂತು ಹುಳು ದೇಹ ಸೇರುವ ಸಾಧ್ಯತೆ ಹೆಚ್ಚು. ಆದ ಕಾರಣ ಪೋಷಕರು ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಬೇಕು’ ಎಂದು ಹೇಳಿದರು.

ಮಾತ್ರೆ ವಿತರಣೆ

‘ಪ್ರತಿ ವರ್ಷ ಫೆ.10 ಮತ್ತು ಆ.10ರಂದು ದೇಶದೆಲ್ಲೆಡೆ ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನ ಆಚರಿಸಲಾಗುತ್ತದೆ. ಅಂಗನವಾಡಿ, ಶಾಲೆ, ಕಾಲೇಜುಗಳಲ್ಲಿ ಜಂತು ಹುಳು ನಿವಾರಣೆ ಮಾತ್ರೆ ವಿತರಿಸಲಾಗುತ್ತದೆ. ಇಂದು ಮಾತ್ರೆ ಪಡೆಯಲು ಸಾಧ್ಯವಾಗದಿದ್ದರೆ ಫೆ.17ರಂದು ಮಾತ್ರೆ ಪಡೆಯಬಹುದು’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್‌.ಎನ್‌.ವಿಜಯ್‌ಕುಮಾರ್ ಮಾಹಿತಿ ನೀಡಿದರು.

‘2019ರ ಸೆಪ್ಟೆಂಬರ್‌ನಲ್ಲಿ ಜಿಲ್ಲೆಯಲ್ಲಿ 4,45,507 ಮಕ್ಕಳಿಗೆ ಜಂತು ಹುಳು ನಿವಾರಣೆ ಮಾತ್ರೆ ನೀಡಲಾಗಿದೆ. ಈ ವರ್ಷ ಅಂಗನವಾಡಿ, ಸರ್ಕಾರಿ ಹಾಗೂ ಖಾಸಗಿ ಶಾಲೆ, ಕಾಲೇಜು ಮತ್ತು ಐಟಿಐ, ಡಿಪ್ಲೊಮಾ ಕಾಲೇಜು ಮಕ್ಕಳಿಗೆ ಮಾತ್ರೆ ವಿತರಿಸಲಾಗಿದೆ’ ಎಂದು ವಿವರಿಸಿದರು.

ಸರ್ಕಾರಿ ಮಹಿಳಾ ಕಾಲೇಜಿನ ಪ್ರಾಂಶುಪಾಲ ರಾಜೇಂದ್ರ, ಉಪನ್ಯಾಸಕ ಗಂಗರಾಜ್, ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ.ಜಗದೀಶ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT